ಬಾಳಿನ ಯಶಸ್ಸಿಗೆ ತಾಳ್ಮೆಯೇ ಮುನ್ನುಡಿ
Team Udayavani, Oct 21, 2019, 5:21 AM IST
ಮನುಷ್ಯನಿಗೆ ತಾಳ್ಮೆಯೆಂಬುದು ಬಂಗಾರದ ಮೌಲ್ಯವಿದ್ದಂತೆ. ತಾಳ್ಮೆಯೆಂಬುದು ನಮ್ಮೊಂದಿಗೆ ಇದ್ದರೆ ನಾವು ಎಲ್ಲವನ್ನೂ ಗೆಲ್ಲಲು ಅರ್ಹರು ಎಂಬುದು ವಿಶೇಷ. ಬದುಕಿನಲ್ಲಿ ತಾಳ್ಮೆಯೆಂಬುದು ಎಷ್ಟು ಮುಖ್ಯ ಎಂಬುವುದು ತಿಳಿಯುವುದು ಈ ಲೇಖನದ ಸಾರ.
ಬದುಕು ಸಾಗರವಿದ್ದಂತೆ. ಅದರಲ್ಲಿ ಸಮಸ್ಯೆಗಳು, ಸವಾಲುಗಳು ಅಲೆಗಳಂತೆ ಒಂದರ ಅನಂತರ ಇನ್ನೊಂದು ಬರುತ್ತಲೇ ಇರುತ್ತವೆ. ಅವುಗಳನ್ನೆಲ್ಲ ಎದುರಿಸಿ ಮುಂದೆ ಸಾಗಬೇಕಾದರೆ ತಾಳ್ಮೆ ಅತೀ ಅಗತ್ಯ.
ಸ್ವತಂತ್ರವಾಗಿ ಬದುಕು ರೂಪಿಸಿಕೊಳ್ಳಬೇಕು ಎನ್ನುವ ಹಂಬಲ ಇರುವವರು ಛಲ, ಧೈರ್ಯ, ಸತತ ಪರಿಶ್ರಮ, ಶ್ರದ್ಧೆ, ತಾಳ್ಮೆಯಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕಾದುದು ಅತೀ ಅಗತ್ಯ.
ತಾಳ್ಮೆ ಎಂದರೆ ಕೇವಲ ಕಾಯುವಿಕೆ ಎಂದು ಕಡೆಗಣಿಸಬೇಡಿ, ಆ ಕಾಯುವಿಕೆಯ ಪ್ರಕ್ರಿಯೆಯಲ್ಲಿ ನಾವು ತೋರುವ ಉತ್ತಮ ನಡವಳಿಕೆಯೇ ನಿಜವಾದ ತಾಳ್ಮೆ. ಮೇಲ್ನೋಟಕ್ಕೆ ತಾಳ್ಮೆಯು ಕಹಿ ಎಂದು ಅನಿಸಿತಾದರೂ ಅದು ನೀಡುವ ಫಲ ಮಾತ್ರ ಸದಾ ಸಿಹಿಯಾಗಿರುತ್ತದೆ. ಒಂದು ಕ್ಷಣದ ತಾಳ್ಮೆಯು, ಸಾವಿರ ಕ್ಷಣಕ್ಕಾಗುವಷ್ಟು ದುಃಖವನ್ನು ತಡೆಯಬಲ್ಲದು.
ತಾಳ್ಮೆ ವ್ಯಕ್ತಿತ್ವದ ಸಂಕೇತ
ವ್ಯಕ್ತಿಯಲ್ಲಿರುವ ಧನಾತ್ಮಕ ಶಕ್ತಿ ಕೂಡ ಹೌದು. ಎಲ್ಲ ಸಮಸ್ಯೆಗಳಿಗೂ ಒಂದಲ್ಲ ಒಂದು ರೀತಿಯ ಪರಿಹಾರ ಇದ್ದೇ ಇದೆ ಎಂದು ಕಾದು ನೋಡುವ ಗುಣವೇ ತಾಳ್ಮೆ. ತಾಳಿದವನು ಬಾಳಿಯಾನು ಎಂಬ ಗಾದೆ ಮಾತು ಕೂಡ ಇದನ್ನೇ ಪ್ರತಿಧ್ವನಿಸುತ್ತದೆ.
ಬದುಕು ಎಂದರೆ ನೋವು ನಲಿವುಗಳ ಸಮ್ಮಿಲನ. ಕ್ರಿಯಾಶೀಲರಾಗಿ ಬುದ್ಧಿವಂತಿಕೆ, ಪರಿಶ್ರಮಗಳ ಮೂಲಕ ಜೀವನದ ಪ್ರತಿಯೊಂದು ಸಮಸ್ಯೆಗಳನ್ನು ಪರಿಹರಿಸಿ ಕೊಳ್ಳಲು ತಾಳ್ಮೆಯನ್ನು ಕೂಡ ಅಳವಡಿಸಿಕೊಳ್ಳಬೇಕಿದೆ.
ನೃತ್ಯಕ್ಕೆ ತಾಳವೆಷ್ಟು ಮುಖ್ಯವೋ ಬಾಳಿಗೆ ತಾಳ್ಮೆ ಅಷ್ಟೇ ಮುಖ್ಯ. ಆದ್ದರಿಂದಲೇ ತಾಳ್ಮೆಯಂತಹ ಗುಣ ಇಲ್ಲದವರು ಭ್ರಮೆಯೆಂಬ ಪ್ರವಾಹದಲ್ಲಿ ಕೊಚ್ಚಿಹೋಗುತ್ತಾರೆ. ಇದ್ದವರು ವಾಸ್ತವವೆಂಬ ಶಾಂತಸಾಗರದಲ್ಲಿ ತೇಲಾಡುತ್ತಾರೆ ಎನ್ನಲಾಗುತ್ತದೆ.
ಸಹನೆಯಿಂದ ಶ್ರೇಯಸ್ಸು
ಪ್ರತಿಯೊಬ್ಬ ವ್ಯಕ್ತಿಯಲ್ಲೂ ಒಂದು ಸುಂದರ ಮನಸ್ಸಿರುತ್ತದೆ. ಆ ಸುಂದರ ಮನಸ್ಸು ಯಾವಾಗಲು ಶಾಂತಿ, ನೆಮ್ಮದಿಯಿಂದ, ವ್ಯಕ್ತಿ ಉಲ್ಲಾಸಪಡುವಂತೆ ಮಾಡುತ್ತದೆ. ಇದಕ್ಕೆ ಆತನ ಮನಸ್ಸಿನಲ್ಲಿರುವ ತಾಳ್ಮೆ ಎಂಬ ಗುಣವೇ ಕಾರಣ. ಸಹನೆ ಹೊಂದಿರುವ ಮನಸ್ಸು ಯಾವಾಗಲು ವ್ಯಕ್ತಿಯ ಶ್ರೇಯಸ್ಸನ್ನು ಬಯಸುತ್ತದೆ. ಕೋಪವನ್ನು ಅದುಮಿಟ್ಟುಕೊಂಡು ನೆಮ್ಮದಿ, ಶಾಂತಿಗಾಗಿ ಹಾತೊರೆಯುತ್ತದೆ. ಹಾಗೇ ಬಾಳಿನ ಯಶಸ್ಸಿಗೆ ಮುನ್ನುಡಿ ಬರೆಯುತ್ತದೆ.
ಗೊತ್ತುಗುರಿಗಳಿಲ್ಲದ ಬದುಕು ಹರಿಗೋಲಿಲ್ಲದ ದೋಣಿಯಂತೆ. ಗುರಿ ಇಲ್ಲದೆ ಸಾಗುವ ಬದುಕಿಗೆ ಅರ್ಥವಿಲ್ಲ. ಆದ್ದರಿಂದ ನಮ್ಮ ಸಾಮರ್ಥ್ಯ ಅರಿತು ನಾವೇ ಗುರಿ ನಿಗದಿಪಡಿಸಬೇಕು. ಯಾವುದೇ ಗುರಿಯನ್ನು ಇದ್ದಕ್ಕಿದ್ದಂತೆ ಸಾಧಿಸಲು ಸಾಧ್ಯವಿಲ್ಲ. ಅದಕ್ಕೆ ಹಲವಾರು ವರ್ಷಗಳ ನಿರಂತರ ಪರಿಶ್ರಮ ಕಾಯುವಿಕೆ ಅಗತ್ಯ.
ತಾಳ್ಮೆಯೇ ನಮ್ಮ ಶಕ್ತಿ
ತಾಳ್ಮೆ, ಸಹನೆಯನ್ನು ದೌರ್ಬಲ್ಯ ಎನ್ನುವವರೂ ಇದ್ದಾರೆ. ಆ ಬಗ್ಗೆ ಚಿಂತಿಸುವುದು ಅಗತ್ಯವಿಲ್ಲ. ಅದುವೇ ನಮ್ಮ ಶಕ್ತಿ ಎಂದು ಭಾವಿಸಿ ಮುಂದುವರಿದರೆ ಯಶಸ್ಸು ಸಾಧಿಸಬಹುದು. “ತಾಳುವಿಕೆಗಿಂತ ತಪವಿಲ್ಲ’ ಎನ್ನುವ ದಾಸರ ನುಡಿಯಂತೆ, ಸುಖ ಬಂದಾಗ ಹಿಗ್ಗದೇ, ದುಃಖ ಬಂದಾಗ ಕುಗ್ಗದೇ ಎಲ್ಲವನ್ನು ಸಮಾನಭಾವದಿಂದ ಸ್ವೀಕರಿಸಬೇಕು. ಅದಕ್ಕೆ ತಾಳ್ಮೆಬೇಕು. ತಾಳ್ಮೆಯೊಂದಿದ್ದರೆ ನಂಬಿಕೆ ನೆಲೆಸುತ್ತದೆ, ಭರವಸೆಯು ಬೆಳೆಯುತ್ತದೆ, ಪ್ರೀತಿ ಮೂಡುತ್ತದೆ. ಹಾಗಾಗಿ ತಾಳ್ಮೆಗೆ ಬಂಗಾರಕ್ಕಿಂತ ಹೆಚ್ಚಿನ ಬೆಲೆಯಿದೆ. ಅದು ಕೇವಲ ಒಂದು ಶಕ್ತಿ ಮಾತ್ರವಲ್ಲ, ಜ್ಞಾನವೂ ಹೌದು.
ತಾಳ್ಮೆಗೆಟ್ಟು ತೆಗೆದುಕೊಳ್ಳುವ ಆತುರದ ನಿರ್ಧಾರವು ಭವಿಷ್ಯಕ್ಕೇ ಮಾರಕವಾಗುತ್ತದೆ. ದಾಸರು ಹೇಳುವಂತೆ “ಈಸಬೇಕು, ಇದ್ದು ಜಯಿಸಬೇಕು…’ ಎಂಬಂತೆ ಪ್ರವಾಹದಲ್ಲಿ ಈಜಿ ಆಚೆಯ ದಡವನ್ನು ಸೇರುವ ಮನೋಭಾವ ರೂಢಿಸಿ ಕೊಳ್ಳಬೇಕು.
ತಾಳ್ಮೆ ಯಶಸ್ಸಿನ ಮೊದಲ ಮೆಟ್ಟಿಲು
ಬದುಕಿನಲ್ಲಿ ಯಶಸ್ಸು ಎನ್ನುವುದು ರಾತ್ರಿ ಬೆಳಗಾಗುವುದರೊಳಗೆ ಲಭಿಸುವಂತಹದ್ದಲ್ಲ. ಅದು ಹಲವಾರು ವರ್ಷಗಳ ಸಾಧನೆಯ ಫಲ. ನಿರಂತರ ಪ್ರಯತ್ನ , ಶ್ರಮ ವಹಿಸುವಿಕೆ ಯಿಂದ ದೊರೆಯುವುದು. ಅದಕ್ಕೆ ವ್ಯಕ್ತಿಯಲ್ಲಿ ಮುಖ್ಯವಾಗಿ ಬೇಕಾದ್ದು ತಾಳ್ಮೆ. ಆದ್ದರಿಂದ ತಾಳ್ಮೆಯೇ ಯಶಸ್ಸಿನ ಮೂಲಮಂತ್ರ ಅಥವಾ ಮೊದಲ ಮೆಟ್ಟಿಲು. ಹಾಗೇ ತಾಳ್ಮೆ ಎಂಬುದು ಯಾರೊಬ್ಬರು ಹೇಳಿ ಕೊಟ್ಟು ಬರುವಂತಹದ್ದಲ್ಲ. ಅದನ್ನು ನಮ್ಮಲ್ಲಿ ನಾವೇ ಅಳವಡಿಸಿಕೊಳ್ಳಬೇಕು. ಧ್ಯಾನ, ತಪಸ್ಸು, ಯೋಗಾಸನ ಮಾಡುವುದು, ಪ್ರಕೃತಿ ರಮಣೀಯ ಪ್ರದೇಶಗಳಿಗೆ ಭೇಟಿ ಕೊಡುವುದು ಇತ್ಯಾದಿಗಳು ನಮ್ಮಲ್ಲಿ ತಾಳ್ಮೆ ಬೆಳೆಸಿಕೊಳ್ಳಲು ಪೂರಕ.
- ಗಣೇಶ ಕುಳಮರ್ವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.