ಪ್ರೇಮಾ ರಾಮಪ್ಪ ನಡಪಟ್ಟಿ
Team Udayavani, Oct 22, 2018, 12:57 PM IST
ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಜಾಣ್ಮೆಯಿಂದ ಎದುರಿಸುವ ಕಲೆ ಕರಗತ ಮಾಡಿಕೊಂಡರೆ ಯಾವುದು ಕೂಡ ಅಸಾಧ್ಯವಲ್ಲ ಎಂಬುವುದಕ್ಕೆ ಪ್ರೇಮಾ ರಾಮಪ್ಪ ನಡಪಟ್ಟಿ ಉತ್ತಮ ಉದಾಹರಣೆ. ಪತಿಯ ನಿಧನದ ಅನಂತರ 11 ವರ್ಷದ ಮಗನನ್ನು ಸಾಕುವ ಹೊಣೆ ನನ್ನ ಮೇಲೆ ಬಿತ್ತು. ಮಗನ ಭವಿಷ್ಯದ ದೃಷ್ಟಿಯಿಂದ ನನಗೆ ಒಂದು ಕೆಲಸ ಅನಿವಾರ್ಯವಾಯಿತು. ಈ ಸಂದರ್ಭ ನನ್ನ ಕೈ ಹಿಡಿದದ್ದು ಬಿಎಂಟಿಸಿ ಬಸ್ ಡ್ರೈವರ್ ಕೆಲಸ ಎಂದು ಹೆಮ್ಮೆಯಿಂದಲೇ ತಮ್ಮ ಜೀವನದ ಬಗ್ಗೆ ಹೇಳಿಕೊಳ್ಳುತ್ತಾರೆ ಪ್ರೇಮಾ ರಾಮಪ್ಪ ನಡಪಟ್ಟಿ.
ಪ್ರೇಮಾ ರಾಮಪ್ಪ ನಡಪಟ್ಟಿ ಅವರು ಮೂಲತಃ ಬೆಳಗಾವಿ ಜಿಲ್ಲೆಯ ಭೈರ್ನಡ್ಡಿಯವರು. ಜೀವನದಲ್ಲಿ ಬರುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿದರೆ ಎಂತಹ ಕಷ್ಟಗಳನ್ನೂ ಸುಲಭವಾಗಿ ಮೆಟ್ಟಿ ನಿಲ್ಲಬಹುದು ಎನ್ನುವುದಕ್ಕೆ ಇವರೇ ಸಾಕ್ಷಿ. ನರ್ಸ್ ಕೆಲಸ ಮಾಡಿಕೊಂಡಿದ್ದ ಇವರ ಬಳಿ ನಾಲ್ಕು ಚಕ್ರ ವಾಹನ ಚಾಲನೆಯ ಪರವಾನಿಗೆಯಿತ್ತು. ಆದರೆ ಇದಾವುದರ ಗೋಜಿಗೆ ಹೋಗದ ಅವರನ್ನು ಪತಿಯ ನಿಧನ ಸಂಕಷ್ಟದ ಪರಿಸ್ಥಿತಿಗೆ ತಂದು ನಿಲ್ಲಿಸಿತ್ತು. ಇಂತಹ ಪರಿಸ್ಥಿತಿಯಲ್ಲಿಯೂ ಧೃತಿಗೆಡದ ಪ್ರೇಮಾ ಅವರು ಬಿಎಂಟಿಸಿಗೆ ಕೆಲಸಕ್ಕಾಗಿ ಅರ್ಜಿ ಹಾಕಿದ್ದರು. ಅವರಿಗೆ ಅಲ್ಲಿ ಕೆಲಸವೂ ದೊರೆಯಿತು. ತಿಂಗಳುಗಳ ಕಾಲ ತರಬೇತಿಯ ಬಳಿಕ ರೂಟ್ ನಂ. 171ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಈ ಮೂಲಕ 2009ರ ವೇಳೆಗೆ ಬಿಎಂಟಿಸಿಯಲ್ಲಿ ಕೆಲಸ ಮಾಡುವ ಮೊದಲ ಮಹಿಳಾ ಬಸ್ ಚಾಲಕಿ ಎಂಬ ಬಿರುದಿಗೆ ಪ್ರೇಮಾ ಪಾತ್ರರಾದರು.
ಇದಾದ ಕೆಲ ದಿನಗಳ ಬಳಿಕ ಬೇರೆ ಆರು ಮಂದಿ ಮಹಿಳೆಯರು ಬಿಎಂಟಿಸಿಗೆ ಡ್ರೈವರ್/ ಕಂಡಕ್ಟರ್ ಆಗಿ ಆಯ್ಕೆಯಾದರೂ ಕೂಡ ಅವರು ಆಯ್ದುಕೊಂಡದ್ದು ಮಾತ್ರ ಕಂಡಕ್ಟರ್ ಕೆಲಸವನ್ನು. ಇದರಿಂದಾಗಿ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳಾ ನೌಕರರು ದುಡಿದರೂ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆ ಮಾತ್ರ ಇವರಲ್ಲಿಯೇ ಉಳಿಯಿತು. ಅನಿವಾರ್ಯ ಸಂದರ್ಭಗಳಲ್ಲಿ ಅವಧಿಗೂ ಹೆಚ್ಚು ಕೆಲಸ, ಬಹಳ ಸುರಕ್ಷಿತವಾದ ಬಸ್ ಚಾಲನೆ, ಸದಾ ನಗುಮೊಗ ಮುಂತಾದ ಗುಣಗಳಿಗೆ ಹೆಸರಾಗಿದ್ದ ಪ್ರೇಮಾ ಪ್ರಯಾಣಿಕರ ಅಚ್ಚುಮೆಚ್ಚಿನ ಬಸ್ ಚಾಲಕಿ ಕೂಡ ಹೌದು. ಕಷ್ಟಗಳು ಬಂತೆಂದಾಗ ಆಕಾಶವೇ ತಲೆ ಮೇಲೆ ಬಿತ್ತೆಂದು ಕುಳಿತುಕೊಳ್ಳುವ ಮಹಿಳೆಯರಿಗೆ ಮಾತ್ರವಲ್ಲ, ಪುರುಷರಿಗೂ ಮಾದರಿ ಈ ಗಟ್ಟಿಗಿತ್ತಿ.
ಪ್ರಸನ್ನ ಹೆಗಡೆ ಊರಕೇರಿ