ಸಂಬಂಧಗಳ ಉಳಿವಿಗೆ ಮನಸ್ಸೇ ತೇರು..
Team Udayavani, Mar 11, 2019, 7:42 AM IST
ಮನಸ್ಸು ಮತ್ತು ಮೆದುಳಿನ ಮಧ್ಯೆ ಅಜಗಜಾಂತರವಿದೆ. ಮನಸ್ಸು ಸಂಬಂಧಗಳನ್ನು ಬೆಸೆಯುವ ಮೂಲವಾದರೆ, ಮೆದುಳು ವ್ಯಾವಹಾರಿಕತೆಯ ಆಧಾರ. ಜೀವನ ಈ ಎರಡರ ಅನುಭವಗಳ ಮೇಲೆ ಸಾಗುತ್ತದೆ. ಸಂಬಂಧಗಳು ಹೊಸೆಯುವ, ಬೆಸೆಯುವ ಮತ್ತು ಕಳೆದುಕೊಳ್ಳುವ ಎಲ್ಲ ಪ್ರಕ್ರಿಯೆಗಳ ಮೇಲೆಯೂ ಮನಸ್ಸು ಮತ್ತು ಮೆದುಳಿನ ಪ್ರಭಾವ ಇದ್ದೇ ಇರುತ್ತದೆ. ಅರಿತು, ಯೋಚಿಸಿ ಹೆಜ್ಜೆ ಇಡುವಂತೆ ಮಾಡುವ ಮನಸ್ಸಿನ ಮಾತನ್ನು ಗಣನೆಗೆ ತೆಗೆದುಕೊಂಡರೆ ಮೂರು ಸಂಬಂಧಗಳು ನೂರಾಗುತ್ತವೆ. ಕೇವಲ ವ್ಯಾವಹಾರಿಕತೆ ಮತ್ತು ಅಹಂಗಳ ಸಂಕೋಲೆಯೊಳಕ್ಕೆ ಬಂಧಿಯಾದರೆ ನೂರು ಮೂರಾಗುತ್ತದೆ. ಕೊನೆಗೊಮ್ಮೆ ಒಂಟಿತನಕ್ಕೆ ಜಾರುವ ಸ್ಥಿತಿಯೂ ಬರುತ್ತದೆ, ಇದು ವಾಸ್ತವ.
ಎಲ್ಲರಿಗೂ ಅವರವರದೇ ಆದ ಭಾವನೆಗಳಿವೆ, ಆಲೋಚನಾ ಲಹರಿಗಳಿವೆ. ಎಲ್ಲರನ್ನೂ ಒಪ್ಪಿಕೊಳ್ಳಲೇ ಬೇಕು ಎನ್ನುವ ಯಾವ ನಿರ್ಬಂದಗಳೂ ಇಲ್ಲ. ಯಾರೋ ಒಬ್ಬ ವ್ಯಕ್ತಿ ನಮಗೆ ಒಪ್ಪಿತವಾದಂತೆ ಇಲ್ಲ ಎಂದರೆ ತತ್‌ಕ್ಷಣ ಅವನನ್ನು ದೂರವಿಡುವ ಮಂದಿಯೇ ಹೆಚ್ಚು. ಅವರ ತಪ್ಪನ್ನು ಹೇಳಿ, ಅವರನ್ನು ಬದಲಾಯಿಸಲು ಪ್ರಯತ್ನಿಸುವ ಮನಸ್ಸುಗಳು ಸಿಗುವುದು ತೀರಾ ವಿರಳ. ಹೀಗಿರುವಾಗ ಸಮಾಜದಲ್ಲಿ ನಾವು ಹೇಗೆ ಜೀವನ ಸಾಗಿಸಬೇಕು ಎಂಬುದು ದೊಡ್ಡ ಪ್ರಶ್ನೆಯಾಗಿ ಬಿಡುತ್ತದೆ. ಅದಕ್ಕೆ ಉತ್ತರ ಮಾನಸಿಕ ಬದಲಾವಣೆ ಮಾಡಿಕೊಳ್ಳುವುದು.
ಬದಲಾಗುವ ಬಗೆ ಹೇಗೆ?
ಯಾವೆಲ್ಲ ರೀತಿಯಲ್ಲಿ ಮತ್ತು ಯಾಕಾಗಿ ನಾವು ಬದಲಾಗಬೇಕು? ಎಂಬುದಕ್ಕೆ ಮೊದಲು ಉತ್ತರ ಕಂಡುಕೊಳ್ಳಬೇಕು. ಮನುಷ್ಯ ತಪ್ಪು ಮಾಡುವುದು ಸಹಜ. ಅವನ ತಪ್ಪಿಗೆ ನಾವು ತೆಗೆದುಕೊಳ್ಳುವ ಕ್ರಮಗಳ ಮೇಲೆ ಸಂಬಂಧ ಉಳಿಯುವುದೋ ಅಥವಾ ಕೊನೆಯಾಗುವುದೋ ಎಂಬುದು ನಿರ್ಧಾರವಾಗುತ್ತದೆ. ಹೇಗೆಂದರೆ, ಒಬ್ಬ ವ್ಯಕ್ತಿಯ ತಪ್ಪನ್ನು ಮನ್ನಿಸಿ, ಅವನೊಂದಿಗೆ ಮತ್ತೆ ನಾವು ಸ್ನೇಹಪೂರ್ವಕವಾಗಿ ವರ್ತಿಸಿದರೆ ಬೆಸುಗೆ ಭದ್ರವಾಗುತ್ತದೆ. ಅದೇ ತಪ್ಪನ್ನು ಎತ್ತಿ ಹಿಡಿದು, ಆ ಕ್ಷಣಕ್ಕೆ ಅವನ ವಿರುದ್ಧ ಕಠಿನ ನಿರ್ಧಾರಗಳನ್ನು ಯೋಚಿಸುತ್ತಾ ಹೋದರೆ ಸಂಬಂಧ ಕೊಳೆತು ನಾರುತ್ತದೆ. ಇದನ್ನೇ ಮನಸ್ಸು ಮತ್ತು ಮೆದುಳಿಗೆ ಸಂಬಂಧಿಸಿದ ಕೆಲಸಗಳು ಎಂದು ಹೇಳುವುದು. ಅಂದರೆ ಕಠಿನ ಪರಿಸ್ಥಿತಿಗಳಲ್ಲಿ ನಾವು ಮನಸ್ಸಿನಿಂದ ಯೋಚನೆ ಮಾಡಿದಲ್ಲಿ ಉತ್ತರಗಳು, ಪರಿಹಾರೋಪಾಯಗಳು ಹಿತವಾಗಿರುತ್ತವೆ. ಅದೇ ಸಂದರ್ಭಗಳ ಕಾಠಿನ್ಯತೆಯ ಅರಿವಿದ್ದರೂ ಮೆದುಳಿನ ಮೂಲಕ ಯೋಚಿಸಿದಾಗ ನಿರ್ಧಾರಗಳೂ ನಿರ್ದಾಕ್ಷಿಣ್ಯವಾಗಿರುತ್ತವೆ. ಮತ್ತೆ ಆಡುವುದಕ್ಕೆ ಮಾತುಗಳೂ ಉಳಿಯುವುದಿಲ್ಲ. ಸಂಬಂಧದ ಕೊಂಡಿ ಕಳಚಿ ಹೋಗಿರುತ್ತದೆ.
ಜೀವನ ಬಹಳ ಚಿಕ್ಕದು. ಇಲ್ಲಿ ನಾವು ಇತರರನ್ನು ಒಪ್ಪಿಕೊಂಡು ಬದುಕುತ್ತೇವೆ ಎಂದು ಹೊರಟಲ್ಲಿ ನಮ್ಮೊಂದಿಗೆ ಹೆಗಲಾಗುವವರು ಸಾವಿರ ಜನ ಇರುತ್ತಾರೆ. ಅದೇ ನಮಗೇ ಒಂದು ನಿರ್ಬಂಧವನ್ನು ಹೇರಿಕೊಂಡು, ಪರಿಸ್ಥಿತಿಗಳಿಗೆ ಹೊಂದಿಕೊಂಡು ಹೋಗುವ, ಮುಖ್ಯವಾಗಿ ಇದ್ದುದನ್ನು ಇದ್ದ ಹಾಗೆಯೇ ಒಪ್ಪಿಕೊಂಡು ಬಿಡುವ ಮನಸ್ಸು ನಮ್ಮದಾಗದೇ ಇದ್ದರೆ ಇಲ್ಲಿ ನಾವು ನಾವಾಗಿಯೇ ಇರಬೇಕಾಗುತ್ತದೆ. ನಾವಾಗಿಯೇ ಹೋಗಬೇಕಾಗುತ್ತದೆ. ಕೊನೆಗೊಂದು ಹನಿ ಕಣ್ಣೀರೂ ನಮಗಾಗಿ ಮಿಡಿಯುವವರು ಇಲ್ಲಿ ಇರುವುದಿಲ್ಲ. ಹಾಗೆಂದು ಎಲ್ಲವನ್ನೂ ಒಪ್ಪಿಕೊಂಡು ಸಾಗಬೇಕು ಎಂದು ಹೇಳುವುದಲ್ಲ. ಮನಸ್ಸನ್ನು ವಿಶಾಲವಾಗಿ ತೆರೆದಿಡಬೇಕು ಎಂಬುದಷ್ಟೇ ಮುಖ್ಯ. ಎಲ್ಲ ಅನುಭವಗಳನ್ನು ನಾವೇ ಪಡೆದು ಬದುಕುವುದು ಅಸಾಧ್ಯ. ಹಾಗಾಗಿ ಇತರರ ಅನುಭವಗಳ ಮೂಲಕ ನಾವು ಅನುಭಾವದ ನೆಲೆಗೆ ಸಾಗುವುದಿದೆಯಲ್ಲಾ ಅದೇ ನಿಜವಾದ ಬದುಕು. ಹಾಗಾಗಿ ಮನಸ್ಸಿನ ಬಾಗಿಲಿನ ಜತೆಗೆ ಕಿಟಕಿಗಳನ್ನೂ ತೆರೆದಿಡೋಣ.
ಭುವನ ಬಾಬು ಪುತ್ತೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.