ವಿಸ್ತರಣೆಗೊಂಡ ರಸ್ತೆ ಪಾರ್ಕಿಂಗ್‌ಗೆ ಮೀಸಲು!
Team Udayavani, Feb 2, 2020, 5:28 AM IST
ನಗರದ ಹಲವೆಡೆ ರಸ್ತೆ ವಿಸ್ತರಣೆಗೊಳಿಸುವ ಕಾಮಗಾರಿ ನಡೆಯುತ್ತಿದೆ. ಕೆಲವು ಕಡೆ ಒಂದು ಹಂತದಲ್ಲಿ ಪೂರ್ಣಗೊಂಡಿದೆ. ಆದರೆ ಇದು ವಾಹನಗಳ ಮುಕ್ತ ಓಡಾಟಕ್ಕೆ ಲಭ್ಯವಾಗದೆ ವಾಹನಗಳ ಪಾರ್ಕಿಂಗ್‌ಗೆ ಬಳಕೆಯಾಗುತ್ತಿದೆ. ಪಾರ್ಕಿಂಗ್ ಸ್ಥಳಾವಕಾಶದ ಕೊರತೆ ಇರುವುದು ಹೌದು. ಆದರೆ ವಿಸ್ತರಣೆಗೊಂಡ ರಸ್ತೆಯಲ್ಲಿ ನಿಲುಗಡೆಗೆ ಅವಕಾಶ ಕೊಡುವುದು ಸರಿಯಲ್ಲ. ರಸ್ತೆ ವಿಸ್ತರಣೆಗೊಳಿಸಿದರೆ ಅದು ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗಬೇಕು. ಇದರ ಜತೆಗೆ ಪಾದಚಾರಿಗಳು ರಸ್ತೆಯ ನಡುವೆ ಅಲ್ಲಲ್ಲಿ ರಸ್ತೆಯಲ್ಲಿಯೇ ನಡೆದುಕೊಂಡು ಹೋಗಲು ಕೂಡ ಅವಕಾಶವಿರಬಾರದು. ಸೂಕ್ತ ಫುಟ್‌ಪಾತ್ ವ್ಯವಸ್ಥೆ ಇರಬೇಕು. ರಸ್ತೆ ಅಗಲಗೊಳಿಸುವಾಗ ಫುಟ್‌ಪಾತ್, ಚರಂಡಿ ಮೊದಲಾದವುಗಳನ್ನು ಕೂಡ ಆದ್ಯತೆಯಲ್ಲಿ ಮಾಡಬೇಕು. ಪಾದಚಾರಿಗಳು ರಸ್ತೆಯಲ್ಲಿ ಓಡಾಡಿದರೆ ಅದರಿಂದ ಸಂಚಾರ ವ್ಯತ್ಯಯ ಉಂಟಾಗುವುದು ಮಾತ್ರವಲ್ಲದೆ ಅಪಘಾತಕ್ಕೂ ಕಾರಣವಾಗುತ್ತದೆ. ಹಾಗಾಗಿ ವಿಸ್ತರಣೆಗೊಂಡ ರಸ್ತೆ ಸದುಪಯೋಗವಾಗಬೇಕು. ಅದರಿಂದ ಮತ್ತಷ್ಟು ತೊಂದರೆಯಾಗಬಾರದು.
ಟಿಕೆಟ್ ಇಲ್ಲದೆಯೇ ಪ್ರಯಾಣ
ನಗರದ ಸಿಟಿ ಬಸ್‌ಗಳಲ್ಲಿ ಟಿಕೆಟ್ ನೀಡುತ್ತಿಲ್ಲ ಎಂಬ ದೂರು ಕಳೆದ ಕೆಲವು ವರ್ಷಗಳಿಂದ ಕೇಳಿಬರುತ್ತಿದೆ. ಕೆಲವೇ ಕೆಲವು ಬಸ್‌ಗಳನ್ನು ಹೊರತುಪಡಿಸಿದರೆ ಉಳಿದ ಸಿಟಿ ಬಸ್‌ಗಳಲ್ಲಿ ಪ್ರಯಾಣಿಕರಿಂದ ಹಣ ಪಡೆದುಕೊಳ್ಳಲಾಗುತ್ತದೆಯೇ ಹೊರತು ಟಿಕೆಟ್ ನೀಡುತ್ತಿಲ್ಲ. ಕೆಲವು ಬಸ್‌ಗಳಲ್ಲಿ ಪ್ರಯಾಣಿಕರು ಕೇಳಿದರೆ ಮಾತ್ರ ನೀಡಲಾಗುತ್ತದೆ. ಟಿಕೆಟ್ ನೀಡಬೇಕು ಎಂದು ಆರ್‌ಟಿಒ ಸೂಚನೆ ನೀಡಿದ್ದರೂ ಅದರ ಪಾಲನೆಯಾಗುತ್ತಿಲ್ಲ.
ನಂತೂರು ಜಂಕ್ಷನ್
ಪಂಪ್‌ವೆಲ್‌ನಲ್ಲಿ ಉಂಟಾಗುತ್ತಿದ್ದ ಸಂಚಾರ ಸಮಸ್ಯೆ ಈಗ ಪರಿಹಾರವಾಗಿದೆ. ಆದರೆ ಇನ್ನೊಂದು ಪ್ರಮುಖ ಜಂಕ್ಷನ್ ಆಗಿರುವ ನಂತೂರು ಜಂಕ್ಷನ್‌ನಲ್ಲಿ ವಾಹನ ದಟ್ಟಣೆ, ಅವ್ಯವಸ್ಥೆಯಿಂದಾಗಿ ಭಾರೀ ತೊಂದರೆಯಾಗಿದೆ. ಇದು ಹೆದ್ದಾರಿಗಳು ಸಂಧಿಸುವ ಜಾಗ. ಮಾತ್ರವಲ್ಲದೆ ನಗರದಿಂದ ಹೊರಗೆ ಹೋಗುವ, ನಗರಕ್ಕೆ ಆಗಮಿಸುವ ವಾಹನಗಳು ಸಂಚರಿಸುವ ಜಾಗ. ಬೆಳಗ್ಗಿನಿಂದ ರಾತ್ರಿವರೆಗೂ ಇಲ್ಲಿ ನಿರಂತರ ಟ್ರಾಫಿಕ್ ಜಾಮ್. ಒಂದಿಬ್ಬರು ಸಂಚಾರಿ ಪೊಲೀಸರು ಸಂಚಾರವನ್ನು ನಿಯಂತ್ರಿಸುವ ಪ್ರಯತ್ನ ನಡೆಸುತ್ತಾರೆ. ಆದರೆ ಅವರಿಂದ ಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿ ಪದೇ ಪದೇ ಅಪಘಾತಗಳಾಗುತ್ತಿವೆ. ದ್ವಿಚಕ್ರ ವಾಹನಗಳು ಇಲ್ಲಿ ಸಂಚರಿಸಲು ಆತಂಕ ಪಡುವ ಸ್ಥಿತಿ ಇದೆ. ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದರಿಂದ ತುರ್ತು ಅಗತ್ಯಗಳಿಗೆ ತೆರಳುವವರಿಗೂ ತೊಂದರೆಯಾಗಿದೆ. ಇಲ್ಲಿ ವಾಹನಗಳು ಮುಕ್ತವಾಗಿ ಸಂಚರಿಸಬೇಕಾದರೆ ಫ್ಲೈಓವರ್ ಬೇಕು. ಅದೇ ರೀತಿ ಪಾದಚಾರಿಗಳು ರಸ್ತೆ ದಾಟುವುದಕ್ಕೂ ವ್ಯವಸ್ಥೆಯಾಗಬೇಕು.
ಹಸಿರು ಮರೆಯಾಗದಿರಲಿ
ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಆದರೆ ಮರಗಿಡ ಬೆಳೆಸಲು ಆಸಕ್ತಿ ತೋರಿಸುತ್ತಿಲ್ಲ. ಈ ಹಿಂದೆ ಇದ್ದ ಮರಗಳು ನಾಶವಾಗುತ್ತಿವೆ. ಜನಸಂಖ್ಯೆ, ವಾಹನಗಳ ಹೆಚ್ಚಳದಿಂದಾಗಿ ವಸತಿ, ಕಟ್ಟಡ, ಇತರೆ ಮೂಲಸೌಕರ್ಯಗಳ ಅಭಿವೃದ್ಧಿ ಅನಿವಾರ್ಯ. ಆದರೆ ಹಸಿರು ಬೆಳೆಸಲು ಕೂಡ ಆದ್ಯತೆ ದೊರೆಯಬೇಕು. ಈಗ ನಗರದ ಕೆಲವೆಡೆ ನೆಡಲಾಗಿರುವ ಗಿಡಗಳನ್ನು ಪೋಷಿಸುವ, ರಕ್ಷಿಸುವ ಕೆಲಸವಾಗಬೇಕು. ಬೇಸಗೆಯಲ್ಲಿ ಇತರೆ ಕೆಲಸಗಳಿಗೆ ಬಳಕೆ ಮಾಡಿದ ನೀರನ್ನಾದರೂ ಗಿಡಗಳಿಗೆ ಹಾಕಿ ಅವುಗಳನ್ನು ಉಳಿಸಬೇಕು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.