ಬಂಧುತ್ವ ಸಾರಿದ ಸಂತ ಇಬ್ರಾಹಿಂ ಸುತಾರ
Team Udayavani, Jan 28, 2019, 7:06 AM IST
ಒಂದು ಸೀಮಿತ ಜಾತಿ, ಧರ್ಮ, ಮತ-ಪಂಥಗಳಿಗೆ ಗುರುತಿಸಿ ಕೊಳ್ಳುವು ದಕ್ಕಿಂತ ಮಾನವ ಧರ್ಮ ವನ್ನಿಟ್ಟುಕೊಂಡು ಬದುಕುವುದು ಶ್ರೇಷ್ಠ ಎಂಬುದು ಇಬ್ರಾಹಿಂ ಸುತಾರ ಸಂದೇಶ. ತಮ್ಮ ದೇಸಿ ಸೊಗಡಿನ ಭಾಷೆಯಲ್ಲಿ ಅಧ್ಯಾತ್ಮ ಪ್ರವಚನದ ಮೂಲಕ ಸಮಾಜದಲ್ಲಿ ಬಂಧುತ್ವ ದ ಸೇತುವೆ ಕಟ್ಟಿದವರು.
ಗುರುವಿನ ಸೇವಾ ಸದಾ ಮಾಡುವವರಿಗೆ, ಅರಿವಿನ ಮಾತುಗಳಾಡುವವರಿಗೆ, ಅರಿಗಳನಾರನ್ನು ದೂಡುವವರಿಗೆ, ಶರಣರ ಸಂಗದೊಳಗೆ ಕೂಡುವವರೆಗೆ, ಮನೆಯೊಳಗಿದ್ದರು ಮುಕುತಿ ನೋಡಯ್ನಾ||
ಇಂತಹದೊಂದು ಜೀವನ ಸಂಕಲ್ಪ ನುಡಿಯನ್ನು ಕನ್ನಡದ ಕಬೀರ ಎಂದೇ ಪ್ರಸಿದ್ಧರಾಗಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಅಧ್ಯಾತ್ಮ ಪ್ರವಚನಕಾರ ಇಬ್ರಾಹಿಂ ಸುತಾರ ಹೇಳುತ್ತಾರೆ.
ಮೂಲತಃ ಉತ್ತರ ಕರ್ನಾಟಕದವರಾದ ಇವರು ನಾಡಿನ ಭಾವೈಕ್ಯ ಹಾಗೂ ಬಹುತ್ವದ ನಾಡಿಮಿಡಿತವನ್ನು ಗಟ್ಟಿಯಾಗಿ ಅರ್ಥೈಸಿಕೊಂಡವರು. ಎಲ್ಲ ಧರ್ಮಗಳ ಸಾರ, ಉದಾರ ತತ್ತ್ವವನ್ನು ಪ್ರಪಂಚಕ್ಕೆ ತಮ್ಮ ದೇಸಿ ಸೊಗಡಿನ ಭಾಷೆಯಲ್ಲಿ ಅಧ್ಯಾತ್ಮ ಪ್ರವಚನದ ಮೂಲಕ ಸಾರಿ ಬಂಧುತ್ವ ದ ಸೇತುವೆ ಕಟ್ಟಿದವರು. ಶರಣರ ವಚನ, ಸಿದ್ಧಾಂತ ಶಿಖಾಮಣಿ, ಭಗವದ್ಗೀತೆ, ಕುರಾನ್, ಬೈಬಲ್, ಸೂಫಿ-ಸಂತರ ದಾರ್ಶನಿಕತೆಯ ಸಂದೇಶವನ್ನು ಸಮಾಜಕ್ಕೆ ನಿರಂತರ ದಾಸೋಹ ಮಾಡುತ್ತಿರುವ ಸಂತ. ಇವರು ಕೇವಲ ಪ್ರವಚನ ನೀಡುವುದಷ್ಟೇ ಅಲ್ಲ, ದೇವದಾಸಿ,ಜಾತಿ, ಮೇಲು-ಕೀಳು ಎಂಬ ಮತ-ಜಾಡ್ಯಗಳನ್ನು ಸಮಾಜದಿಂದ ಕಿತ್ತೆಸೆಯೆಲು ಹಠಯೋಗಿಯಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಊರಿನ ಮೂಲಸೌಲಭ್ಯ ಸಮಸ್ಯೆಗಳಿಗೆ ತಮ್ಮ ಕೈಗಳಿಂದಲೇ ಪರಿಹಾರ ಕಂಡುಕೊಳ್ಳುವ ಮಾರ್ಗವನ್ನು ಜನರಿಗೆ ತಿಳಿಸಿ ಸ್ವಾವಲಂಬಿಯಾಗುವಂತೆ ಮಾಡಿದ ಆಧುನಿಕ ದಿವ್ಯ ಪುರುಷ ಎಂದು ಸಂಬೋಧಿಸಿದರೂ ಅತಿಶಯೋಕ್ತಿಯಾಗಲಾರದು.
ಸುತಾರ ಅವರು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮಹಾಲಿಂಗಪುರದಲ್ಲಿ 1940ರಲ್ಲಿ ಬಡ ಮುಸ್ಲಿಂ ಕುಟುಂಬವೊಂದರಲ್ಲಿ ಜನಿಸಿದರು. ಎಳವೆಯಿಂದಲೂ ಧಾರ್ಮಿಕ ಮನೋಭಾವನೆ ರೂಢಿಸಿಕೊಂಡಿದ್ದ ಇವರಿಗೆ ಬಸಪ್ಪ ಮಾಸ್ತರರ ಸಂಪರ್ಕ ವಚನ, ಭಜನೆ ಹಾಗೂ ತತ್ತ್ವಪದಗಳನ್ನು ಆಳವಾಗಿ ಆಧ್ಯಯನ ಮಾಡಲು ನೆರವಾಯಿತು.
ಅಂದಿನಿಂದಲೇ ಅವರು ತಮ್ಮನ್ನು ತಾವು ಆಧ್ಯಾತ್ಮಿಕವಾಗಿ ಗುರುತಿಸಿಕೊಂಡರು. ಸಮಾಜದಲ್ಲಿ ಹದಗೆಟ್ಟಿದ್ದ ಹಿಂದೂ-ಮುಸ್ಲಿಂ ಭಾವೈಕ್ಯಕ್ಕೆ ಅಧ್ಯಾತ್ಮ ಹಾಗೂ ದೇವರ ಸ್ವರೂಪ ಎಂಬ ಮುಲಾಮು ಹಚ್ಚಿ ಸೌಹಾರ್ದಕ್ಕೆ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಕಾಯಕನಿಷ್ಠೆ, ಮಾನವ ಬಂಧುತ್ವ, ಉತ್ತಮ ಜೀವನ, ಧರ್ಮನಿಷ್ಠೆಯ ಬಗ್ಗೆ ತಮ್ಮ ಪ್ರವಚನಗಳಲ್ಲಿ ತಿಳಿಸಿದ್ದು, ಪ್ರಸ್ತುತ ಅದರ ಮೇಲೆ ಬೆಳಕು ಚೆಲ್ಲುವುದು ಸ್ತುತ್ಯರ್ಹ.
ಮೊದಲು ಮಾನವನಾಗು
ತಮ್ಮ ಸಾಮಾಜಿಕ ಜೀವನದಲ್ಲಿ ಮಾನವತೆಯ ಸಾಮರಸ್ಯದ ಕೋಟೆ ಕಟ್ಟಲು ಮುಂದಡಿಯಿಟ್ಟವರು. ಅವರ ಒಂದು ಪ್ರವಚನದಲ್ಲಿ ಸಿದ್ಧಯ್ಯ ಪುರಾಣಿಕರ ಮೊದಲು ಮಾನವನಾಗು ಎಂಬ ಸಂದೇಶವನ್ನು ಆಯ್ದುಕೊಂಡು, ತಮ್ಮ ವಾಗ್ಝರಿಯ ಮೂಲಕ ಮಾನವನಾಗುವ ಪರಿಯನ್ನು ವಿಶ್ಲೇಷಿಸಿದ್ದಾರೆ. ಅವರೇ ಹೇಳುವಂತೆ ವಿದ್ಯೆ, ಜ್ಞಾನ, ದಾನ, ಶೀಲ, ಸದ್ಗುಣ, ತಪಸ್ಸು ಹಾಗೂ ಧರ್ಮವನ್ನು ಯಾರು ಸಂಪಾದಿಸಿಕೊಂಡಿರುತ್ತಾರೋ ಅವರೇ ನಿಜವಾದ ಮಾನವರು. ಇವುಗಳಿಲ್ಲದವರು ಮಾನವ ರೂಪದ ಮೃಗಗಳು ಎಂದು ಕರೆಯುತ್ತಾರೆ.
ಭಾರತೀಯತೆಯೇ ಭಾವೈಕ್ಯ
ಧರ್ಮಗಳ ನಡುವೆ ನಾವು ಭಾವೈಕ್ಯೆದ ಮಾತು ಆಡುತ್ತೇವೆ. ಹಾಗದರೆ ಭಾವೈಕ್ಯ ಎಂದರೇನು ಎಂಬ ಪ್ರಶ್ನೆ ಮೂಡುವುದು ಸಹಜ. ಸುತಾರರು ಹೇಳುವಂತೆ, ಮಹಾ ಪುರುಷರ ಹೇಳಿಕೆಗಳನ್ನು ಉದಾಹರಿಸುತ್ತಾ, ಮನುಷ್ಯನು ತಾನು ನಂಬಿದ ಧರ್ಮದ ನಿಷ್ಠೆಯನ್ನು ಸರಿಯಾಗಿ ಅರಿತು, ಆಚರಣೆ ಮಾಡಿ, ಇನ್ನೊಂದು ಧರ್ಮವನ್ನು ಗೌರವಿಸುವುದೇ ಭಾವೈಕ್ಯ. ನಾವು ನೆಲೆಸಿರುವ ಭಾರತದ ಆದಿ ಪುರುಷರಿಂದ ಹಿಡಿದು ಆಧುನಿಕ ಪುರುಷರು ನೀಡಿದ ಜ್ಞಾನ, ತತ್ವ್ತಾದರ್ಶಗಳನ್ನು ಪಾಲಿಸಿ ಬದುಕಬೇಕು,ಅನೇಕತ್ವದಲ್ಲಿ ಏಕತೆ ಸಾಧಿಸಿ, ಧಾರ್ಮಿಕ ಸಾಮರಸ್ಯದಿಂದ ಬದುಕಿ ಬಾಳುವುದೇ ಭಾವೈಕ್ಯಎಂದು ತಮ್ಮ ಅನುಭವದ ನುಡಿಯಲ್ಲಿ ತಿಳಿಸಿದ್ದಾರೆ.
ದೇವರು ಒಬ್ಬನೇ
ತತ್ತ್ವಪದಕಾರ ಇಬ್ರಾಹಿಂ ಸುತಾರರ ಜೀವಮಾನ ಏಕ ಮಾತ್ರ ಸಂದೇಶ ಎಂದರೆ ದೇವರು ಒರ್ವ, ಆತನ ರೂಪಗಳು, ಆಕಾರಗಳು ಬೇರೆ ಅಷ್ಟೇ ಎಂದು ವಾದಿಸುತ್ತಾರೆ. ಅವರೇ ಹೇಳುವಂತೆ, ತಂತಿಯೊಳಗೆ ವಿದ್ಯುತ್ ಪ್ರವಹಿಸುತ್ತದೆ, ಆದರೆ ನಮಗೆ ಕಾಣುವುದಿಲ್ಲ ಅದು ಬಲ್ಬ್ನ ಬೆಳಕಿನ ಮೂಲಕ ಕಾಣುತ್ತದೆ. ಅಂತೆಯೇ ನಮ್ಮ ಮನಸ್ಸಿನಲ್ಲಿ ಅಧ್ಯಾತ್ಮ ಎಂಬ ಜ್ಞಾನದ ಬಲ್ಬ್ನ ಮೂಲಕ ನಾವು ದೇವರನ್ನು ಕಾಣಬಹುದು ಎಂದು ದೇವರನ್ನು ಕಾಣುವ ಬಗ್ಗೆ ತಮ್ಮ ತರ್ಕವನ್ನು ನಮ್ಮ ಮುಂದಿಡುತ್ತಾರೆ.
ಪದ್ಮಶ್ರೀ ಪ್ರಶಸ್ತಿ
ಇವರ ಅವಿರತ ಆಧ್ಯಾತ್ಮಿಕ ಶ್ರಮವನ್ನು ಪರಿಗಣಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಹುಡುಕಿಕೊಂಡು ಬಂದಿವೆ. 2018ರಲ್ಲಿ ಕೇಂದ್ರ ಸರಕಾರವೂ ಇವರನ್ನು ಗೌರವಿಸಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ, ಪ್ರಶಸ್ತಿಯ ಗೌರವವನ್ನು ಹೆಚ್ಚಿಸಿಕೊಂಡಿದೆ.
ದೇವರು ಕಾಡುವುದಿಲ್ಲ
ದೇವರು ಹಾಗೂ ಮನುಷ್ಯನ ಅತೀತವಾದ ಸಂಬಂಧ ಕೆಲವೊಂದು ಚೌಕಟ್ಟುಗಳಿಂದಾಗಿ ಸಂಕುಚಿತವಾಗಿ ಬಿಡುತ್ತದೆ. ಇದರಿಂದಾಗಿ ದೇವರನ್ನು ಕಾಣಬೇಕು ಎನ್ನುವ ಮನುಷ್ಯನ ತುಡಿತ ಹೆಚ್ಚಾದಾಗ ಜನರು ಮೌಡ್ಯಕ್ಕೆ ಇಳಿಯುತ್ತಾರೆ. ಕೆಲವೊಂದು ಆಚರಣೆಗಳನ್ನು ಅನುಸರಿಸದಿದ್ದರೆ, ದೇವರು ನಮ್ಮನ್ನು ಕಾಡುತ್ತಾನೆ ಎಂದು ತಿಳಿದುಕೊಳ್ಳುತ್ತೇವೆ. ಆದರೆ ಇದೆಲ್ಲ ಸುಳ್ಳು. ದೇವರು ಯಾರನ್ನೂ ಕಾಡುವುದಿಲ್ಲ ಎಂದು ತಮ್ಮ ಪ್ರವಚನದಲ್ಲಿ ತಿಳಿಸಿದ್ದಾರೆ. ನಿರಂಹಕಾರಿ, ನಿರಾಮಯನಾದ ದೇವರು ಎಂದಿಗೂ ಭಕ್ತರನ್ನು ಕಾಡುವುದಿಲ್ಲ. ಧಾರ್ಮಿಕ ಆಚರಣೆಗಳು ಮಾಡದಿದ್ದರೆ, ಸುಳ್ಳು ಹೇಳಿದರೆ, ತಪ್ಪು ಮಾಡಿದರೆ ಹಾಗೂ ಇಂದ್ರಿಯ ವ್ಯವಹಾರದಲ್ಲಿ ಲೋಪವೆಸಗಿದವರಿಗೆ ಮಾತ್ರ ದೇವರು ಕಾಡುತ್ತಾನೆ ಎಂದು ಬಸವಣ್ಣನವರ ವಚನದ ತಳಹದಿಯಲ್ಲಿ ಈ ಜಿಜ್ಞಾಸಾತ್ಮಕ ಪ್ರಶ್ನೆಗೆ ಉತ್ತರ ಕಂಡು ಕೊಡುತ್ತಾರೆ ಸುತಾರರು.
ಸತ್ಯದ ನುಡಿ ಚಂದ ಆ ನುಡಿಗಿಂತ ನಡೆ ಚಂದ|ನಡೆ ನುಡಿ ಒಂದಾಗಿ ಕಡೆತನ ಚಂದಾಗಿ ನಡೆವಂಥ ನಾಡಿನೊಡತಿ ಚೆಂದ|
ಸತ್ಯ ಮಾರ್ಗವನು ಬಿಡದೇ, ಮಿಥ್ಯವಾದ ವಚನ ಕೊಡದೇ||, ತುತ್ತು ಅನ್ನಕ್ಕಾಗಿ ಎಂದಿಗೂ ಸುಳ್ಳನುಡಿಯದಿಹುದೇ ಧರ್ಮ|| ಅಧ್ಯಾತ್ಮ ಶಕ್ತಿ ಬೆಳೆಯಲಿ, ಅಜ್ಞಾನ ದೂರವಾಗಲಿ| ಅವ್ಯಕ್ತವಾದ ಬಸವನೂ ಕಣ ಕಣಗಳಲ್ಲಿ ಕಾಣಲಿ||
ತನುವನು ಬಳಲಿಸಿ ದುಡಿಯುವವರಿಗೆ, ಮನವನು ವಿಷಯದಿ ತಡೆಯುವವರಿಗೆ, ದಿನಗಳ ಮೌಲ್ಯವ ತಿಳಿದಿರುವವರಿಗೆ, ಧನವನು ಯೋಗ್ಯದೊಳಗೆ ಬಳಸುವವರಿಗೆ ಮನೆಯೊಳಗಿದ್ದರೂ ಮುಕುತಿ ನೋಡಯ್ನಾ|
ಧರ್ಮವೆಂದರೆ ಜಾತಿಯಲ್ಲಾ, ಧರ್ಮವೆಂದರೆ ಪಂಥವಲ್ಲಾ| ಧರ್ಮವೆಂದರೆ ಮತವೂ ಅಲ್ಲ, ಧರ್ಮ ಸಂಪ್ರದಾಯವೂ ಅಲ್ಲ|, ಕಾಯದಿಂದ ಮಾತಿನಿಂದ, ಮನಸಿನಿಂದ ಅನ್ಯ ಜನಕೇ|| ನೋಯಿಸದಲೇ ಸಕಲರನ್ನು ಪ್ರೀತಿಸುವುದೇ ಧರ್ಮವಯ್ನಾ|
ಶಿವ ಸ್ಥಾವರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.