ಪ್ಲಾಸ್ಟಿಕ್‌ಗೆ ಹೇಳಿ ಗುಡ್ ಬೈ
ಇಲ್ಲಿದೆ ಪರ್ಯಾಯ ಮಾರ್ಗಗಳು
Team Udayavani, Sep 21, 2019, 5:02 AM IST
ಪ್ಲಾಸ್ಟಿಕ್‌ನ ಉಪಯೋಗ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದು ನಾಶವಾಗದೆ ಮಣ್ಣಿನಲ್ಲಿ ಸೇರಿ ಅನೇಕ ಸಮಸ್ಯೆಗೆ ಕಾರಣವಾಗುವುದಲ್ಲದೆ ಉರಿಸಿದಾಗ ಇದರಿಂದ ಹೊರಬರುವ ಹೊಗೆ ವಾತಾವರಣವನ್ನೇ ಕಲುಷಿತಗೊಳಿಸುತ್ತದೆ. ಈ ಎಲ್ಲ ಕಾರಣಗಳಿಂದ ಕೇಂದ್ರ ಸರಕಾರ ಪ್ಲಾಸ್ಟಿಕ್ ಉಪಯೋಗಕ್ಕೆ ಕಡಿವಾಣ ಹಾಕಲು ಮುಂದಾಗಿದೆ. ಅ. 2ರಿಂದ ಪ್ಲಾಸ್ಟಿಕ್‌ನ ಕೆಲವು ವಸ್ತುಗಳು ನಿಷೇಧವಾಗಲಿದೆ. ಈ ಎಲ್ಲ ಕಾರಣಗಳಿಂದ ನಾವು ಕೂಡಾ ಮನೆಯಲ್ಲಿ ಪ್ಲಾಸ್ಟಿಕೆಗೆ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು. ಅದಕ್ಕೆ ಕೆಲವು ಟಿಪ್ಸ್ ಇಲ್ಲಿದೆ:
· ಪ್ಲಾಸ್ಟಿಕ್ ಬಾಟಲ್‌ಗೆ ಹೇಳಿ ಗುಡ್‌ಬೈ:
ಸಾಧಾರಣವಾಗಿ ನಾವು ಪ್ಲಾಸ್ಟಿಕ್ ಬಾಟಲ್ ನೀರು ಬಳಸುತ್ತೇವೆ. ಇದು ಕ್ರಮೇಣ ಆರೋಗ್ಯಕ್ಕೆ ಹಾನಿಕಾರಕವಾಗಿ ಬದಲಾಗುತ್ತದೆ. ಆದ್ದರಿಂದ ಗಾಜಿನ ಬಾಟಲ್ ಅಥವಾ ಸ್ಟೀಲ್ ಬಾಟಲ್ ಬಳಸಬಹುದು. ಇದು ನಿಮ್ಮ ಆರೋಗ್ಯಕ್ಕೂ ಪರಿಸರಕ್ಕೂ ಪೂರಕ.
· ಕಸ ಹಾಕುವ ಚೀಲ ಬದಲಿಸಿ:
ಸಾಮಾನ್ಯವಾಗಿ ಮನೆಗಳಲ್ಲಿ ಕಸ ಸಂಗ್ರಹಿಸಲು ಪ್ಲಾಸಿಕ್ ಕವರ್‌ಗಳನ್ನು ಬಳಸಲಾಗುತ್ತದೆ. ಇದರ ಬದಲು ಪೇಪರ್ ಚೀಲ ಇಲ್ಲವೆ ಬಟ್ಟೆ ಚೀಲ ಬಳಸಲು ಪ್ರಯತ್ನಿಸಿ.
·ಬ್ರಷ್ ಬದಲಿಸಿ:
ನಿಮಗೆ ಗೊತ್ತೆ? ಬಳಸಿ ಬಿಸಾಡುವ ಪ್ಲಾಸ್ಟಿಕ್ ಟೂತ್ ಬ್ರಷ್ ಕರಗಲು ಸುಮಾರು ನಾಲ್ಕು ಶತಮಾನಗಳೇ ಬೇಕು! ಈಗ ಯೋಚಿಸಿ ನಾವು ಎಷ್ಟರ ಮಟ್ಟಿಗೆ ಪರಿಸರಕ್ಕೆ ಹಾನಿಯುಂಟು ಮಾಡುತ್ತಿದ್ದೇವೆ ಎನ್ನುವುದನ್ನು. ಮಾರುಕಟ್ಟೆಯಲ್ಲಿ ಬಿದಿರಿನಿಂದ ಮಾಡಿದ ಟೂತ್ ಬ್ರಷ್‌ಗಳು ಲಭ್ಯ. ಅವುಗಳನ್ನು ಬಳಸುವ ಅಭ್ಯಾಸ ಬೆಳೆಸಿಕೊಳ್ಳಿ.
·ನೈಸರ್ಗಿಕ ಪಾನೀಯ ಬಳಸಿ:
ಲಘು ಪಾನೀಗಳು ರಾಸಾಯನಿಕ ಯುಕ್ತವಾಗಿದ್ದು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಅಲ್ಲದೆ ಇವುಗಳು ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಪ್ಯಾಕ್ ಆಗುವುದರಿಂದ ಬಳಕೆ ಅನಂತರ ನೇರ ಪರಿಸರಕ್ಕೆ ಸೇರಿ ಹಾನಿಯುಂಟು ಮಾಡುತ್ತವೆ. ಆದ್ದರಿಂದ ಅವುಗಳನ್ನು ಬಿಟ್ಟು ಎಳನೀರು, ನಿಂಬೆ ಷರಬತ್ತು ಮುಂತಾದ ಪಾನೀಯಗಳಿಗೆ ಆದ್ಯತೆ ನೀಡಿ.
·ಏರ್ ಪ್ಯೂರಿಫೈ ಮರೆತು ಬಿಡಿ:
ಸಾಧಾರಣವಾಗಿ ಏರ್‌ಪ್ಯೂರಿಫೈಗಳು ಪ್ಲಾಸ್ಟಿಕ್ ಬಾಟಲ್‌ಗಳಲ್ಲಿರುತ್ತವೆ. ಆದ್ದರಿಂದ ಅದರ ಬಳಕೆ ನಿಲ್ಲಿಸುವುದು ಉತ್ತಮ. ಅದರ ಬದಲಾಗಿ ಅಗರಬತ್ತಿಗಳನ್ನು ಬಳಸಬಹುದು.
·ಅಂಟುವಾಳ(ಸೋಪ್ ನಟ್)ಬಳಸಿ:
ಬಟ್ಟೆ, ಪಾತ್ರೆ ತೊಳೆಯಲು ರಾಸಾಯನಿಕ ಯುಕ್ತ ಸಾಬೂನು ಬದಲು ಅಂಟುವಾಳ ಬಳಸಬಹುದು. ಇದರಿಂದ ಪರಿಸರಕ್ಕೆ ಯಾವುದೇ ತೊಂದರೆ ಇಲ್ಲ. ಅಲ್ಲದೆ ಇದರ ಕಾಯಿಗಾಗಿ ಮರ ಬೆಳೆಸುವುದರಿಂದ ಉತ್ತಮ ವಾತಾವರಣವೂ ದೊರೆತಂತಾಗುತ್ತದೆ. ಮನೆ ಹಿತ್ತಿಲಿನಲ್ಲಿ ಇತರ ಮರದ ಜತೆಗೆ ಅಂಟುವಾಳದ ಮರವನ್ನೂ ಬೆಳೆಸಿ. ಅಲ್ಲದೆ ಇದರಲ್ಲಿ ಸಾಬೂನಿನಷ್ಟು ಅಪಾರ ಪ್ರಮಾಣದಲ್ಲಿ ನೊರೆ ಉತ್ಪತ್ತಿಯಾಗದಿರುವುದರಿಂದ ಪಾತ್ರೆ ತೊಳೆಯಲು ಕಡಿಮೆ ಪ್ರಮಾಣದ ನೀರು ಸಾಕಾಗುತ್ತದೆ.
ಇದು ಮಾತ್ರವಲ್ಲದೆ ಶಾಪಿಂಗ್‌ಗೆ ಹೋಗುವಾಗ ಬಟ್ಟೆಯ ಚೀಲ ತೆಗೆದುಕೊಂಡು ಹೋಗುವುದರಿಂದ, ಬಾಲ್ ಪೆನ್ ಬದಲು ಶಾಯಿ ಪೆನ್ ಬಳಕೆ ಅಭ್ಯಾಸ ಮಾಡುವುದರಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಬಹುದು.
- ರಮೇಶ್ ಬಳ್ಳಮೂಲೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.