ಶಿವನೆಂದರೆ ಸರ್ವವ್ಯಾಪಿ ಸರ್ವರೂಪಿ
Team Udayavani, Mar 4, 2019, 8:04 AM IST
ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕ್ಕೆ ಸಾಟಿ ಬೇರಿಲ್ಲ… ಇಂದು ಎಲ್ಲೆಡೆಯೂ ಶಿವ ರಾತ್ರಿ ಸಂಭ್ರಮ. ಎಲ್ಲೆಲ್ಲೂ ಶಿವ ನಾಮ ಸ್ಮರಣೆ.. ಈ ವಿಶೇಷ ಸಂದರ್ಭದಲ್ಲಿ ಶಿವನ ಕುರಿತಾದ ಕೆಲವು ಕಥೆಗಳು, ಒಂದಷ್ಟು ಅರ್ಥಪೂರ್ಣ ಮಾಹಿತಿಗಳು ಇಲ್ಲಿವೆ.
ಒಂದು ಕೋಟಿ ದೇವತೆಗಳು ಕಲ್ಲಾದ ಕಥೆ
ಹಿಂದೂ ಪುರಾಣಗಳ ಪ್ರಕಾರ, ಶಿವ ಮತ್ತು 1 ಕೋಟಿ ದೇವ ದೇವತೆಗಳು ಕಾಶಿ ದರ್ಶನಕ್ಕಾಗಿ ಹೊರಟಿದ್ದರು. ಶಿವನು ಅವರಿಗೆ ತ್ರಿಪುರದ ಉನ್ಕೋಟಿಯಲ್ಲಿ ಒಂದು ದಿನ ರಾತ್ರಿ ಉಳಿದುಕೊಳ್ಳಲು ಹೇಳು ತ್ತಾನೆ ಮತ್ತು ಮರುದಿನ ಸೂರ್ಯೋದಯದ ಮೊದಲು ಏಳುವಂತೆ ಆದೇಶ ನೀಡಿದನು. ಆದರೆ ಮರುದಿನಯಾರೊಬ್ಬ ದೇವತೆಗಳೂ ಸೂರ್ಯೋದಯಕ್ಕೆ ಮೊದಲು ಎದ್ದೇಳಲಿಲ್ಲ. ಆದ್ದರಿಂದ ಶಿವನು ಅವರಿಗೆ ಕಲ್ಲಾಗುವಂತೆ ಶಾಪ ನೀಡಿದನು.
ಹಿಂದೂ ಪುರಾಣದ ಪ್ರಕಾರ ಶಿವನು ಮೂರು ಶ್ರೇಷ್ಠ ತ್ರೀಮೂರ್ತಿಗಳಲ್ಲಿ ಒಬ್ಬನು. ಶಿವನ ಹುಟ್ಟು ಹೇಗಾಯಿತು ಎಂಬುದಕ್ಕೂ ಒಂದು ಕಥೆ ಇದೆ. ಒಮ್ಮೆ ಬ್ರಹ್ಮ ಮತ್ತು ವಿಷ್ಣು ಇಬ್ಬರು ತಮ್ಮ ತಮ್ಮಲ್ಲೇ ಹೆಚ್ಚು ಶಕ್ತಿ ಹೊಂದಿದವರು ಯಾರು ಎಂದು ವಾದಕ್ಕಿಳಿದರು. ಅದೇ ಸಮಯದಲ್ಲಿ ಬೃಹತ್ ಉರಿಯುತ್ತಿರುವ ಕಂಬಗಳು ಉದ್ಭವಗೊಂಡಿತು. ಆಶ್ಚರ್ಯಚಕಿತರಾದ ಬ್ರಹ್ಮ, ವಿಷ್ಣು ಕೂತೂಹಲದಿಂದ ನೋಡ ನೋಡುತ್ತಿದ್ದಂತೆ ಕಂಬದಿಂದ ಮರದ ಬೇರುಗಳು ಭೂಮಿಯಿಂದ ಆಕಾಶದವರೆಗೆ ವಿಸ್ತರಿಸಿದವು ಆಗ ಭಗವಾನ್ ಶಿವನು ಕಂಬದ ಪ್ರಾರಂಭದಿಂದ ಹೊರ ಬಂದನು ಅವನ ಶಕ್ತಿ ಕಂಡ ಪರಮಾತ್ಮರು ಬ್ರಹ್ಮಾಂಡವನ್ನು ಆಳುವ ಮೂರನೇ ದೇವರು ಎಂದು ಒಪ್ಪಿಕೊಂಡರು. ಇದಕ್ಕೆ ಪೂರಕವಾಗಿ ಬ್ರಹ್ಮಾಂಡದ ಉಳಿವಿಗಾಗಿ ತ್ರೀ ಮೂರ್ತಿಗಳ ಅವತಾರ ದೇವಿಯಿಂದ ಆಯಿತೆಂದು ಪ್ರತೀತಿ ಇದೆ. ಸೃಷ್ಟಿಕರ್ತನಾಗಿ, ವಿಷ್ಣುವನ್ನು ರಕ್ಷಣೆಗಾಗಿ, ಶಿವನನ್ನು ಲಯಕರ್ತನಾಗಿ ಮಾಡಿದಳು. ಅವರಿಂದ ಬಗೆಹರಿಸಲಾಗದ ಸಮಸ್ಯೆಗಳನ್ನು ಅವಳೇ ಅವತರಿಸಿ ನಾಶ ಮಾಡುವಳು ಎಂದು ನಂಬಲಾಗಿದೆ.
ಶಾಂತ ಸ್ವರೂಪಿ
ಶಿವನನ್ನು ರುದ್ರ, ರೌದ್ರ ರೂಪಿ ಎಂದು ಕರೆಯಲಾಗುತ್ತದೆ. ಆದರೆ ಆತ ನಿಜವಾದ ಅರ್ಥದಲ್ಲಿ ಶಾಂತ ಸ್ವರೂಪಿಯಾಗಿದ್ದಾನೆ. ಶಿವ ಕೈಲಾಸವಾಸಿ. ಅವನ ಸುತ್ತ ಇರುವ ಪರ್ವತಗಳು, ಮಂಜು, ಕುತ್ತಿಗೆಯಲ್ಲಿರುವ ಹಾವು, ತಲೆಯ ಮೇಲಿರುವ ಗಂಗೆ, ಚಂದ್ರ ಎಲ್ಲವೂ ಶಾಂತ ತೆಯನ್ನು ಪ್ರತಿನಿಧಿಸುವ ಸಂಕೇತವಾಗಿದೆ. ಹೀಗಾಗಿ ಶಿವ ಶಾಂತ ಸ್ವಭಾವದ ಮತ್ತು ಶಾಂತಿಯ ಸಂಕೇತವಾಗಿದ್ದಾನೆ.
ಸಾಮರಸ್ಯದ ಪ್ರತಿನಿಧಿ
ಶಿವನ ಕೈಯಲ್ಲಿರುವ ತ್ರಿಶೂಲ ಸಂಬಂಧ ಹೊಂದಿರುವ ಮೂರು ಲೋಕಗಳನ್ನು ಒಟ್ಟುಗೂಡಿಸುತ್ತದೆ. ಅವನ ಒಳಗಿನ ಜಗತ್ತು, ಅವನ ಸುತ್ತಲಿನ ಜಗತ್ತು ಮತ್ತು ವಿಶಾಲವಾದ ಪ್ರಪಂಚ. ತ್ರಿಶೂಲವು ಈ ಮೂರರ ನಡುವಿನ ಸಾಮರಸ್ಯವನ್ನು ಪ್ರತಿನಿಧಿಸುತ್ತದೆ. ಪರಿಪೂರ್ಣ ವಿವಾಹಕ್ಕೆ ಉದಾಹರಣೆ ಶಿವಪಾರ್ವತಿಯನ್ನು ಪರಿಪೂರ್ಣ ಮದುವೆಗೆ ಉದಾಹರಣೆಯೆಂದು ಉಲ್ಲೇಖೀಸಲಾಗಿದೆ. ಶಿವ ಮತ್ತು ಪಾರ್ವತಿ ಅರ್ಧನಾರೀಶ್ವರ ರೂಪದಲ್ಲಿ ಅಂದರೆ ಅರ್ಧ ಪುರುಷ ಮತ್ತು ಅರ್ಧ ಮಹಿಳೆಯಾಗಿ ಪ್ರತಿನಿಧಿಸಲಾಗುತ್ತದೆ. ಪುಷ್ಪದಿಂದ ಪ್ರಕೃತಿ, ಪ್ರಕೃತಿಯಿಂದ ಪುಷ್ಪವಾಗುತ್ತದೆ ಎಂಬ ಅರ್ಥವನ್ನು ಇದು ಹೊಂದಿದೆ.
ಮೂರು ನಾಮದ ವಿಶೇಷತೆ
ಶಿವನ ಹಣೆಯಲ್ಲಿ ಮೂರು ನೇರವಾದ ಅಡ್ಡ ನಾಮವಿದೆ. ಅದರ ಮಧ್ಯೆ ಮೂರನೇ ಕಣ್ಣಿದೆ. ಇದು ಹಿಂದೂ ಧರ್ಮದ ಮೂರು (ಸ್ವರ್ಗ, ಭೂಮಿ, ನರಕ) ಲೋಕಗಳ ನಾಶವನ್ನು ಪ್ರತಿನಿಧಿಸುತ್ತದೆ. ಜಡತ್ವವನ್ನು ಸೂಚಿಸುತ್ತದೆ. ತನ್ನೊಂದಿಗೆ ಮೂರು ಲೋಕವೂ ಒಂದಾಗಿದೆ ಎಂಬುದನ್ನು ಸೂಚಿಸುತ್ತದೆ.
ಶಿವನ ತಾಂಡವ ನೃತ್ಯ
ಶಿವನ ತಾಂಡವ ನೃತ್ಯದ ಹಿಂದೆ ಸಾಕಷ್ಟು ಕಥೆಗಳಿವೆ. ಅದರಲ್ಲಿ ಒಂದರ ಪ್ರಕಾರ, ಅಜ್ಞಾನದ ಸಂಕೇತವಾದ ರಾಕ್ಷಸ ಅಪಸ್ಮರ ಶಿವನಿಗೆ ಸವಾಲು ಹಾಕುತ್ತಾನೆ. ಶಿವ ಸವಾಲನ್ನು ಸ್ವೀಕರಿಸಿ ತಾಂಡವ ನೃತ್ಯವಾಡಲು ನಟರಾಜನ ರೂಪ ಧರಿಸುತ್ತಾನೆ. ತಾಂಡವ ನೃತ್ಯದ ಸಂದರ್ಭದಲ್ಲಿ ಶಿವ ತನ್ನ ಬಲದ ಕಾಲಿನಲ್ಲಿ ತುಳಿದು ಅಪಸ್ಮರನಿಗೆ ಶಾಪ ನೀಡುತ್ತಾನೆ. ಆದರೆ ಅಪಸ್ಮರ ಸಾಯುವುದಿಲ್ಲ. ಅಜ್ಞಾನ ಮತ್ತು ಜ್ಞಾನದ ನಡುವಿನ ಅಸಮತೋಲನದಿಂದ ಅಪಸ್ಮರ ಸಾಯದೇ ಉಳಿಯುತ್ತಾನೆ. ಶಿವ ನಟರಾಜನ ರೂಪದಲ್ಲೇ ಉಳಿದುಬಿಡುತ್ತಾನೆ. ಜ್ಞಾನ, ಸಂಗೀತ, ಮತ್ತು ನೃತ್ಯವು ಅಜ್ಞಾನವನ್ನು ತೊಡೆದು ಹಾಕುತ್ತದೆ ಎಂದು ನಟರಾಜನ ರೂಪ ಸಂದೇಶ ನೀಡುತ್ತದೆ.
ಶಿವ ಮತ್ತು ಭಸ್ಮಾಸುರ
ಭಸ್ಮಾಸುರ ಓರ್ವ ಮೂರ್ಖ ರಾಕ್ಷಸ. ಒಂದು ದಿನ ಆತ ಶಿವನಿಂದ ವರ ಪಡೆಯಲು ತಪಸ್ಸು ಮಾಡಲು ನಿರ್ಧರಿಸುತ್ತಾನೆ. ತನ್ನ ದೇಹದದೊಂದು ಭಾಗವನ್ನು ಕತ್ತರಿಸಿ ಶಿವನಿಗೆ ಅರ್ಪಿಸಿದನು. ಹಲವು ದಿನಗಳ ಅನಂತರ ಶಿವನು ಪ್ರತ್ಯಕ್ಷನಾಗಿ ಏನು ವರ ಬೇಕೆಂದು ಕೇಳುತ್ತಾನೆ. ಭಸ್ಮಾಸುರನು ತಾನು ಯಾರ ತಲೆ ಮೇಲೆ ಕೈ ಇಡುತ್ತೇನೋ ಅವರು ಭಸ್ಮವಾಗುವಂತಹ ವರ ನೀಡೆಂದು ಕೇಳುತ್ತಾನೆ. ಶಿವ ವರ ನೀಡುತ್ತಾನೆ. ವರ ಪಡೆದ ಭಸ್ಮಾಸುರನಿಗೆ ತನ್ನ ವರವನ್ನು ಪರೀಕ್ಷಿಸಲು ಶಿವನ ತಲೆಯ ಮೇಲೆಯೇ ಕೈಯಿಡಲು ಹೋಗುತ್ತಾನೆ. ಅದನ್ನು ಕಂಡು ಶಿವ ಓಡಲು ಶುರು ಮಾಡುತ್ತಾನೆ. ಇದನ್ನು ತಿಳಿದ ವಿಷ್ಣು ಮೋಹಿನಿಯ ವೇಷದಲ್ಲಿ ಬಂದು ಭಸ್ಮಾಸುರನು ಓಡುವ ಕಾರಣವನ್ನು ಕೇಳುತ್ತಾನೆ. ಮೋಹಿನಿಯನ್ನು ಕಂಡು ಮೋಹಿತನಾದ ಭಸ್ಮಾಸುರ ಆಕೆಯಲ್ಲಿ ತನ್ನನು ವಿವಾಹವಾಗುವಂತೆ ವಿನಂತಿಸುತ್ತಾನೆ. ಆಕೆ ನಾಟ್ಯದ ಮೂಲಕ ತನ್ನನ್ನು ಸೋಲಿಸುವಂತೆ ಬಸ್ಮಾಸುರನಿಗೆ ಸವಾಲು ಹಾಕುತ್ತಾಳೆ. ನಾಟ್ಯ ಮಾಡುತ್ತಾ ತನ್ನ ತಲೆಯ ಮೇಲೆ ಕೈಯಿಟ್ಟು ಭಸ್ಮಾಸುರನು ಸುಟ್ಟು ಹೋಗುತ್ತಾನೆ.
ರುದ್ರಾಕ್ಷಿಯಲ್ಲಿರುವ ರುದ್ರ
ರುದ್ರಾಕ್ಷಿ ಮೂಲದ ಬಗೆಗೆ ಅನೇಕ ಕಥೆಗಳಿವೆ. ಇದರಲ್ಲಿ ಒಂದು ದೇವಿ ಭಾಗವತ ಪುರಾಣ ಪ್ರಕಾರ ತ್ರಿಪುರಾಸುರನೆಂಬ ರಾಕ್ಷಸ ಮೂರು ಲೋಕಗಳಿಗೆ ತೊಂದರೆ ನೀಡುತ್ತಿದ್ದ ಆಗ ದೇವತೆಗಳು ಶಿವನ ಮೊರೆ ಹೋಗುತ್ತಾರೆ. ತ್ರಿಪುರಾಸುರನ ಸಂಹಾರಕ್ಕಾಗಿ ಶಿವ ಅಘೋರವೆಂಬ ದಿವ್ಯಾಸ್ತ್ರವನ್ನು ತಯಾರಿಸುತ್ತಾನೆ. ಅಸ್ತ್ರ ಸಿದ್ಧಿಯ ವೇಳೆ ಶಿವ ಕಣ್ಮುಚ್ಚಿ ತೆರೆದಾಗ ಒಂದೆರಡು ಹನಿ ಕಣ್ಣೀರು ನೆಲಕ್ಕುರುಳುತ್ತಾದೆ ಕಣ್ಣೀರು ಬಿದ್ದ ಸ್ಥಳದಲ್ಲಿ ಮರಗಳು ಹುಟ್ಟಿಕೊಂಡವು ಈ ಮರದ ಬೀಜಗಳೇ ರುದ್ರಾಕ್ಷಿ ಎಂಬುದು ಪ್ರತೀತಿ. ಶಿವಪುರಾಣ ಉಲ್ಲೇಖದ ಪ್ರಕಾರ ಸುದೀರ್ಘ ತಪಸ್ಸನ್ನಾಚರಿಸಿ ಶಿವ ಕಣ್ತೆರೆದಾಗ ಬಿದ್ದ ಕಣ್ಣೀರೇ ರುದ್ರಾಕ್ಷಿಯ ಮೂಲ ಎಂದೂ ಹೇಳಲಾಗುತ್ತದೆ.
ಶಿವ ಪಾರ್ವತಿಯರ ಮದುವೆ
ಹಿಮಾಲಯದ ರಾಜನಾದ ಹಿಮವಂತ ಮತ್ತು ಅವನ ಪತ್ನಿ ಮೀನಾದೇವಿ ಶಿವನ ಭಕ್ತರು. ಅವನ ಮಗಳು ಪಾರ್ವತಿ. ಸತಿಯ ವಿಯೋಗದಲ್ಲಿದ್ದ ಶಿವನು ತಪಸ್ಸಿಗೆ ಕೂರುತ್ತಾನೆ. ಇತ್ತ ಮೀನಾದೇವಿ ತನಗೇ ಗೌರಿದೇವಿಯೇ ಪುತ್ರಿಯಾಗಿ ಜನ್ಮ ತಾಳಬೇಕೆಂದು ವರ ಕೇಳುತ್ತಾಳೆ. ಅದಕ್ಕೆ ಶಿವನು ಭರವಸೆ ನೀಡುತ್ತಾನೆ. ಆತನ ಮಾತಿನಂತೆ ಪಾರ್ವತಿ ಮೀನಾ ದೇವಿಯ ಮಗಳಾಗಿ ಹುಟ್ಟಿ ಶಿವನನ್ನು ವರಿಸುತ್ತಾಳೆ.
ಮಗಳಾಗಿ ಅಶೋಕ ಸುಂದರಿ
ಪುರಾಣಗಳ ಪ್ರಕಾರ, ಶಿವ ಮತ್ತು ಪಾರ್ವತಿಯರು ಸಕಲವನ್ನು ನೀಡುವ ಕಲ್ಪವೃಕ್ಷದ ಬಳಿ ಬರುತ್ತಾರೆ. ಆಗ ಶಿವನು ಪಾರ್ವತಿಯ ಏಕಾಂಗಿಯಾಗಿರುವುದನ್ನು ನೋಡಿ ಅವಳ ಏಕಾಂಗಿ ತನವನ್ನು ದೂರ ಮಾಡುವ ಉದ್ದೇಶದಿಂದ ಪಾರ್ವತಿಯ ಹತ್ತಿರ ಮರದ ಬಳಿ ಏನು ಕೇಳಿದರೂ ನೀಡುತ್ತದೆ, ನೀನಗೇನಾದರೂ ಬೇಕಾದಲ್ಲಿ ಕೇಳು ಎನ್ನುತ್ತಾನೆ ಅದಕ್ಕೆ ದೇವಿ ಮಗಳನ್ನು ಬೇಡುತ್ತಾಳೆ ಅವಳ ಬೇಡಿಕೆಯನ್ನು ಈಡೇರಿಸಿದ ವೃಕ್ಷ ಮಗಳನ್ನು ಕರುಣಿಸುತ್ತದೆ. ಅವಳೇ ಅಶೋಕ ಸುಂದರಿ.
ನೀಲಕಂಠನಾದ ಪರಮೇಶ್ವರ
ದೇವತೆಗಳು ಮತ್ತು ಅಸುರರು ಅಮೃತಕ್ಕಾಗಿ ಸಮುದ್ರ ಮಥನ ಮಾಡುವ ಸಂದರ್ಭ ಅನೇಕ ವಸ್ತುಗಳು ಹೊರಬರುತ್ತವೆ. ಹಾಗೆ ಹಾಲಾಲವೂ ಹೊರ ಬರುತ್ತದೆ. ಇದನ್ನು ಕುಡಿಯದೇ ಸಮುದ್ರ ಮಂಥನವೂ ಮುಂದುವರಿಯುವುದಿಲ್ಲ. ಆಗ ಪರಶಿವನು ಹಾಲಾಹಲವನ್ನು ಕುಡಿಯುತ್ತಾನೆ. ಇದರಿಂದ ಪರಮೇಶ್ವರ ನೀಲಕಂಠನಾನೆ.
ಶಿವನ ಕತ್ತಿನಲ್ಲಿರುವ ಹಾವು
ಶಿವನ ಯಾವುದೇ ಚಿತ್ರವನ್ನು ನೋಡಿದಾಗಲೂ ಮೊದಲು ನಮ್ಮ ಗಮನ ಸೆಳೆಯುವುದು ಅವನ ಕತ್ತಿನಲ್ಲಿರುವ ಹಾವು. ಅದರ ಹೆಸರು ವಾಸುಕಿ. ಸಮುದ್ರ ಮಥನದ ಸಂದರ್ಭದಲ್ಲಿ ಹುಟ್ಟಿದ ಹಾಲಹಾಲವನ್ನು ಶಿವನ ಜೊತೆ ವಾಸುಕಿಯೂ ಕುಡಿದು ಲೋಕ ರಕ್ಷಣೆಗೆ ಸಹಾಯ ಮಾಡಿತ್ತು. ಇದರಿಂದ ಸಂಪ್ರೀತನಾದ ಶಿವ ತನ್ನ ಕತ್ತಿನಲ್ಲಿ ವಾಸುಕಿಗೆ ಇರಲು ಅವಕಾಶ ಮಾಡಿಕೊಟ್ಟ.
ಭಕ್ತಿ, ನಿಷ್ಠೆಯಿಂದ ಪ್ರಾರ್ಥನೆ ಮಾಡಿದರೆ ಶಿವ ಒಲಿಯುತ್ತಾನೆಂಬುದಕ್ಕೆ ಇದುವೇ ಸಾಕ್ಷಿ.
ಹಿರಿ ಮಕ್ಕಳ ಶಿವರಾತ್ರಿ
ಹಿಂದಿನ ಕಾಲದಲ್ಲಿ ಬಡಕುಟುಂಬಗಳು ಹಬ್ಬದ ದಿನಗಳಲ್ಲಿ ಸಿಹಿ ತಿಂಡಿಗಳನ್ನು ಮಾಡಲು ಹಣವಿಲ್ಲದೆ ಇರುತ್ತಿದ್ದರಿಂದ ಹಿರಿಯ ಮಕ್ಕಳನ್ನು ಅಷ್ಟಮಿಯ ದಿನ ಧಣಿಗಳ ಬಳಿ ಬಿಟ್ಟು ಹಣ ತೆಗೆದುಕೊಂಡು ಬರುತ್ತಿದ್ದರು. ಆದರೆ ಅವರಿಗೆ ಹಬ್ಬ ಮಾಡಿದರೂ ಮನೆಯಲ್ಲಿ ಮಕ್ಕಳಿಲ್ಲವಲ್ಲ ಎಂಬ ಕೊರಗು ಇರುತ್ತಿತ್ತು. ಅದಕ್ಕಾಗಿ ಶಿವರಾತ್ರಿ ಸಮಯದಲ್ಲಿ ಒಳ್ಳೆ ಫಸಲು ಬರುವುದರಿಂದ ಧಣಿಗಳಿಗೆ ಹಣ ನೀಡಿ ಮಕ್ಕಳನ್ನು ಮನೆಗೆ ಕರೆತಂದು ಹಬ್ಬದ ವಿಶೇಷ ತಿಂಡಿ ತಿನಿಸುಗಳನ್ನು ಮಾಡುವ ಪ್ರತೀತಿ ಕೂಡ ಹಿಂದಿನಿಂದ ಬೆಳೆದು ಬಂದಿದೆ.
ಕಾಮದೇವನಿಂದಲೂ ಶಿವನ ತಪಸ್ಸು ಭಂಗಗೊಳಿಸಲಾಗಲಿಲ್ಲ
ತಾರಕಾಸುರನ ಹಾವಳಿ ದೇವತೆಗಳನ್ನು ಕಾಡುತ್ತಿದ್ದ ಸಂದರ್ಭ ದೇವತೆಗಳಿಗೆ ಶಿವ ಮತ್ತು ಪಾರ್ವತಿಯ ಮಗನಿಂದ ಮಾತ್ರ ತಾರಕನ ಸಂಹಾರವೆಂದು ತಿಳಿಯುತ್ತದೆ. ಆದರೆ ಶಿವ ಆ ಸಂದರ್ಭದಲ್ಲಿ ಘೋರ ತಪಸ್ಸನ್ನಾಚರಿಸುತ್ತಿರುತ್ತಾನೆ. ಅವನ ತಪಸ್ಸನ್ನು ಭಂಗ ಮಾಡಲು ದೇವತೆಗಳು ಕಾಮದೇವನ ಸಹಾಯ ಪಡೆದು ಕಾಮದೇವನು ಹೂವಿನ ಬಾಣವನ್ನು ಶಿವನ ಮೇಲೆ ಪ್ರಯೋಗಿಸುತ್ತಾನೆ. ಆದರೆ ಶಿವನ ತಪಸ್ಸಿಗೆ ಇದರಿಂದ ಭಂಗವಾಗುವುದಿಲ್ಲ, ಬದಲಾಗಿ ಕಾಮದೇವನನ್ನು ಹಣೆಗಣ್ಣಿನಿಂದ ಸುಟ್ಟು ಭಸ್ಮ ಮಾಡುತ್ತಾನೆ.
ಅಮರತ್ವದ ಕಥೆ ಹೇಳಿ ಅಮರನಾಥನಾದ ಶಿವ
ಒಮ್ಮೆ ಪಾರ್ವತಿಯು ಶಿವನಲ್ಲಿ ಕಥೆ ಹೇಳಲು ವಿನಂತಿಸುತ್ತಾಳೆ. ಶಿವ ಹೇಳುವ ಎಲ್ಲವನ್ನೂ ಕೇಳಿರುವುದಾಗಿ ಹೇಳಿದ ಪಾರ್ವತಿ ಅಮರತ್ವದ ಕುರಿತಾಗಿ ತಿಳಿಸಲು ಹೇಳುತ್ತಾಳೆ . ಆ ಸಂದರ್ಭದಲ್ಲಿ ಶಿವ ಯಾರಿಗೂ ಈ ಕಥೆ ತಿಳಿಯಬಾರದು ಎಂದು ಒಂದು ಗುಹೆಯಲ್ಲಿ ಪಾವರ್ತಿಗೆ ಅಮರತ್ವದ ಸಂಗತಿಗಳನ್ನು ಹೇಳುತ್ತಾನೆ. ಗುಹೆಯೇ ಮುಂದೆ ಅಮರನಾಥ ಗುಹೆ ಎಂದು ಪ್ರಸಿದ್ಧಿ ಹೊಂದುತ್ತದೆ. ಶಿವ ಪಾರ್ವತಿಗೆ ಕಥೆ ಹೇಳುವ ಸಂದರ್ಭದಲ್ಲಿ ಎರಡು ಪಾರಿವಾಳಗಳು ಈ ಕಥೆಯನ್ನು ಕೇಳಿ ಇಂದಿಗೂ ಅಲ್ಲಿ ಬರುವ ಭಕ್ತರಿಗೆ ಕಾಣಸಿಗುತ್ತವೆ ಎಂದು ಹೇಳಲಾಗುತ್ತದೆ.
ಭಸ್ಮದ ಮಹತ್ವ
ಶಿವನನ್ನು ಭಸ್ಮದಿಂದ ಪೂಜಿಸಲಾಗುತ್ತದೆ. ಇದು ವಿನಾಶ ಮತ್ತು ಶಾಶ್ವತತೆಯ ಸಂಕೇತ. ಅದನ್ನು ಸುಡುವ ಮೂಲಕ ಸೃಷ್ಟಿಸಲಾಗುತ್ತದೆ. ಆದರೆ ಸ್ವತಃ ಸುಟ್ಟು ಹಾಕಲಾಗುವುದಿಲ್ಲ. ಇದು ಅಮರ ಆತ್ಮವನ್ನು ಸೂಚಿಸುವ ಸಂಕೇತವಾಗಿದೆ.
ಆಚರಣೆ
ಲಯ ಕರ್ತನಾದ ಶಿವನು ಲೋಕದ ಉದ್ಧಾರಕ್ಕಾಗಿ ಅವತರಿಸಿದವನು. ಶಿವರಾತ್ರಿಯನ್ನು ಭಕ್ತಿಯಿಂದ ಜಾಗರಣೆ, ಪೂಜೆ ಪುನಸ್ಕಾರ ಮಾಡಿ ಆಚರಿಸುತ್ತಾರೆ. ಅದಲ್ಲದೆ ಶಿವನ ದೇವಾಲಯಗಳಲ್ಲಿ ಇಡೀ ರಾತ್ರಿ ಬಿಲ್ವಪತ್ರೆಗಳನ್ನು ಅರ್ಪಿಸಿ, ಅಭಿಷೇಕ ನಡೆಸಿ ವಿಜೃಂಭಣೆಯಿಂದ ಶಿವನಾಮ ಪಠಿಸಿ ಪೂಜಿಸಲಾಗುತ್ತದೆ. ಅದೇ ಪ್ರಕಾರ ಜಾಗರಣೆ ಸಮಯದಲ್ಲಿ ಮನೆ ಮಂದಿಯರೆಲ್ಲ ಶಿವನ ಕಥೆಗಳನ್ನು ಹೇಳುತ್ತಾ ಮಕ್ಕಳಿಗೆ ಶಿವನ ಮಹಿಮೆಯನ್ನು ಸಾರುತ್ತಾರೆ. ಕೆಲವರು ದಿನವಿಡೀ ಉಪವಾಸವಿದ್ದು ಆಚರಿಸುತ್ತಾರೆ.
ವಿದ್ಯಾ ಇರ್ವತ್ತೂರು, ಪ್ರೀತಿ ಭಟ್ ,
ಸುಶ್ಮಿತಾ ಶೆಟ್ಟಿ , ಧನ್ಯಶ್ರೀ ಬೋಳಿಯಾರ್,
ರಂಜಿನಿ ಮಿತ್ತಡ್ಕ , ಪುಟ ವಿನ್ಯಾಸ: ಜಿ. ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.