ವಿಜ್ಞಾನ ಪರೀಕ್ಷೆ ಎದುರಿಸಲು ನಿಮ್ಮ ತಯಾರಿ ಹೀಗಿರಲಿ
ಎಸ್‌ಎಸ್‌ಎಲ್‌ಸಿ ಸಕ್ಸಸ್ ಸೂತ್ರ
Team Udayavani, Feb 22, 2020, 5:29 AM IST
ಪ್ರಿಯ ವಿದ್ಯಾರ್ಥಿಗಳೇ,
ಎಸೆಸೆಲ್ಸಿ ಪರೀಕ್ಷೆಗಳು ಸಮೀಪಿಸುತ್ತಿವೆ. ಈಗಾಗಲೇ ಶಾಲಾ ಹಂತದಲ್ಲಿ ಮತ್ತು ಜಿಲ್ಲಾ ಹಂತದಲ್ಲಿ ಪೂರ್ವಸಿದ್ಧತಾ ಪರೀಕ್ಷೆಗಳು ಮುಗಿದಿವೆ. ಬದಲಾಗಿರುವ ಪ್ರಶ್ನೆಪತ್ರಿಕೆ ವಿನ್ಯಾಸ, ಅಂಕಗಳನ್ನು ಹಂಚಿಕೆ ಮಾಡಿರುವ ರೀತಿ, ಹೊಸದಾಗಿ ಸೇರ್ಪಡೆಯಾಗಿರುವ 5 ಅಂಕದ ಪ್ರಶ್ನೆ, ಹೆಚ್ಚಾಗಿರುವ ವಿವರಣಾತ್ಮಕ ಉತ್ತರ ಬಯಸುವ ಪ್ರಶ್ನೆಗಳು -ಎಲ್ಲವನ್ನೂ ಗಮನಿಸಿದ್ದೀರಿ. ಇನ್ನುಳಿದ ಕೆಲವೇ ದಿನಗಳಲ್ಲಿ ಇನ್ನಷ್ಟು ನಿಖರವಾಗಿ, ಆತ್ಮವಿಶ್ವಾಸದಿಂದ ವಿಜ್ಞಾನ ವಿಷಯವನ್ನು ಅಭ್ಯಾಸ ಮಾಡಲು ಕೆಲವು ಸೂತ್ರಗಳು ಇಲ್ಲಿವೆ.
– 12 ಅಂಕಗಳ ಪ್ರಶ್ನೆಗಳಿಗೆ ಚಿತ್ರಗಳನ್ನು ನಿಗದಿ ಮಾಡಿ ಈಗಾಗಲೇ ಪಟ್ಟಿ ನೀಡಲಾಗಿದೆ. ಚಿತ್ರಗಳನ್ನು ಹೆಚ್ಚು ವೇಗವಾಗಿ, ಆದರೆ ಅಂದವಾಗಿ ಬಿಡಿಸಲು ಪ್ರಯತ್ನಿಸಿ. ಭಾಗಗಳನ್ನು ಕಡ್ಡಾಯವಾಗಿ ನೆನಪಿಟ್ಟುಕೊಳ್ಳಿ. ವಿಶೇಷವಾಗಿ ಜೀವಶಾಸ್ತ್ರದ ಚಿತ್ರಗಳಲ್ಲಿ ಕೆಲವು ಭಾಗಗಳ ಕಾರ್ಯಗಳನ್ನೂ ನೆನಪಿನಲ್ಲಿಡಿ.
– ಓದಿದ್ದನ್ನು ಮರೆಯದಿರಲು “ಚಿತ್ರಣ’ ಒಳ್ಳೆಯ ಉಪಾಯ. ಓದಿದ ವಿಷಯಗಳನ್ನು ಚಿತ್ರಗಳು, ಸಂಕೇತಗಳು, ರೇಖಾ ವಿನ್ಯಾಸಗಳು, ಚಾರ್ಟ್ ಗಳ ಮೂಲಕ ಚಿತ್ರೀಕರಿಸಿಕೊಳ್ಳಿ. ಇವನ್ನು ನೋಡಿದ ತತ್‌ಕ್ಷಣ ಓದಿದ ವಿಷಯ ಜ್ಞಾಪಕವಾಗುವಂತಿರಬೇಕು. ಉದಾಹರಣೆಗೆ: ಸಸ್ಯಗಳ ಸಂತಾನೋತ್ಪತ್ತಿಗೆ ಸಂಬಂಧಿಸಿದಂತೆ ಹಂತಗಳು: ಪರಾಗಸ್ಪರ್ಶ – ನಿಶೇಚನ – ಯುಗ್ಮಜ – ಭ್ರೂಣ – ಬೀಜ- ಮೊಳೆಯುವಿಕೆ (pollination, fertilisation, zygote, embryo, egg, germination).
– ಪದೇಪದೇ ಮರೆತು ಹೋಗುವ ಕೆಲವು ವಿಷಯ ಗಳನ್ನು – ಉತ್ತರಗಳನ್ನು ನೆನಪಿಡಲು ನಿಮ್ಮವೇ ಆದ ಸ್ಮರಣತಂತ್ರಗಳನ್ನು ರಚಿಸಿಕೊಳ್ಳಲು ಪ್ರಯತ್ನಿಸಿ. ಉದಾ.: “ಆನೀಕೆ’- ಆಮ್ಲಗಳು ನೀಲಿ ಲಿಟ್ಮಿಸ್ ಅನ್ನು ಕೆಂಪು ಮಾಡುತ್ತವೆ. “ಅಆ’ – ಅಶುದ್ಧ ತಾಮ್ರ ಘಟಕವನ್ನು ಆ್ಯನೋಡ್‌ಗೆ ಜೋಡಿಸಿ.
ಪಠ್ಯವನ್ನು ಪುನಃ ಓದಲು ತೊಡಗಿದಾಗ ಕ್ಲಿಷ್ಟವೆನಿಸಿದರೆ ಇಂತಹ ತಂತ್ರಗಳನ್ನು ರಚನೆ ಮಾಡಿ ಬರೆದುಕೊಂಡಿರಿ. ಪರೀಕ್ಷಾ ಸಮಯದಲ್ಲಿ ಒಮ್ಮೆ ನೋಡಿದರೆ ಉತ್ತರಗಳು ನೆನಪಿಗೆ ಬರುತ್ತವೆ.
– ವಿದ್ಯುಚ್ಛಕ್ತಿ – ಬೆಳಕು ಪ್ರತಿಫಲನ ಮತ್ತು ವಕ್ರೀಭವನ (Electricity, Light – Reflection and Refraction) ಅಧ್ಯಾಯಗಳಲ್ಲಿ ಕೆಲವು ಸೂತ್ರಗಳಿವೆ. ಅವುಗಳನ್ನು ಒಂದೆಡೆ ಪಟ್ಟಿ ಮಾಡಿಡಿ. ಆ ಸಂಕೇತಾಕ್ಷರಗಳು ಏನನ್ನು ಪ್ರತಿನಿಧಿಸುತ್ತವೆ ಎಂಬುದನ್ನು ಪದೇಪದೇ ನೆನಪು ಮಾಡಿಕೊಳ್ಳಿ. ಇದು ಗಣಿತದ ಸಮಸ್ಯೆಗಳನ್ನು ಬಿಡಿಸಲು ನೆರವಾಗುತ್ತದೆ.
– ಹೋಲಿಕೆ ಮತ್ತು ವ್ಯತ್ಯಾಸಗಳ ಮೂಲಕ ಅಧ್ಯಯನ ಮಾಡುವುದು ವಿಜ್ಞಾನಕ್ಕೆ ಹೆಚ್ಚು ಸೂಕ್ತ ಮತ್ತು ಇದರಿಂದ ಸುಲಭವಾಗಿ ನೆನಪಿನಲ್ಲುಳಿಯುತ್ತದೆ.
ಉದಾ: ರಾಸಾಯನಿಕ ಸಂಯೋಗ (Chemical Reaction) ಎಂದರೇನು?
ಉದಾಹರಣೆ ಕೊಡಿ: ಈ ಪ್ರಶ್ನೆಗೆ ಉತ್ತರವನ್ನು ನೇರವಾಗಿ ಕಲಿತುಕೊಳ್ಳುವ ಬದಲು ರಾಸಾಯನಿಕ ಸಂಯೋಗ ಮತ್ತು ವಿಭಜನೆಗಳ ನಡುವಿನ ವ್ಯತ್ಯಾಸ ಕಲಿತುಕೊಳ್ಳಿ. ಇದರಿಂದ ವ್ಯಾಖ್ಯೆ – ಉದಾಹರಣೆ – ವ್ಯತ್ಯಾಸ ಹೀಗೆ ಬೇರೆ ಬೇರೆ ಆಯಾಮಗಳ ಪ್ರಶ್ನೆಗಳನ್ನು ಒಮ್ಮೆಲೆ ಉತ್ತರಿಸುವ ಸಾಮರ್ಥ್ಯ ಬೆಳೆಸಿಕೊಳ್ಳುವಿರಿ.
– ಹೊಸದಾಗಿ ಉನ್ನತ ಮಟ್ಟದ ಆಲೋಚನ ಕೌಶಲದ 4 ಅಂಕದ ಪ್ರಶ್ನೆಗಳು ಸೇರ್ಪಡೆಯಾಗಿವೆ. ಪಠ್ಯವಸ್ತುವಿನಲ್ಲಿರುವ ಚಟುವಟಿಕೆ – ಪ್ರಯೋಗಗಳು, ಇತರ ಚಿತ್ರಗಳು – ಅಂಕಿಅಂಶಗಳತ್ತ ಸ್ವಲ್ಪ ಗಮನಹರಿಸಿ. ಈ ಪ್ರಶ್ನೆಗಳು ಅಂಕಿಅಂಶಗಳ ಆಧಾರಿತ ಅಥವಾ ಚಿತ್ರಾಧಾರಿತವಾಗಿರಬಹುದು. ಪ್ರಯೋಗಗಳ ವೀಕ್ಷಣೆಗಳ ಆಧಾರದ ಮೇಲೆ ಫಲಿತಾಂಶವನ್ನು ನಿರ್ಣಯಿಸುವ ರೂಪದಲ್ಲಿರಬಹುದು, ಗ್ರಾಫ್ ಆಧಾರಿತವಾಗಿರಬಹುದು. ಹಳೆಯ ಅಥವಾ ಮಾದರಿ ಪ್ರಶ್ನೆಪತ್ರಿಕೆಗಳಲ್ಲಿ ಇರುವ ಅಂತಹ ಪ್ರಶ್ನೆಗಳನ್ನು ಗಮನಿಸಿಕೊಳ್ಳಿ.
– 5 ಅಂಕದ 1 ಪ್ರಶ್ನೆ, ಈ ವರ್ಷದ ಇನ್ನೊಂದು ಬದಲಾವಣೆ. ಅದು ಭೌತಶಾಸ್ತ್ರ, ರಸಾಯನ ಶಾಸ್ತ್ರ ಅಥವಾ ಜೀವಶಾಸ್ತ್ರದ ಮೇಲಿರಬಹುದು. ಅಂತಹ ಅಧ್ಯಾಯಗಳು ಯಾವುದಿವೆ ಎಂದು ಗುರುತು ಮಾಡಿಕೊಂಡು, ಪ್ರಶ್ನಿಸಬಹುದಾದ ಪಠ್ಯ ಭಾಗಗಳನ್ನು ಪುನರಾವರ್ತನೆ ಮಾಡಿ. ನಮ್ಮ ಪರಿಸರ – ಶಕ್ತಿಯ ಆಕರಗಳು – ಧಾತುಗಳ ಆವರ್ತನೀಯ ವರ್ಗೀಕರಣ – ನೈಸರ್ಗಿಕ ಸಂಪನ್ಮೂಲಗಳು (Our Environment, Sources of Energy, Periodic Classification of Elements, Sustainable Management of Natural Resources)ಇಂತಹ ಚಿಕ್ಕ – ಚಿಕ್ಕ ಅಧ್ಯಾಯಗಳಿಂದ 5 ಅಂಕದ ಪ್ರಶ್ನೆಗಳನ್ನು ನಿರೀಕ್ಷಿಸಬೇಡಿ.
– ವೈಜ್ಞಾನಿಕ ಕಾರಣ ನೀಡುವುದು, ಉಪಯೋಗ ಪಟ್ಟಿ ಮಾಡುವುದು, ನಿಯಮಗಳನ್ನು ನಿರೂಪಿಸುವುದು, ವ್ಯತ್ಯಾಸ ತಿಳಿಸುವುದು, ಮೊದಲಾದ ವಿವಿಧ ಪ್ರಶ್ನೆಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿಟ್ಟಿರಿ. ಪುನರ್‌ಮನನಕ್ಕೆ ಸಹಾಯವಾಗುತ್ತದೆ.
– ಹಳೆಯ ಪ್ರಶ್ನೆಪತ್ರಿಕೆಗಳು- ಮಾದರಿ ಪ್ರಶ್ನೆಪತ್ರಿಕೆಗಳನ್ನು ಸಾಧ್ಯವಾದಷ್ಟು ಹೆಚ್ಚು ಬಿಡಿಸಿ. ಇದರಿಂದ ಒಂದೇ ಕಲಿಕಾಂಶದ ಮೇಲೆ ಬೇರೆ ಬೇರೆ ಮಾದರಿಯ ಪ್ರಶ್ನೆಗಳನ್ನು ನೋಡುವಿರಿ. ಪ್ರಶ್ನೆಪತ್ರಿಕೆಯನ್ನು ಅರ್ಥ ಮಾಡಿಕೊಳ್ಳಲು ಇದು ಹೆಚ್ಚು ಸಹಾಯಕವಾಗುತ್ತದೆ.
– ಅರ್ಥೈಸಿಕೊಂಡು ಓದಿ (ಅರ್ಥಗ್ರಹಣ), ಓದಿದ್ದನ್ನು ನೆನಪಿಗೆ ತಂದುಕೊಳ್ಳಿ (ಸ್ಮರಣ), ಓದಿದ ವಿಷಯ ಗಳು ಮನಸ್ಸಿನಲ್ಲಿ ಮೂಡಲಿ (ಚಿತ್ರಣ), ಪಠ್ಯದ ಸಾರಾಂಶವನ್ನು ನಿಮ್ಮದೇ ವಾಕ್ಯ ಗಳಲ್ಲಿ ಬರೆಯಲು ಪ್ರಯತ್ನಿಸಿ (ಚಿಂತನ), ಪರೀಕ್ಷೆ ಹತ್ತಿರವಾದಾಗ ಬರೆದುಕೊಂಡ -ಚಿತ್ರಿಸಿಕೊಂಡ ಅಂಶಗಳನ್ನು ಪುನಃ ನೆನಪಿಗೆ ತಂದುಕೊಳ್ಳಿ (ಪುನರಾವರ್ತನ).
ಕೃಷ್ಣಮೂರ್ತಿ, ವಿಜ್ಞಾನ ಶಿಕ್ಷಕರು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.