ಅಂದದ ಮನೆಯಲ್ಲಿ ಮನಸ್ಸಿಗೊಪ್ಪುವ ತಾರಸಿ
Team Udayavani, Feb 21, 2020, 9:21 PM IST
ಹಿಂದೆಲ್ಲ ಮನೆಯ ತಾರಸಿಯನ್ನು ಹಪ್ಪಳ, ಬಟ್ಟೆ ಒಣಗಿಸುವ ಒಂದು ಸ್ಥಳವಾಗಿ ಬಹುತೇಕರು ಉಪಯೋಗಿಸುತ್ತಿದ್ದರು. ಕಾಲ ಬದಲಾಗಿ ಈಗ ಮನೆಯ ಅಂದಕ್ಕಿಂತಲೂ ತಾರಸಿಯ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯ ನೀಡುತ್ತಿರುವುದನ್ನು ಕಾಣಬಹುದು.
ಬಹುತೇಕ ಮಂದಿಯ ಜೀವನದ ಕನಸು ಒಂದು ಸುಂದರ ಮನೆ ನಿರ್ಮಾಣ ಮಾಡಬೇಕೆಂಬುವುದು. ಇಂದಿನ ಆಧುನಿಕ ಶೈಲಿಗೆ ಹೊಂದಿಕೊಳ್ಳುವ ಅಡುಗೆ ಮನೆ, ಬಾತ್ ರೂಮ್, ಡೈನಿಂಗ್ ಹಾಲ್ ಎಲ್ಲ ನಿರ್ಮಾಣವಾಗುತ್ತೆ. ಆದರೆ ವಿಶಾಲ ಸ್ಥಳಾವಕಾಶವಿದ್ದ ತಾರಸಿಯನ್ನು ಅಂದಗಾಣಿಸಲು ಏನು ಮಾಡಬಹುದೆಂದು ತಿಳಿಯದೇ ಅದನ್ನು ಹಾಗೇ ಬಿಟ್ಟು ಬಿಡುತ್ತಾರೆ. ಅಂದದ ತಾರಸಿಯೂ ನಿಮ್ಮ ಮನಸ್ಸಿನ ನೆಮ್ಮದಿ ಅರಸುವ ತಾಣವಾಗಿಯೂ ಬಂದ ಅತಿಥಿಗಳ ಸತ್ಕಾರದ ನೆಲೆಯನ್ನಾಗಿಯೂ ಮಾಡಲು ಏನೆಲ್ಲಾ ಉಪಾಯವಿದೆ ಎಂಬುವುದನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
ಆಧುನಿಕ ತಾರಸಿ ಹೀಗಿರಲಿ
ಹಿಂದೆ ತಾರಸಿ ಎಂದರೆ ಮನೆಯ ಒಂದೆರಡೂ ಕೋಣೆಯೋ, ಹಪ್ಪಳ, ಬಟ್ಟೆ ಒಣಗಿಸಲು ಉಪಯೋಗಿಸುವ ಒಂದು ಸ್ಥಳವಾಗಿ ಬಹುತೇಕರು ಉಪಯೋಗಿಸುತ್ತಿದ್ದರು. ಆದರೆ ಕಾಲ ಹೇಗೆ ಬದಲಾಗಿದೆ ಎಂದರೆ ಮನೆ ಅಂದಕ್ಕಿಂತಲೂ ತಾರಸಿಗೆ ಪ್ರಾಮುಖ್ಯ ನೀಡುತ್ತಿರುವುದನ್ನು ಕಾಣಬಹುದು.
ಆದಾಯದ ಮೂಲ
ಇಂದು ತಾರಸಿಯೂ ಆದಾಯದ ಮೂಲವಾಗಿದೆ. ಇಲ್ಲಿ ನೀವು ಜಿಮ್ ಕ್ಲಾಸ್, ಡ್ಯಾನ್ಸಿಂಗ್, ಟ್ಯೂಷನ್, ಚಿತ್ರಕಲೆ, ಯೋಗ ತರಗತಿಯನ್ನು ಮಾಡಲು ಸಾಧ್ಯವಿದೆ. ಕೆಲವರು ಆದಾಯಕ್ಕೆಂದು ಮಾಡಿದರೆ ಇನ್ನೂ ಕೆಲವರಿಗೆ ಯೋಗ, ಚಿತ್ರಕಲೆಯೂ ಒಂದು ಹವ್ಯಾಸವಾಗಿ ಅದನ್ನು ಒಂದು ಪ್ರಶಾಂತ ವಾತಾವರಣದಲ್ಲಿ ಆಹ್ಲಾದಿಸಿ ಮನಸ್ಸಿನ ನೆಮ್ಮದಿ ಪಡೆಯುವುದರ ಜತೆ ಪ್ರಕೃತಿಯ ಸ್ಫೂರ್ತಿ ಪಡೆಯಲು ಟೆರೆಸ್ ದಿ ಬೆಸ್ಟ್ ಪ್ಲೆಸ್ ಎನ್ನುವುದರಲ್ಲಿ ಅನುಮಾನವಿಲ್ಲ.
ಮನೋರಂಜನೆಯ ತಾಣವಾಗಿಸಿ
ಸ್ನೇಹಿತರೊಂದಿಗೆ ಅಥವಾ ಕುಟುಂಬದವರೊಂದಿಗೆ ಹಾಡು, ಹರಟೆ, ಮೋಜು ಮಸ್ತಿಯಲ್ಲಿ ತೊಡಗಲು ಟೆರೆಸ್ ಒಂದು ಉತ್ತಮ ಸ್ಥಳವಾಗಿದೆ. ಈ ಕಾರಣದಿಂದಲೇ ಹೊಟೇಲ್ ರೆಸ್ಟೋರೆಂಟ್‌ಗಳಲ್ಲಿ ನೆಲಚಾವಣಿಯಲ್ಲಿ ಸ್ಥಳಾವಕಾಶವಿದ್ದರೂ ಪಾರ್ಟಿಹಾಲ್‌ಗಳನ್ನು ಮೇಲೆ ಇಟ್ಟಿರುತ್ತಾರೆ. ಯಾಕೆಂದರೆ ನೀವು ಮಾಡುವ ಸದ್ದುಗದ್ದಲ ಬೇರೆಯವರಿಗೆ ತೊಂದರೆ ಆಗಲಾರದು. ಜತೆಗೆ ನಿಮ್ಮ ಮನೋರಂಜನೆಗೂ ಧಕ್ಕೆಬರಲಾರದು. ಅಷ್ಟೇ ಅಲ್ಲದೇ ಈಜುಕೊಳ(ಸ್ವಿಮ್ಮಿಂಗ್ ಪೂಲ್) ಅನ್ನು ಸಹ ಮಾಡಲು ಇಲ್ಲಿ ಸಾಕಷ್ಟು ಸ್ಥಳಾವಕಾಶವಿದ್ದು ಇದು ಸಾಧಾರಣ ಈಜುಕೊಳಕ್ಕಿಂತಲೂ ವಿಭಿನ್ನ ಅನುಭವವನ್ನು ನೀವು ಪಡೆಯಲು ಸಾಧ್ಯವಾಗುತ್ತದೆ.
ತಾರಸಿ ತೋಟ
ಇಂದು ಮನೆಯಲ್ಲಿ ಎಷ್ಟೇ ಜಾಗವಿದ್ದರೂ ಅದು ಕಡಿಮೆ ಎನಿಸುತ್ತದೆ. ಮನೆಯ ಹೊರಗಡೆ ಗಾರ್ಡನ್ ಮಾಡಲು ಸಾಕಷ್ಟು ಸ್ಥಳಾವಕಾಶವಿರದೇ ಆ ನಾಲ್ಕು ಗೊಡೆ ಮಧ್ಯ ಉಸಿರು ಕಟ್ಟಿ ಕೂರುವುದು ನರಕಯಾತನೆ ಎಂದರೂ ತಪ್ಪಲ್ಲ. ಹೀಗಿದ್ದಾಗ ಮನೆಯ ತಾರಸಿಯಲ್ಲಿಯೇ ಪುಟ್ಟದಾದ ಗಾರ್ಡನ್ ಮಾಡಿದರೆ ನಿಮ್ಮ ಮನೆಯೂ ಅಂದವಾಗುತ್ತದೆ. ಜತೆಗೆ ರುಚಿಕರ ತರಕಾರಿ ಯಾವುದೇ ಹಾನಿಕಾರಕವಿಲ್ಲದೇ ಸವಿದ ಖುಷಿಯನ್ನು ನೀವು ಪಡೆಯಬಹುದು.
ವಿವಿಧ ಅಲಂಕಾರ ತಾರಸಿ ಸುಂದರ
ತಾರಸಿಯಲ್ಲಿ ಜೋಕಾಲಿ ತೂಗು ಹಾಕುವುದರಿಂದ ಮನೆಯ ಅಂದ ಹೆಚ್ಚುವುದು ಮಾತ್ರವಲ್ಲದೇ ಉತ್ತಮ ಸಮಯವನ್ನು ನೀವು ಕಾಯ್ದುಕೊಳ್ಳಲು ಸಹ ಅದು ನೆರವಾಗುತ್ತದೆ. ಇದರೊಂದಿಗೆ ಗುಬ್ಬಚ್ಚಿ, ಲವ್ ಬರ್ಡ್ಸ್ ಇತರ ಪಕ್ಷಿಗಳ ಗೂಡು ನಿರ್ಮಿಸಿದಾಗ ಮನೆಯ ಸುತ್ತ ಪಕ್ಷಿಗಳ ಸದ್ದು ಉತ್ತಮ ವಾತಾವರಣವನ್ನು ನಿಮ್ಮ ಮನೆಯಲ್ಲಿ ಕಾಯ್ದಿಟ್ಟಂತಾಗುತ್ತದೆ. ಮೀನಿನ ಅಕ್ವೇರಿಯಂ ಮಾಡುವುದರಿಂದ ಇದ್ದ ಸ್ಥಳಾವಕಾಶದ ಸದುಪಯೋಗ ವಾಗುವುದರೊಂದಿಗೆ ಅಕ್ವೇರಿಯಂ ನೋಡುವುದರಿಂದ ಮನಸ್ಸಿಗೆ ನೆಮ್ಮದಿ ಲಭ್ಯವಾಗುತ್ತದೆ. ಇದರೊಂದಿಗೆ ಗೋಡೆಯ ಮೇಲೆ ಸುಂದರ ಕಾಲಾಕೃತಿಯ ವರ್ಲಿ ಆರ್ಟ್ ಮಾಡುವುದರಿಂದ ಕಲೆಯ ಸಂಪ್ರದಾಯ ಇಂದಿನ ಆಧುನಿಕತೆಗೆ ಪರಿಚಯಿಸಿದಂತಾಗುತ್ತದೆ. ತಾರಸಿಗೆ ಶೀಟ್ ಹಾಕಿ ಅಲ್ಯೂಮಿನಿಯಂ ಫ್ಯಾಬ್ರಿಕೇಶನ್ ಹಾಕುವುದರಿಂದ ಓಪನ್ ಹಾಲ್ ನಿರ್ಮಿಸಿ ಅತಿಥಿಗೃಹವನ್ನು ಮಾಡಬಹುದು. ಬಿದಿರಿನ ಆಲಂಕಾರಿಕ ವಸ್ತುಗಳು ಲೈಟಿಂಗ್ ಬಳಸಿದರೆ ಪಾರ್ಟಿ ಮೂಡ್ ಸಿದ್ಧಗೊಳ್ಳುತ್ತದೆ. ಬಳ್ಳಿ, ಗ್ಲಾಸ್, ಫರ್ನಿಚರ್ ಆಯ್ಕೆ ವಿಧಾನವೂ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ತಾರಸಿ ಅಂದಗಾಣಿಸುವುದರಿಂದ ಏನೆಲ್ಲ ಅನುಕೂಲಗಳಿವೆ
ತಾರಸಿಯ ಮೇಲೆ ಗಾರ್ಡನ್ ಮಾಡಿದರೆ ಮನೆಯೂ ತಂಪಾಗಿದ್ದು ಬೇಸಗೆಯಲ್ಲಿ ಈ ಉಪಾಯ ಬಹಳ ಉಪಯುಕ್ತವಾಗಿರುತ್ತದೆ.
ಹಕ್ಕಿ ಮತ್ತು ಮೀನಿನ ಸಾಕಾಣಿಕೆ ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ.
ಮಕ್ಕಳು ಆಡಲು ಪುಟ್ಟ ಗಾರ್ಡನ್ ಮಾಡಿದಾಗ ಸ್ಥಳಾವಕಾಶದ ಸಮಸ್ಯೆ ಆಗಲಾರದು.
ಸೂರ್ಯಾಸ್ತಮ ಮತ್ತು ಸೂರ್ಯೋದಯ ಕಾಣಲು ಬೇರೆ ರೆಸ್ಟೋರೆಂಟ್ ಅಥವಾ ಪ್ರವಾಸಿ ಸ್ಥಳದ ಅಗತ್ಯವಿಲ್ಲದೆ ಮನೆಯಲ್ಲಿಯೇ ಪ್ರವಾಸಿ ಅನುಭವ ಪಡೆಯಿರಿ.
ಮನೆಯ ಮೇಲೆ ಪೇಗೂಲ್(ಲತಾಗೃಹ) ನಿರ್ಮಾಣ ಮಾಡುವುದರಿಂದ ಸೂರ್ಯನ ನೇರಳಾತೀತ ಕಿರಣದಿಂದ ತ್ವಚೆಯನ್ನು ರಕ್ಷಿಸಬಹುದು.
ಬೆಳಗ್ಗೆ ಎದ್ದ ಕೂಡಲೇ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದರೆ ತಾರಸಿಯಲ್ಲಿ ಶುದ್ಧ ಗಾಳಿಯನ್ನು ಸಹ ನೀವು ಸೇವಿಸಬಹುದು.
– ರಾಧಿಕಾ ಕುಂದಾಪುರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.