ತ್ಯಾಜ್ಯ ಸಮಸ್ಯೆ ಸ್ಥಳಾಂತರಕ್ಕಿಂತ ವೈಜ್ಞಾನಿಕ ನಿರ್ವಹಣೆ ಸೂಕ್ತ
Team Udayavani, Feb 2, 2020, 5:30 AM IST
ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಸ್ಥಳಾಂತರ ಶಾಶ್ವತ ಪರಿಹಾರವಾಗಲಾರದು. ಇದು ಸಮಸ್ಯೆಯನ್ನು ಇನ್ನೊಂದು ಪ್ರದೇಶಕ್ಕೆ ವರ್ಗಾಯಿಸುವ ಕ್ರಮವಾದೀತು ಮತ್ತು ಇನ್ನಷ್ಟು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಬಲ್ಲದು. ಇದರ ಬದಲಿಗೆ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಪೂರಕವಾದ ವ್ಯವಸ್ಥೆಗಳನ್ನು ಕೈಗೊಳ್ಳುವುದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಹೆಚ್ಚು ಸಹಕಾರಿಯಾಗಬಲ್ಲದು.
ಮಂಗಳೂರು ನಗರದ ಪಚ್ಚನಾಡಿ ತ್ಯಾಜ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಡಂಪಿಂಗ್ ಯಾರ್ಡ್‌ನ್ನು ಬೇರೆ ಕಡೆಗೆ ಸ್ಥಳಾಂತರಿಸುವ ವಿಚಾರ ಇದೀಗ ಪ್ರಸ್ತಾವನೆಗೆ ಬರುತ್ತಿದೆ. ಡಂಪಿಂಗ್ ಯಾರ್ಡ್‌ಗೆ ಜ. 29ರಂದು ಭೇಟಿ ನೀಡಿದ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ಪಚ್ಚನಾಡಿಯಿಂದ ಡಂಪಿಂಗ್‌ಯಾರ್ಡ್‌ನ್ನು ಬೇರೆ ಕಡೆ ಸœಳಾಂತರಿಸಲು ಸೂಕ್ತ ಜಾಗ ಗುರುತಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಸ್ಥಳಾಂತರ ಶಾಶ್ವತ ಪರಿಹಾರವಾಗಲಾರದು. ಇದು ಸಮಸ್ಯೆಯನ್ನು ಇನ್ನೊಂದು ಪ್ರದೇಶಕ್ಕೆ ವರ್ಗಾಯಿಸುವ ಕ್ರಮವಾದೀತು ಮತ್ತು ಇನ್ನಷ್ಟು ಸಮಸ್ಯೆಗಳ ಸೃಷ್ಟಿಗೆ ಕಾರಣವಾಗಬಲ್ಲದು. ಇದರ ಬದಲಿಗೆ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಪೂರಕವಾದ ವ್ಯವಸ್ಥೆಗಳನ್ನು ಕೈಗೊಳ್ಳುವುದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಹೆಚ್ಚು ಸಹಕಾರಿಯಾಗಬಲ್ಲದು.
ಮಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆ ಪ್ರಸ್ತುತ ಗಂಭೀರ ಸವಾಲುಗಳಲ್ಲೊಂದು.ಪಚ್ಚನಾಡಿಗೆ ಬಂದು ಬೀಳುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಮಹಾನಗರ ಪಾಲಿಕೆೆ ಪಾಲಿಗೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ತ್ಯಾಜ್ಯದ ರಾಶಿ ಕುಸಿದು ಪಕ್ಕದ ಮಂದಾರ ಪ್ರದೇಶದ ಅಸ್ತಿತ್ವ ಮತ್ತು ಜನರ ಬದುಕನ್ನು ಪೂರ್ತಿಯಾಗಿ ಕಸಿದುಕೊಂಡಿದೆ. ಡಂಪಿಂಗ್ ಯಾರ್ಡ್‌ನಲ್ಲಿ ಸಂಗ್ರಹವಾಗುವ ಕಸಗಳಿಗೆ ಆಕಸ್ಮಿಕವಾಗಿ ತಗಲುವ ಬೆಂಕಿಯಿಂದಾಗಿ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿಕೊಂಡು ಸುತ್ತಮುತ್ತಲ ಪ್ರದೇಶಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಪರಿಸರ ಮಾಲಿನ್ಯ ಸಮಸ್ಯೆ ತಲೆದೋರಿದೆ. ಈ ಬಗ್ಗೆ ಹಲವಾರು ವರ್ಷಗಳಿಂದ ನಿರಂತರವಾಗಿ ಸರಕಾರದ ಗಮನ ಸೆಳೆಯುತ್ತಾ ಬರಲಾಗುತ್ತಿದ್ದರೂ ಪರಿಣಾಮಕಾರಿ ಕ್ರಮಗಳು ಇನ್ನೂ ಆಗಿಲ್ಲ. ಸಮಸ್ಯೆ ಪರಕಾಷ್ಠೆಯ ಹಂತಕ್ಕೆ ತಲುಪುತ್ತಿದ್ದು ಪರಿಹಾರಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯವಾಗಿದೆ.
ತ್ಯಾಜ್ಯ ಡಂಪಿಂಗ್ ಯಾರ್ಡ್ ಸ್ಥಳಾಂತರ ಸಮಸ್ಯೆಗೆ ಸಮರ್ಪಕ ಪರಿಹಾರವಾಗಲಾರದು. ಇನ್ನೊಂದು ಪ್ರದೇಶಕ್ಕೆ ಸ್ಥಳಾಂತರಿಸಿದರೂ ಆ ಪ್ರದೇಶದಲ್ಲೂ ಇದೇ ಸಮಸ್ಯೆ ನಿರ್ಮಾಣವಾಗುತ್ತದೆ. ಇನ್ನೊಂದು ಪ್ರಮುಖ ಅಂಶವೆಂದರೆ ಪ್ರಸ್ತುತ ತ್ಯಾಜ್ಯ ಡಂಪಿಂಗ್ ಯಾರ್ಡ್‌ಗಳಿಗೆ ಭೂಮಿಯನ್ನು ಹೊಂದಿಸಿಕೊಳ್ಳುವುದು ಒಂದು ಸವಾಲು ಕೂಡಾ ಆಗಿದೆ. ಡಂಪಿಂಗ್ ಯಾರ್ಡ್ ಸ್ಥಾಪನೆಯ ಪ್ರಸ್ತಾವನೆಗಳು ಆದಾಗ ಆ ಪ್ರದೇಶದ ನಿವಾಸಿಗಳಿಂದ ಬಲವಾದ ವಿರೋಧ, ಪ್ರತಿಭಟನೆಗಳು ಎದುರಾಗಿರುವುದನ್ನು ನಾವು ಕಂಡಿದ್ದೇವೆ. ಇನ್ನೊಂದೆಡೆ ಪಚ್ಚನಾಡಿಯಂತಹ ವಿಶಾಲ ಇನ್ನೊಂದು ಪ್ರದೇಶವನ್ನು ಹೊಂದಿಸಿಕೊಳ್ಳುವುದು ಕೂಡಾ ಸುಲಭದ ಮಾತಲ್ಲ.
ಹಳೆಯ ಮಾದರಿಗಳು, ವಿಧಾನಗಳನ್ನೇ ತ್ಯಾಜ್ಯ ನಿರ್ವಹಣೆಗೆ ಅವಲಂಬಿಸುವುದು ಸರಿಯಲ್ಲ. ಪ್ರಸ್ತುತ ಹಾಗೂ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ತ್ಯಾಜ್ಯ ನಿರ್ವಹಣೆಗೆ ವಿಭಿನ್ನ ಯೋಜನೆಗಳನ್ನು ರೂಪಿಸುವುದು ಅತೀ ಅವಶ್ಯವಾಗಿದೆ. ತ್ಯಾಜ್ಯನಿರ್ವಹಣೆಯಲ್ಲಿ ಹೊಸ ಆವಿಷ್ಕಾರಗಳು, ಮಾದರಿಗಳು ಬರುತ್ತಿವೆ. ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ಇದನ್ನು ವಿವಿಧ ನೆಲೆಗಳಲ್ಲಿ ಉಪಯೋಗಿಸುವ ಬಗ್ಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹಲವಾರು ಪ್ರಯತ್ನಗಳು ನಡೆದಿವೆ. ಹಲವಾರು ಸುಧಾರಿತ ಮತ್ತು ವೈಜ್ಞಾನಿಕ ವ್ಯವಸ್ಥೆಗಳು ಅಳವಡಿಕೆಯಾಗಿವೆ.
ಇದಲ್ಲದೆ ದೇಶದ ಅನೇಕ ನಗರಗಳಲ್ಲಿ ತ್ಯಾಜ್ಯವನ್ನು ಅತ್ಯಂತ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲಾಗುತ್ತಿದೆ. ಮುಂದುವರಿದ ದೇಶಗಳಲ್ಲೂ ಅನೇಕ ಆಧುನಿಕ ಕಾರ್ಯವಿಧಾನಗಳನ್ನು ಅನುಸರಿಸಲಾಗುತ್ತಿದೆ, ಈ ಮಾದರಿಗಳ ಬಗ್ಗೆಯೂ ಅಧ್ಯಯನ ನಡೆಸಿ ಮಂಗಳೂರಿನ ಪರಿಸರಕ್ಕೆ ಹೊಂದಿಕೊಳ್ಳುವಂತಹ ಅತ್ಯಂತ ವೈಜ್ಞಾನಿಕ ಮತ್ತು ಆಧುನಿಕ ವಿಧಾನಗಳ ಅಳವಡಿಕೆ ಬಗ್ಗೆ ಗಮನ ಹರಿಸಬಹುದಾಗಿದೆ.
ಮಂಗಳೂರು ನಗರದಲ್ಲಿ ದಿನಂಪ್ರತಿ ಸರಾಸರಿ 325 ರಿಂದ 330 ಟನ್ ಕಸ ಸಂಗ್ರಹವಾಗುತ್ತದೆ. ಇದರಲ್ಲಿ ಬಹುಪಾಲು ಹಸಿಕಸವಾಗಿರುತ್ತದೆ. ಹೊಟೇಲ್, ಮನೆ ಸೇರಿದಂತೆ ಒಟ್ಟಾರೆ 97,294 ಕಟ್ಟಡಗಳಿವೆ. 1,180 ಕಿ.ಮೀ. ರಸ್ತೆಗಳಿವೆ. 823 ಮಂದಿ ಕಾರ್ಮಿಕರು ಕಸ ಸಂಗ್ರಹದಲ್ಲಿ ದುಡಿಯುತ್ತಿದ್ದಾರೆ. ಮನೆಮನೆಗಳಿಂದ ಸಂಗ್ರಹಿಸಿದ ಕಸವನ್ನು ಪಚ್ಚನಾಡಿಗೆ ಸಾಗಿಸಲಾಗುತ್ತದೆ. ವಾರದಲ್ಲಿ ಒಂದು ದಿನ ಒಣಕಸವನ್ನು ಮಾತ್ರ ಸಂಗ್ರಹಿಸಲಾಗುತ್ತಿದೆ. ಉಳಿದ ದಿನಗಳಲ್ಲಿ ಹಸಿಕಸವನ್ನು ಕೊಂಡೊಯ್ಯಲಾಗುತ್ತಿದೆ. ಪಚ್ಚನಾಡಿಯಲ್ಲಿ ಹಸಿಕಸದಿಂದ ಕಾಂಪೋಸ್ಟ್ ತಯಾರಿಸುವ ಘಟಕವಿದೆ. ಉರ್ವಾದಲ್ಲಿ ಹಸಿಕಸದಿಂದ ಬಯೋಗ್ಯಾಸ್ ತಯಾರಿಸುವ ಘಟಕವಿದೆ. ಸಂಸ್ಕರಿಸಿ ಉಳಿದ ತ್ಯಾಜ್ಯವನ್ನು ಲ್ಯಾಂಡ್‌ಫಿಲ್ ಮಾಡಲಾಗುತ್ತಿದೆ. ಪಚ್ಚನಾಡಿಯಲ್ಲಿ ಈ ಹಿಂದೆ ಸುಮಾರು 10 ಎಕ್ರೆ ಜಾಗದಲ್ಲಿ ಹಾಕಿದ ತ್ಯಾಜ್ಯವನ್ನು ಮಣ್ಣು ಹಾಕಿ ಮುಚ್ಚಲಾಗಿದೆ. ಮತ್ತೆ ಇನ್ನಷ್ಟು ಜಾಗ ಈ ಪ್ರಕ್ರಿಯೆಗೆ ಬಳಸಲಾಗುತ್ತಿದೆ.
ವೇಸ್ಟ್ ಟು ಎನರ್ಜಿ
ವೇಸ್ಟ್ ಟು ಎನರ್ಜಿ ಪ್ರಸ್ತುತ ತ್ಯಾಜ್ಯ ನಿರ್ವಹಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹತ್ತರ ಕ್ರಮವಾಗಿದೆ. ಮಂಗಳೂರು ಸ್ಮಾರ್ಟ್ ಸಿಟಿಯಾಗುತ್ತಿದೆ. ತ್ಯಾಜ್ಯ ನಿರ್ವಹಣೆ ಸಮಸ್ಯೆಗೂ ವೈಜ್ಞಾನಿಕ ವಿಧಾನಗಳನ್ನು ಅನುಸರಿಸುವುದು ಅನಿವಾರ್ಯವಾಗಿದೆ. ಮಂಗಳೂರಿನಲ್ಲಿ ತ್ಯಾಜ್ಯದಿಂದ ವಿದ್ಯುತ್ ತಯಾರಿಸುವ ಯೋಜನೆ ಈಗಾಗಲೇ ಪ್ರಸ್ತಾವನೆಯಲ್ಲಿದೆ. ಬೆಂಗಳೂರಿನ ಕಂಪೆನಿಯೊಂದು ಪಚ್ಚನಾಡಿನಲ್ಲಿ ತ್ಯಾಜ್ಯದಿಂದ ವಿದ್ಯುತ್ ಹಾಗೂ ಇತರ ಉತ್ಪನ್ನಗಳನ್ನು ಸಿದ್ಧಪಡಿಸುವ ವಿಸ್ತೃತ ಯೋಜನೆ ಈಗಾಗಲೇ ಸಿದ್ಧಪಡಿಸಿದ್ದು ರಾಜ್ಯ ನಗರಾಡಳಿತ ಇಲಾಖೆಯಲ್ಲಿ ಮಂಜೂರಾತಿಗೆ ಕಾಯುತ್ತಿದೆ. ಇದಕ್ಕಾಗಿ ಪಚ್ಚನಾಡಿಯಲ್ಲಿ ಪ್ರಸ್ತುತ ಲ್ಯಾಂಡ್‌ಫಿಲ್ಲಿಂಗ್ ಮಾಡಿರುವ 7 ಎಕ್ರೆ ಜಾಗಕ್ಕೆ ಕೋರಿಕೆ ಸಲ್ಲಿಸಿದೆ. ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ ಇದರ ಸಾಧಕಬಾಧಕಗಳನ್ನು ಪರಿಶೀಲಿಸಿ ಶೀಘ್ರ ಪೂರಕ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ. ಬೆಂಗಳೂರಿನಲ್ಲಿ ಅನೇಕ ಕಂಪೆನಿಗಳು ವೇಸ್ಟ್ ಟು ಎನರ್ಜಿ ಪರಿಕಲ್ಪನೆಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಹಾಗೂ ಇತರ ಉತ್ಪಾದನೆಗಳನ್ನು ಮಾಡಲು ಮುಂದೆ ಬಂದಿದ್ದು ಅವುಗಳಿಗೆ ಘಟಕಗಳನ್ನು ಸ್ಥಾಪಿಸಲು ಜಾಗ ನೀಡಲು ಮುಂದೆ ಬಂದಿವೆ.
- ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.