ನೋವಿನಲ್ಲಿ ಜತೆಯಾದ ಗೆಳತಿಗೊಂದು ಧನ್ಯವಾದ
Team Udayavani, May 20, 2019, 6:00 AM IST
ಸಾಂದರ್ಭಿಕ ಚಿತ್ರ
ಜೀವನದಲ್ಲಿ ಬರುವ ದುಃಖ ಆ ಕ್ಷಣಕ್ಕೆ ದೊಡ್ಡದೆನಿಸುತ್ತದೆ. ಅದಕ್ಕಿಂತ ದೊಡ್ಡ ನೋವು ಇನ್ನೊಂದಿಲ್ಲ ಎನಿಸಿಬಿಡುತ್ತದೆ. ಆದರೆ ಸಮಯ ಸರಿದಂತೆ ಅವು ಕ್ಷುಲ್ಲಕವೆನಿಸುತ್ತದೆ. ಆ ಕಷ್ಟ ನೋವು ಅನಂತರ ದೊಡ್ಡದಲ್ಲವೆನಿಸಿದರೂ ಆ ಸಮಯದಲ್ಲಿ ನಮ್ಮೊಂದಿಗಿದ್ದು ನಮ್ಮ ನೋವಲ್ಲಿ ಒಬ್ಬರಾಗುವುದು ಖಂಡತಾ ಸಣ್ಣ ವಿಷಯವಲ್ಲ. ಆದರೆ ಆ ಸಮಯದಲ್ಲಿ ನಮ್ಮ ಮುಖದಲ್ಲಿ ನಗು ತರಲು ಪ್ರಯತ್ನಿಸುವ ಜೀವವೊಂದಕ್ಕೆ ಧನ್ಯವಾದ ಸಲ್ಲಿಸದಷ್ಟು ಕ್ರೂರಿಯಾಗಿಬಿಡುತ್ತೇವೆ ಒಮ್ಮೊಮ್ಮೆ…
ಮುಃಖದಲ್ಲಿದ್ದಾಗ ಮೌನ ನಮ್ಮನ್ನು ಆವರಿಸುತ್ತದೆ. ಮಾತು ಮರೆತು ಹೋಗುತ್ತದೆ. ಹೇಳಬೇಕಾದ ಎಷ್ಟೋ ಮಾತುಗಳು ನಮ್ಮಲ್ಲೇ ಉಳಿದು ಹೋಗುತ್ತದೆ. ಸಮಯ ಕಳೆದಂತೆ, ದುಃಖ ಕಳೆದು ಖುಷಿಯಲ್ಲಿರುವಾಗ ಮತ್ತೆ ನೋವನ್ನು ನೆನಪಿಸಲಿಷ್ಟವಿಲ್ಲದೆ ಹೇಳಬೇಕಾದ ಮಾತುಗಳು ಮತ್ತೆ ಉಳಿದುಹೋಗುತ್ತದೆ.
ಅದು ಪಿಯುಸಿಯಲ್ಲಿದ್ದಾಗ ನಡೆದ ಘಟನೆ. ನಮ್ಮೂರಿನಿಂದ ದೂರದಲ್ಲಿರುವ ಕಾಲೇಜಿಗೆ ಸೇರಿಕೊಂಡ ನನಗೆ ಅಲ್ಲಿದವರೆಲ್ಲಾ ಅಪರಿಚಿತರು. ಹಳ್ಳಿಯಿಂದ ಬಂದ ನನಗೆ ಅದು ಹೊಸ ವಾತಾವರಣ. ಒಂದೊಂಷ್ಟು ಅಳಕು ಭಯದೊಂದಿಗೆ ಕಾಲೇಜಿಗೆ ಹೋದ ನನಗೆ ಒಂದೇ ದಿನದಲ್ಲಿ ಇಡೀ ತರಗತಿ ಪರಿಚಿತವಾಗುವಂತೆ ಮಾಡಿದ್ದು ಒಂದು ಹುಡುಗಿ. ನನಗೆ ಆಕೆಯ ಬಗ್ಗೆ ಗೊತ್ತಿದದ್ದೂ ಬರೀ ಅಷ್ಟೇ. ಕಾಲೇಜು ಸೇರಿ ದಿನಗಳೂ ಮೆಲ್ಲನೆ ಸರಿಯುತ್ತಿತ್ತು. ಪರೀಕ್ಷೆಯೂ ಬಂತು. ಬರೀ ಮುಗುಳುನಗೆಯೊಂದಿಗೆ ನನ್ನ ಆಕೆಯ ಮಾತು ಮುಗಿಯುತ್ತಿತ್ತು.
ಎಸೆಸೆಲ್ಸಿವರೆಗೆ ಉತ್ತಮ ಅಂಕ ಗಳಿಸುತ್ತಿದ್ದ ನನಗೆ ಪಿಯುಸಿಯ ಮೊದಲ ಪರೀಕ್ಷೆಯಲ್ಲಿಯೇ ಫೇಲ್ ಎಂದಾಗ ಕಣ್ಣು ತೇವವಾಯಿತು. ನನ್ನ ಪಕ್ಕದಲ್ಲೇ ಕುಳಿತಿದ್ದ ಆ ಹುಡುಗಿ ನನ್ನ ನೋವನ್ನು ಅರಿತು ದಿನವಿಡೀ ನನ್ನನ್ನು ಮಾತಿಗೆಳೆಯುತ್ತಿದ್ದಳು. ಮುಂದಿನ ಪರೀಕ್ಷೆಯಲ್ಲಿ ಆಕೆಯ ಮಾತುಗಳನ್ನು ಗಂಭೀರವಾಗಿ ತೆಗೆದುಕೊಂಡ ನಾನು ಉತ್ತಮ ಅಂಕ ಪಡೆದು ತರಗತಿಗೆ ಮೊದಲನೆಯವಳಾದೆ. ನನ್ನ ಕ್ಷಣಿಕ ನೋವಿಗೆ ಸ್ಪಂದಿಸಿದ ಆ ಮುಗಳುನಗೆಯ ಹುಡುಗಿ ನನ್ನ ಆತ್ಮೀಯ ಗೆಳತಿಯಾದಳು.
ಕಾಲೇಜಿನ ಇಡೀ ಎರಡು ವರ್ಷಗಳಲ್ಲಿ ನನ್ನ ಜತೆಗಿದ್ದು, ನನ್ನ ನೊವು ನಲಿವಿಗೆ ಜತೆಯಾದ ನನ್ನ ಗೆಳತಿಗೆ ಧನ್ಯವಾದ.. ಮತ್ತು ಈಗ ಮೊದಲಿನಷ್ಟು ಮಾತಿಗೆ ಸಿಗದೆ, ನನ್ನದೇ ಲೋಕದಲ್ಲಿದ್ದೇನೆ ಎಂಬ ಭಾವನೆ ನಿನ್ನಲ್ಲಿ ಮೂಡಿಸುವಷ್ಟು ಬ್ಯುಸಿಯಾಗಿದ್ದೇನೆ. ಅದಕ್ಕೆ ಕ್ಷಮೆಯಿರಲಿ..
– ರಂಜಿನಿ ಎಂ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.