ನೆನಪುಗಳ ಮಾತು ಬಲು ಮಧುರ
Team Udayavani, Mar 9, 2020, 5:46 AM IST
ನೆನಪುಗಳ ಮಾತು ಎಂದಿಗೂ ಮಧುರವೇ. ಏಕೆಂದರೆ ಅಂತಹ ಘಟನೆಗಳು ನಮ್ಮ ಬದುಕಿನಲ್ಲಿ ಮರಳಿ ಬರುವುದಿಲ್ಲವಲ್ಲ. ಅದಕ್ಕೇ ಇರಬಹುದೇನೊ. ಈ ನೆನಪು ನೆನಪಾಗಲು ಹೊತ್ತು-ಗೊತ್ತಿಲ್ಲ. ಅತಿ ಖುಷಿಯಾದಾಗ, ಅತೀ ದುಃಖ ಆದಾಗ, ಒಬ್ಬಂಟಿಯಾಗಿ ನಡೆಯುವಾಗ, ಏಕಾಂತದಲ್ಲಿರುವಾಗ ಹೀಗೆ ತಮಗೆ ಬೇಕೆಂದಾಗಲೆಲ್ಲ ಕಟ್ಟಿಟ್ಟ ನೆನಪುಗಳ ಬುತ್ತಿ ಬಿಚ್ಚಿ ಕುಳಿತು ಬಿಡುತ್ತವೆ. ಅವುಗಳು ಯಾರ ಅಪ್ಪಣೆ, ನಿರಾಕರಣೆಗೆ ಕಾಯುವ ಗೋಜಿಗೆ ಹೋಗುವುದಿಲ್ಲ.
ನೆನಪುಗಳ ಬುತ್ತಿಯಲ್ಲಿ ಬಗೆಬಗೆಯ ರಸದೌತಣವಂತೂ ಇದ್ದೆ ಇರುತ್ತದೆ. ಕೆಲವು ನೆನಪುಗಳು ಖುಷಿ ನೀಡಿದರೆ, ಇನ್ನೂ ಕೆಲವು ಕಣ್ಣಂಚಲ್ಲಿ ಕಂಬನಿ ತರಿಸುತ್ತವೆ. ಇನ್ನು ಕೆಲವು ಇತ್ತ ಖುಷಿಯೂ ಅಲ್ಲ ಇತ್ತ ದುಃಖವೂ ಆಗದೇ ಹಾಗೆ ಆದದ್ದೂ ಒಳ್ಳೆಯದೋ ಅಥವಾ ಹಾಗಾಗದಿದ್ದರೆ ಚೆನ್ನಾಗಿರುತ್ತಿತ್ತೇನೊ ಎನ್ನುವ ಗೊಂದಲಕ್ಕೀಡು ಮಾಡುತ್ತವೆ. ನಾನು ನನ್ನ ಗೆಳೆಯ ಹೀಗೆ ಮೊನ್ನೆ ಅಪರೂಪವೆಂಬಂತೆ ಎದುರಾದೆವು. ಬಾಲ್ಯದಿಂದ ಒಟ್ಟಿಗೆ ಆಡಿ ಬೆಳೆದವರು. ಬಿಎವರೆಗೂ ಒಂದೇ ವಿಷಯ, ಒಂದೇ ಶಾಲೆ-ಕಾಲೇಜಿನಲ್ಲಿ ಓದಿದ್ದ ನಾವು ಕಾರಣಾಂತರದಿಂದ ಎಂ.ಎ. ಪದವಿಗೆ ಮಾತ್ರ ಬೇರೆ ಬೇರೆ ಊರುಗಳಲ್ಲಿ ಓದಬೇಕಾಯಿತು. ಒಂದೇ ಊರು, ಅಕ್ಕದ ಪಕ್ಕದ ಮನೆಯವರಾಗಿದ್ದರಿಂದ ನಾವಿಬ್ಬರೂ ಹೆಚ್ಚು ಬೆರೆಯುತ್ತಿದ್ದೆವು. ಸಮಯ ಸಿಕ್ಕಾಗಲೆಲ್ಲ ಕೂಡಿ ತಿರುಗುವುದು, ಪ್ರವಾಸ ಮಾಡುವುದು ಇತ್ತು. ಆದರೆ ಕೆಲಸಕ್ಕೆ ಸೇರಿದ ಒಂದು ವರ್ಷದಿಂದ ಇಬ್ಬರೂ ಕೂಡಿ ಮಾತನಾಡದೇ ತಿಂಗಳುಗಳೇ ಕಳೆದಿದ್ದವು. ಅಲ್ಲೇ ಇದ್ದ ಗೂಡಂಗಡಿಯಲ್ಲಿ ಎರಡು ಚಾ ಹೇಳಿ ಹರಟೆಗಿಳಿದೆವು. ಪ್ರಾಥಮಿಕ ಶಾಲೆಯಲ್ಲಿ ನಾಗರತ್ನಾ ಮೇಡಂ ಕೈಯಿಂದ ತಿಂದ ಏಟಿನಿಂದ ಶುರುವಾಗಿ, ಡಿಗ್ರಿ ಓದುವಾಗಿನ ತುಂಟಾಟಗಳೆಲ್ಲವೂ ನೆನೆದು ನಾವೂ ನಕ್ಕಿದ್ದಲ್ಲದೇ ಅದನ್ನು ಹೇಳಿ ಚಾದಂಗಡಿಯ ಹುಸೇನ್ ಚಾಚಾನೂ ನಗುವಂತೆ ಮಾಡಿದ್ದೆವು. ಅಲ್ಲಿಯವರೆಗೂ ನಗುತ್ತಿದ್ದ ನಮ್ಮನ್ನು ಗಕ್ಕನೆ ಗೆಳತಿಯ ಸಾವಿನ ನೆನಪು ಮೌನವಾಗಿಸಿತ್ತು. ನಾವು ಮೂರು ಜನರ ಗುಂಪಲ್ಲಿ ರೇಶ್ಮಾನಿಗೂ ಸಮ ಪಾಲು. ಎಲ್ಲೇ ಹೋದರೂ ಜತೆಗಿರುತ್ತಿದ್ದ ಆಕೆ ಪ್ರಥಮ ಪಿಯುಸಿ ರಜೆಯಲ್ಲಿ ಶಾಶ್ವತವಾಗಿ ಅಗಲಿದ ನೆನಪು ಕಣ್ಣಾಲಿಗಳನ್ನು ಒದ್ದೆಯಾಗಿಸಿತ್ತು.
ಹೌದು, ಈ ನೆನಪುಗಳೆ ಹಾಗೆ. ಖುಷಿಯನ್ನು ದುಃಖವನ್ನೂ ಒಟ್ಟೊಟ್ಟಿಗೆ ತರುವ ಶಕ್ತಿ ಅವುಗಳಿಗೆ ಮಾತ್ರ. ನನಗೂ ಆಗಾಗ ಅವುಗಳ ಜತೆ ಮಾತು ಕತೆಗೆ ಕೂರದೇ ಹೋದರೆ ಸಮಾಧಾನವೇ ಇರುವುದಿಲ್ಲ. ನಿಮಗೂ ನೆನಪುಗಳ ಮಾತು ಕೇಳುವ ಹವ್ಯಾಸವಿದ್ದರೆ ಇನ್ನೂ ಚಂದ. ಏಕೆಂದರೆ ನೆನಪುಗಳ ಮಾತು ಬಲು ಮಧುರ.
-ಶಿವಾನಂದ ಎಚ್ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.