ಬೀದಿ ದೀಪಗಳ ನಿರ್ವಹಣೆಯಾಗಲಿ
Team Udayavani, Jul 1, 2018, 4:11 PM IST
ನಗರದ ಕೆಲವು ಭಾಗಗಳಲ್ಲಿ ವಿದ್ಯುತ್ ದೀಪವಿಲ್ಲದೆ ವಾಹನ ಸವಾರರು, ಪಾದಚಾರಿಗಳು ಪರದಾಡುತ್ತಿದ್ದರೆ, ಇನ್ನು ಕೆಲವೆಡೆ ಹಗಲು ಹೊತ್ತಿನಲ್ಲೂ ವಿದ್ಯುತ್ ದೀಪಗಳು ಉರಿದು ವಿದ್ಯುತ್ ಪೋಲಾಗುತ್ತಿದೆ. ಮಳೆಗಾಲ ಬಂತೆಂದರೆ ಅರಣ್ಯ ಇಲಾಖೆ, ಮೆಸ್ಕಾಂ ಸಹಿತ ಸ್ಥಳೀಯಾಡಳಿತದ ಕೆಲಸ ದುಪ್ಪಟ್ಟಾಗುತ್ತದೆ. ಅದಕ್ಕಾಗಿಯೇ ಮಳೆಗಾಲಕ್ಕೆ ಮುನ್ನವೇ ಮಳೆಗಾಲದಿಂದ ಆಗುವ ಹಾನಿಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಸಕಲ ರೀತಿಯ ತಯಾರಿ ಮಾಡಿಕೊಂಡಿರುತ್ತವೆ.
ಹೆಚ್ಚಿನ ಹಾನಿಯಾಗದಂತೆ ಮಳೆಗಾಲಕ್ಕೂ ಮುನ್ನ ಸ್ಥಳೀಯಾಡಳಿತ ಎಷ್ಟೇ ತಯಾರಿ ನಡೆಸಿದರೂ ಕೆಲವೊಂದು ಸಮಸ್ಯೆಗಳು ಬಂದೇ ಬರುತ್ತವೆ. ರಸ್ತೆಗಳಲ್ಲಿ ಗುಂಡಿ ಬೀಳುವುದು, ಮರಗಳು ಬೀಳುವುದು, ವಿದ್ಯುತ್ ತಂತಿಗಳಿಗೆ ಹಾನಿ ಇತ್ಯಾದಿ. ಮಳೆಗಾಲ ಆರಂಭವಾಗಿ ಕೆಲವು ದಿನಗಳಾಯಿತಷ್ಟೇ. ಆದರೆ ನಗರದ ಬಹುತೇಕ ಭಾಗಗಳಲ್ಲಿ ಬೀದಿ ದೀಪಗಳು ಕೆಟ್ಟಿವೆ. ಮಳೆ ನೀರು ಬಿದ್ದ ತತ್‌ಕ್ಷಣ ವಿದ್ಯುತ್ ತಂತಿಗಳಲ್ಲಿ ಉಂಟಾಗುವ ಏರು ಪೇರುಗಳಿಂದಾಗಿ ಬೀದಿ ದೀಪಗಳಿಗೂ ಹಾನಿಯಾಗುತ್ತಿದೆ. ಇದರಿಂದ ಆ ಭಾಗದಲ್ಲಿ ವಾಹನ ಸವಾರರು ಹಾಗೂ ಪಾದಚಾರಿಗಳು ರಾತ್ರಿ ವೇಳೆ ಕಷ್ಟ ಅನುಭವಿಸುತ್ತಿದ್ದಾರೆ.
ಇನ್ನೂ ಕೆಲವು ಭಾಗಗಳಲ್ಲಿ ಬೆಳಗ್ಗೆ 11 ಗಂಟೆವರೆಗೂ ಬೀದಿ ದೀಪಗಳು ಉರಿಯುತ್ತಿರುತ್ತವೆ. ಅದೇ ದಾರಿಯಲ್ಲಿ ಹಲವು ಜನ ನಡೆದುಕೊಂಡು ಹೋದರೂ ಯಾರೂ ಸ್ವಿಚ್ ಆಫ್ ಮಾಡುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಹಲವಡೆ ದಿನವಿಡೀ ಬೀದಿ ದೀಪ ಉರಿಯುತ್ತಿರುತ್ತವೆ. ಮಳೆಗಾಲದಲ್ಲಿ ಮೆಸ್ಕಾಂ ಸಿಬಂದಿಗೆ ಕೆಲಸ ಹೆಚ್ಚಾಗಿರುತ್ತದೆ. ಆದರೆ ಅಗತ್ಯ ಸ್ಥಳಗಳಲ್ಲಿ ಕೂಡಲೇ ದಾರಿ ದೀಪಗಳನ್ನು ಅಳವಡಿಸುವ ಕಾರ್ಯವಾಗಬೇಕಿದೆ. ಜತೆಗೆ ವಿದ್ಯುತ್ ದೀಪಗಳನ್ನು ಉರಿಸಿ, ಆರಿಸಲು ಸೂಕ್ತ ಸಿಬಂದಿಯ ನೇಮಕ ಅಥವಾ ಸ್ಥಳೀಯರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ಕೂಡಲೇ ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದೆ.
ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.