ಕ್ರಿಯಾಶೀಲತೆಯ ಗುಟ್ಟು
Team Udayavani, Oct 1, 2018, 3:40 PM IST
ಸೇನಾಫುರ ಎಂಬ ಊರಿಗೆ ಒಬ್ಬ ರಾಜನಿದ್ದ. ಒಮ್ಮೆ ಆತನ ರಾಜ್ಯಕ್ಕೆ ಆಗಮಿಸಿದ್ದ ವಿದೇಶಿ ಸ್ನೇಹಿತನೊಬ್ಬ ತಮ್ಮ ಸ್ನೇಹದ ಸವಿ ನೆನಪಿಗಾಗಿ ಎರಡು ಪಾರಿವಾಳಗಳ ಮರಿಗಳನ್ನು ನೀಡಿ ಹೋದ. ಈ ಪಾರಿವಾಳಗಳ ಮರಿಯನ್ನು ಪೋಷಿಸುವ ಜವಾಬ್ದಾರಿಯನ್ನು ಯೋಗ್ಯ ವ್ಯಕ್ತಿಗೆ ನೀಡಬೇಕು ಎಂದು ರಾಜ ತನ್ನ ಮಂತ್ರಿಗೆ ಆದೇಶ ನೀಡಿದ. ರಾಜನ ಆಜ್ಞೆಯಂತೆಯೇ ಓರ್ವ ಸೂಕ್ತ ವ್ಯಕ್ತಿಯನ್ನು ಪಾರಿವಾಳಗಳ ಮರಿಗಳನ್ನು ನೋಡಿಕೊಳ್ಳಲು, ಅವುಗಳಿಗೆ ತರಬೇತಿ ನೀಡಲು ನೇಮಕ ಮಾಡಲಾಯಿತು.
ಕಾಲ ಕಳೆದಂತೆ ಎರಡೂ ಪಾರಿವಾಳ ಮರಿಗಳು ಬೆಳೆಯುತ್ತಾ ಹೋದವು. ಅವುಗಳಲ್ಲಿ ಒಂದು ಮರಿ ಬಹಳ ಚುರುಕಾಗಿತ್ತು. ಸ್ವಚ್ಛಂದವಾಗಿ ಹಾರಾಟ ನಡೆಸುತ್ತಿತ್ತು. ಮತ್ತೊಂದು ಮಾತ್ರ ಮಂದ ಬುದ್ಧಿಯಂತೆ ವರ್ತಿಸುತ್ತಾ ಮರದ ರೆಂಬೆಗಳ ಮೇಲೆಯೇ ಸದಾ ಕುಳಿತಿರುತ್ತಿತ್ತು. ಅವುಗಳ ತರಬೇತಿದಾರ ಎಷ್ಟೇ ಪ್ರಯತ್ನಪಟ್ಟರೂ ಅದರ ನಡವಳಿಕೆಯನ್ನು ಬದಲಿಸಲಾಗಲಿಲ್ಲ. ಈ ವಿಷಯ ಅದೇಗೋ ರಾಜನ ಕಿವಿಗೂ ತಲುಪಿತು. ಕೂಡಲೇ ರಾಜ ಮಂತ್ರಿಯನ್ನು ಕರೆದು ಈ ಬಗ್ಗೆ ವಿಚಾರಿಸಿದ ರಾಜ ಮಂದ ಬುದ್ಧಿಯ ಪಾರಿವಾಳದ ಸಮಸ್ಯೆ ಬಗೆಹರಿಸಲು ಬೇರೆ ರಾಜ್ಯದಿಂದಾರೂ ಸರಿ ಓರ್ವ ತಜ್ಞನನ್ನು ಕರೆಸಿ. ಈ ಪಾರಿವಾಳವೂ ಮತ್ತೊಂದರಂತೆ ಕ್ರಿಯಾಶೀಲವಾಗಿರಬೇಕು ಎಂಬುದೇ ನನ್ನ ಮಹದಾಸೆ ಎಂದ.
ರಾಜನ ಮಾತಿನಂತೆ ಮತ್ತೋರ್ವ ತಜ್ಞನನ್ನು ನೇಮಿಸಲಾಯಿತು. ಪರಮಾಶ್ಚರ್ಯವೆಂದರೆ ಕೆಲವೇ ದಿನಗಳಲ್ಲಿ ಮಂದಗತಿಯ ಪಾರಿವಾಳ ಮತ್ತೊಂ ದರಂತೆ ಕ್ರಿಯಾಶೀಲವಾಗತೊಡಗಿತು. ಇದರಿಂದ ಖುಷಿಗೊಂಡ ರಾಜ ಮಂತ್ರಿಯನ್ನು ಕರೆದು ಹೊಸದಾಗಿ ನೇಮಕಗೊಂಡಾತನನ್ನು ತಾನು ಕೂಡಲೇ ನೋಡಬೇಕು ಎಂದ. ಆ ತಜ್ಞನನ್ನು ನೋಡಿದ ರಾಜ ಸ್ವತಃ ಒಂದು ಕ್ಷಣ ದಂಗಾದ. ಏಕೆಂದರೆ ಆತನೊಬ್ಬ ರೈತನಾಗಿದ್ದ. ಕುತೂಹಲ ತಡೆಯಲಾಗದೆ ರಾಜ ರೈತನಲ್ಲಿ ಕೇಳಿಯೇ ಬಿಟ್ಟ. ತಜ್ಞನಿಂದಾಗದ ಕೆಲಸ ನಿನ್ನಿಂದ ಹೇಗೆ ಸಾಧ್ಯವಾಯಿತು ಎಂದು. ಇದಕ್ಕೆ ವಿನಯದಿಂದ ಉತ್ತರಿಸಿದ ರೈತ ಹೇಳಿದ ಮಾತು ಏನು ಗೊತ್ತೇ? ಹೇ ರಾಜ ನಾನೇನು ಅಂಥ ಮಹಾನ್ ಕಾರ್ಯಮಾಡಿಲ್ಲ. ಆ ಪಾರಿವಾಳ ನಿರಾಯಾಸವಾಗಿ ಯಾವ ರೆಂಬೆ ಮೇಲೆ ಕುಳಿತುಕೊಳ್ಳುತ್ತಿತ್ತೋ ಅವೆಲ್ಲವನ್ನು ನಾನು ಕಡಿಯುತ್ತಾ ಹೋದೆ. ಪಾರಿವಾಳ ತಾನಾಗಿಯೇ ಹಾರಾಡ ತೊಡಗಿತು ಎಂದ.
ಈ ಪಾರಿವಾಳದಂತೆಯೇ ನಮ್ಮ ಜೀವನ ಕೂಡ. ಕೆಲವೊಮ್ಮೆ ನನ್ನಿಂದ ಏನೂ ಆಗದು, ಸಾಧ್ಯವಿಲ್ಲ ಎಂಬ ಕಟ್ಟುಪಾಡುಗಳನ್ನು ನಮಗೆ ನಾವೇ ಹಾಕಿಕೊಂಡು ಬಿಡುತ್ತೇವೆ. ಆರಕ್ಕೇರದೆ ಮೂರಕ್ಕಿಳಿಯದೆ ತಟಸ್ಥರಂತೆ ವರ್ತಿಸುತ್ತಿರುತ್ತೇವೆ. ಇನ್ನೂ ಹಲವು ಬಾರಿ ಬೇರೆಯವರ ಮೇಲೆ ಅವಲಂಬಿತರಾಗಿ ಜೀವನ ಪೂರ್ತಿ ಕಳೆಯುತ್ತೇವೆ. ಭಗವಂತ ಪ್ರತಿಯೊಬ್ಬರಿಗೂ ಯೋಚನ ಶಕ್ತಿಯನ್ನು, ಸ್ವ ಸಾಮರ್ಥ್ಯ ನೀಡಿದ್ದಾನೆ. ಅವುಗಳನ್ನು ನಾವು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆಯೇ ನಮ್ಮ ಜೀವನದ ಸುಖ ದುಃಖಗಳು ನಿಂತಿರುವುದು. ನಾವೇ ನಮ್ಮ ಸುತ್ತ ನಿರ್ಮಿಸಿ ಕೊಂಡಿರುವ ಹೆದರಿಕೆ, ಅಂಜಿಕೆಯಂತಹ ರೆಂಬೆಗಳನ್ನು ಕಡಿಯುವುದಿಲ್ಲವೋ ಅಲ್ಲಿಯವರೆಗೆ ನಾವೂ ಮಂದಗತಿಯ ಪಾರಿವಾಳವೇ ಆಗಿರುತ್ತೇವೆ.
ಪ್ರಸನ್ನ ಹೆಗಡೆ ಊರಕೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.