ನಗರದೊಳಗೆ ವಾಹನ ಸಂಚಾರ ನಿಯಮ ಪಾಲನೆ ಕಟ್ಟು ನಿಟ್ಟಾಗಲಿ
Team Udayavani, Sep 2, 2018, 12:43 PM IST
ಘಟನೆ 1: ನಗರದ ಬಿಜೈಯಿಂದ ಕದ್ರಿ ಕಂಬಳ ರಸ್ತೆಯಾಗಿ ಮಧ್ಯ ವಯಸ್ಕರೋರ್ವರು ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದರು. ಅವರ ಮುಂಭಾಗದಲ್ಲಿ ಕೆಲವೇ ಅಡಿಗಳ ಅಂತರದಲ್ಲಿ ರಿಕ್ಷಾವೊಂದು ಸಂಚರಿಸುತ್ತಿತ್ತು. ನಡು ರಸ್ತೆಯಲ್ಲಿ ಇಂಡಿಕೇಟರ್ ಹಾಕದೇ, ಯಾವುದೇ ಸಿಗ್ನಲ್ ಕೂಡ ನೀಡದೆ ರಿಕ್ಷಾ ಚಾಲಕ ಏಕಾಏಕಿ ರಿಕ್ಷಾವನ್ನು ತಿರುಗಿಸಿದ. ದ್ವಿಚಕ್ರ ವಾಹನದ ವ್ಯಕ್ತಿಯೂ ಸಾಮಾನ್ಯ ವೇಗದಲ್ಲಿದ್ದರೂ, ರಿಕ್ಷಾ ಚಾಲಕನ ಬೇಜವಾಬ್ದಾರಿಯಿಂದಾಗಿ ರಿಕ್ಷಾಕ್ಕೆ ಗುದ್ದುವವರಿದ್ದರು. ಆದರೆ ಅದೃಷ್ಟವಷಾತ್ ಸಂಭವನೀಯ ಅಪಘಾತ ತಪ್ಪಿ ಹೋಯಿತು.
ಘಟನೆ 2: ಜ್ಯೋತಿ ಸರ್ಕಲ್‌ನಿಂದ ಹಂಪನಕಟ್ಟೆಗೆ ಹೋಗುವ ಮುಖ್ಯ ರಸ್ತೆ. ವಾಹನಗಳ ವೇಗವೂ ಹೆಚ್ಚಿರುತ್ತದೆ; ಜತೆಗೆ ರಸ್ತೆಯನ್ನೇ ಆಕ್ರಮಿಸಿಕೊಂಡು ಪಾರ್ಕ್ ಮಾಡಿರುವ ಕಾರುಗಳು. ಇಂತಹ ರಸ್ತೆಯಲ್ಲಿ ಅತ್ಯಂತ ಪ್ರಯಾಸ ಮಾಡಿಕೊಂಡೇ ಚಾಲನೆ ಮಾಡಬೇಕಾದ ಅನಿವಾರ್ಯತೆ ದ್ವಿಚಕ್ರ ವಾಹನ ಸವಾರರಿಗೆ. ಅನತಿ ದೂರದಲ್ಲಿದ್ದ ಅಟೋ ರಿಕ್ಷಾ ಹಿಂದುಗಡೆ ಯುವತಿಯೋರ್ವಳು ಸಾಮಾನ್ಯ ವೇಗದಲ್ಲಿ ತನ್ನ ವಾಹನ ಚಾಲನೆ ಮಾಡುತ್ತಿದ್ದಳು. ಪ್ರಯಾಣಿಕರನ್ನು ಹತ್ತಿಸಲು ಏಕಾಏಕಿ ರಿಕ್ಷಾ ನಿಂತಿತು. ಹಿಂದಿದ್ದ ಯುವತಿ ತಬ್ಬಿಬ್ಟಾದಳು. ಆಕೆಯ ಹಿಂದಿನಿಂದ ಅತಿವೇಗದಲ್ಲಿ ಬಸ್ ಕೂಡ ಸಂಚರಿಸುತ್ತಿತ್ತು. ಸ್ವಲ್ಪ ಎಚ್ಚರ ತಪ್ಪಿ ದರೂ ಭೀಕರ ಅಪಘಾತಕ್ಕೆ ಕಾರಣವಾಗುತ್ತಿತ್ತು. ಇದು ಕೇವಲ ಎರಡು ಉದಾಹರಣೆಗಳಷ್ಟೇ.
ನಗರದಲ್ಲಿ ಪ್ರತಿನಿತ್ಯವೂ ಇಂಥ ಹಲವಾರು ಘಟನೆಗಳು ನಡೆಯುತ್ತವೆ. ಇದು ಕೇವಲ ರಿಕ್ಷಾ ಚಾಲಕರು ಮಾತ್ರವಲ್ಲ ಕೆಲವೊಮ್ಮೆ ದ್ವಿಚಕ್ರ ವಾಹನ ಸವಾರರು, ಕಾರು ಚಾಲಕರು ಇಂಡಿಕೇಟರ್ ಹಾಕದೆಯೇ ವಾಹನ ತಿರುಗಿಸುವುದು, ವಾಹನ ದಟ್ಟಣೆ ರಸ್ತೆಗಳಲ್ಲಿ ಏಕಾ ಏಕಿವಾಹನ ನಿಲ್ಲಿಸುವುದು, ಬೇಕಾಬಿಟ್ಟಿ ಸಂಚಾರ ನಡೆಸುವುದು, ತಮ್ಮದೇ ತಪ್ಪು ಎಂದು ಗೊತ್ತಿದ್ದರೂ, ತುತ್ಛ ಮಾತನ್ನಾಡುವುದು ಪ್ರತಿದಿನದ ಗೋಳಾಗಿಬಿಟ್ಟಿದೆ. ಈ ಹಿಂದೊಮ್ಮೆ ನಗರ ಪೊಲೀಸರು ಇಂತಹ ನಿಯಮ ಉಲ್ಲಂಘನೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಮುಕ್ತವಾಗಿ ದೂರು ನೀಡಬಹುದು ಎಂದು ಹೇಳಿದ್ದರು. ಆದರೆ ಈಗ ಮತ್ತೆ ಮತ್ತೆ ಇಂಥ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಸ್ಮಾರ್ಟ್ ಸಿಟಿಯಾಗುತ್ತಿರುವ ಮಂಗಳೂರಿನಲ್ಲಿ ರಸ್ತೆಗಳೇನೋ ಸ್ಮಾರ್ಟ್ ಆಗುತ್ತಿವೆ. ಆದರೆ ವಾಹನ ಸವರಾರರು ನಿರ್ಲಕ್ಷದಿಂದ ವಾಹನ ಚಾಲನೆ ಮಾಡಿದರೆ ಅಪಘಾತ ವಲಯವಾಗಿ ಮಂಗಳೂರು ನಗರ ಗುರುತಿಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ನಿಟ್ಟಿನಲ್ಲಿ ಕೂಡಲೇ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.