ಬೆಳಿಬೈಲು-ಕೈಪಳ ಪರಿಸರದಲ್ಲಿ ನೀರಿಗೆ ಹಾಹಾಕಾರ
Team Udayavani, Mar 26, 2019, 10:26 AM IST
ಬೆಳ್ತಂಗಡಿ : ಸುಡು ಬಿಸಿಲಿನ ನಡುವೆ ತಾಲೂಕಿನ ಬಹುತೇಕ ಕಡೆ ನೀರಿನ ಅಶ್ರಯ ಬತ್ತುತ್ತಿರುವುದು ಒಂದೆಡೆಯಾದರೆ, ಕೆಲವು ಪಂಚಾಯತ್ ವ್ಯಾಪ್ತಿಯಲ್ಲಿ ನೀರಿನ ಸಂಪರ್ಕವೇ ಇಲ್ಲದ ಮನೆಗಳು ಒಂದೊಂದಾಗಿ ಕಾಣಸಿಗುತ್ತವೆ.
ಸ್ಪಂದನೆ ಇಲ್ಲ ಕಳಿಯ ಗ್ರಾ.ಪಂ. ನ್ಯಾಯತರ್ಪು ಗ್ರಾಮದ ಕೈಪಳ-ಬೆಳಿಬೈಲು-ತಿಮ್ಮನೊಟ್ಟು ಪರಿಸರದ ಜನರು ಮೂರು ವರ್ಷಗಳಿಂದ ನೀರಿಗಾಗಿ ಕಿಲೋಮೀಟರ್ ನಡೆಯುವಂತಾಗಿದೆ. ಈ ಕುರಿತು ಗ್ರಾ.ಪಂ. ಸಭೆ, ವಾರ್ಡ್ ಸಭೆಗಳಲ್ಲಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಿಲ್ಲ. ತಿಂಗಳ ಹಿಂದೆ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಗಮನಕ್ಕೆ ತಂದರೂ ಸ್ಪಂದನೆ ಇಲ್ಲ. ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಸರಿಪಡಿಸುವುದಾಗಿ ಹೇಳಿ ಮತ್ತೆ ಇತ್ತ ತಲೆ ಹಾಕಿಲ್ಲ ಎಂದು ಸ್ಥಳೀಯರು ಅಲವತ್ತುಕೊಂಡಿದ್ದಾರೆ.
ಸುಮಾರು 12 ಮನೆಗಳಿದ್ದು, 30 ಮಂದಿ ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ ದಲಿತ ಕಾಲನಿಯೂ ಇದೆ. ಸ್ಥಳೀಯ ನ್ಯಾಯತರ್ಪುವಿನಿಂದ ಎರಡು ವರ್ಷಗಳ ಹಿಂದೆ ನೀರಿಗಾಗಿ ನಳ್ಳಿ ನೀರಿನ ಸಂಪರ್ಕಕ್ಕೆ ಪೈಪ್‌ಲೈನ್ ಅಳವಡಿಸಲಾಗಿತ್ತು. ಆದರೆ ನೀರು ಮಾತ್ರ ಇದುವರೆಗೆ ಮನೆ ಸೇರಿಲ್ಲ. ಹಾಕಿರುವ ಪೈಪ್‌ಲೈನ್ ಒಡೆದು ಹೋಗಿದ್ದು ಕಾಮಗಾರಿ ವ್ಯರ್ಥವಾಗಿದೆ.
ಭರವಸೆ ಬೇಡ ನೀರು ಬೇಕು ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ಎಂಬಲ್ಲಿ ಬೋರ್‌ವೆಲ್ ಇದೆ. ಅದರ ನೀರನ್ನು ತಿಮ್ಮನೊಟ್ಟು ವರೆಗೆ ನೀಡಲಾಗುತ್ತಿತ್ತು. ಆದರೆ ಬೋರ್‌ವೆಲ್‌ನಲ್ಲಿ ನೀರಿನ ಮಟ್ಟ ಕುಸಿತವಾಗಿದೆ. ಅಲ್ಲಿಂದ ಸುಮಾರು ಒಂದೂವರೆ ಕಿ.ಮೀ. ದೂರದಿಂದ ನೀರು ಸರಾಗವಾಗಿ ಬರುತ್ತಿಲ್ಲ. ಎತ್ತರ ಪ್ರದೇಶದಲ್ಲಿರುವ ಮನೆಗಳಿಗೆ ನೀರು ಸಿಗುತ್ತಿಲ್ಲ. ಸದ್ಯಕ್ಕೆ ತಿಮ್ಮನೊಟ್ಟು ತನಕ ಕುಡಿಯುವಷ್ಟು ನೀರು ಸಿಗುತ್ತಿದ್ದು, ಬೆಳಿಬೈಲು, ಕೈಪಳ ಜನರಿಗೆ ಪಂಚಾಯತ್ ವತಿಯಿಂದ ನೀರು ಬರುತ್ತಿಲ್ಲ. ಚುನಾವಣೆ ಬಂದಾಗ ಭರವಸೆ ನೀಡುತ್ತಾರೆ. ಆದರೆ ನಮಗೆ ಭರವಸೆ ಬೇಡ, ನೀರು ಬೇಕು ಎಂದು ಇಲ್ಲಿನ ಜನರ ಒಕ್ಕೊರಲ ಆಗ್ರಹ.
ಕಳಿಯ ಗ್ರಾ.ಪಂ. ವ್ಯಾಪ್ತಿಯಲ್ಲಿ ನೀರಿನ ಸಂಪರ್ಕ ಇರುವ ಕಡೆ ನೀರಿನ ಸಮಸ್ಯೆ ಕುರಿತು ಹಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಕ್ರಮಕೈಗೊಳ್ಳುವಂತೆ ಪಂಚಾಯತ್ ವತಿಯಿಂದ ಈ ಹಿಂದೆಯೇ ಮನವಿ ಮಾಡಲಾಗಿತ್ತು. ಈಗಾಗಲೇ ಟಾಸ್ಕ್ಫೋರ್ಸ್ ವತಿಯಿಂದ ಬೆಳಿಬೈಲು ಹಾಗೂ ರಕ್ತೇಶ್ವರಿಪದವು ಎಂಬಲ್ಲಿಗೆ ಬೋರ್‌ವೆಲ್ ಮಂಜೂರಾಗಿದೆ. ಆದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಪರವಾನಿಗೆ ಸಿಕ್ಕಿದ ಕೂಡಲೇ ಬೋರ್‌ವೆಲ್ ತೆಗೆಸುವ ಕಾರ್ಯ ಮಾಡಲಾಗುವುದು ಎಂದು ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಬೋರ್‌ವೆಲ್ ಆಶ್ರಯ “ಅಕ್ಕಪಕ್ಕದವರ ಖಾಸಗಿ ಜಮೀನಿನಲ್ಲಿರುವ ಬೋರ್‌ವೆಲ್‌ನಿಂದ ನೀರು ಪಡೆಯುತ್ತಿದ್ದೇವೆ. ಕರೆಂಟ್ ಇದ್ದರೆ ನೀರು ಸಿಗುತ್ತದೆ. ಇಲ್ಲದಿದ್ದರೆ ಅದೂ ಇಲ್ಲ. ಕೆಲವೊಮ್ಮೆ ವಾಹನದಲ್ಲಿ ನೀರನ್ನು ತರುತ್ತೇವೆ. ಏ.10ರಬಳಿಕ ಮಕ್ಕಳನ್ನು ನೆಂಟರ ಮನೆಗೆ ಕಳುಹಿಸುವ ಪರಿಸ್ಥಿತಿ ಬಂದೊದಗಿದೆ. ಶೀಘ್ರ ಶಾಶ್ವತ ಪರಿಹಾರ ಬೇಕಿದೆ’ ಎಂದು ಜನ ತಮ್ಮ ಕಷ್ಟ ವಿವರಿಸಿದ್ದಾರೆ.
ಉಪವಾಸ ಧರಣಿ
ಇಲ್ಲಿನ ಜನರಿಗೆ ಬೆಂಬಲವಾಗಿ ಬೆಳ್ತಂಗಡಿ ತಾಲೂಕು ಹಸಿರು ಸೇನೆ ರೈತ ಸಂಘದಿಂದಲೂ ಹೋರಾಟ ಮಾಡುತ್ತೇವೆ. ಕುಡಿಯುವ ನೀರಿಗಾಗಿ ತಾ.ಪಂ. ಕಚೇರಿ ಎದುರು ಉಪವಾಸ ಧರಣಿ ಮಾಡಲು ಸಿದ್ಧರಿದ್ದೇವೆ.
-ಕೇಶವ ಪೂಜಾರಿ ಬೆಳ್ತಂಗಡಿ ತಾಲೂಕು ಹಸಿರು ಸೇನೆ ರೈತ ಸಂಘ ಅಧ್ಯಕ್ಷ
ರೂಪುರೇಷೆ ಸಿದ್ಧ
ಎತ್ತರ ಪ್ರದೇಶವಾದ್ದರಿಂದ ಪೈಪ್‌ಲೈನ್ ಮೂಲಕ ನೀರು ಹಾಯಿಸಲು ಸಮಸ್ಯೆಯಾಗಿದೆ. ಟಾಸ್ಕ್ಫೋರ್ಸ್‌ನಿಂದ ಹೊಸ ಬೋರ್‌ವೆಲ್‌ಗೆ ಮನವಿ ಸಲ್ಲಿಸಿದ್ದು, ಅನುಮತಿ ಸಿಕ್ಕಿದಲ್ಲಿ ಬೋರ್‌ವೆಲ್ ಕೊರೆಸಲಾಗುವುದು. ಇದರಿಂದ ಸ್ಥಳೀಯ ಬಿಳಿಬೈಲು, ತಿಮ್ಮನೊಟ್ಟು, ನಾಳ ವರೆಗೆ 30 ಮನೆಗಳಿಗೆ ನೀರು ಒದಗಿಸಲು ಈಗಾಗಲೇ ರೂಪುರೇಷೆ ಸಿದ್ಧಪಡಿಸಲಾಗಿದೆ.
-ಸಂತೋಷ ಪಾಟೀಲ ಪಿಡಿಒ, ಕಳಿಯ ಗ್ರಾ.ಪಂ.
ಸಂಪರ್ಕ ಇದ್ದರೂ ನೀರು ಬರುತ್ತಿಲ್ಲ
ನೀರಿಗೆ ಖಾಸಗಿಯವರ ಬೋರ್‌ವೆಲ್ ಅವಲಂಬಿಸಿದ್ದೇವೆ. 20ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗುತ್ತಾರೆ. ರಜೆಯ ಸಮಯದಲ್ಲಿ ನೀರಿಲ್ಲದಿದ್ದರೆ ನಾವೇನು ಮಾಡುವುದು ಎಂಬ ಚಿಂತೆಯಾಗಿದೆ. ಕುಡಿಯುವ ನೀರಿಗಾಗಿ ನಾವು ಸಂಬಂಧಪಟ್ಟವರಿಗೆ ಮನವಿ ಮಾಡಿದ್ದೇವೆ. ನೀರಿನ ಸಂಪರ್ಕ ಇದ್ದರೂ, ನೀರು ಬರುತ್ತಿಲ್ಲ.
-ಶೀನ ಪಂಚಮಲಕೋಡಿ ಸ್ಥಳೀಯ ನಿವಾಸಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.