ಕುಡಿವ ನೀರಿಲ್ಲದೆ ಕಂಗೆಟ್ಟಿದೆ ಕರಾಯ ಎಸ್ಸಿ ಕಾಲನಿ
ಒಂದೂವರೆ ತಿಂಗಳಿಂದ ಹನಿ ನೀರಿಗಾಗಿ ನಿವಾಸಿಗಳ ಬವಣೆ
Team Udayavani, Apr 3, 2019, 12:42 PM IST
ಖಾಸಗಿ ವಾಹನದಲ್ಲಿ ನೀರು ಪೂರೈಕೆ
ಉಪ್ಪಿನಂಗಡಿ : ಬಿಸಿಲ ಬೇಗೆಯ ಕಾವು ಏರುತ್ತಿದ್ದಂತೆಯೇ ಅಂತರ್ಜಲ ಬತ್ತಿಹೋಗಿ ಹಲವೆಡೆ ನೀರಿಗಾಗಿ ಜನ ಬವಣೆಪಡುತ್ತಿದ್ದು, ಬೆಳ್ತಂಗಡಿ ತಾಲೂಕು ಕರಾಯ ಗ್ರಾಮದ ಎಸ್ಸಿ ಕಾಲನಿಗೆ ನೀರು ಸರಬರಾಜು ಮಾಡಲಾಗುತ್ತಿದ್ದ ಕೊಳವೆ ಬಾವಿಯಲ್ಲಿ ನೀರಿನ ಕೊರತೆ ಕಾಣಿಸಿಕೊಂಡ ಕಾರಣ ಅಲ್ಲಿನ ಜನ ನೀರಿಗಾಗಿ ಅಲೆದಾಡುವಂತಾಗಿದೆ.
ಸುಮಾರು 11 ಮನೆಗಳಿರುವ ಈ ಕಾಲನಿಯ ಜನ ಒಂದು ತೊಟ್ಟು ಕುಡಿಯುವ ನೀರಿಗಾಗಿ ಒಂದು ಕಿ.ಮೀ. ದೂರ ಅಲೆದಾಡುವ ದುಃಸ್ಥಿತಿ ಬಂದೊದಗಿದೆ. ಕುಡಿಯಲು ನೀರು ಕೊಡಿ ಎಂದು ಅದೆಷ್ಟೇ ಗೋಗರೆದರೂ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪಂಚಾಯತ್ ಆಡಳಿತದಿಂದ ಸಕಾರಾತ್ಮಕ ಪ್ರಯತ್ನ ನಡೆಯಲಿಲ್ಲ.
ಒಂದೆಡೆ ಮನೆಯ ಮಕ್ಕಳು ಪರೀಕ್ಷೆಯ ಒತ್ತಡದಲ್ಲಿದ್ದರೆ, ಇನ್ನೊಂದೆಡೆ ಕುಡಿಯಲು ನೀರಿಲ್ಲದ ಸಂಕಷ್ಟಮಯ ಸ್ಥಿತಿ ಈ ಕಾಲನಿಯ ಜನರದ್ದಾಗಿದೆ. ಈ ಸಮಸ್ಯೆ ಸತತ ಒಂದೂವರೆ ತಿಂಗಳಿಂದ ಬಾಧಿಸುತ್ತಿದ್ದರೂ ಆಡಳಿತ ವ್ಯವಸ್ಥೆ ಮಾತ್ರ ಇವರನ್ನು ನಮ್ಮವರೆಂದು ಪರಿಗಣಿಸದೆ ಮೌನವಾಗಿದೆ.
ನೀರಿನ ಸಮಸ್ಯೆ ತಾರಕಕ್ಕೇರಿದಾಗ ಕಂಗೆಟ್ಟ ಅಲ್ಲಿನ ಒಂದಷ್ಟು ಸ್ಥಿತಿವಂತ ನಿವಾಸಿಗರು ಇದೀಗ ಕುಡಿಯುವ ನೀರಿಗಾಗಿ ಗೂಡ್ಸ್ ರಿಕ್ಷಾ ನಿಗದಿಪಡಿಸಿಕೊಂಡು ದೂರ ದೂರದಿಂದ ನೀರನ್ನು ಸಂಗ್ರಹಿಸಿಕೊಂಡು ಮನೆಗೆ ನೀರಿನ ಲಭ್ಯತೆಯನ್ನು ಒದಗಿಸಿದ್ದಾರೆ. ಬಡವರು ಕಂಡ ಕಂಡಲ್ಲಿಗೆ ಅಲೆದಾಡಿ ಕೊಡದಲ್ಲಿ ನೀರನ್ನು ಹೊತ್ತೂಯ್ಯುತ್ತಿರುವ ದೃಶ್ಯ ಕರುಣಾಜನಕವಾಗಿದೆ.
ಉಪೇಕ್ಷಿತ ಸಮಾಜದ ಮಂದಿಗೆ ಸರಕಾರದಿಂದ ಹಲವಾರು ಯೋಜನೆಗಳು ಜಾರಿಯಲ್ಲಿದ್ದರೂ ಪಂಚಾಯತ್ ಆಡಳಿತ ಅವರಿಗಾಗಿ ಮೊದಲ ಆದ್ಯತೆಯಲ್ಲಿ ಮೂಲಸೌಕರ್ಯವನ್ನು ಕಲ್ಪಿಸಬೇಕೆಂದು ತನ್ನ ಆದಾಯದ ಶೇ. 25 ನಿಧಿಯನ್ನು ಅವರಿಗಾಗಿಯೇ ವಿನಿಯೋಗಿಸಬೇಕೆಂಬ ನಿಯಮವಿದ್ದರೂ ಅದು ಪಾಲನೆಯಾಗುತ್ತಿಲ್ಲ ಎಂಬುದಕ್ಕೆ ಎಸ್ಸಿ ಕಾಲನಿಯ ಸದ್ಯದ ಸ್ಥಿತಿಯೇ ನಿದರ್ಶನ.
ನಮ್ಮ ಬವಣೆ ಕೇಳುವವರಿಲ್ಲ
ಒಂದೂವರೆ ತಿಂಗಳಿಂದ ಕುಡಿಯಲೂ ನೀರಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕರಾಯ ಗ್ರಾಮದ ಪಡ್ಡಾಯಿಬೆಟ್ಟು ಕಾಲನಿಯ ನಿವಾಸಿಗರಾದ ನಮ್ಮ ಬಗ್ಗೆ ಆಡಳಿತ ವ್ಯವಸ್ಥೆ ನಿರ್ಲಕ್ಷ್ಯ ವಹಿಸಿದೆ. ಇಲ್ಲಿ ನೀರು ಮಾತ್ರವಲ್ಲ, ದಾರಿದೀಪವೂ ಇಲ್ಲ, ರಸ್ತೆಯೂ ಸಮರ್ಪಕವಾಗಿಲ್ಲ. ನಮ್ಮ ಬೇಡಿಕೆಗಳಿಗೆಲ್ಲ ಭರವಸೆಯೇ ಲಭಿಸುವುದು ವಿನಾ ಸ್ಪಂದನೆ ದೊರೆಯುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಂಗಾ ಕಲ್ಯಾಣ ಅನುಷ್ಠಾನದಲ್ಲಿತು
ಕಾಲನಿಯ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ, ಸಮಸ್ಯೆಇದೆ ಎನ್ನಲಾದ ಕಾಲನಿಗೆ ಗಂಗಾ ಕಲ್ಯಾಣ ಯೋಜನೆಯಡಿ ಪ್ರತ್ಯೇಕ ನೀರಿನ ಸರಬರಾಜು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇದೀಗ ನೀರು ಬತ್ತಿ ಹೋಗಿ ಸಮಸ್ಯೆ ಉದ್ಭವಿಸಿರುವ ಬಗ್ಗೆ ಪಂಚಾಯತ್ ಆಡಳಿತಕ್ಕೆ ದೂರು ಬಂದಿಲ್ಲ. ಸಮಸ್ಯೆ ಬಗೆಹರಿಸುವಲ್ಲಿ
ಗಮನ ಹರಿಸಲಾಗುವುದೆಂದು ತಿಳಿಸಿದ್ದಾರೆ.
ಎಂ.ಎಸ್. ಭಟ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.