ಕಂಡ ಕಂಡ ಮಾತ್ರೆ ಸೇವನೆ ಇರಲಿ ಎಚ್ಚರ!
Team Udayavani, Sep 17, 2019, 5:30 AM IST
ಸಣ್ಣಕ್ಕೆ ತಲೆನೋವಾಗುತ್ತಿದೆ. ಹೊಟ್ಟೆ ನೋವಾಗುತ್ತಿದೆ ಎಂದಾಗ ಜನರು ಮೊರೆಹೋಗುವುದು ಮನೆಮದ್ದುಗಳಿಗಲ್ಲ ಬದಲಾಗಿ ಆ್ಯಂಟಿ ಬಯೋಟಿಕ್‌ಗಳೆಂಬ ಕ್ಷಣಮಾತ್ರದಲ್ಲೇ ನೋವು ಶಮನಕಾರಿಗಳತ್ತ. ಈ ಆ್ಯಂಟಿ ಬಯೋಟಿಕ್‌ಗಳು ಆ ಕ್ಷಣದ ನೋವನ್ನು ನಿವಾರಿಸಬಹುದು. ಆದರೆ ದೀರ್ಘಕಾಲೀಕ ಸಮಸ್ಯೆಗಳನ್ನು ತಂದೊಡ್ಡುವ ಅಪಾಯಗಳು ಹೆಚ್ಚು. ಹೀಗಾಗಿ ಕಂಡ ಕಂಡ ಮಾತ್ರೆಗಳನ್ನು ಸೇವಿಸುವ ಮುನ್ನ ಎಚ್ಚರವಿರಲಿ. ವೈದ್ಯರ ಸಲಹೆಯ ಮೇರೆಗೆ ಮಾತ್ರೆಗಳನ್ನು ಸೇವಿಸುವ ಅಭ್ಯಾಸ ಬೆಳೆಸಿಕೊಳ್ಳಿ
ಸಣ್ಣದಾಗಿ ತಲೆನೋವು ಇರಲಿ, ಸ್ವಲ್ಪ ಜ್ವರ ಇರಲಿ ತತ್‌ಕ್ಷಣ ಉಪಶಮನ ಆಗಬೇಕು ಎಂಬ ಉದ್ದೇಶಕ್ಕೆ ಅನೇಕರು ಆ್ಯಂಟಿ ಬಯೋಟಿಕ್ ಔಷಧಗಳನ್ನು ಸೇವಿಸುತ್ತಾರೆ. ರೋಗವೇನೋ ಕೆಲವೇ ಸಮಯದಲ್ಲಿ ವಾಸಿಯಾಗುತ್ತದೆ. ಆದರೆ, ಆ್ಯಂಟಿ ಬಯೋಟಿಕ್‌ಗಳು ಮಾನವನ ಜೀವಕ್ಕೆ ಅಪಾಯಕಾರಿ ಎಂಬ ಅಂಶವನ್ನು ಹೆಚ್ಚಿನ ಮಂದಿ ಗಮನಿಸುತ್ತಿಲ್ಲ.
ಆಯುರ್ವೇದ, ಹೋಮಿಯೋಪತಿ, ಪ್ರಕೃತಿಚಿಕಿತ್ಸೆ ಇವುಗಳಿಗೆ ಹೋಲಿಕೆ ಮಾಡಿದರೆ ದೇಶದಲ್ಲಿಯೇ ಆ್ಯಂಟಿ ಬಯೋಟಿಕ್ ಮಾತ್ರೆಗಳಿಗೆ ಬೇಡಿಕೆ ಹೆಚ್ಚು. ಈ ಮಾತ್ರೆಗಳನ್ನು ವೈದ್ಯರ ಸೂಚನೆಯ ಮೇರೆಗೆ ಈ ಮಾತ್ರೆಗಳನ್ನು ಸೇವಿಸಬೇಕು. ರೋಗ ಬೇಗ ಗುಣವಾಗಬೇಕು ಎಂಬ ಉದ್ದೇಶದಿಂದ ಹೆಚ್ಚಿನ ಡೋಸ್ ಮಾತ್ರೆ ಸೇವಿಸಿದರೆ ಅದರಿಂದಾಗಿ ಅಡ್ಡಪರಿಣಾಮವಾಗಿ ಬೇರೊಂದು ರೋಗಕ್ಕೆ ಕಾರಣವಾಗಬಹುದು. ಆ್ಯಂಟಿ ಬಯೋಟಿಕ್ ಔಷಧವನ್ನು ಸೇವನೆ ಮಾಡುವಾಗ ಅನೇಕ ಮಂದಿ ಆ ಮಾತ್ರೆ ಗಡುವು ಕಳೆದಿದಿಯೇ ಎಂಬುವುದಾಗಿ ಪರಿಶೀಲನೆ ಮಾಡುವುದಿಲ್ಲ. ಮನೆಯಲ್ಲಿ ಯಾವುದೋ ರೋಗಕ್ಕೆ ತಂದ ಮಾತ್ರೆ ಉಳಿದುಕೊಂಡರೆ ಅದೆಷ್ಟೋ ತಿಂಗಳ ಬಳಿಕ ಅದನ್ನು ಸೇವನೆ ಮಾಡುವ ಮಂದಿ ಕೂಡ ಇದ್ದಾರೆ. ಈ ರೀತಿ ಮಾಡುವುದು ಸರಿಯಲ್ಲ. ಇದರಿಂದ ಬೇರೊಂದು ರೋಗಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ.
ಆ್ಯಂಟಿ ಬಯೋಟಿಕ್ ಗುಳಿಗೆ ಮಾತ್ರವಲ್ಲ ಚುಚ್ಚುಮದ್ದು ಕೂಡ ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ. ಅದರಲ್ಲಿಯೂ ಮಕ್ಕಳಿಗೆ ಹೆಚ್ಚಾಗಿ ಆ್ಯಂಟಿ ಬಯೋಟಿಕ್ ಮಾತ್ರೆಗಳನ್ನು ನೀಡಬಾರದು. ಕೆಲವೊಂದು ವರದಿಗಳ ಪ್ರಕಾರ ಹೆಚ್ಚಿನ ಮಾತ್ರೆ ಸೇವನೆಯಿಂದ ಮಕ್ಕಳಲ್ಲಿ ಸಂಧಿವಾತ ರೋಗ ಕಾಣಿಸಿಕೊಳ್ಳುತ್ತದೆ.
ಆ್ಯಂಟಿ ಬಯೋಟಿಕ್ ಔಷಧಿಗಳ ಬಳಕೆಯಿಂದ ಉಂಟಾಗುವ ದುಷ್ಪರಿಣಾಮ, ಅದರ ಬಳಕೆ ಮತ್ತಿತರ ವಿಷಯಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಜಾಗೃತಿ ಸಪ್ತಾಹವನ್ನು ಭಾರತೀಯ ಮಕ್ಕಳ ವೈದ್ಯರ ಸಂಘ ಸೇರಿದಂತೆ ಇನ್ನಿತರ ವೈದ್ಯಕೀಯ ಸಂಘಟನೆಗಳು ಪ್ರತೀ ವರ್ಷ ಮಾಡುತ್ತಿವೆ. ಶಾಲಾ-ಕಾಲೇಜುಗಳಿಗೆ ತೆರಳಿ ವಿಶೇಷ ಉಪನ್ಯಾಸ ಸೇರಿದಂತೆ ವಿವಿಧ ಉಪನ್ಯಾಸಗಳನ್ನು ಆಯೋಜನೆ ಮಾಡಲಾಗುತ್ತಿದೆ.
ಹೆಚ್ಚಿನ ರೋಗಕ್ಕೆ ಮನೆಯಲ್ಲಿದೆ ಮದ್ದು
ಸಣ್ಣ ಪುಟ್ಟ ರೋಗಕ್ಕೆ ಆ್ಯಂಟಿ ಬಯೋಟಿಕ್ ಔಷಧಿಗಳನ್ನು ಸೇವೆನೆ ಮಾಡಬಾರದು. ಅದರ ಬದಲು ಮನೆ ಮದ್ದು ಮಾಡುವುದು ಒಳಿತು. ಅದರಲ್ಲಿಯೂ ಮುಖ್ಯವಾಗಿ ಬೆಳ್ಳುಳ್ಳಿಗೆ ಹೆಚ್ಚಿನ ರೋಗ ನಿರೋಧಕ ಶಕ್ತಿ ಇದೆ. ಇದರಿಂದ ಅಸ್ತಮಾ, ಶೀತ-ಕೆಮ್ಮು, ಅಲರ್ಜಿಗಳನ್ನು ನಿವಾರಿಸುತ್ತದೆ. ಸುಟ್ಟ ಗಾಯ, ಚರ್ಮದ ತೊಂದರೆಗೆ ಜೇನುತುಪ್ಪ ಬಳಕೆ ಮಾಡಬಹುದು. ಇನ್ನು, ರಕ್ತದೊತ್ತಡ, ನಿಶ್ಯಕ್ತಿಗೆ ಶುಂಠಿ ಒಳ್ಳೆಯ ಔಷಧಿ.
ಆ್ಯಂಟಿ ಬಯೋಟಿಕ್ ಬಳಕೆ ಹೆಚ್ಚಳ
ಅಂಕಿ ಅಂಶವೊಂದರ ಪ್ರಕಾರ ಅಮೆರಿಕಾ ದೇಶದಲ್ಲಿ ಅತೀ ಹೆಚ್ಚು ಮಂದಿ ಆ್ಯಂಟಿ ಬಯೋಟಿಕ್ ಸೋಂಕಿನಿಂದ ಬಳಲುತ್ತಿದ್ದಾರೆ. ವರ್ಷಕ್ಕೆ 2 ಮಿಲಿಯನ್ ಮಂದಿಗೆ ಸೋಂಕು ತಗುಲುತ್ತಿದ್ದು, ಸುಮಾರು 23,000 ದಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ಭಾರತದಲ್ಲಿಯೂ ಹೆಚ್ಚಿನ ಮಂದಿ ಆ್ಯಂಟಿ ಬಯೋಟಿಕ್ ಬಳಕೆ ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷವೊಂದರಲ್ಲಿ ಪ್ರತಿಯೊಬ್ಬ ಭಾರತೀಯ 11 ಆ್ಯಂಟಿ ಬಯೋಟಿಕ್ ಔಷಧವನ್ನು ಸೇವನೆ ಮಾಡುತ್ತಾನೆ ಎಂದು ತಿಳಿದು ಬಂದಿದೆ.
ಎಚ್ಚರ ತಪ್ಪಿದರೆ ಅಪಾಯ
· ಆ್ಯಂಟಿ ಬಯೋಟಿಕ್ ಔಷಧ ಸೇವಿಸದೆ ಕಾಯಿಲೆ ಗುಣಪಡಿಸಬಹುದೇ ಎಂದು ವೈದ್ಯರ ಬಳಿ ಸಲಹೆ ಪಡೆಯಿರಿ
· ಆ್ಯಂಟಿ ಬಯೋಟಿಕ್ ಔಷಧ ಬಳಕೆ ಮಾಡಿಯೇ ರೋಗ ಗುಣಪಡಿಸಿ ಎಂಬ ವೈದ್ಯರ ಬಳಿ ಒತ್ತಾಯ ಮಾಡಬೇಡಿ
· ಇನ್ನೊಬ್ಬರ ರೋಗಕ್ಕೆ ನೀಡಿದ ಔಷಧವನ್ನು ಸೇವನೆ ಮಾಡಬೇಡಿ
· ಸಾಮಾನ್ಯ ಕೆಮ್ಮು, ಜ್ವರ, ಶೀತಕ್ಕೆ ಆ್ಯಂಟಿ ಬಯೋಟಿಕ್ ಔಷಧದ ಅಗತ್ಯ ಇರುವುದಿಲ್ಲ
· ವೈದ್ಯರು ಸೂಚಿಸಿದ ಸಮಯದಲ್ಲಿ ಸೂಚಿಸಿದ ಪ್ರಮಾಣದಲ್ಲಿ ಮಾತ್ರೆಗಳನ್ನು ಸೇವಿಸಿ
ವೈದ್ಯರ ಅನುಮತಿ ಪಡೆಯಿರಿ
ಯಾವುದೇ ಸೋಂಕುಗಳಿಗೆ ವೈದ್ಯರ ಅನುಮತಿ ಇಲ್ಲದೆ ಆ್ಯಂಟಿ ಬಯೋಟಿಕ್ ಔಷಧಿ ಸೇವನೆ ಮಾಡುವುದು ಅಪಾಯಕಾರಿ. ಸಣ್ಣ ಪುಟ್ಟ ರೋಗಕ್ಕೆ ಮಾತ್ರೆಗಳ ಆವಶ್ಯಕತೆ ಇಲ್ಲ. ಏಕೆಂದರೆ ಅದಕ್ಕೆ ಪ್ರತಿರೋಧ ಒಡ್ಡಬಲ್ಲ ಔಷಧ ನಮ್ಮ ದೇಹದಲ್ಲಿಯೇ ಇರುತ್ತದೆ. ಹೆಚ್ಚಾಗಿ ಆ್ಯಂಟಿ ಬಯೋಟಿಕ್ ಔಷಧ ಸೇವೆನೆ ಮಾಡಿದರೆ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ.
– ಡಾ| ಮುರಲೀ ಮೋಹನ್ ಚೂಂತಾರು, ವೈದ್ಯರು
- ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.