ಹಿತಮಿತವಾಗಿರಲಿ ಮೇಕಪ್
Team Udayavani, Mar 5, 2019, 5:05 AM IST
ಚರ್ಮದ ರಕ್ಷಣೆ, ಆರೋಗ್ಯದ ಹಿತದೃಷ್ಟಿಯಿಂದ ನೈಸರ್ಗಿಕ ವಿಧಾನದ ಮೇಕಪ್ ಉತ್ತಮ ಎನ್ನುವುದು ತಜ್ಞರ ಅಭಿಪ್ರಾಯ. ಮೇಕಪ್ ಮಾಡುವ ಮುಂಚೆ ಹಾಗೂ ತೆಗೆಯುವ ವಿಧಾನದ ಬಗ್ಗೆ ಪರಿಪೂರ್ಣ ಅರಿವಿನ ಜತೆಗೆ ಚರ್ಮದ ಬಗ್ಗೆ ಕಾಳಜಿಯೂ ಅತ್ಯಗತ್ಯ. ಇಲ್ಲವಾದರೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಇದು ಕಾರಣವಾಗುವುದು.
ಮೇಕಪ್ ಅಂದರೆ ಯಾರಿಗೆ ಇಷ್ಟ ಇರುವುದಿಲ್ಲ. ಹೆಣ್ಣು ಮಕ್ಕಳ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿರುವ ಈ ಮೇಕಪ್ ಮಾಡಿಕೊಳ್ಳುವುದು ಪುಟಾಣಿ ಮಕ್ಕಳಿಂದ ಹಿಡಿದು ವಯಸ್ಕರವರಗೆ ಎಲ್ಲರಿಗೂ ಅಚ್ಚುಮೆಚ್ಚು. ಅಂದ ಇನ್ನಷ್ಟು ಹೆಚ್ಚಬೇಕು, ಚೆನ್ನಾಗಿ ಕಾಣಬೇಕು, ಬಿಳಿ, ಕೆಂಪು, ಪಿಂಕ್ ವರ್ಣದಲ್ಲಿ ಮುಖ, ತುಟಿಯನ್ನು ಹೊಳೆಯುವಂತೆ ಮಾಡಬೇಕು ಎಂಬ ಅತಿಯಾದ ಬಯಕೆ ಮುಖದ ಮೇಲೆ ಬಣ್ಣ ಬಳಿದುಕೊಳ್ಳುವಂತೆ ಪ್ರೇರೇಪಿಸುತ್ತದೆ. ಕೆಲವರು ಯಾವಾಗಲಾದರೊಮ್ಮೆ ಸಮಾರಂಭಗಳಿಗೆ ತೆರಳುವಾಗ ಮೇಕಪ್ ಮಾಡಿಕೊಂಡರೆ ಇನ್ನು ಕೆಲವರಿಗೆ ದಿನನಿತ್ಯ ಕಚೇರಿಗೆ, ಕಾಲೇಜಿಗೆ ತೆರಳುವಾಗ ಮೇಕಪ್ ಮಾಡಿಕೊಂಡೇ ಹೋಗುವ ಅಭ್ಯಾಸವಿದೆ. ಏನಿಲ್ಲವೆಂದರೂ, ತುಟಿಗೊಂದಿಷ್ಟು ಲಿಪ್‌ಸ್ಟಿಕ್ ಹಾಕಿಕೊಳ್ಳದಿದ್ದರೆ ದಿನವೇ ಅಪೂರ್ಣವೆಂಬಂತೆ.
ಚೆನ್ನಾಗಿ ಕಾಣಬೇಕು ಎಂಬ ಬಯಕೆಯಿಂದಾಗಿ ಅತಿಯಾಗಿ ಮೇಕಪ್ ಮಾಡಿಕೊಳ್ಳುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಯಾವಾಗಲಾದರೊಮ್ಮೆ ಮೇಕಪ್ ಮಾಡುವಾಗಲೂ ಬಹಳಷ್ಟು ಎಚ್ಚರಿಕೆ ವಹಿಸಬೇಕು ಎನ್ನುತ್ತಾರೆ ತಜ್ಞ ವೈದ್ಯರು. ಕೆಲವೊಮ್ಮೆ ಮುಖಕ್ಕೆ ಫೌಂಡೇಶನ್ ಅಥವಾ ಇತರ ಕ್ರೀಂ ಹಚ್ಚುವಾಗ ತಣ್ಣೀರಿನಲ್ಲಿ ಮುಖವನ್ನು ಸರಿಯಾಗಿ ತೊಳೆದು ಒಣಗಿಸಿ ಹಾಕದೇ, ನೇರವಾಗಿ ಹಾಕುವುದರಿಂದ ಮುಖದ ಮೇಲಿನ ಮಣ್ಣು ಬೆರೆತು ಕಜ್ಜಿಗಳಾಗುವ ಸಾಧ್ಯತೆಗಳಿವೆ. ಇದು ಮುಖ ತೊಳೆಯದೆ ಹಾಕುವವರ ಕಥೆಯಾದರೆ, ಕೆಲವು ಮುಖಗಳಿಗೆ ಮೇಕಪ್ ಹೊಂದಿಕೊಳ್ಳುವುದೂ ಇಲ್ಲ. ಕ್ಷಣಿಕ ಸೌಂದರ್ಯದ ಆಸೆಗೆ ಕಟ್ಟುಬಿದ್ದು, ಜೀವನಪೂರ್ತಿ ಮುಖದಲ್ಲಿ ಕಜ್ಜಿ ಹೊತ್ತು ತಿರುಗಬೇಕಾದ ಅನಿವಾರ್ಯತೆಯು ಎದುರಾಗುತ್ತದೆ.
ಚರ್ಮದ ಸಮಸ್ಯೆ
ಸೌಂದರ್ಯ ಹೆಚ್ಚಿಸಲು ಮೇಕಪ್ ಸಹಕಾರಿ ಎಂಬುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಇದರಲ್ಲಿ ಹೆಚ್ಚುವುದು ಒಂದು ಹೊತ್ತಿನ ಸೌಂದರ್ಯವಷ್ಟೇ. ಪ್ರತಿನಿತ್ಯ ಮೇಕಪ್ ಮಾಡಿಕೊಂಡರೆ ಅದರಿಂದ ಚರ್ಮದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮುಖದ ಪ್ರೈಮರ್‌ನ್ನು ದಿನನಿತ್ಯ ಬಳಕೆ ಮಾಡುವುದರಿಂದ ಮೊಡವೆಗಳು ಉಂಟಾಗುವ ಸಾಧ್ಯತೆ ಇದೆ. ಕಣ್ಣುಗಳಿಗೆ ಹೊಳಪು ನೀಡುವ ವಾಟರ್ ಪ್ರೂಫ್ ಮಸ್ಕಾರಗಳನ್ನು ನಿರಂತರ ಬಳಕೆ ಮಾಡಿದರೆ, ಕಣ್ಣಿನ ರೆಪ್ಪೆಗಳೇ ಒಣಗಿ ಹೋಗುವ ಸಾಧ್ಯತೆ ಇದೆ. ಇದೇ ರೀತಿ ಹೊಳೆಯುವ ಮೈಕಾಂತಿಗಾಗಿ,
ಕಾಂತಿಭರಿತ ಮುಖಕ್ಕಾಗಿ ಹಚ್ಚುವ ಎಲ್ಲ ಕ್ರೀಮ್‌ಗಳು ಕೂಡ ಮುಖದ ಚರ್ಮದ ಮೇಲೆ ದುಷ್ಪರಿಣಾಮ ಬೀರುತ್ತವೆೆ. ಚರ್ಮ ಸುಕ್ಕುಗಟ್ಟುವುದು, ಚರ್ಮ ಒಣಗುವುದು, ಸಣ್ಣ ಕಜ್ಜಿಗಳು, ಮೊಡವೆಗಳು ಬೀಳುವುದು ಸಾಮಾನ್ಯವಾಗಿ ದಿನನಿತ್ಯ ಮೇಕಪ್ ಬಳಸುವುದರ ಪರಿಣಾಮವಾಗಿರುತ್ತದೆ.
ಅಲ್ಲದೆ, ಒಂದು ಹೊತ್ತಿನ ಸೌಂದರ್ಯಕ್ಕೆ ಮರುಳಾಗಿ, ಶಾಶ್ವತವಾಗಿ ತ್ವಚೆಯ ಸೌಂದರ್ಯವನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವುದು ಸರ್ವವಿಧಿತ ಎನ್ನುತ್ತಾರೆ ವೈದ್ಯರು. ಯಾವುದೇ ಕ್ರೀಮ್ ಅನ್ನು ಪ್ರತಿದಿನ ಬಳಸುವುದಕ್ಕಿಂತ ಅಪರೂಪಕ್ಕೊಮ್ಮೊಮ್ಮೆ ಬಳಕೆ ಮಾಡಬಹುದು. ಹಾಗೆ ಬಳಸುವಾಗಲೂ ಮುಖದಲ್ಲಿ ಮೊಡವೆ ಕಾಣಿಸಿಕೊಂಡಲ್ಲಿ ಕ್ರೀಮ್ ಹಚ್ಚಿಕೊಳ್ಳದಿರುವುದೇ ಒಳಿತು ಎಂಬುದು ವೈದ್ಯರ ಅಭಿಮತ.
ಲಿಪ್‌ಸ್ಟಿಕ್‌ನಿಂದ ಒಣ ತುಟಿ
ಬಹುತೇಕ ಯುವತಿಯರಿಗೆ ಲಿಪ್‌ಸ್ಟಿಕ್ ಹಾಕದಿದ್ದರೆ, ಏನೋ ಒಂದು ಕಳೆದುಕೊಂಡಂತೆಯೇ. ಅದಕ್ಕಾಗಿ ದಿನಂಪ್ರತಿ ತುಟಿಗೆ ದಪ್ಪನೆ ಲಿಪ್‌ಸ್ಟಿಕ್ ಹಚ್ಚಿಕೊಳ್ಳುವುದನ್ನು ಕಾಣಬಹುದು. ಆದರೆ ನಿರಂತರವಾಗಿ ತುಟಿಗೆ ಲಿಪ್‌ಸ್ಟಿಕ್ ಹಚ್ಚಿಕೊಳ್ಳುವುದರಿಂದ ತುಟಿಯ ಸೌಂದರ್ಯವನ್ನು ಶಾಶ್ವತವಾಗಿ ಕಳೆದುಕೊಳ್ಳಬೇಕಾಗಬಹುದು ಎನ್ನುತ್ತಾರೆ ವೈದ್ಯರು. ತುಟಿ ಒಣಗುವುದು, ತುಟಿಯ ಚರ್ಮ ಏಳುವುದು, ತುಟಿ ಕಪ್ಪಾಗುವುದು ಮುಂತಾದ ಸಮಸ್ಯೆಗಳು ಇದರಿಂದ ಉಂಟಾಗುತ್ತದೆ. ಆಗೊಮ್ಮೆ ಈಗೊಮ್ಮೆ ಹದವಾಗಿ ಲಿಪ್‌ಸ್ಟಿಕ್ ಹಚ್ಚಿಕೊಳ್ಳಬಹುದು.
ಸರಿಯಾಗಿ ಗಮನಿಸಿಕೊಳ್ಳಿ
ಯಾವುದೇ ಒಂದು ವಸ್ತುವನ್ನು ಉಪಯೋಗಿಸಲು ನಿರ್ದಿಷ್ಟ ಸಮಯದ ಮಿತಿ ಇರುತ್ತದೆ. ಹಾಗೆಯೇ ಮೇಕಪ್ ಸಾಮಗ್ರಿಗಳಿಗೂ ಕೂಡ. ಅದಕ್ಕೆ ನೀಡಿರುವ ಅವಧಿ ಮುಗಿದ ಅನಂತರ ಯಾವುದೇ ಕಾರಣಕ್ಕೂ ಅದನ್ನು ಹಚ್ಚಿಕೊಳ್ಳಬೇಡಿ. ಅವಧಿ ಮುಗಿದ ಮೇಕಪ್ ಸಾಮಗ್ರಿಗಳನ್ನು ಹಚ್ಚಿಕೊಂಡರೆ ಚರ್ಮ ಅಂದಗೆಡುವುದರಲ್ಲಿ ಎರಡು ಮಾತಿಲ್ಲ.
ನೈಸರ್ಗಿಕ ವಿಧಾನ ಉತ್ತಮ
ರಾಸಾಯನಿಕ ಮಿಶ್ರಿತ ಸೌಂದರ್ಯ ವರ್ಧಕಗಳನ್ನು ಉಪಯೋಗಿಸುವ ಬದಲಾಗಿ ನೈಸರ್ಗಿಕವಾಗಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಮುಖ, ಕೈಕಾಲಿನ ಕಾಂತಿ ಹೆಚ್ಚಿಸಿಕೊಳ್ಳಬಹುದು. ನೈಸರ್ಗಿಕವಾಗಿ, ಮನೆಯಲ್ಲೇ ಸಿಗುವ ಬಾದಾಮಿ, ಅಲೋವೆರಾ, ಅರಿಸಿನ ಮಿಶ್ರಿತ ಗಂಧ ಮುಂತಾದವುಗಳನ್ನು ಮುಖಕ್ಕೆ ದಿನಂಪ್ರತಿ ಹಚ್ಚಿಕೊಳ್ಳುವುದರಿಂದ ಮುಖ ಕಾಂತಿಯುತವಾಗುತ್ತದೆ. ಅಲ್ಲದೆ, ಇತರರ ಸಲಹೆಯೊಂದಿಗೆ ಇನ್ನೂ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸಿಕೊಂಡು ಮುಖವನ್ನು ಅಂದವಾಗಿಸಲು ಪ್ರಯತ್ನಿಸಬಹುದು. ಇದರಿಂದ ಮುಖದ ಸೌಂದರ್ಯವರ್ಧನೆಗೊಳ್ಳುತ್ತದೆಯೇ ಹೊರತು ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ.
ನೈಸರ್ಗಿಕ ವಸ್ತುಗಳನ್ನೇ ಬಳಸಿ
ಬಹುತೇಕ ಮೇಕಪ್ ಸಾಮಗ್ರಿಗಳು, ಕ್ರೀಮ್‌ಗಳು ಪೆಟ್ರೋಲಿಯಂ ಉತ್ಪನ್ನಗಳಿಂದ ಮಾಡಲ್ಪಟ್ಟದ್ದಾಗಿರುತ್ತದೆ. ಸೌಂದರ್ಯವರ್ಧನೆಗಾಗಿ ಇವುಗಳನ್ನು ಬಳಸುವುದರಿಂದ ಮುಖದ ಚರ್ಮ ಕಾಂತಿ ಕಳೆದುಕೊಳ್ಳುವುದಲ್ಲದೇ ಮೊಡವೆ, ಕಜ್ಜಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ನಾಲ್ಕೈದು ಕ್ರೀಮ್, ಮೇಕಪ್‌ಗ್ಳನ್ನು ಒಮ್ಮೆಲೇ ಹಚ್ಚಿಕೊಳ್ಳುವುದರಿಂದ ಕ್ಯಾನ್ಸರ್‌ನಂತಹ ಸಮಸ್ಯೆಗಳೂ ಬಾಧಿಸುವ ಸಾಧ್ಯತೆಗಳಿವೆ. ಆದ್ದರಿಂದ ಯಾವಾಗಲೂ ನಿಸರ್ಗದತ್ತವಾಗಿ ಸಿಗುವ ವಸ್ತುಗಳನ್ನೇ ಬಳಸಿಕೊಂಡು ಸೌಂದರ್ಯ ಹೆಚ್ಚಿಸಿಕೊಳ್ಳಬೇಕು. ಹಾಲು, ಬೆಣ್ಣೆ, ಹಣ್ಣು ಅಥವಾ ಇತರ ನಿಸರ್ಗದತ್ತ ವಸ್ತುಗಳನ್ನೇ ಮುಖಕ್ಕೆ ಹಚ್ಚಿಕೊಂಡರೆ ಮುಖ ಕಾಂತಿಯುತವಾಗಿರುತ್ತದೆ.
– ಡಾ| ಶಾರದಾ ಬಂಗೇರ, ವೈದ್ಯರು
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.