ಕಾಂಟೆಕ್ಟ್ ಲೆನ್ಸ್ ಬಳಕೆಗೂ ಮುನ್ನ ಎಚ್ಚರ
Team Udayavani, Oct 15, 2019, 5:49 AM IST
ಕಣ್ಣಿನ ದೋಷವಿರುವವರ ಕನ್ನಡಕ ಬಳಸುತ್ತಿದ್ದ ಕಾಲ ಮರೆಯಾಗಿ ಆಧುನಿಕತೆಗೆ ತಕ್ಕಂತೆ ಕಾಂಟೆಕ್ಟ್ ಲೆನ್ಸ್‌ಗಳ ಬಳಕೆ ಹೆಚ್ಚಾಗಿದೆ. ಎಲ್ಲರ ಮುಂದೆ ಕನ್ನಡಕ ಹಾಕಲು ಒಂದು ರೀತಿಯ ಹಿಂಜರಿಕೆ, ಮುಖ ಸೌಂದರ್ಯಕ್ಕೆ ಅಡ್ಡಿ ಹೀಗೆ ಕನ್ನಡಕ ಬಳಸುವವರ ಸಮಸ್ಯೆಗಳಿಗೆ ಈ ಲೆನ್ಸ್‌ಗಳ ಮುಕ್ತಿ ನೀಡಿದೆ. ಆದರೆ ಕಾಂಟೆಕ್ಟ್ ಲೆನ್ಸ್ ಬಳಸುವಾಗ ಎಚ್ಚರದಿಂದಿರುವುದು ಕೂಡ ಅತೀ ಮುಖ್ಯ.
ದೂರದೃಷ್ಟಿ ಸಮೀಪ ದೃಷ್ಟಿದೋಷ ಇರುವವರು ಕನ್ನಡಕ ಬಳಕೆ ಮಾಡಬೇಕು ಎಂಬುದಾಗಿ ವೈದ್ಯರು ಸೂಚಿಸುತ್ತಾರೆ. ದೃಷ್ಟಿದೋಷದ ಹಿನ್ನೆಲೆಯಲ್ಲಿ ಬಳಸುವ ಕನ್ನಡಕದಲ್ಲಿ ನಾನಾ ವಿನ್ಯಾಸಗಳು ಬಂದರೂ ಅದನ್ನು ಧರಿಸಿದರೆ ಲುಕ್ ಹೋಗುತ್ತದೆ ಹಾಗೂ ಕಿರಿ-ಕಿರಿ ಆಗುತ್ತದೆ ಎಂಬ ಕಾರಣಕ್ಕೆ ಜನರು ಹೆಚ್ಚಾಗಿ ಕಾಂಟೆಕ್ಟ್ ಲೆನ್ಸ್ ಮೊರೆ ಹೋಗುತ್ತಿದ್ದಾರೆ.
ಕಾಂಟೆಕ್ಟ್ ಲೆನ್ಸ್ ಬಳಸುವುದರಿಂದ ದೃಷ್ಟಿದೋಷ ಇದೆ ಎಂಬುದಾಗಿ ಇತರರಿಗೆ ತಿಳಿಯುವುದು ಬಹಳ ಕಷ್ಟ . ಹೀಗಾಗಿ ಇಂದಿನ ದಿನಗಳಲ್ಲಿ ಹೆಚ್ಚಿನ ಜನರು ಕಾಂಟೆಕ್ಟ್ ಲೆನ್ಸ್ ಬಳಸುವರು. ಇದೊಂದು ತೆಳುವಾದ ಕೃತಕ ಮಸೂರವಾಗಿದ್ದು, ದೃಷ್ಟಿ ದೋಷಗಳನ್ನು ಸರಿಪಡಿಸಲು ಕಣ್ಣಿನ ಮೇಲ್ಮೆ„ ಮೇಲೆ ಧರಿಸಲಾಗುತ್ತದೆ. ಇದರಲ್ಲಿ ಎರಡು ಸಾಮಾನ್ಯ ವಿಧಗಳಿವೆ. ಮೃದು ಲೆನ್ಸ್ ಹಾಗೂ ಕಠಿನ ಲೆನ್ಸ್. ಮೃದು ಕಾಂಟೆಕ್ಟ್ ಲೆನ್ಸ್‌ಗಳನ್ನು ಮೃದುವಾದ ಕಣ್ಣಿಗೆ ಹೊಂದಿಕೊಳ್ಳುವ ಪ್ಲಾಸ್ಟಿಕ್‌ನಿಂದ ಮಾಡಲಾಗುತ್ತದೆ. ಇದರಲ್ಲಿ ಕಾರ್ನಿಯಾಗೆ ಆಮ್ಲಜನಕ ಹಾದುಹೋಗಲು ಅವಕಾಶ ಇರುತ್ತದೆ. ಇವುಗಳನ್ನು ಧರಿಸುವುದು ಕೂಡ ಸುಲಭವಾಗಿರುತ್ತದೆ. ಕಠಿನ ಲೆನ್ಸ್‌ಗಳು ಸಾಮಾನ್ಯವಾಗಿ ಸ್ಪಷ್ಟವಾದ ಮತ್ತು ಚುರುಕಾದ ದೃಷ್ಟಿ ನೀಡುತ್ತವೆ. ಮೃದು ಲೆನ್ಸ್‌ಗಳಿಗಿಂತಲೂ ಹೆಚ್ಚು ಬಾಳಿಕೆ ಬರುತ್ತದೆ.
ಉಪಯೋಗಗಳೇನು?
ಕಣ್ಣಿಗೆ ಹೆಚ್ಚಿನ ದೃಷ್ಟಿ ನೀಡಲು ಹೊಂದಾಣಿಕೆಯಿಂದಾಗಿ ಹೆಚ್ಚಿನ ಜನರು ಕಾಂಟೆಕ್ಟ್ ಲೆನ್ಸ್ ಬಳಸುತ್ತಾರೆ. ಇದು ಒಡೆದು ಹೋಗುವ ಅಥವಾ ಬೇರೆ ಯಾವುದೇ ರೀತಿಯ ತೊಂದರೆಯೂ ಆಗದು. ಎಲ್ಲೆಂದರಲ್ಲಿ ಇಟ್ಟು ಮರೆತುಹೋಗುವುದಿಲ್ಲ.
ಕಾಂಟೆಕ್ಟ್ ಲೆನ್ಸ್‌ನ ಅಡ್ಡಪರಿಣಾಮಗಳು
ಕಾಂಟೆಕ್ಟ್ ಲೆನ್ಸ್ ಬಳಸುವಂತಹ ಹೆಚ್ಚಿನ ಜನರಿಗೆ ಒಣ ಕಣ್ಣಿನ ಸಮಸ್ಯೆ ಕಾಡುವುದು. ಕಾಂಟೆಕ್ಟ್ ಲೆನ್ಸ್ ಧರಿಸುವ ಕಾರಣದಿಂದಾಗಿ ಕಣ್ಣೀರಿನ ಪ್ರಮಾಣ ಮತ್ತು ಕಾರ್ನಿಯಾಗೆ ಆಕ್ಸಿಜನ್ ಮಟ್ಟವು ಕಡಿಮೆ ಆಗುವುದು. ಇದರಿಂದಾಗಿ ತುರಿಕೆ ಕಾಣಿಸುವುದು ಮತ್ತು ನೋವು ಮತ್ತು ಕಿರಿಕಿರಿ ಉಂಟಾಗಬಹುದು.
ಕಾರ್ನಿಯಲ್ ಸವೆತ
ಕಾರ್ನಿಯಾದಲ್ಲಿ ಯಾವುದೇ ರೀತಿಯ ಉಜ್ಜುವಿಕೆ ಉಂಟಾದ ವೇಳೆ ಕಾರ್ನಿಯಾದ ಸವತೆ ಉಂಟಾಗುವುದು. ಕಾಂಟೆಕ್ಟ್ ಲೆನ್ಸ್ ಸರಿಯಾಗಿ ಕುಳಿತುಕೊಳ್ಳದೆ ಇರುವುದು, ಕಣ್ಣುಗಳು ಅತಿಯಾಗಿ ಒಣಗಿರುವುದು ಇದಕ್ಕೆ ಕಾರಣ ವಾಗಿರಬಹುದು. ಕಾಂಟೆಕ್ಟ್ ಲೆನ್ಸ್ ನ ಜತೆಗೆ ನೀವು ಮಲಗಿದರೆ ಆಗ ಕಾರ್ನಿಯಾ ಸವೆತದ ಸಾಧ್ಯತೆಯು ಹೆಚ್ಚಾಗುವುದು.
ಆಮ್ಲಜನಕ ಹೋಗಲು ಸಮಸ್ಯೆ
ಕಾರ್ನಿಯಾಗೆ ಯಾವುದೇ ರೀತಿಯಿಂದಲೂ ರಕ್ತನಾಳಗಳು ಇಲ್ಲ. ಇದರ ಅಂಚುಗಳಿಗೆ ಮಾತ್ರ ಇದೆ. ಸರಿಯಾದ ಆಮ್ಲಜನಕವು ಇಲ್ಲದೆ ಇದ್ದರೆ ಕಾರ್ನಿಯಾದ ಮೇಲೆ ಒತ್ತಡ, ಲ್ಯಾಕ್ಟಿಕ್ ಆಮ್ಲವು ಜಮೆಯಾಗಿ ಅದರಿಂದ ಒಸೊಟಿಕ್ ಉಂಟಾಗುವುದು. ವೇಗವಾಗಿ ನೀರು ಹೋಗುವಂತೆ ಮಾಡುವುದು. ಇದರಿಂದ ಕಾರ್ನಿಯಾದಲ್ಲಿ ಊತ ಉಂಟಾಗುವುದು. ಕಾರ್ನಿಯಾಗೆ ಆಮ್ಲಜನಕವು ಸಿಗುವ ಪ್ರಮಾಣವು ಕಾಂಟೆಕ್ಟ್ ಲೆನ್ಸ್ ಗೆ ಬಳಸುವಂತಹ ಸಾಮಗ್ರಿ, ದಪ್ಪದ ಮೇಲೆ ಅವಲಂಬಿತವಾಗಿದೆ.
ಕಾರ್ನಿಯಾದ ಅಲ್ಸರ್
ಕಾಂಟೆಕ್ಟ್ ಲೆನ್ಸ್‌ನ ಮತ್ತೂಂದು ಅಡ್ಡಪರಿಣಾಮವೆಂದರೆ ಕಾರ್ನಿಯಾದ ಅಲ್ಸರ್. ಕಾಂಟೆಕ್ಟ್ ಲೆನ್ಸ್‌ನ ಮೇಲ್ಪದರಲ್ಲಿ ಬ್ಯಾಕ್ಟೀರಿಯಾವು ನಿರ್ಮಾಣವಾಗುವ ಪರಿಣಾಮವಾಗಿ ಈ ಅಲ್ಸರ್ ಕಾಣಿಸಿಕೊಳ್ಳುವುದು. ಲೆನ್ಸ್‌ನ ಮೇಲ್ಮೈಯು ತುಂಬಾ ಮೃದುವಾಗಿರುವುದರಿಂದ ಬ್ಯಾಕ್ಟೀರಿಯಾ ಬೇಗನೆ ಹರಡಬಹುದು.
ಕಾರ್ನಿಯಲ್ ಮೋಲ್ಡಿಂಗ್
ಕಾಂಟೆಕ್ಟ್ ಲೆನ್ಸ್ ಧರಿಸುವ ಕಾರಣದಿಂದಾಗಿ ಕಾರ್ನಿಯಾದ ಗಾತ್ರದಲ್ಲಿ ಉಂಟಾಗುವಂತಹ ಸಾಮಾನ್ಯ ಬದಲಾವಣೆ ಆಗಿದೆ. ಆಮ್ಲಜನಕ ಸಿಗದೆ ಇರುವ ಕಾರಣ ಮತ್ತು ಲೆನ್ಸ್‌ನ ಕೆಳಗಡೆ ಗುಳ್ಳೆ ಗಳು ನಿರ್ಮಾಣವಾಗಿರುವ ಪರಿಣಾಮವಾಗಿ ಇದು ಬರುವುದು.
ನಿರ್ವಹಣೆ ಹೇಗೆ?
ಕಾಂಟೆಕ್ಟ್ ಲೆನ್ಸ್ ಅನ್ನು ತುಂಬಾ ಕಾಳಜಿ ಮತ್ತು ಶುಚಿಯಾಗಿ ನೋಡಿಕೊಳ್ಳಬೇಕಾಗುತ್ತದೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಬಾಹ್ಯ ಹಾಗೂ ಆಂತರಿಕವಾಗಿ ಕಣ್ಣಿಗೆ ಹಾನಿಯಾಗುವ ಸಾಧ್ಯತೆ ಇದೆ. ಅಸಮರ್ಪಕವಾಗಿ ಕಾಂಟೆಕ್ಟ್ ಲೆನ್ಸ್ ಅಳವಡಿಸುವುದರಿಂದ ಕಣ್ಣಿನಲ್ಲಿ ಗೀರುಗಳು ಉಂಟಾಗಿ ಕಣ್ಣೀರು ಬರಬಹುದು. ಅಶುಚಿಯಾದ ಜೋಡಿ ಕಾಂಟೆಕ್ಟ್ ಲೆನ್ಸ್ ನ ಅಳವಡಿಕೆ ಮತ್ತು ಸರಿಯಾಗಿ ಸ್ವತ್ಛಗೊಳಿಸದೆ ಇದ್ದರೆ ಬ್ಯಾಕ್ಟೀರಿಯಾದಿಂದ ಸೋಂಕುಗಳು ಉಂಟಾಗಬಹುದು ಮತ್ತು ಕೆಲವು ಸಂದರ್ಭಗಳಲ್ಲಿ ದೃಷ್ಟಿಯ ಮೇಲೆ ಪರಿಣಾಮ ಬೀಳಬಹುದು.
· ಕಾಂಟೆಕ್ಟ್ ಲೆನ್ಸ್‌ಗಳನ್ನು ಹಿಡಿಯುವ ಮುನ್ನ ಕೈ ಶುಚಿ ಮಾಡಿಕೊಳ್ಳಬೇಕು.
· ಲೆನ್ಸ್ ಸ್ವತ್ಛಗೊಳಿಸಲು ಕಾಂಟೆಕ್ಟ್ ಲೆನ್ಸ್ ಶುದ್ಧೀಕರಣ ದ್ರಾವಣವನ್ನು ಬಳಸಿ.
· ಸ್ವತ್ಛವಾದ ಲೆನ್ಸ್ ಕೇಸ್ ಅಥವಾ ಲೆನ್ಸ್ ಹೋಲ್ಡರ್‌ನಲ್ಲಿ ಲೆನ್ಸ್ ಅನ್ನು ಇರಿಸಿ ದ್ರಾವಣವನ್ನು ತುಂಬಿಸಬೇಕು.
· ವೈದ್ಯರು ಹೇಳಿದ ಅವಧಿ ಬಳಿಕ ಲೆನ್ಸ್‌ಗಳ ಬಳಕೆ ಬೇಡ.
· ಮಲಗುವಾಗ ಲೆನ್ಸ್ ತೆಗೆದಿಟ್ಟು ಮಲಗಬೇಕು.
ಎಚ್ಚರಿಕೆ ಅವಶ್ಯ
ಲೆನ್ಸ್ ಬಳಕೆಯ ಬಗ್ಗೆ ಜನರಲ್ಲಿ ಹಲವು ರೀತಿಯ ಗೊಂದಲಗಳಿವೆ. ಯಾವ ವಯಸ್ಸಿನವರಿಗೆ ಯಾವ ಲೆನ್ಸ್ ಸೂಕ್ತ ಎಂಬಿತ್ಯಾದಿ ಬಗ್ಗೆ ವೈದ್ಯರನ್ನು ಸಂಪರ್ಕಿಸಿ ಬಳಸುವುದು ಉತ್ತಮ. ಲೆನ್ಸ್‌ಗಳ ನಿರ್ವಹಣೆ, ಬಳಕೆ ಬಗ್ಗೆಯೂ ತಿಳಿದಿರಲಿ.
– ಡಾ| ರಮೇಶ್, ನೇತ್ರ ತಜ್ಞರು
- ಪ್ರಜ್ಞಾ ಶೆಟ್ಟಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.