ಎಲೆ ಒಂದಾದರೂ ಗುಣ ಹಲವು ಆರೋಗ್ಯ ವರ್ಧಕ ಒಂದೆಲಗ
Team Udayavani, Feb 28, 2017, 9:05 AM IST
ಒಂದೆಲಗ ಗದ್ದೆ, ತೋಟಗಳಲ್ಲಿ ಕಂಡುಬರುವ, ಬಳ್ಳಿಯಂತೆ ನೆಲದಲ್ಲಿ ಹಬ್ಬಿ ಬೆಳೆಯುವ ಸಸ್ಯ. ಅದು ಎಲೆ ಒಂದಾದರೂ ಗುಣ ಹಲವು ಎಂಬಂತೆ ಆರೋಗ್ಯ ವರ್ಧಕವಂತೂ ಹೌದು. ಸಾಮಾನ್ಯವಾಗಿ ಒಂದೆಲಗವು ಹಚ್ಚಹಸುರಿನಿಂದ ಕೂಡಿ, ಉರುಟುರುಟಾದ ಎಲೆ ಹೊಂದಿರುತ್ತದೆ. ಜೌಗು ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುವ ಇದು ಮೂರರಿಂದ ನಾಲ್ಕು ಅಂಗುಲಗಳಷ್ಟು ಎತ್ತರಕ್ಕೂ ಹಬ್ಬಬಲ್ಲುದು. ಒಂದೆಲಗದ ಮೂಲ ಏಷ್ಯಾ ಎಂದು ಗುರುತಿಸಲಾಗಿದೆ. ಸುಶ್ರುತ ಸಂಹಿತೆಧಿಯಲ್ಲಿಯೂ ಒಂದೆಲಗದ ಉಲ್ಲೇಖವಿದ್ದು, ಆಹಾರ, ಬ್ರಾಹ್ಮಿ ಔಷಧವಾಗಿಯೂ ಇದನ್ನು ಉಪಯೋಗಿಸಲಾಗುತ್ತದೆ. ಭಾರತವಲ್ಲದೆ ದಕ್ಷಿಣ ಆಫ್ರಿಕಾ, ಚೀನಾಗಳಲ್ಲೂ ಸಾಂಪ್ರದಾಯಿಕ ಔಷಧವಾಗಿ ಬಳಸುತ್ತಾರೆ.
ಹಲವು ನಾಮಧೇಯ
ವೈಜ್ಞಾನಿಕವಾಗಿ ‘ಸೆಂಟಿಲ್ಲಾ ಏಸಿಯಾಟಿಕ್’ (centella asiatica) ಎಂದು ಕರೆಯಿಸಿಕೊಳ್ಳುವ ಇದು ವಿವಿಧ ಭಾಷೆಗಳಲ್ಲಿ ಬೇರೆ ಬೇರೆ ಹೆಸರನ್ನು ಹೊಂದಿದೆ. ಕನ್ನಡದಲ್ಲಿ ಒಂದೆಲಗ, ಸಂಸ್ಕೃತದಲ್ಲಿ ಮಂಡೂಕಪರ್ಣಿ, ಹಿಂದಿಯಲ್ಲಿ ಬ್ರಾಹ್ಮಿ, ತುಳುವಿನಲ್ಲಿ ತಿಮರೆ, ಆಡುಭಾಷೆಯಲ್ಲಿ ಉರಗೆ, ಕೊಂಕಣಿ, ಮರಾಠಿ ಭಾಷೆಗಳಲ್ಲಿ ಕರಾನ್ನೊ, ತೆಲುಗಿನಲ್ಲಿ ಸರಸ್ವತೀ ಇವುಗಳಲ್ಲದೆ ವಲ್ಲಾಡಿ, ನುಂಡೂಕ, ದಿವ್ಯಾ, ಪರ್ಣಿ, ಏಕಪಾನಿ ಇತ್ಯಾದಿ ಹೆಸರುಗಳಿಂದಲೂ ಕರೆಯಲಾಗುತ್ತದೆ. ಒಂದೆಲಗ ತನ್ನಷ್ಟಕ್ಕೇ ಹುಟ್ಟಿ ಬೆಳೆಯುತ್ತದೆ. ಇದನ್ನು ನಾಟಿಗೈದು ಕೃಷಿ ಮಾಡುವ ಕ್ರಮ ಸಾಮಾನ್ಯವಾಗಿ ಇಲ್ಲ. ಧಾರಾಳ ನೀರಿನ ಆಶ್ರಯವುಳ್ಳ ನೆರಳು ಮತ್ತು ತಂಪಿನ ಪ್ರದೇಶಗಳಲ್ಲಿ ಮಣ್ಣಿನಲ್ಲಿರುವ ಸತ್ವ ಹೀರಿ ಬೆಳೆಯುತ್ತದೆ.
ಔಷಧೀಯ ಗುಣಗಳ ಆಗರ
ಒಂದೆಲಗದಲ್ಲಿ ಔಷಧೀಯ ಗುಣವಿರುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ಇದರಲ್ಲಿರುವ ಬೆಕೊಸೈಡ್ ಎ ಮತ್ತು ಬಿ ರಾಸಾಯನಿಕವು ಮೆದುಳಿನಲ್ಲಿರುವ ನೆನಪು ಶಕ್ತಿಗೆ ಸಂಬಂಧಿಸಿದ ಜೀವಕೋಶಗಳಿಗೆ ಪುನಶ್ಚೇತನ ನೀಡುವುದು.
ಬೇಸಗೆಯಲ್ಲಿ ದೇಹ ತಂಪಾಗಿಸಲು ಊಟದೊಂದಿಗೆ ಒಂದೆಲಗದ ಚಟ್ನಿ ಸೇವಿಸುವುದು ಉತ್ತಮ.
ಕೆಮ್ಮು, ಉಸಿರಾಟದ ತೊಂದರೆ ಇರುವವರಿಗೆ ಇದರ ರಸವನ್ನು ಜೇನು ತುಪ್ಪದೊಂದಿಗೆ ಬೆರೆಸಿ ಸೇವಿಸಲು ನೀಡುತ್ತಾರೆ.
ಮಕ್ಕಳು 48 ದಿನಗಳ ಕಾಲ ಬೆಳಗ್ಗೆ ಪ್ರತಿದಿನ ಖಾಲಿ ಹೊಟ್ಟೆಗೆ ಒಂದೆಲಗದ ಎರಡೆರಡು ಎಲೆಗಳನ್ನು ತಿನ್ನುವುದರಿಂದ ಅವರ ಜ್ಞಾಪಕಶಕ್ತಿ ಹೆಚ್ಚುತ್ತದೆ.
ನಿದ್ರಾಹೀನತೆ ಇರುವವರು ಒಂದೆಲಗದಿಂದ ತಯಾರಿಸಿದ ಗುಳಿಗೆಗಳನ್ನು ಸೇವಿಸುವುದರಿಂದ ಹಾಯಾಗಿ ನಿದ್ರಿಸಬಹುದು.
ಒಂದೆಲಗದ ತೈಲವೂ ನಿದ್ರಾಹೀನತೆ ನಿವಾರಣೆಗೆ ಸಹಕಾರಿ. ನರದೌರ್ಬಲ್ಯ, ಆತಂಕ, ಒತ್ತಡ ಹಾಗೂ ಸಾಮಾನ್ಯ ತಲೆನೋವು ಗುಣವಾಗಲು ಒಂದೆಲಗದ ಕಷಾಯ ಹಿತಕರ.
ಅಪೌಷ್ಟಿಕತೆ ಹಾಗೂ ಪಿತ್ತದೋಷದಿಂದ ಕೂದಲು ಉದುರುವುದು, ಬಿಳಿಯಾಗುವುದನ್ನು ತಡೆಯಲು ಒಂದೆಲಗದ ಎಲೆ ಸಹಿತ ಬಳ್ಳಿಯನ್ನು ತೊಳೆದು, ಅರೆದು ಅದರ ರಸಕ್ಕೆ ಸ್ವಲ್ಪ ಜೇನು ಮತ್ತು ಹಸುವಿನ ತುಪ್ಪ ಬೆರೆಸಿ ನಿತ್ಯ ಖಾಲಿಹೊಟ್ಟೆಗೆ ಸೇವಿಸುವುದು ಒಳ್ಳೆಯದು.
ಬಾಣಂತಿಯರಿಗೆ ಒಂದೆಲಗವನ್ನು ಒಣಗಿಸಿ ಹುಡಿ ಮಾಡಿ, ಜೀರಿಗೆ ಪುಡಿಯೊಂದಿಗೆ ಹಾಲಿನಲ್ಲಿ ಬೆರೆಸಿ ಸೇವಿಸಲು ನೀಡುವುದರಿಂದ ಎದೆಹಾಲು ವೃದ್ಧಿಸುತ್ತದೆ.
ಉರಿಮೂತ್ರ, ಮೂತ್ರಕಟ್ಟು ಉಂಟಾದಾಗ ಒಂದು ಕಪ್ ಎಳನೀರಿಗೆ 4 ಚಮಚ ಒಂದೆಲಗದ ರಸ, ಅರ್ಧ ಚಮಚ ಕೊತ್ತಂಬರಿ ಬೀಜದ ಹುಡಿ ಬೆರೆಸಿ ಕುಡಿದರೆ ಶಮನವಾಗುವುದು.
ಮಲಬದ್ಧತೆಯಿಂದ ಬಳಲುವವರು ಒಂದೆಲಗದಿಂದ ತಯಾರಿಸಿದ ಪಲ್ಯ ಅಥವಾ ಚಟ್ನಿ ಸೇವಿಸಿದರೆ ಉತ್ತಮ.
ಒಂದೆಲಗದ ಪಲ್ಯ, ತಂಬುಳಿ, ಚಟ್ನಿ, ಸಲಾಡ್ ಬಲು ರುಚಿ. ಅಲ್ಲದೆ ಚಾ, ಕಾಫಿಯ ಬದಲಾಗಿ ಒಂದೆಲಗದ ಪುಡಿಯಿಂದ ಕಷಾಯ ತಯಾರಿಸಿ ಸೇವಿಸುವವರೂ ಇದ್ದಾರೆ. ಬೇಸಗೆಯಲ್ಲಿ ಇದರ ಜ್ಯೂಸ್ ಆರೋಗಕ್ಕೆ ಹಿತಕರ.
– ಗಣೇಶ ಕುಳಮರ್ವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.