ಮಂಗಳೂರಿಗೆ ಪರ್ಯಾಯ ನವಮಂಗಳೂರು
Team Udayavani, Jan 20, 2019, 7:27 AM IST
ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಹಾಕುವಾಗ ಸೀಮಿತ ಪ್ರದೇಶದಲ್ಲಿ ಹೆಚ್ಚು ಕಾರ್ಯಗಳನ್ನು ಕೈಗೊಳ್ಳುವುದು ಅಸಾಧ್ಯ. ಈ ನಿಟ್ಟಿನಲ್ಲಿ ಹೊರವಲಯದತ್ತಲೂ ಚಿಂತಿಸಬೇಕಿದೆ. ಸ್ಮಾರ್ಟ್ ನಗರಿಯಾಗಿರುವ ಮಂಗಳೂರಿನಲ್ಲೂ ಈಗ ಹಲವು ಸಮಸ್ಯೆಗಳು ಕಾಣಿಸಿಕೊಳ್ಳತೊಡಗಿವೆ. ಹೀಗಾಗಿ ನಗರಕ್ಕಿಂತ ಕೊಂಚ ದೂರದಲ್ಲಿರುವ ಹೊರವಲಯಗಳ ಅಭಿವೃದ್ಧಿಗೂ ಯೋಜನೆ ರೂಪಿಸಿಕೊಂಡರೆ ಮಂಗಳೂರಿನೊಂದಿಗೆ ನವಮಂಗಳೂರು ಕಲ್ಪನೆ ಯಶಸ್ವಿಯಾಗಲು ಸಾಧ್ಯವಿದೆ.
ನಗರಗಳು ಬೆಳೆದಂತೆಲ್ಲ ಸಮಸ್ಯೆಗಳು ಬೆಳೆಯುವುದು ಸಹಜ. ಒಂದು ಹಂತದವರೆಗೆ ನಗರದ ಮಿತಿಯೊಳಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ. ವ್ಯಾಪ್ತಿ ಮೀರಿದರೆ ನಗರದೊಳಗೆ ಚಟುವಟಿಕೆಗಳಿಗೆ ಮಿತಿ ಹೇರಿ ಹೊರಪ್ರದೇಶಕ್ಕೆ ವರ್ಗಾಯಿಸಬೇಕಾಗುತ್ತದೆ. ದೇಶದ ಇತಿಹಾಸವನ್ನು ಗಮನಿಸಿದರೆ ದಿಲ್ಲಿ, ಮುಂಬಯಿ ಸಹಿತ ಅನೇಕ ನಗರಗಳನ್ನು ಇದಕ್ಕೆ ಉದಾಹರಣೆಯಾಗಿ ಉಲ್ಲೇಖೀಸಬಹುದು.
ನವಿ ಮುಂಬಯಿ, ಹೊಸದಿಲ್ಲಿ ಮುಂತಾದ ಪರ್ಯಾಯ ನಗರಗಳು ಹುಟ್ಟಿಕೊಂಡದ್ದೇ ಇದೇ ಸಮಸ್ಯೆಯಿಂದ. ಬೆಂಗಳೂರು ನಗರ ಈ ಹಾದಿಯಲ್ಲೇ ಸಾಗುತ್ತಿದೆ. ಮೈಸೂರು, ತುಮಕೂರು, ನೆಲಮಂಗಲದತ್ತ ನಗರ ಹೊರಳುತ್ತಿದೆ. ಮಂಗಳೂರು ನಗರಕ್ಕೂ ಈ ಸಮಸ್ಯೆ ಬಾಧಿಸತೊಡಗಿದೆ. ಮಂಗಳೂರಿಗೆ ಪರ್ಯಾಯವಾಗಿ ನವಮಂಗಳೂರು ಸೃಷ್ಟಿಗೆ ಈಗಿಂದಲೇ ಪೂರ್ಣ ಪ್ರಮಾಣದಲ್ಲಿ ಕಾರ್ಯೋನ್ಮುಖವಾಗುವ ಆವಶ್ಯಕತೆಯನ್ನು ತೆರೆದಿಟ್ಟಿದೆ. ಬೆಂಗಳೂರು ನಗರದ ಸಮಸ್ಯೆಗಳು ದಿನೇ ದಿನೆ ಬೃಹದಾಕಾರವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಹೈಕೋರ್ಟ್‌ನಲ್ಲಿ ಈ ಕುರಿತಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ( ಪಿಐಎಲ್)ಗಳ ವಿಚಾರಣೆ ಸಂದರ್ಭದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು ನಗರ ದಟ್ಟಣೆಯ ಕುರಿತಂತೆ ವ್ಯಕ್ತಪಡಿಸಿರುವ ಅಭಿಪ್ರಾಯ ನಗರ ದಟ್ಟಣೆ ಸಮಸ್ಯೆಗೆ ಒಂದು ಪರಿಹಾರ ರೂಪದಲ್ಲಿದೆ.
ನವಿ ಮುಂಬಯಿ ರೀತಿ ನವ ಬೆಂಗಳೂರು ನಿರ್ಮಿಸಬೇಕು. ಆಗ ಸಮಸ್ಯೆಗಳು ತಗ್ಗಬಹುದು. ತುಮಕೂರು ಇಲ್ಲವೇ ಮೈಸೂರು ಕಡೆಗೂ ನವಬೆಂಗಳೂರು ನಿರ್ಮಾಣ ಮಾಡಬಹುದು. ಇದರಿಂದ ಹಾಲಿ ನಗರದಲ್ಲಿ ಜನದಟ್ಟನೆ ತಗ್ಗಬಹುದು ಎಂಬ ಸಲಹೆಯನ್ನು ವಕೀಲರು ಮುಂದಿಟ್ಟಿದ್ದಾರೆ. ಸಮಸ್ಯೆಗಳು ದಿನೇ ದಿನೆ ಬೃಹದಾಕಾರವಾಗಿ ಬೆಳೆಯುತ್ತಿರುವುದನ್ನು ಗಮನಿಸಿದರೆ ಬೆಂಗಳೂರು ನಗರವನ್ನು ಬೇರೊಂದು ಕಡೆ ಸ್ಥಳಾಂತರ ಮಾಡಬೇಕಾಗುತ್ತದೇನೋ ಎಂಬ ಅಭಿಪ್ರಾಯವನ್ನು ಇದೇ ಸಂದರ್ಭದಲ್ಲಿ ಹೈಕೋರ್ಟ್‌ನ ವಿಭಾಗೀಯ ಪೀಠ ವ್ಯಕ್ತಪಡಿಸಿದೆ. ಇದು ಮೇಲ್ನೋಟಕ್ಕೆ ಬೆಂಗಳೂರು ನಗರದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯವಾದರೂ ಮಂಗಳೂರು ಸಹಿತ ಇಕ್ಕಟ್ಟಿನ ವಾತಾವರಣವನ್ನು ಎದುರಿಸುತ್ತಿರುವ ಎಲ್ಲವನ್ನೂ ಒಂದೇ ಕಡೆ ಕೇಂದ್ರೀಕರಿಸಿಗೊಂಡು ದಟ್ಟಣೆಯ ಸಮಸ್ಯೆಯನ್ನು ಎದುರಿಸುತ್ತಿರುವ ನಗರಗಳಿಗೂ ಅನ್ವಯಿಸುತ್ತದೆ.
ಪರ್ಯಾಯ ನಗರಗಳು
ಮುಂಬಯಿ ನಗರ ಕಳೆದ ಶತಮಾನದ 60- 70ರ ದಶಕಗಳಲ್ಲಿ ಇದೇ ಸಮಸ್ಯೆಯನ್ನು ಎದುರಿಸಿತ್ತು. ಕೆಲವೇ ಕೆಲವು ಪ್ರದೇಶಗಳಿಗೆ ನಗರ ಚಟುವಟಿಕೆಗಳು ಕೇಂದ್ರೀಕೃತಗೊಂಡ ಹಿನ್ನೆಲೆಯಲ್ಲಿ ಭಾರೀ ಜನ ಹಾಗೂ ವಾಹನ ದಟ್ಟಣೆಯನ್ನು ಎದುರಿಸಿತು. ಸಮಸ್ಯೆಗಳು ಪರಾಕಾಷ್ಠೆಗೆ ತಲುಪಿದಾಗ ಹೊರವಲಯಕ್ಕೆ ಚಾಚಿಕೊಳ್ಳುವುದು ಅನಿವಾರ್ಯವಾಯಿತು. ಆಗ ಮುಂಬಯಿಗೆ ಪರ್ಯಾಯವಾಗಿ ಅಭಿವೃದ್ಧಿಗೊಂಡ ನಗರ ನವಿ ಮುಂಬಯಿ. ಜತೆಗೆ ಮುಲುಂಡ್, ದಿವಾ, ಕಲ್ವ, ನೆರೋಳ್, ಥಾಣೆ, ಕಲ್ಯಾಣ್, ಭಿವಂಡಿ ಮುಂತಾದ ಪ್ರದೇಶಗಳು ಕೂಡ ಉಪನಗರಗಳಾಗಿ ಬೆಳೆದವು.
ಮುಂಬಯಿ ಕೇಂದ್ರ ಭಾಗದಲ್ಲಿದ್ದ ಉದ್ದಿಮೆಗಳು, ಕಚೇರಿಗಳು, ವಾಣಿಜ್ಯ ವ್ಯವಹಾರಗಳು ತಮ್ಮ ಕಚೇರಿಯನ್ನು ಮಾತ್ರ ಅಲ್ಲಿ ಇಟ್ಟುಕೊಂಡು ಉತ್ಪನ್ನ ಚಟುವಟಿಕೆ, ವ್ಯವಹಾರವನ್ನು ಈ ಉಪನಗರಗಳಿಗೆ ವರ್ಗಾಯಿಸಿದವು. ಬೆಂಗಳೂರು ನಗರಕ್ಕೂ ಮುಂಬಯಿ ನಗರದ ಸಮಸ್ಯೆಗಳು ಎದುರಾದ ಪರಿಣಾಮ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಹಾಗೂ ಸರಕಾರ ಹೊರಭಾಗದಲ್ಲಿ ಈಗಾಗಲೇ ಹಲವಾರು ಉಪನಗರಗಳನ್ನು ಅಭಿವೃದ್ಧಿಪಡಿಸಿತು. ಆರ್ಥಿಕ, ಹೂಡಿಕೆ ಚಟುವಟಿಕೆಗಳು ಈ ಪ್ರದೇಶಕ್ಕೆ ವರ್ಗಾವಣೆಯಾಗುತ್ತಿವೆ ಇದರ ಜತೆಗೆ ಭವಿಷ್ಯದ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಇನ್ನಷ್ಟು ಉಪನಗರ ಯೋಜನೆಗಳನ್ನು ರೂಪಿಸಿದೆ.
ಈಗಿಂದಲೇ ಚಾಲನೆ ಸಿಗಲಿ
ಮಂಗಳೂರು ನಗರ ಪ್ರಸ್ತುತ ಕೆಲವೇ ಪ್ರದೇಶಗಳಿಗೆ ಕೇಂದ್ರೀಕೃತಗೊಂಡಿದೆ. ಪರಿಣಾಮ ನಗರದ ಆರ್ಥಿಕ ಚಟುವಟಿಕೆಗಳು, ಕಚೇರಿ ವ್ಯವಹಾರಗಳು ಅಲ್ಲಿಗೆ ಸೀಮಿತಗೊಂಡಿವೆ. ಆರೋಗ್ಯ, ಶಿಕ್ಷಣ ಹಬ್ , ವಾಣಿಜ್ಯ ಹಬ್ ಆಗಿ ಮಂಗಳೂರು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ವ್ಯಾಪಾರ ವ್ಯಾಪಕತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅಭಿವೃದ್ಧಿ ಗತಿಗೆ ಅನುಗುಣವಾಗಿ ನಗರ ವಿಸ್ತಾರವಾಗಲಿಲ್ಲ. ಎಲ್ಲ ಚಟುವಟಿಕೆಗಳು ನಿರ್ದಿಷ್ಟ ಪರಿಧಿಯೊಳಗೆ ಸೀಮಿತಗೊಂಡಿವೆ. ಪರಿಣಾಮ ಧಾರಣ ಶಕ್ತಿ ಕುಸಿಯಿತು. ಇದರಿಂದಾಗಿ ಜನದಟ್ಟಣೆ, ಸಂಚಾರ ದಟ್ಟಣೆ ಮಿತಿಮೀರಿದೆ.
ಸಂಚಾರ ಸಮಸ್ಯೆ ತೀವ್ರವಾಗಿದೆ. ರಸ್ತೆಗಳು ದ್ವಿಪಥ, ಚತುಷ್ಪಥ, ಷಟ್ಪಥವಾದರೂ ಸಮಸ್ಯೆಗಳ ಪರಿಹಾರದಲ್ಲಿ ಹೆಚ್ಚಿನ ಫಲಪ್ರದವಾಗಿಲ್ಲ. ಇದರಿಂದಾಗಿ 1990ರ ಬಳಿಕ ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್ ಗೆ ಹೊಸ ಬಸ್‌ಪರವಾನಿಗೆ ನೀಡುವುದನ್ನು ನಿರ್ಬಂಧಿಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದು ಅದು ಇಂದಿಗೂ ಜಾರಿಯಲ್ಲಿದೆ.
ಮುಂಬಯಿ, ಬೆಂಗಳೂರು ನಗರದ ಗಾತ್ರಕ್ಕೆ ಈಗ ಮಂಗಳೂರು ಬೆಳೆದಿಲ್ಲವಾದರೂ ನಗರದ ಅಭಿವೃದ್ಧಿ ಗತಿ ಹಾಗೂ ಈಗಾಗಲೇ ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿದರೆ ಪರ್ಯಾಯ ನಗರ ಅಭಿವೃದ್ಧಿಗೆ ಚಾಲನೆ ಅತಿ ಅಗತ್ಯ. ದಕ್ಷಿಣ ಭಾಗದಲ್ಲಿ ದೇರಳಕಟ್ಟೆ, ಮೂಲಕ ಮುಡಿಪುವರೆಗೆ ಈಗಾಗಲೇ ವಿಸ್ತರಿಸಿ ಕೊಂಡಿದೆ. ದೇರಳಕಟ್ಟೆಯಲ್ಲಿ ಈಗಾಗಲೇ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜುಗಳು, ಆಸ್ಪತ್ರೆಗಳು ಕಾರ್ಯಾಚರಿಸುತ್ತಿವೆ. ಮುಡಿಪಿನಲ್ಲಿ ಇನ್ಫೋಸಿಸ್ ಕ್ಯಾಂಪಸ್, ಐಟಿ ಎಸ್‌ಇಝಡ್ ಇದೆ. ಡ್ರೆವಿಂಟ್ ಪರೀಕ್ಷೆ ಟ್ರ್ಯಾಕ್ , ಕೇಂದ್ರ ಕಾರಾಗೃಹಗಳು ಆ ಭಾಗಕ್ಕೆ ವರ್ಗಾವಣೆಯಾಗುತ್ತಿವೆ. ಉತ್ತರ ದಿಕ್ಕಿನಲ್ಲಿ ಸುರತ್ಕಲ್, ಎನ್‌ಐಟಿಕೆವರೆಗೆ ವ್ಯಾಪಿಸಿ ಕೊಂಡಿದೆ. ಈ ಬೆಳವಣಿಗೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರದೊಂದಿಗೆ ಜೋಡಿಸಿಕೊಂಡಿರುವ ಪ್ರದೇಶಗಳ ಭೌಗೋಳಿಕ ವ್ಯಾಪ್ತಿಯನ್ನು ಪರಿಗಣಿಸಿಕೊಂಡು ನವಮಂಗಳೂರು ನಿರ್ಮಾಣದತ್ತ ಈಗಲೇ ಚಾಲನೆ ನೀಡುವುದು ಅಗತ್ಯವಾಗಿದೆ. ಇದಕ್ಕೊಂದು ವ್ಯವಸ್ಥಿತವಾದ ಕಾರ್ಯಯೋಜನೆ ಅಗತ್ಯವಿದೆ. ಮುಂದಿನ ಯಾವುದೇ ಅಭಿವೃದ್ಧಿ ಚಟುವಟಿಕೆಗಳು, ಉದ್ದಿಮೆಗಳನ್ನು ಈ ಪ್ರದೇಶಗಳಿಗೆ ವರ್ಗಾಯಿಸಬೇಕು. ಮೂಲಸೌಕರ್ಯಗಳ ಅಭಿವೃದ್ಧಿ ಯೋಜನೆಗಳಲ್ಲೂ ಅಲ್ಲಿಗೆ ಹೆಚ್ಚಿನ ಆದ್ಯತೆ ಇರಬೇಕು.
ನಿರ್ಮಾಣದ ಸಾಧ್ಯತೆಗಳು
ಮಂಗಳೂರು ನಗರದ ಬೆಳವಣಿಗೆಯನ್ನು ಗಮನಿಸಿದರೆ ನಗರದ ಉತ್ತರ, ದಕ್ಷಿಣ ಹಾಗೂ ಪೂರ್ವ ಭಾಗಕ್ಕೆ ನಗರ ವಿಸ್ತರಿಸಿಕೊಳ್ಳುತ್ತಿದೆ. ಪೂರ್ವದಿಕ್ಕಿನಲ್ಲಿ ಮಂಗಳೂರು ನಗರ ಈಗಾಗಲೇ ಫರಂಗಿಪೇಟೆಯವರೆಗೆ ಜೋಡಿಸಿಕೊಂಡಿದೆ. ಈ ಭಾಗದಲ್ಲಿ ಈಗಾಗಲೇ ಹಲವಾರು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಕಾರ್ಯಾಚರಿಸುತ್ತಿಸುತ್ತಿವೆ. ವಾಣಿಜ್ಯವಾಗಿಯೂ ಅನೇಕ ಉದ್ದಿಮೆಗಳು ಸ್ಥಾಪನೆಯಾಗಿದ್ದು, ಆಟೋ ಮೊಬೈಲ್ ಹಬ್ ಆಗಿಯೂ ಗುರುತಿಸಿಕೊಂಡಿದೆ. ಈಗಿನ ಬೆಳವಣಿಗೆಯನ್ನು ಗಮನಿಸಿದರೆ ಬಿ.ಸಿ. ರೋಡ್‌ವರೆಗೆ ಮಂಗಳೂರು ನಗರ ಚಾಚಿಕೊಳ್ಳಲು ಇನ್ನು ಹೆಚ್ಚು ಸಮಯಬೇಕಾಗದು. ಇದೇ ರೀತಿ ಪೂರ್ವ ದಿಕ್ಕಿನಲ್ಲಿ ಪಿಲಿಕುಳದವರೆಗೆ ಮಂಗಳೂರು ನಗರ ಈಗಾಗಲೇ ಜೋಡಿಸಿಕೊಂಡಿದೆ.
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.