ಮಹಾಯೋಜನೆ ಪರಿಷ್ಕರಣೆ, ಸಮಗ್ರ ದೃಷ್ಟಿಕೋನವಿರಲಿ
Team Udayavani, Sep 9, 2018, 12:37 PM IST
ಒಂದು ಯೋಜನೆ ಪರಿಷ್ಕರಣೆ ವೇಳೆ ನೂರಾರು ಅವಕಾಶಗಳನ್ನು ನೋಡಿಕೊಂಡು ಬದಲಾಯಿಸಬೇಕಿದೆ. ಮೂಡಾ ಕೂಡ ಮಹಾ ಯೋಜನೆಯ ಪರಿಷ್ಕರಣೆ ನಡೆಸುತ್ತಿದ್ದು ಇದರಕ್ಕೆ ವರ್ತಮಾನಕ್ಕಿಂತ ಭವಿಷ್ಯತ್ತಿಗೆ ಪೂರಕವಾದ ಯೋಜನೆಗಳು ಸೇರಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಯೋಜನೆಯ ವ್ಯಾಪ್ತಿ, ಸೇರಿಕೊಳ್ಳಬೇಕಾದ ಅಂಶಗಳು, ಹೊಸದಾದ ಚಿಂತನೆಗಳೂ ಒಳಗೊಳ್ಳಬೇಕಿದೆ.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ) ಮಹಾಯೋಜನೆ ( ಮಾಸ್ಟರ್ ಪ್ಲ್ರಾನ್) ಪರಿಷ್ಕರಣೆ ಪ್ರಕ್ರಿಯೆ ಆರಂಭಿಸಿದೆ. ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಪ್ರದೇಶದ ಅಭಿವೃದ್ಧಿಗೆ ಮುಂದಿನ ಹತ್ತು ವರ್ಷಗಳ ಅವಧಿಗೆ ನಗರ ಯೋಜನೆ ಹೇಗಿರಬೇಕು ಎಂಬ ಬಗ್ಗೆ ಒಂದು ಸಮಗ್ರ ದೃಷ್ಟಿಕೋನ ಸಿದ್ಧಪಡಿಸುವ ನಿಟ್ಟಿನಲ್ಲಿ ಮಹಾಯೋಜನೆ ಒಂದು ಮಹತ್ವದ ಮಾರ್ಗದರ್ಶಿಯಾಗಿರುತ್ತದೆ.
ನಗರಾಭಿವೃದ್ಧಿ ಇಲಾಖೆಯ ನಿಯಮದಂತೆ ನಗರಾಭಿವೃದ್ಧಿ ಪ್ರಾಧಿಕಾರ ಪ್ರತಿ 10 ವರ್ಷಗಳಿಗೊಮ್ಮೆ ಮಹಾಯೋಜನೆಯನ್ನು ಪರಿಷ್ಕರಿಸಬೇಕು. ಮಂಗಳೂರಿನಲ್ಲಿ ಹತ್ತು ವರ್ಷಗಳ ಹಿಂದೆ ಪರಿಷ್ಕರಣೆಗೊಂಡು ಪ್ರಸ್ತುತ ಜಾರಿಯಲ್ಲಿರುವ ಮಹಾಯೋಜನೆಯನ್ನು ಪರಿಷ್ಕರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಈಗಾಗಲೇ ಪ್ರಕಟನೆ ಹೊರಡಿಸಿದ್ದು 60 ದಿನಗಳೊಳಗೆ ( ಸೆ. 5ರಿಂದ ) ಸಲ್ಲಿಸಲು ಕೋರಿದೆ. ಮಂಗಳೂರು ನಗರ ಹಾಗೂ ಅದಕ್ಕೆ ಹೊಂದಿಕೊಂಡಿರುವಂತೆ ಮೂಡ ವ್ಯಾಪ್ತಿಗೆ ಬರುವ ಪ್ರದೇಶಗಳ ಸುವ್ಯವಸ್ಥಿತ ಬೆಳವಣಿಗೆ ಹಾಗೂ ಮೂಲ ಸೌಲಭ್ಯಗಳ ಅಭಿವೃದ್ಧಿಯಲ್ಲಿ ಮಹಾಯೋಜನೆ ಪ್ರಮುಖ ಪಾತ್ರ ವಹಿಸುತ್ತಿದ್ದು, ಪರಿಣಾಮಕಾರಿಯಾಗಿ ರೂಪುಗೊಳ್ಳುವ ನಿಟ್ಟಿನಲ್ಲಿ ಪ್ರಾಧಿಕಾರದೊಂದಿಗೆ ಸಾರ್ವಜನಿಕರ ಸಲಹಾತ್ಮಕ ಭಾಗೀದಾರಿಕೆ ಅವಶ್ಯವಾಗಿದೆ.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಈ ಹಿಂದೆ 2009ರಲ್ಲಿ ಮಹಾಯೋಜನೆಯನ್ನು ಪರಿಷ್ಕರಿಸಿ ರಾಜ್ಯ ಸರಕಾರದಿಂದ ಅಂಗೀಕಾರ ಪಡೆದು ಅನುಷ್ಠಾನಗೊಳಿಸಿತ್ತು. ಇದರ ಅವಧಿ 2019ಕ್ಕೆ ಕೊನೆಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಹಿಂದಿನ ಮಹಾಯೋಜನೆಯನ್ನು ಪರಿಷ್ಕರಿಸಿ ಸರಕಾರದ ಅನುಮೋದನೆ ಪಡೆಯಬೇಕಾಗಿದ್ದು, ಈ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯೋನ್ಮುಖವಾಗಿದೆ. ಮುಂದಿನ ಮಹಾಯೋಜನೆ ಯಾವ ರೀತಿ ಇರಬೇಕು, ಯಾವ ಯೋಜನೆಗಳನ್ನು ರೂಪಿಸಬೇಕು ಎಂಬ ಬಗ್ಗೆ ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಪಡೆದು ಅವುಗಳನ್ನು ಕ್ರೋಡೀಕರಿಸಲಾಗುತ್ತದೆ. ಇದರ ಜತೆಗೆ ಎಲ್ಲ ಇಲಾಖೆಗಳ ಜತೆ ಚರ್ಚೆ ನಡೆಸಿ ಅವರಿಂದಲೂ ಸಲಹೆಗಳನ್ನು ಪಡೆಯಲಾಗುವುದು. ಇದನ್ನು ಮುಂದಿಟ್ಟುಕೊಂಡು ಹಿಂದಿನ ಮಹಾಯೋಜನೆಯನ್ನು ಪರಿಷ್ಕರಿಸಿ ಅದನ್ನು ಪ್ರಾಧಿಕಾರದ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದ ಬಳಿಕ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಡಲಾಗುವುದು. ಇಲಾಖೆ ಇದನ್ನು ಪರಿಶೀಲನೆ ನಡೆಸಿ ಅಂಗೀಕಾರ ನೀಡಿ ರಾಜ್ಯಪತ್ರದಲ್ಲಿ ಪ್ರಕಟಗೊಳ್ಳಲಿದೆ. ಈ ಎಲ್ಲ ಪ್ರಕ್ರಿಯೆಗಳು 2019ರಲ್ಲಿ ಪೂರ್ಣಗೊಳ್ಳಬೇಕಿದೆ.
ಯೋಜನೆ ವ್ಯಾಪ್ತಿ
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯೊಳಗೆ ಬರುವ ಮಂಗಳೂರು ಮಹಾನಗರ ಪಾಲಿಕೆಯ 60 ವಾರ್ಡ್‌ಗಳು ಹಾಗೂ ತಲಪಾಡಿ, ಮೂಲ್ಕಿ, ಕಣ್ಣೂರು, ಮೂಡುಶೆಡ್ಡೆ, ಬಜಪೆ ಸಹಿತ ಒಟ್ಟು 35 ಗ್ರಾಮಗಳು ಈ ಪ್ರದೇಶ ಮಹಾಯೋಜನೆಯಲ್ಲಿ ಒಳಗೊಳ್ಳುತ್ತವೆ.
ಮಹಾಯೋಜನೆಯಲ್ಲಿ ಬರುವ ಅಂಶಗಳು
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಯೋಜನಾ ಪ್ರದೇಶಕ್ಕೆ ಒಳಪಡುವ ಪ್ರದೇಶದಲ್ಲಿ 2009ರ ಬಳಿಕ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಬಹಳಷ್ಟು ಅಭಿವೃದ್ಧಿ ಯೋಜನೆಗಳು ಅನುಷ್ಠಾನಗೊಂಡಿವೆ. ಇದಕ್ಕೆ ಅನುಗುಣವಾಗಿ ನಗರ ಯೋಜನೆಯನ್ನು ಸಿದ್ಧಪಡಿಸುವ ಆವಶ್ಯಕತೆ ಇದೆ.
ಈಗ ನಡೆಸುವ ಪರಿಷ್ಕರಣೆ ಮುಂದಿನ 10 ವರ್ಷಗಳವರೆಗೆ ಜಾರಿಯಲ್ಲಿರುತ್ತದೆ. ಆದ್ದರಿಂದ ನಗರದ ವಾಹನ ಹಾಗೂ ಜನದಟ್ಟನೆಗೆ ಅನುಗುಣವಾಗಿ ರಸ್ತೆಗಳ ವಿಸ್ತಾರ ಯಾವ ರೀತಿ ಇರಬೇಕು. ಮುಕ್ತ ಪ್ರದೇಶಗಳು (ಉದ್ಯಾನಗಳು ಒಳಗೊಂಡು ), ಜನವಸತಿ ಪ್ರದೇಶಗಳು, ಲೇಔಟ್‌ಗಳು, ಟ್ರಕ್ ಟರ್ಮಿನಲ್, ರಾಷ್ಟ್ರೀಯ ಹೆದ್ದಾರಿಗಳಿಂದ ನಗರದೊಳಗೆ ಸಂಪರ್ಕ ರಸ್ತೆಗಳು ಸಹಿತ ವಿವಿಧ ಅಂಶಗಳು ಇದರಲ್ಲಿ ಒಳಗೊಳ್ಳುತ್ತವೆ. ಸಾರ್ವಜನಿಕರು ಇವುಗಳ ಬಗ್ಗೆ ತಮ್ಮ ಸಲಹೆ ಸೂಚನೆಗಳು ಪ್ರಾಧಿಕಾರಕ್ಕೆ ಸಲ್ಲಿಸಬಹುದಾಗಿದೆ.
ಸಲಹೆ/ಸೂಚನೆಗಳು
ಮಹಾಯೋಜನೆ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಸಾರ್ವಜನಿಕರು ಲಿಖೀತವಾಗಿ ಅಂಚೆ ಮೂಲಕ ಅಥವಾ ಖುದ್ದಾಗಿ ಆಯಕ್ತರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಉರ್ವಸ್ಟೋರ್, ಅಶೋಕ ನಗರ ಅಂಚೆ ವಿಳಾಸಕ್ಕೆ ನೀಡಬಹುದಾಗಿದೆ.
ಸಾರ್ವಜನಿಕ ಸಹಕಾರ ಅಗತ್ಯ
ನಗರಾಭಿವೃದ್ಧಿ ಪ್ರಾಧಿಕಾರದ ಮಹಾಯೋಜನೆಯನ್ನು ಪ್ರತಿ 10 ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುತ್ತಿದ್ದು, ಈಗಾಗಲೇ ಪ್ರಕಟನೆ ಹೊರಡಿಸಲಾಗಿದೆ. ಮಹಾ ಯೋಜನೆ ಪರಿಷ್ಕರಣೆಗೆ ಸಾರ್ವಜನಿಕರ ಸಹಕಾರ ಅಗತ್ಯವಿದ್ದು ತಮ್ಮ ಸಲಹೆ ಸೂಚನೆಗಳನ್ನು ಪ್ರಕಟನೆಯ 60 ದಿನಗಳೊಳಗೆ ನೀಡಬಹುದಾಗಿದೆ.
– ಕೆ. ಶ್ರೀಕಾಂತ್ ರಾವ್,
ಆಯುಕ್ತರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ
ಕೇಶವ ಕುಂದರ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.