ಒಂದು ಸೊಗಸಾದ ಫುಟ್‌ಪಾತ್‌ನ ಕನಸು!
Team Udayavani, Sep 22, 2019, 5:00 AM IST
ನಗರಗಳೆಂದರೆ ಬರೀ ವಾಹನಗಳೇ?
ಈ ಪ್ರಶ್ನೆಯನ್ನು ಕೇಳುವಂಥ ಸ್ಥಿತಿ ಎಲ್ಲ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿವೆ ಎನಿಸುವುದುಂಟು. ಅದರಲ್ಲೂ ನಮ್ಮ ದೇಶದಲ್ಲಂತೂ ಖಂಡಿತಾ ಇದೆ. ಹಾಗೆಯೇ ನಮ್ಮ ಮಸೂರವನ್ನು ಹತ್ತಿರ ಹತ್ತಿರ ತರುತ್ತಾ ನಾವಿರುವ ನಗರಕ್ಕೆ ಇಟ್ಟುಕೊಂಡು ನೋಡಿದರಂತೂ ಗಾಬರಿಯಾಗುತ್ತದೆ. ಯಾಕೆಂದರೆ ನಾವು ಇರುವಂಥ ಬಹುತೇಕ ನಗರಗಳಲ್ಲಿ ಸರಿಯಾದ ಫುಟ್ ಪಾತ್‌ಗಳೇ ಇಲ್ಲ. ಇದಕ್ಕೆ ಬೆಂಗಳೂರು ಹೊರತಾಗಿಲ್ಲ, ಮಂಗಳೂರು ಹೊರತಾಗಿಲ್ಲ. ಎಲ್ಲದರ ಕಥೆಯೂ ಒಂದೇ ಎಂದು ಷರಾ ಬರೆದು ಬಿಡಬಹುದು.
ಇದು ಬಹಳಷ್ಟು ಮಂದಿಗೆ, ಅದರಲ್ಲೂ ಆಡಳಿತಗಾರರಿಗೆ ತೀರಾ ಕ್ಷುಲ್ಲಕ ಪ್ರಶ್ನೆ. ಫುಟ್‌ಪಾತ್‌ಗಳು ಯಾಕೆ ಬೇಕು? ಅದರ ಬದಲಾಗಿ ಒಂದು ಚತುಷcಕ್ರವಾಹನ ತೆಗೆದುಕೊಂಡು ಬಿಡಿ ಎನ್ನುವವರೂ ಇದ್ದಾರೆ. ಅದರರ್ಥ ನೀವು ಒಮ್ಮೆ ಚತುಷcಕ್ರ ವಾಹನವನ್ನು ತೆಗೆದುಕೊಂಡರೆ ಎಲ್ಲವೂ ಆದಂತೆ ಎಂಬ ನಂಬಿಕೆ. ಆದರೆ ವಾಸ್ತವವಾಗಿ ಒಂದು ಫುಟ್ ಪಾತ್‌ನಲ್ಲಿ ನಡೆದು ಹೋಗುವುದೆಂದರೆ ಅದು ಆ ನಗರದ ಆತ್ಮದೊಳಗೆ ಹೊಕ್ಕಂತೆ. ಇಡೀ ಇತಿಹಾಸವೇ ಕಣ್ಣೆದುರು ಬಂದು ನಿಲ್ಲುತ್ತದೆ. ಇದಕ್ಕೆ ಎಷ್ಟೊಂದು ಉದಾಹರಣೆಗಳನ್ನಾದರೂ ನೀಡಬಹುದು.
ಮೈಸೂರಿನಲ್ಲಿ ಒಮ್ಮೆ ಭೇಟಿಕೊಟ್ಟಾಗ ಏನೂ ಮಾಡಬೇಡಿ. ಸಂಜೆ ಹೊತ್ತಿಗೆ ದೇವರಾಜ ಅರಸ್ ರಸ್ತೆಯಲ್ಲಿ (ಇದು ಕೆ ಆರ್ ಸರ್ಕಲ್‌ನಿಂದ ಆರಂಭವಾಗುವಂಥದ್ದು)ಸಂಜೆ 6.30 ರ ಹೊತ್ತಿಗೆ ನಡೆದು ಹೋಗಿ. ಸುಮಾರು ಎರಡು ಕಿ.ಮೀ. ರಸ್ತೆಯ ಕೊನೆಗೆ ಬಂದಾಗ ನೀವು ಇತಿಹಾಸದೊಳಗೆ ಹೊಕ್ಕು ಬಂದಿರುತ್ತೀರಿ. ಯಾಕೆಂದರೆ, ಕೆಲವು ಹಳೆಯ ಕಟ್ಟಡಗಳು ಇನ್ನೂ ಇವೆ. ಅವುಗಳ ಪಕ್ಕದಲ್ಲಿ ಬಂದ ಆಧುನಿಕ ಕಟ್ಟಡಗಳ ಅವಸ್ಥೆ ನಿಮಗೆ ನಗರದ ಸ್ಥಿತಿಯನ್ನೂ ಹೇಳುತ್ತವೆ. ಸಂಜೆ ಹೊತ್ತಿನಲ್ಲಿ ತಣ್ಣಗೆ ಬೀಸಿ ಬರುವ ತಂಗಾಳಿಯಲ್ಲಿ ಸಾಗಿ ಹೋಗಲು ಒಂದು ಒಳ್ಳೆಯ ಫುಟ್ ಪಾತ್ ಬೇಕೇಬೇಕು.
ಬೆಂಗಳೂರಿನ ಕೆಲವು ಹಳೆ ಪ್ರದೇಶಗಳಿಗೆ ಹೋದರೂ ಇದೇ ಅನುಭವ ಉಂಟಾಗುತ್ತದೆ. ಮಲ್ಲೇಶ್ವರಂನಲ್ಲಿ ಒಂದಷ್ಟು ದೂರ ಇಂಥ ಅನುಭವ ಲಭ್ಯ. ಹಾಗೆಂದು 15 ವರ್ಷಗಳ ಹಿಂದಿನಷ್ಟಲ್ಲ. ಇನ್ನು ಗೋವಾದ ಪಣಜಿಗೆ ಹೋದರೆ ಕೆಲವು ಪ್ರದೇಶಗಳಲ್ಲಿ ನಡೆದು ಹೋಗುವುದೇ ಸುಖ. ಅದರಲ್ಲೂ, ಮಾಂಡವಿ ಬ್ರಿಡ್ಜ್ ಅನಂತರ ಮಿರಾಮಾರ್‌ಗೆ ಹೋಗುವಾಗ ಒಂದು ಬದಿಯಲ್ಲಿ ಸಮುದ್ರ (ಒಂದಷ್ಟು ದೂರ) ಸಿಗುತ್ತದೆ. ಎರಡೂ ಬದಿಯಲ್ಲಿ ನೀವು ಸುಮಾರು ಒಂದೂವರೆ ಕಿ.ಮೀ ನಡೆದು ಹೋಗಲಿಕ್ಕೆ ಎಷ್ಟೊಂದು ಮಜಾ ಎನಿಸುವುದುಂಟು. ಅದರಲ್ಲೂ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ಗೋವಾದಲ್ಲಿ ಹಳೆಯ ಕಟ್ಟಡಗಳೆಲ್ಲಾ ಅದೇ ರೂಪದಲ್ಲಿ ಹೊಸ ಕಳೆ ಪಡೆದು ಕಂಗೊಳಿಸುತ್ತಿವೆ. ಒಂದೊಂದು ಮನೆಯೂ ನೂರಾರು ವರ್ಷಗಳ ಕಥೆ ಹೇಳುತ್ತದೆ. ಅದಕ್ಕೆ ತಕ್ಕದಾದ ಅಗಲವಾದ ರಸ್ತೆ, ಜತೆಗೆ ಕಾಲುದಾರಿ (ಫುಟ್ ಪಾತ್) ಎಲ್ಲವೂ ಹೊಂದಿದೆ. ನಮ್ಮ ನಗರಗಳು ಹೀಗೆ ಇದ್ದರೆ ಚೆಂದ ಎನಿಸುವುದು ಇಂಥವುಗಳನ್ನು ಕಂಡಾಗಲೇ.
ಮುಂಬಯಿಯಲ್ಲಿ ಬಹಳಷ್ಟು ಮಂದಿ ನೋಡಿರಬಹುದು. ಮರೀನಾ ಬೀಚ್ ಬದಿಯ ಫುಟ್‌ಫಾತ್ ನೋಡಿದಾಗಲೆಲ್ಲಾ ಹೊಟ್ಟೆ ಕಿಚ್ಚು ಉಂಟಾಗುವುದುಂಟು. ಚೌಪಾಟಿ ಬೀಚ್‌ವರೆಗೂ ಕಿ.ಮೀ. ಗಟ್ಟಲೆ ನಡೆದು ಹೋದರೂ ಯಾವುದೇ ಅಸುರಕ್ಷತೆಯ ಭಾವ ಬಾರದು. ಎಲ್ಲೂ ಫುಟ್‌ಪಾತ್ ಮೇಲೆ ವಾಹನ ಚಲಾಯಿಸಿಕೊಂಡು ಬರುವವರನ್ನು ಕಾಣುವುದಿಲ್ಲ. ಮತ್ತೆಲ್ಲೋ ಫುಟ್ ಪಾತ್ ನ ಭಾಗವನ್ನೆಲ್ಲಾ ದ್ವಿಚಕ್ರ ವಾಹನಗಳು ಆಕ್ರಮಿಸಿಕೊಂಡು ಪಾರ್ಕಿಂಗ್ ತಾಣವನ್ನಾಗಿಸಿಕೊಂಡಿರುವುದಿಲ್ಲ.
ಮಂಗಳೂರಿಗೆ ಬರೋಣ. ಅಲ್ಲೂ ಅಷ್ಟೇ ಮಣ್ಣಗುಡ್ಡೆಯಿಂದ ಲೇಡಿ ಸರ್ಕಲ್ ವರೆಗೂ ಫುಟ್‌ಪಾತ್ ಪರವಾಗಿಲ್ಲ. ಹಾಗೆಯೇ ಹಂಪನಕಟ್ಟೆಯಿಂದ ಎ.ಬಿ. ಶೆಟ್ಟಿ ಸರ್ಕಲ್ ವರೆಗೆ ಒಂದು ಬದಿ ಫುಟ್‌ಪಾತ್ ಎನಿಸಿಕೊಳ್ಳುತ್ತದೆ. ಉಳಿದಂತೆ ಎಲ್ಲೂ ಯೋಗ್ಯ ಎನ್ನುವ ಫುಟ್ ಪಾತ್ ಕಡಿಮೆ. ಅದರಲ್ಲೂ ನಾಲ್ಕೈದು ಕಿ.ಮೀ ಉದ್ದದಷ್ಟು ಯೋಗ್ಯ ಫುಟ್ ಪಾತ್‌ಗಳನ್ನು ಇಲ್ಲವೇ ಇಲ್ಲ ಎಂದು ಬಿಡಬಹುದು.
ಫುಟ್ ಪಾತ್ ಬೇಕು ಎನ್ನೋಣ
ನಾವು ಬದುಕುವ ನಗರಗಳಲ್ಲಿ ದಿನದ 24 ಗಂಟೆಯೂ ಮನೆಯೊಳಗೆ ಬಾಗಿಲು ಜಡಿದುಕೊಂಡು ಕುಳಿತುಕೊಳ್ಳಲು ಸಾಧ್ಯವಿಲ್ಲ. ಒಂದಷ್ಟು ಹೊತ್ತು ನಮ್ಮ ನಗರಗಳ ಸಂಭ್ರಮವನ್ನು ಕಣ್ಣಿಗೆ ತುಂಬಿಕೊಳ್ಳಬೇಕು. ಸಂಜೆ ಹೊತ್ತು ಸುಮ್ಮನೆ ಹಾಯಾಗಿ ಒಂದು ರೌಂಡ್ ತಿರುಗಿ ಬರೋಣವೆಂದರೆ ಅದಕ್ಕೆ ಸೂಕ್ತವಾದ ವಾತಾವರಣ ಇರಬೇಕು. ಆ ವಾತಾವರಣವೆಂದರೆ ಮೊದಲಿಗೆ ಫುಟ್‌ಪಾತ್.
ಅಭಿವೃದ್ಧಿ ಶೀಲ ರಾಷ್ಟ್ರಗಳಲ್ಲಿ ಸುಂದರ ಫುಟ್‌ಪಾತ್‌ಗಳನ್ನು ನಿರ್ಮಿಸಲು ಇನ್ನೂ ಅವಕಾಶವಿದೆ. ನಮ್ಮ ನಗರಗಳಲ್ಲೂ ಇದನ್ನು ಸರ್ವಥಾ ಪುನರ್ ಸ್ಥಾಪಿಸಬಹುದು. ನಾಗರಿಕರಾದ ನಾವೇ ದನಿ ಎತ್ತಬೇಕು. ನಮ್ಮ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ನಮ್ಮ ಬಡಾವಣೆಯಲ್ಲಿ ಸರಿಯಾದ ಫುಟ್‌ಪಾತ್ ನಿರ್ಮಿಸಿದರೆ ಓಟು ಎನ್ನಬೇಕು. ಓಟು ಪಡೆದ ಮೇಲೆ ನಿರ್ಮಿಸದಿದ್ದರೆ ನಿತ್ಯವೂ ಅವರನ್ನು ತಡೆದು ಕೇಳಬೇಕು. ಸ್ಥಳೀಯ ಸಂಸ್ಥೆಗಳ ಸಭೆಯಲ್ಲಿ ಫುಟ್‌ಪಾತ್‌ನ ಅಗತ್ಯವನ್ನು ಪ್ರಸ್ತಾವಿಸಿ ಅದರ ಮಹತ್ವವನ್ನು ಅಧಿ ಕಾರಿಗಳಿಗೆ ಮತ್ತು ಉಳಿದವರಿಗೆ ಮನದಟ್ಟು ಮಾಡಿಕೊಡುವಂತೆ ನಮ್ಮ ಸದಸ್ಯರನ್ನು ಆಗ್ರಹಿಸಬೇಕು. ಸೂಕ್ತ ಅಭಿಯಾನ ನಡೆಸಿ ಜನರಲ್ಲಿ ಜಾಗೃತಿ ಮೂಡಿಸಬೇಕು. ಫುಟ್‌ಪಾತ್‌ನ ಸೊಗಸು ಮತ್ತು ಸುಖವನ್ನು ವಿವರಿಸಬೇಕು. ಇದಕ್ಕಾಗಿ ಆಂದೋಲನ ರೂಪಿಸಿದರೂ ಪರವಾಗಿಲ್ಲ. ಜನಪ್ರತಿನಿಧಿಗಳು ಕಣ್ತೆರೆದು ನಮ್ಮ ಅಗತ್ಯಗಳನ್ನು ಅರ್ಥ ಮಾಡಿಕೊಂಡರೆ ಸಾಕು. ಅದಾದರೆ ಫುಟ್ ಪಾತ್‌ಗಳು ಮತ್ತೆ ನಗರಗಳಲ್ಲಿ ನಳನಳಿಸುತ್ತವೆ.
ಅನುರೂಪ, ಮಂಗಳೂರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.