ನಗರದ ಬೆಳವಣಿಗೆಗೆ ಸುಲಭ ಮಾರ್ಗಗಳು
Team Udayavani, Nov 11, 2018, 3:26 PM IST
ಇತ್ತೀಚೆಗೆ ಮಣಿಪಾಲದಲ್ಲಿ ಬಹುಮಹಡಿ ಕಾರು ನಿಲುಗಡೆ ಸೌಲಭ್ಯ ಪ್ರಾರಂಭವಾಗಿರುವುದು ಬಹಳ ಒಳ್ಳೆಯ ವಿಚಾರ. ಸುಮಾರು ಸಾವಿರ (ದ್ವಿ ಚಕ್ರ ವಾಹನಗಳನ್ನು ಸೇರಿಸಿ) ವಾಹನಗಳನ್ನು ನಿಲುಗಡೆಗೊಳಿಸಲು ಕಂಡುಕೊಂಡಂತಹ ಅತ್ಯುತ್ತಮ ಮಾರ್ಗ. ಇದರಿಂದಾಗಿ ಮುಂದಿನ ಒಂದೆರಡು ದಶಕಗಳ ಮಟ್ಟಿಗೆ ಮಣಿಪಾಲದಲ್ಲಿ ವಾಹನಗಳ ನಿಲುಗಡೆಗೆ ತೊಂದರೆಯಾಗಲಿಕ್ಕಿಲ್ಲ.
ಮಂಗಳೂರಿನಲ್ಲಿಯೂ ಇಂತಹ ವಾಹನ ನಿಲುಗಡೆ ತಾಣವನ್ನು ಹಳೆಯ ಬಸ್ ನಿಲುಗಡೆ ಜಾಗ (ಹಂಪನಕಟ್ಟೆ)ದಲ್ಲಿ ಸ್ಮಾರ್ಟ್ ಸಿಟಿ ಅಭಿವೃದ್ಧಿ ಯೋಜನೆಯಡಿಯಲ್ಲಿ ಮಾಡುವ ಬಗ್ಗೆ ಈಗಾಗಲೇ ಶಂಕು ಸ್ಥಾಪನೆಯಾಗಿದ್ದು ಕೆಲಸ ಮಾತ್ರ ಪ್ರಾರಂಭವಾಗಿಲ್ಲ. ಮುಖ್ಯವಾಗಿ ಹಂಪನಕಟ್ಟೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ಅವಕಾಶ ತುಂಬಾ ಕಡಿಮೆಯಿರುವುದರಿಂದ, ಇಂತಹ ತಾಣವನ್ನು ಮಾಡುವುದರಿಂದ ಮುಂದಿನ ಒಂದು ದಶಕದವರೆಗೆ ವಾಹನ ನಿಲುಗಡೆಗೆ ತೊಂದರೆ ಆಗಲಿಕ್ಕಿಲ್ಲ. ಒಂದು ವೇಳೆ ಆದಷ್ಟು ಬೇಗನೆ ವಾಹನ ನಿಲುಗಡೆ ತಾಣವಾದರೆ, ಹಂಪನಕಟ್ಟೆ ಪ್ರದೇಶದಲ್ಲಿ ವಾಹನಗಳ ಓಡಾಟಕ್ಕೆ ಸುಲಭವಾಗುವುದು ಮಾತ್ರವಲ್ಲದೆ, ಸಾವಿರಾರು ವಾಹನಗಳನ್ನು ನಿಲುಗಡೆ ಮಾಡುವುದರಿಂದ ಆ ಪ್ರದೇಶದಲ್ಲಿ ವ್ಯಾಪಾರಕ್ಕೂ ಉತ್ತಮ ಪ್ರತಿಕ್ರಿಯೆ ಬರಬಹುದು.
ಸೌಂದರ್ಯಕ್ಕೆ ಆದ್ಯತೆ
ಬ್ಯಾನರ್‌ಗಳನ್ನು ಅಲ್ಲಲ್ಲಿ ಹಾಕುವ ಬಗ್ಗೆ ಒಂದು ಕಿವಿಮಾತು. ಬ್ಯಾನರ್‌ಗಳನ್ನು ಅಲ್ಲಲ್ಲಿ ಹಾಕುವುದರಿಂದ ನಗರದ ಸೌಂದರ್ಯಕ್ಕೆ ಧಕ್ಕೆ ಆಗುವುದು ಮಾತ್ರವಲ್ಲದೆ, ಕಂಬ ಹಾಕುವರೇ ರಸ್ತೆಯಲ್ಲಿ/ ರಸ್ತೆಯಂಚಿನಲ್ಲಿ ಅಲ್ಲಲ್ಲಿ ಅಗೆಯುವುದರಿಂದ ರಸ್ತೆ ಹಾಳಾಗುತ್ತದೆ ಮತ್ತು ಕಂಬ ಹಾಕಲು ತೆಗೆದಂತಹ ಗುಂಡಿಯನ್ನು ಕೆಲವು ಸಲ ಸರಿಯಾಗಿ ತುಂಬದಿರುವುದರಿಂದ ಕೆಲವರ ಪಾದ ಅದರಲ್ಲಿ ಸಿಲುಕಿ ಎಲುಬು ಮುರಿಯುವಂತಹ ಸಂಭವವಿದೆ. ನಮ್ಮ ಮಂಗಳೂರಿನಲ್ಲಿ ಈಗಾಗಲೇ ‘ಡಿಜಿಟಲ್’ ಬೋರ್ಡ್ ಚಾಲನೆಯಲ್ಲಿದೆ. ಆದುದರಿಂದ ನಗರದಲ್ಲಿ ವೃತ್ತ ಪ್ರದೇಶದ ಸಮೀಪ ಹೆಚ್ಚೆಚ್ಚು ‘ಡಿಜಿಟಲ್’ ಬೋರ್ಡ್‌ಗಳನ್ನು ಅಳವಡಿಸುವುದರೊಂದಿಗೆ, ಬ್ಯಾನರ್ ಹಾಕಲಿಚ್ಛಿಸುವವರು, ಬ್ಯಾನರ್‌ನ ಬದಲಿಗೆ ‘ಡಿಜಿಟಲ್’ ಬೋರ್ಡ್‌ನಲ್ಲಿ ತಮ್ಮ ಹೆಸರು ಮತ್ತು ವಿಷಯವನ್ನು ಕೊಟ್ಟಲ್ಲಿ ನಗರ ಚಂದವಾಗಿರಬಹುದು.
ಸಂಚಾರ ನಿಯಮ ಅಗತ್ಯ
ನಗರದಲ್ಲಿ ವಾಹನ ನಿಯಮಗಳನ್ನು ಪಾಲಿಸದವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದನ್ನು ಕಡಿಮೆ ಮಾಡಲು ಒಂದು ಮಾರ್ಗವೆಂದರೆ, ನಗರದ ಹೆಚ್ಚಿನ ಪ್ರದೇಶಗಳಲ್ಲಿ ಸಿ.ಸಿ.ಟಿ.ವಿಗಳನ್ನು ಅಳವಡಿಸುವುದು ಮತ್ತು ‘ಕಂಟ್ರೋಲ್ ರೂಮ್’ ನಿಂದ ಗಮನಿಸುವುದು. ಹೀಗೆ ಮಾಡುವುದರಿಂದ ಹೆಲ್ಮೆಟ್ ಇಲ್ಲದೆ ಪ್ರಯಾಣಿಸುವುದು, ವಿರುದ್ದ ದಿಕ್ಕಿನಿಂದ ವಾಗನಗಳನ್ನು ಚಲಾಯಿಸುವುದು, ವಾಹನಗಳಿಗೆ ಕಪ್ಪು ಗಾಜನ್ನು ಹಾಕಿರುವುದು, ಮಿತಿ ಮೀರಿದ ವೇಗದಲ್ಲಿ ವಾಹನಗಳನ್ನು ಚಲಾಯಿಸುವುದು, ವಾಹನಗಳನ್ನು ಕಾಲುದಾರಿಗಳಲ್ಲಿ ನಿಲುಗಡೆಗೊಳಿಸಿರುವುದು ಮುಂತಾದ ಹಲವು ತಪ್ಪುಗಳನ್ನು ಸರಿದಾರಿಗೆ ತರುವರೇ ಪ್ರಯತ್ನವನ್ನು ಖಂಡಿತ ಮಾಡಬಹುದು. ಇದಕ್ಕೆ ಸ್ವಲ್ಪ ಖರ್ಚು
ಆಗಬಹುದು. ಆದರೆ ಫಲಿತಾಂಶ ಉತ್ತಮ ಬರುವುದರಲ್ಲಿ ಸಂದೇಶವಿಲ್ಲ, ಬೀಟ್ ಪೊಲೀಸರಲ್ಲಿ ಕೆಲವರನ್ನು ಕಂಟ್ರೋಲ್ ರೂಮ್’ನಲ್ಲಿ ನಿಯುಕ್ತಿಗೊಳಿಸುವುದರಿಂದ ಹೆಚ್ಚಿನ ಖರ್ಚಿಗೆ ಅವಕಾಶವಿರುವುದಿಲ್ಲ.
ವಿಶ್ವನಾಥ್ ಕೋಟೆಕಾರ್, ಕೋಡಿಕಲ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.