ರೂಫ್‌ಟಾಪ್ ಸೋಲಾರ್ ವ್ಯವಸ್ಥೆ ಆದ್ಯತೆ ಯೋಜನೆಯಲ್ಲಿ ಸೇರ್ಪಡೆಯಾಗಲಿ
Team Udayavani, Oct 7, 2018, 12:37 PM IST
ವಿದ್ಯುತ್ ಸಮಸ್ಯೆಗೆ ಪರಿಹಾರ ಸೋಲಾರ್ ಎಂಬುದನ್ನು ನಾವು ಯಾವತ್ತೋ ಕಂಡುಹಿಡಿದಿದ್ದರೂ ಅದನ್ನು ಪರಿಪೂರ್ಣವಾಗಿ ಅನುಷ್ಠಾನಕ್ಕೆ ತರುವಲ್ಲಿ ಹಿಂಜರಿಯುತ್ತಲೇ ಇದ್ದೇವೆ. ಹಣ ಖರ್ಚು ಮಾಡಿದರೆ ಸಾಕು ಸುಲಭವಾಗಿ ಸಿಗುವ ವಿದ್ಯುತ್ ಅನ್ನೇ ಹೆಚ್ಚಾಗಿ ಅವಲಂಬಿಸಿದ್ದೇವೆ. ಸ್ಮಾರ್ಟ್ ನಗರಿಯಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ವಿದ್ಯುತ್‌ನ ಬೇಡಿಕೆಯೂ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಪರಿಪೂರ್ಣವಾಗಿ ಸೋಲಾರ್ ಸದುಪಯೋಗಪಡಿಸಿಕೊಂಡರೆ ನಗರದ ಬಹುದೊಡ್ಡ ಸಮಸ್ಯೆಯೊಂದು ನಿವಾರಣೆಯಾದಂತೆ.
ಸೋಲಾರ್ ವಿದ್ಯುತ್ ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳಲ್ಲಿ ಪ್ರಮುಖವಾದದ್ದು. ವಿದ್ಯುತ್ ಕೊರತೆ ಸಮಸ್ಯೆಗೆ ಪರ್ಯಾಯ ಕ್ರಮಗಳಲ್ಲಿ ಮಹತ್ತರವಾದದ್ದು. ಸ್ವಚ್ಛ ಇಂಧನದ ಜತೆಗೆ ಗ್ರಾಹಕರ ಮಾಸಿಕ ವಿದ್ಯುತ್ ಬಿಲ್ ವೆಚ್ಚದ ಭಾರವೂ ಇಳಿಕೆಯಾಗುತ್ತದೆ. ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ರೂಫ್‌ಟಾಪ್ ಸೋಲಾರ್ ಒಂದು ಪ್ರಮುಖ ಅಂಗ. ಇದಕ್ಕೆ ಕೇಂದ್ರ, ರಾಜ್ಯ ಸರಕಾರಗಳಿಂದ ಉತ್ತೇಜನವಿದೆ. ಗ್ರಾಹಕರಿಂದ ಮೆಸ್ಕಾಂ ಸೋಲಾರ್ ವಿದ್ಯುತ್ ಖರೀದಿಸುವ ವ್ಯವಸ್ಥೆಯೂ ಇದೆ. ಆದರೂ ಇದು ನಿರೀಕ್ಷಿತ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲ . ರೂಫ್‌ಟಾಪ್ ಸೋಲಾರ್ ವಿದ್ಯುತ್ ಉತ್ಪಾದನೆ ಆದ್ಯತೆಯ ಯೋಜನೆಗಳಲ್ಲಿ ಸೇರ್ಪಡೆಗೊಂಡು ಅನುಷ್ಠಾನವಾದಾಗ ಹೆಚ್ಚು ಯಶಸ್ಸು ಸಾಧ್ಯವಾಗಬಹುದು.
ಸೋಲಾರ್ ವಿದ್ಯುತ್ ಉತ್ಪಾದನೆಗೆ ಮಂಗಳೂರಿನಲ್ಲಿ ಅನುಕೂಲಕರ ವಾತಾವರಣವಿದೆ. ವರ್ಷದಲ್ಲಿ ಸುಮಾರು 200 ದಿನಗಳ ಕಾಲ ತೀಕ್ಷ್ಣ ಬಿಸಿಲು ಇದೆ. ಇದನ್ನು ಸೋಲಾರ್ ವಿದ್ಯುತ್‌ಗೆ ಸಮರ್ಥವಾಗಿ ಬಳಸಿಕೊಂಡಾಗ ವಿದ್ಯುತ್‌ನಲ್ಲಿ ಸ್ವಾವಲಂಬನೆ ಮಾತ್ರವಲ್ಲದೆ ಆದಾಯಕ್ಕೂ ಮೂಲವಾಗುತ್ತದೆ.
ಪ್ರಸ್ತುತ ಮೆಸ್ಕಾಂನಲ್ಲಿ 625 ರೂಫ್‌ಟಾಪ್ ವಿದ್ಯುತ್ ಉತ್ಪಾದನಾ ಘಟಕಗಳಿವೆ. ಇದರಿಂದ 12 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ರೂಫ್ ಟಾಪ್‌ನಿಂದ ಉತ್ಪತ್ತಿಯಾಗುವ ಪ್ರತಿ ಯೂನಿಟ್ ವಿದ್ಯುತ್ ಅನ್ನು ಸಬ್ಸಿಡಿ ರಹಿತವಾಗಿದ್ದರೆ 3.56 ರೂ. ಹಾಗೂ ಸಬ್ಸಿಡಿ ಒಳಗೊಂಡಿದ್ದರೆ 2.67 ರೂ. ಗೆ ಮೆಸ್ಕಾಂ ಖರೀದಿಸುತ್ತಿದೆ.
ರಾಷ್ಟ್ರೀಯ ಸೋಲಾರ್ ಮಿಶನ್‌ನ ಗುರಿಯಂತೆ ದೇಶದಲ್ಲಿ 2021- 22 ರ ವೇಳೆಗೆ ರೂಫ್‌ಟಾಪ್ ಸೋಲಾರ್ ವ್ಯವಸ್ಥೆಯಿಂದ 40,000 ಮೆ.ವ್ಯಾ. ವಿದ್ಯುತ್ ಉತ್ಪಾದನೆ ಗುರಿ ಇರಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಸರಕಾರದ ಸೌರಶಕ್ತಿ ನೀತಿ 2014- 21 ರ ಅನ್ವಯ 2021ರ ವೇಳೆ ಗೆ 2400 ಮೆ.ವ್ಯಾ. ರೂಫ್ ಟಾಪ್ ಸೌರ ವಿದ್ಯುತ್ ಉತ್ಪಾದನೆಯ ಗುರಿ ಇರಿಸಿಗೊಳ್ಳಲಾಗಿದೆ. ರೂಫ್‌ಟಾಪ್ ಸೋಲಾರ್ ವ್ಯವಸ್ಥೆಯಲ್ಲಿ ಮೆಸ್ಕಾಂ ವತಿಯಿಂದ 1,000 ಕಿಲೋ ವ್ಯಾಟ್ ಸಾಮರ್ಥ್ಯದ ಸೌರಶಕ್ತಿ ಉತ್ಪಾದನೆಯ ಗುರಿಯನ್ನು ಇರಿಸಿಕೊಳ್ಳಲಾಗಿತ್ತು. ಮಂಗಳೂರು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ 1,300 ಕಿಲೋವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಇದೆ. ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ ಸಣ್ಣ ರೂಫ್‌ಟಾಪ್ ಸೋಲಾರ್ ವಿದ್ಯುತ್ಛಕ್ತಿ ಯೋಜನೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೂರಕ ಕ್ರಮಗಳಿಗೆ ಮುಂದಾಗಿದೆ.
ಸೋಲಾರ್ ನೆಟ್ ಮೀಟರಿಂಗ್ ಹಾಗೂ ಗ್ರಾಸ್ ಮೀಟರಿಂಗ್ ಆಧಾರದ ಮೇಲೆ ಸೋಲಾರ್ ವಿದ್ಯುತ್ ವ್ಯವಸ್ಥೆ ಅನುಷ್ಠಾನಗೊಳಿಸಲಾಗುತ್ತಿದೆ. ನೆಟ್ ಮೀಟರಿಂಗ್ ವ್ಯವಸ್ಥೆಯಲ್ಲಿ ಬಳಕೆ ಮಾಡಿ ಉಳಿದ ವಿದ್ಯುತ್ ಅನ್ನು ಗ್ರೀಡ್ ಗೆ ನೀಡಬಹುದಾಗಿದೆ. ಗ್ರಾಸ್ ಮೀಟರಿಂಗ್ ವ್ಯವಸ್ಥೆಯಲ್ಲಿ ಉತ್ಪಾದನೆ ಮಾಡಿದ ಎಲ್ಲ ವಿದ್ಯುತ್ ಅನ್ನು ಗ್ರೀಡ್‌ಗೆ ನೀಡುವುದಾಗಿದೆ. ಸೌರ ಫಲಕಗಳು ಸೂರ್ಯನ ಕಿರಣಗಳನ್ನು ಹೀರಿಕೊಂಡು ಆ ಫಲಕಗಳಲ್ಲಿ ಅಳವಡಿಸಿರುವ ಸೌರ ಸೆಲ್‌ಗಳ ಮೂಲಕ ವಿದ್ಯುತ್ಛಕ್ತಿಯನ್ನು ಡಿಸಿ (ಡೈರೆಕ್ಟ್ ಕರೆಂಟ್)ಯಲ್ಲಿ ಉತ್ಪಾದಿಸುತ್ತದೆ.
ಸೌರ ಇಂಧನದ ಉತ್ಪಾದನೆಯ ಪ್ರಮಾಣವನ್ನು ಗುರುತಿಸಲು ಮೀಟರ್ ಅಳವಡಿಕೆ ಮಾಡಲಾಗುತ್ತದೆ. ಉತ್ಪಾದಿತ ವಿದ್ಯುತ್ ಮನೆಯ ಬಳಕೆಗೆ ಇರಿಸಿಕೊಂಡು, ಉಳಿದ ವಿದ್ಯುತ್‌ನ್ನು ಇನ್‌ವರ್ಟರ್ ಮೂಲಕ ವಿದ್ಯುತ್ ತಂತಿಯ ಮೂಲಕ ಹರಿಯಬಿಡಲಾಗುತ್ತದೆ. ಸೌರ ಇಂಧನದ ರೂಫ್‌ಟಾಪ್ ಪ್ಲ್ರಾಂಟ್ ಅನ್ನು ಅಳವಡಿಸಲು ಇಚ್ಛಿಸುವವರು ಹತ್ತಿರದ ಮೆಸ್ಕಾಂ ಸಬ್‌ಡಿವಿಶನ್ ಕಚೇರಿಗೆ ಭೇಟಿ ನೀಡಬಹುದು. ಸೋಲಾರ್ ಮೇಲ್ಛಾವಣಿ ಘಟಕಗಳ ಸ್ಥಾಪನೆಗೆ ವಿದ್ಯುತ್ ಸರಬರಾಜು ಕಂಪೆನಿಗಳ ವತಿಯಿಂದ ಯಾವುದೇ ಪ್ರೋತ್ಸಾಹಧನ ನೀಡಲಾಗುವುದಿಲ್ಲ. ಆದರೆ, ಇಚ್ಛೆಯುಳ್ಳ ಫಲಾನುಭವಿಗಳು ಎಂ.ಆನ್.ಆರ್.ಇ. ವತಿಯಿಂದ ಯೋಜನಾ ವೆಚ್ಚದ ಶೇ. 25ರಷ್ಟು ಸಹಾಯಧನ ಪಡೆಯಲು ಅವಕಾಶವಿದೆ.
ಜಾಗೃತಿ ಅವಶ್ಯ
ಪರಿಸರ ಸಹ್ಯ, ಪ್ರಕೃತಿದತ್ತ ಸೋಲಾರ್ ವಿದ್ಯುತ್ ವ್ಯವಸ್ಥೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವ ಹಾಗೂ ಜನರಿಂದ ಹೆಚ್ಚು ಸ್ಪಂದನೆ ಲಭಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು ಅವಶ್ಯವಿವೆ. ರೂಫ್‌ಟಾಪ್ ಸೋಲಾರ್ ವಿದ್ಯುತ್ ಉತ್ಪಾದನೆ ಬಗ್ಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಜಾಗೃತಿ ಅಭಿಯಾನ, ಸಭೆಗಳನ್ನು ನಡೆಸಿದ್ದರು. ಮಾದರಿಯಾಗಿ ಸ್ವತಃ ತನ್ನ ಮನೆಯಲ್ಲಿ ಅನುಷ್ಠಾನಗೊಳಿಸುವ ಮೂಲಕ ಇತರರಿಗೂ ಪ್ರೇರೇಪಣೆ ನೀಡುವ ಕಾರ್ಯ ಮಾಡಿದ್ದರು. ದ.ಕ. ಜಿಲ್ಲೆಯ 50 ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸೋಲಾರ್ ನಿರ್ಮಾಣಕ್ಕೆ ತನ್ನ ಅನುದಾನ ಮೂಲಕ ಯೋಜನೆ ರೂಪಿಸಿದ್ದರು. ಸರಕಾರಿ ಕಟ್ಟಡಗಳು ಮೊದಲಿಗೆ ರೂಫ್‌ಟಾಪ್ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಿಕೊಂಡು ಖಾಸಗಿಯವರಿಗೆ ಪ್ರೇರೇಪಣೆಯಾಗಬೇಕು ಎಂಬ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಕಾರ್ಯಯೋಜನೆ ರೂಪಿಸಲಾಗಿತ್ತು. ಮಂಗಳೂರಿಗೆ ದಿನವೊಂದಕ್ಕೆ ಸರಾಸರಿ ಸುಮಾರು 180 ರಿಂದ 200 ಮೆಗಾ ವ್ಯಾಟ್‌ನಷ್ಟು ವಿದ್ಯುತ್ ಆವಶ್ಯಕತೆ ಇದೆ. ರೂಫ್‌ಟಾಪ್ ಸೋಲಾರ್ ವಿದ್ಯುತ್ ಘಟಕಗಳು ಒಂದು ಪರ್ಯಾಯ ವಿದ್ಯುತ್ ವ್ಯವಸ್ಥೆಯಾಗಿ ಮೂಡಿಬಂದು ವಿದ್ಯುತ್ ಅಭಾವಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ.
ವಿದ್ಯುತ್ ಉತ್ಪಾದನೆ ಹೆಚ್ಚು ಆದ್ಯತೆ
ರೂಫ್‌ಟಾಪ್ ಸೋಲಾರ್ ಸಹಿತ ಸೋಲಾರ್ ವಿದ್ಯುತ್ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಿ ಅನುಷ್ಠಾನಗೊಳಿಸುವ ಬಗ್ಗೆ ಚರ್ಚಿಸಲು ಅಧಿಕಾರಿಗಳ ಸಭೆಯೊಂದನ್ನು ನನ್ನ ಕಚೇರಿಯಲ್ಲಿ ಕರೆದಿದ್ದೇನೆ. ಇತ್ತೀಚೆಗೆ ಜರಗಿದ ದ.ಕ. ಜಿಲ್ಲಾ ಕೆಡಿಪಿ ಸಭೆಯಲ್ಲೂ ಸೋಲಾರ್ ವಿದ್ಯುತ್ ಯೋಜನೆಗೆ ಹೆಚ್ಚು ಒತ್ತು ನೀಡುವ ಆವಶ್ಯಕತೆಯ ಬಗ್ಗೆ ಗಮನ ಸೆಳೆದಿದ್ದೇನೆ. ಹೊಸದಾಗಿ ನಿರ್ಮಾಣವಾಗುವ ಎಲ್ಲ ವಸತಿ ಸಂಕೀರ್ಣಗಳು, ಸಭಾಭವನಗಳು ರೂಫ್‌ಟಾಪ್ ಸೋಲಾರ್ ವಿದ್ಯುತ್ ವ್ಯವಸ್ಥೆ ಅಳವಡಿಸುವ ನಿಟ್ಟಿನಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ.
– ಐವನ್ ಡಿ’ಸೋಜಾ,
ವಿಧಾನ ಪರಿಷತ್ ಸದಸ್ಯರು
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Border-Gavaskar Test series ಇಂದಿನಿಂದ: ಹೋರಾಟಕ್ಕೆ ಭಾರತ-ಆಸ್ಟ್ರೇಲಿಯ ಸಿದ್ಧ
New Delhi: ರಾಷ್ಟ್ರ ರಾಜಧಾನಿಗೆ ನಂದಿನಿ ಲಗ್ಗೆ: ಹೈನುಗಾರರಿಗೂ ಸಿಗಲಿ ಮನ್ನಣೆ
Yasin Malik ವಿಚಾರಣೆಗೆ ತಿಹಾರ್ ಜೈಲಿನಲ್ಲೇ ಕೋರ್ಟ್ ರೂಂ: ಸುಪ್ರೀಂ
General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.