ಸ್ವಚ್ಛ ಸುಂದರ, ಸ್ವಸ್ಥ ನಗರವಾಗಲಿ ನಮ್ಮ ಮಂಗಳೂರು
Team Udayavani, Dec 23, 2018, 12:36 PM IST
ಮಂಗಳೂರು ನಗರ ಯೋಜನಾ ಬದ್ಧವಾಗಿ ಬೆಳೆದ ನಗರವಲ್ಲ. ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿ ಸುತ್ತಮುತ್ತಲಿನ ಕೆಲವು ಗ್ರಾಮಗಳನ್ನು ತನ್ನ ತೆಕ್ಕೆಗೆ ಸೆಳೆದುಕೊಂಡು ಬೆಳೆದಿದೆ. ಇನ್ನಷ್ಟು ವಿಸ್ತರಿಸಿಕೊಳ್ಳುತ್ತಿದೆ. ಈಗ ಅದಕ್ಕೊಂದು ವ್ಯವಸ್ಥಿತ ರೂಪಕೊಡುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಇದರಲ್ಲಿ ಕೆಲವು ಅನುಷ್ಠಾನಗೊಂಡಿದ್ದರೆ ಇನ್ನು ಕೆಲವು ಪ್ರಸ್ತಾವನೆಯಲ್ಲೇ ಉಳಿದುಕೊಂಡಿದೆ. ಮಾತ್ರವಲ್ಲ ಕೆಲವೊಂದು ಅತ್ಯುತ್ತಮ ಯೋಜನೆಗಳನ್ನು ನಿರ್ಲಕ್ಷಿಸಲಾಗಿದೆ. ನಗರದ ಅಭಿವೃದ್ಧಿಗೆ ಪೂರಕವಾದ ಒಂದಷ್ಟು ಯೋಜನೆಗಳು ಇಲ್ಲಿವೆ. ಇವುಗಳನ್ನೂ ಸ್ಮಾರ್ಟ್ ಸಿಟಿಯ ಯೋಜನೆಗೆ ಸೇರಿಸಿದರೆ ಸ್ವಚ್ಛ, ಸುಂದರ, ಸ್ವಸ್ಥ ನಗರವಾಗಿ ಬೆಳೆಯಲು ಸಾಧ್ಯವಿದೆ.
ಮಂಗಳೂರು ನಗರದಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಇದರಲ್ಲಿ ನಗರದಲ್ಲಿ ರಸ್ತೆ, ನೀರು, ಬಸ್ ನಿಲ್ದಾಣ, ಮಾರುಕಟ್ಟೆ ಸಹಿತ ಮೂಲ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಜತೆಗೆ ನಗರ ಸುಂದರೀಕರಣಕ್ಕೂಪ್ರಾಶಸ್ತ್ಯ ನೀಡಲಾಗಿದೆ. ಆದರೆ ಸ್ಮಾರ್ಟ್ ಸಿಟಿ ಯೋಜನೆ ಅನುದಾನದಲ್ಲಿ ಮೂಲಸೌಕರ್ಯ ಆವಶ್ಯಕತೆಗಳ ಉನ್ನತೀಕರಣಕ್ಕೆ ಸೀಮಿತ ಅವಕಾಶ ಮಾತ್ರ ಇದೆ. ಆದ್ದ ರಿಂದ ಇದರ ಜತೆಗೆ ನಗರದ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಾಗಲೇ ಪ್ರಸ್ತಾವನೆ ರೂಪದಲ್ಲಿರುವ ಒಂದಷ್ಟು ಯೋಜನೆಗಳನ್ನು ಪರಿಗಣಿಸುವುದು ಅವಶ್ಯ.
ಇದರಲ್ಲಿ ಮುಖ್ಯವಾಗಿ ಫ್ಲೈಓವರ್, ಅಂಡರ್‌ಪಾಸ್, ಸ್ಯಾಟಲೈಟ್ ಬಸ್ ನಿಲ್ದಾಣಗಳು, ನಗರದೊಳಗೆ ವಾಹನ ದಟ್ಟನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ರಿಂಗ್ ರೋಡ್, ನಗರವನ್ನು ಹೊರ ಪ್ರದೇಶಗಳಿಗೆ ವಿಸ್ತರಿಸಿ ನಗರ ದಟ್ಟನೆಯನ್ನು ಕುಗ್ಗಿಸುವುದು ಮುಂತಾದ ಯೋಜನೆಗಳ ಅನುಷ್ಠಾನಕ್ಕೂ ಆದ್ಯತೆ ನೀಡಿದರೆ ಸಮಗ್ರ ಅಭಿವೃದ್ಧಿಗೆ ಪೂರಕವಾಗುತ್ತದೆ.
ಸ್ಯಾಟಲೈಟ್ ಬಸ್ ನಿಲ್ದಾಣಗಳು
ಕರ್ನಾಟಕದ ಹೆಬ್ಟಾಗಿಲು, ಶಿಕ್ಷಣ ಕೇಂದ್ರ ಎಂದೆಲ್ಲ ಕರೆಸಿಕೊಳ್ಳುತ್ತಿರುವ ಮಂಗಳೂರು ರಾಜ್ಯದಲ್ಲಿ ಅತ್ಯಂತ ತ್ವರಿತಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ಅನುಗುಣವಾಗಿ ಸಾರ್ವಜನಿಕ ಸಂಚಾರ ವ್ಯವಸ್ಥೆಯ ಸಮರ್ಪಕ ನಿರ್ವಹಣೆಯ ದೃಷ್ಟಿಯಿಂದ ಮಲ್ಲಿಕಟ್ಟೆ, ಕಂಕನಾಡಿ ಹಾಗೂ ಮಂಗಳಾದೇವಿಗಳಲ್ಲಿ ಉಪ ಬಸ್ ನಿಲ್ದಾಣಗಳನ್ನು ನಿರ್ಮಿಸುವ ಪ್ರಸ್ತಾವನೆ ದಶಕದ ಹಿಂದೆಯೇ ರೂಪಿಸಲಾಗಿತ್ತು. ಮಂಗಳೂರು ನಗರದಲ್ಲಿ ಬಹುತೇಕ ಸಾರ್ವಜನಿಕ ಬಸ್ ಸಂಚಾರದ ಕೇಂದ್ರ ಸ್ಥಾನವಾಗಿ ಹಂಪನಕಟ್ಟೆ, ಸ್ಟೇಟ್‌ಬ್ಯಾಂಕ್ ಆಗಿ ಉಳಿದುಕೊಂಡಿದೆ. ಮಂಗಳೂರು ಕೇಂದ್ರ ಬಸ್ ನಿಲ್ದಾಣವನ್ನು ಪಂಪ್ ವೆಲ್‌ಗೆ ಸ್ಥಳಾಂತರಿಸುವ ಯೋಜನೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಒಳಪಡಿಸಿದ್ದರೂ ಅನುಷ್ಠಾನದ ನಿಟ್ಟಿನಲ್ಲಿ ಸ್ಪಷ್ಟ ನಿರ್ಧಾರ ಹೊರಬಿದ್ದಿಲ್ಲ.
ರಿಂಗ್‌ರೋಡ್ ಪ್ರಸ್ತಾವನೆಗಳು
ಬೆಂಗಳೂರು ನಗರದಲ್ಲಿ ವಾಹನ ದಟ್ಟನೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದಿಶೆಯಲ್ಲಿ ರಿಂಗ್‌ರೋಡ್‌ಗಳಿಗೆ ಆದ್ಯತೆ ನೀಡಿ ಕಾರ್ಯಗತಗೊಳಿಸಲಾಗುತ್ತಿದೆ. ಜತೆಗೆ ಪರ್ಯಾಯ ರಸ್ತೆಗಳಿಗೂ ಒತ್ತು ನೀಡಲಾಗುತ್ತಿದೆ. ಸಾರ್ವಜನಿಕ ಸಂಚಾರ ವ್ಯವಸ್ಥೆಯಲ್ಲಿ ಶೇ. 60ರಷ್ಟು ಸಂಚಾರವನ್ನು ನಗರದ ಹೊರವಲಯಕ್ಕೆ ವರ್ಗಾಯಿಸುವ ನಿಟ್ಟಿನಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮಹಾಯೋಜನೆ ರೂಪಿಸಿದೆ. ಇದರಂತೆ ಪ್ರಸ್ತುತ ರಿಂಗ್‌ರೋಡ್‌ಗಳ ಜತೆಗೆ ಇನ್ನೂ ನಾಲ್ಕು ಹೊಸ ರಿಂಗ್‌ರೋಡ್ ಗಳನ್ನು 2031ರ ವೇಳೆಗೆ ಪೂರ್ತಿಗೊಳಿಸುವ ಯೋಜನೆ ಇರಿಸಿಕೊಂಡಿದೆ. ಮಂಗಳೂರು ನಗರದಲ್ಲೂ ಸಂಚಾರ ಸಮಸ್ಯೆ ಕಾಡಲಾರಂಭಿಸಿದೆ. ಆದರೆ ಪ್ರಸ್ತುತ ಮಂಗಳೂರು ನಗರ ಒಂದು ರಿಂಗ್ ರೋಡ್ ಕೂಡ ಹೊಂದಿಲ್ಲ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಾಗಲೇ ಮಂಗಳಾ ಕಾರ್ನಿಶ್, ನೇತ್ರಾವತಿ ಸೇತುವೆಯಿಂದ ಕಣ್ಣೂರು ರಿಂಗ್ ರೋಡ್ ಹಾಗೂ ಸಾಗರ ಮಾಲಾ ಯೋಜನೆಯಲ್ಲಿ ಮಂಗಳೂರು ಹಳೆ ಬಂದರು- ಕುಳೂರು ರಿಂಗ್ ರೋಡ್ ಪ್ರಸ್ತಾವನೆ ರೂಪಿಸಲಾಗಿದೆ.
ಮಂಗಳೂರು ನಗರ ವಿಸ್ತೀರ್ಣದಲ್ಲಿ ಇತರ ನಗರಗಳಿಗೆ ಹೋಲಿಸಿದರೆ ಕಿರಿದಾದರೂ ಮೂರು ರಾಷ್ಟ್ರೀಯ ಹೆದ್ದಾರಿ ಗಳು ನಗರದೊಳಗೆ ಹಾದುಹೋಗುತ್ತಿವೆ. ರಾಷ್ಟ್ರೀಯ ಹೆದ್ದಾರಿ 66, ರಾ.ಹೆ. 75 ಹಾಗೂ ರಾ.ಹೆ. 169 ಪ್ರಮುಖವಾದ ರಾಷ್ಟ್ರೀಯ ಹೆದ್ದಾರಿಗಳಾಗಿದ್ದು, ಮಂಗಳೂರು ನಗರ ಮಧ್ಯ ಭಾಗದಲ್ಲಿ ಹಾದುಹೋಗುವುದರಿಂದ ಸಂಚಾರ ದಟ್ಟನೆ ಮಿತಿ ಮೀರಿದೆ. ಟ್ರಾಫಿಕ್ ತಡೆ ನಿತ್ಯ ಸಮಸ್ಯೆಯಾಗಿ ಕಾಡುತ್ತಿದೆ. ಹೆದ್ದಾರಿಗಳಲ್ಲಿ ಹಾದುಹೋಗುವ ವಾಹನಗಳು ನಗರದೊಳಗೆ ಬಾರದೆ ಹೊರವಲಯದಲ್ಲೇ ಸಾಗುವಂತಾದರೆ ಮಂಗಳೂರಿನಲ್ಲಿ ಶೇ. 50ರಷ್ಟು ವಾಹನದಟ್ಟನೆ ಕಡಿಮೆಯಾಗುತ್ತದೆ.
ನಗರದ ಇಂದಿನ ಆವಶ್ಯಕತೆ ಮತ್ತು ಮುಂದಿನ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಪ್ರಸ್ತಾವನೆಗಳನ್ನು ರೂಪಿಸಲಾಗಿದೆ. ಆದ್ಯತೆಯ ನೆಲೆಯಲ್ಲಿ ಇವುಗಳನ್ನು ಕಾರ್ಯರೂಪಕ್ಕೆ ಬರುವಲ್ಲಿ ಕಾರ್ಯೋನ್ಮುಖವಾಗುವುದರಿಂದ ನಗರ ಪ್ರಸ್ತುತ ಎದುರಿಸುತ್ತಿರುವ ಮತ್ತು ಮುಂದೆ ಎದುರಿಸಬಹುದಾದ ಸಮಸ್ಯೆಗಳಿಗೆ ಒಂದಷ್ಟು ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.
ಫ್ಲೈ ಓವರ್, ಅಂಡರ್‌ಪಾಸ್
ನಗರದೊಳಗಿನ ಸಂಚಾರ ವ್ಯವಸ್ಥೆ ಸುಧಾರಣೆ ನಿಟ್ಟಿನಲ್ಲೂ ಒಂದಷ್ಟು ಯೋಜನೆಗಳನ್ನು ಕೈಗೊಳ್ಳುವುದು ಅವಶ್ಯ. ಕೆಪಿಟಿ, ನಂತೂರು ವೃತ್ತಗಳಲ್ಲಿಫ್ಲೈ ಓವರ್‌ಗಳನ್ನು ನಿರ್ಮಿಸಬೇಕು ಎಂಬುದಾಗಿ ನಾಗರಿಕರು, ಜನಪ್ರತಿನಿಧಿಗಳು ಹೆದ್ದಾರಿ ಇಲಾಖೆ ಹಾಗೂ ಸರಕಾರವನ್ನು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದಾರೆ. ನಗರದಲ್ಲಿ ಫ್ಲೈ ಓವರ್ ಪ್ರಸ್ತಾವನೆ ಹೊಸದೇನೂ ಅಲ್ಲ. 1992ರಲ್ಲಿ ವೀರಪ್ಪ ಮೊಯಿಲಿ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಹಂಪನಕಟ್ಟೆಯಲ್ಲಿ ಫ್ಲೈ ಓವರ್ ರಚನೆ ಪ್ರಸ್ತಾವ ಕೇಳಿ ಬಂದಿತ್ತು. ಹಂಪನಕಟ್ಟೆಯ ಸಿಂಡಿಕೇಟ್ ಬ್ಯಾಂಕ್ ಕಟ್ಟಡದ ಬಳಿಯಿಂದ ಪುರಭವನದ ಬಳಿಯ ಕ್ಲಾಕ್ ಟವರ್‌ವರೆಗೆ (ಪ್ರಸ್ತುತ ಕ್ಲಾಕ್‌ಟವರ್‌ನ್ನು ತೆಗೆಯಲಾಗಿದೆ) ಫ್ಲೈ ಓವರ್ ರಚಿಸುವ ಬಗ್ಗೆ ಪ್ರಾಥಮಿಕ ಹಂತದ ಚರ್ಚೆಗಳು ನಡೆದಿತ್ತು. ರಾ.ಹೆ. 66ರಲ್ಲಿ ನಂತೂರು ವೃತ್ತ ವಾಹನ ಚಾಲಕರ ಪಾಲಿಗೆ ಗೊಂದಲದ ಗೂಡಾಗಿದೆ. ವಾಹನ ಸಂಚಾರ ಪದೇಪದೇ ಸ್ಥಗಿತಗೊಳ್ಳುವುದು ಇಲ್ಲಿ ನಿರಂತರವಾಗಿ ಕಾಡುವ ಸಮಸ್ಯೆ. ಅಪಘಾತಗಳಿಗೂ ಕಾರಣವಾಗುತ್ತಿದೆ. ನಂತೂರು ವೃತ್ತದಲ್ಲಿ ಸಂಚಾರ ದಟ್ಟನೆಯ ಸ್ಥಿತಿ ಹಾಗೂ ಸಾರ್ವಜನಿಕರ ಬೇಡಿಕೆಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇಲ್ಲಿ ಅಂಡರ್‌ಪಾಸ್ ನಿರ್ಮಾಣ ಪ್ರಸ್ತಾವನೆ ಸಿದ್ಧಪಡಿಸಿದೆ. ಇದೇ ರೀತಿ ಕೆಪಿಟಿ ವೃತ್ತದ ಬಳಿ ಫ್ಲೈ ಓವರ್‌ಗೂ ಬಹಳಷ್ಟು ಬೇಡಿಕೆ ಇದೆ. ಹಂಪನಕಟ್ಟೆ ಪುರಭವನದ ಬಳಿ ಸ್ಕೈವಾಕ್‌ಗೆ ಶಿಲಾನ್ಯಾಸ ನೆರವೇರಿದ್ದರೂ ಈಗ ಇದರ ಬದಲು ಅಂಡರ್‌ಪಾಸ್ ಪ್ರಸ್ತಾವನೆ ಕೇಳಿಬಂದಿದೆ. ಇದು ನಗರದೊಳಗೆ ಸುಗಮ ಸಂಚಾರ ನಿಟ್ಟಿನಲ್ಲಿ ಆಗಬೇಕಾದ ಪ್ರಮುಖ ಯೋಜನೆಗಳು.
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.