ಪ್ರವಾಸೋದ್ಯಮ ಸಮಗ್ರ ಯೋಜನೆ ರೂಪುಗೊಳ್ಳಲಿ
Team Udayavani, Sep 23, 2018, 12:38 PM IST
ಸ್ಮಾರ್ಟ್ ನಗರಿಯಾಗಿ ಬೆಳೆದಿರುವ ಮಂಗಳೂರು ನಗರದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಅವಕಾಶವಿದೆ. ಜತೆಗೆ ಸಂಪೂರ್ಣ ದ.ಕ. ಜಿಲ್ಲೆ ಮತ್ತು ಉಡುಪಿ ಜಿಲ್ಲೆಯನ್ನೂ ಸೇರಿಸಿದರೆ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಇರುವ ವಿಪುಲ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ಸಮಗ್ರ ಮಹಾ ಯೋಜನೆಯೊಂದು ಸಿದ್ಧಪಡಿಸಿಕೊಳ್ಳಬೇಕು. ಧಾರ್ಮಿಕ, ಸಾಗರ, ಹೆಲ್ತ್ ಟೂರಿಸಂಗೆ ಸಂಬಂಧಪಟ್ಟ ವಿವಿಧ ಅವಕಾಶಗಳ ಬಗ್ಗೆ ವಿಶ್ಲೇಷಣೆ ನಡೆಸಿ, ಈವರೆಗೆ ಆಗಿರುವ ಬೆಳವಣಿಗೆ, ಮುಂದೆ ಆಗಬೇಕಿರುವ ಕಾರ್ಯಗಳ ರೂಪುರೇಶೆಗಳ ಬಗ್ಗೆಯೂ ಯೋಜನೆಯಲ್ಲಿ ಪ್ರಸ್ತಾವಿಸಿದರೆ ಮಂಗಳೂರು ಮಾತ್ರವಲ್ಲ ಸಮಗ್ರ ಕರಾವಳಿ ಪ್ರವಾಸೋದ್ಯಮಕ್ಕೆ ಸಂಪೂರ್ಣವಾಗಿ ತೆರೆದುಕೊಳ್ಳಲು ಸಾಧ್ಯವಿದೆ.
ಮಂಗಳೂರು ಹಾಗೂ ಉಡುಪಿಯನ್ನು ಪ್ರಧಾನ ಕೇಂದ್ರವಾಗಿರಿಸಿಕೊಂಡು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ಇರುವ ವಿಪುಲ ಅವಕಾಶಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ವಿವಿಧ ಕ್ಷೇತ್ರಗಳನ್ನು ಒಳಗೊಂಡ ಮಹಾಯೋಜನೆಯೊಂದನ್ನು ( ಮಾಸ್ಟರ್ ಪ್ಲ್ಯಾನ್) ಸಿದ್ಧಪಡಿಸುವುದು ಅವಶ್ಯವಾಗಿದೆ.
ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಮುಖವಾಗಿ ಧಾರ್ಮಿಕ ಪ್ರವಾಸೋದ್ಯಮ, ಸಾಗರ ಪ್ರವಾಸೋದ್ಯಮ ಹಾಗೂ ಹೆಲ್ತ್ ಟೂರಿಸಂಗೆ ( ಆರೋಗ್ಯ ಪ್ರವಾಸೋದ್ಯಮ) ಅತೀ ಹೆಚ್ಚಿನ ಅವಕಾಶಗಳಿವೆ. ಈ ಮೂರು ಕ್ಷೇತ್ರಗಳು ಒಂದಕ್ಕೊಂದು ಪೂರಕವಾಗಿವೆ. ಈ ಮೂರು ಕ್ಷೇತ್ರಗಳನ್ನು ಸೇರಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ಮಾಸ್ಟರ್ ಪ್ಲ್ಯಾನ್ ಒಂದನ್ನು ರೂಪಿಸಿ ಅನುಷ್ಠಾನಗೊಳಿಸಿದರೆ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಮಹತ್ತರ ಆಯಾಮ ಲಭಿಸಲಿದೆ.
ರಾಜ್ಯದ ಹಾಗೂ ದೇಶದ ಇತರ ಜಿಲ್ಲೆಗಳನ್ನು ಅವಲೋಕಿಸಿದರೆ ಕರ್ನಾಟಕದಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ನೀಡಿರುವ ಆದ್ಯತೆ ಸಾಲದು ಎಂಬ ಭಾವನೆ ಸಾರ್ವತ್ರಿಕವಾಗಿದೆ. ಸರಕಾರದ ಮಟ್ಟದಲ್ಲಿ ಈ ಮೂರು ಜಿಲ್ಲೆಗಳಲ್ಲಿ ಪ್ರವಾಸೋದ್ಯಮದ ಬೆಳವಣಿಗೆಯ ಗತಿ ನಿಟ್ಟಿನಲ್ಲಿ ಆಗಿರುವ ಯೋಜನೆಗಳು, ಕಾರ್ಯಕ್ರಮಗಳ ಅಂಕಿಅಂಶಗಳಲ್ಲಿ ಸಾಕಷ್ಟು ಬೆಳವಣಿಗೆಯಾಗಬೇಕಿವೆ.
ಧಾರ್ಮಿಕ ಪ್ರವಾಸೋದ್ಯಮ
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ವಿವಿಧ ಧರ್ಮಗಳಿಗೆ ಸೇರಿದ ಅನೇಕ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಿವೆ. ದೇಶ ವಿದೇಶಗಳಿಂದ ಬಹಳಷ್ಟು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಿದ್ದು ಧಾರ್ಮಿಕ ಪ್ರವಾಸೋದ್ಯಮ ಅಭಿವೃದ್ಧಿಗೂ ಇಲ್ಲಿ ಹೆಚ್ಚಿನ ಅವಕಾಶಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯೊಂದನ್ನೇ ಪರಿಗಣನೆಗೆ ತೆಗೆದುಕೊಂಡರೆ ಮಂಗಳೂರಿನಲ್ಲಿ ಕದ್ರಿ ಶ್ರೀ ಮಂಜುನಾಥ ಕ್ಷೇತ್ರ , ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ , ಶ್ರೀಮಂಗಳಾದೇವಿ ಕ್ಷೇತ್ರ, ಮೂಲ್ಕಿ ಶ್ರೀ ಕ್ಷೇತ್ರ ಬಪ್ಪನಾಡು , ಬಾವುಟಗುಡ್ಡೆ ಸೈಂಟ್ ಅಲೋಶಿಯಸ್ ಚಾಪೆಲ್, ಉಳ್ಳಾಲ ಸಯ್ಯದ್ ಮದನಿ ದರ್ಗಾ, ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರ ಹಾಗೂ ಜಿಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ , ಶ್ರೀ ಕ್ಷೇತ್ರ ಪೊಳಲಿ , ಶ್ರೀ ಕ್ಷೇತ್ರ ಕಟೀಲು, ಮೂಡಬಿದಿರೆ ಸಾವಿರಕಂಬ ಬಸದಿ ಮೊದಲಾದ ಪ್ರಸಿದ್ಧ ಕ್ಷೇತ್ರಗಳಿವೆ.
ಸಾಗರ ಪ್ರವಾಸೋದ್ಯಮ
ಕರ್ನಾಟಕದ ಕರಾವಳಿಯಲ್ಲಿ ಸೋಮೇಶ್ವರದಿಂದ ಕಾರವಾರದವರೆಗೆ ಸುಮಾರು 300 ಕಿ.ಮೀ. ಸಾಗರ ತೀರವಿದೆ. ದ. ಕನ್ನಡ ಜಿಲ್ಲೆಯಲ್ಲಿ 42 ಕಿ.ಮೀ. ಹಾಗೂ ಉಡುಪಿ ಜಿಲ್ಲೆ ಯಲ್ಲಿ 98 ಕಿ.ಮೀ. ಸಮುದ್ರ ತೀರವನ್ನು ಹೊಂದಿದೆ. ಮಂಗಳೂರು ನಗರದಲ್ಲಿ ಪಣಂಬೂರು, ತಣ್ಣೀರುಬಾವಿ, ಸೋಮೇಶ್ವರ , ತಲಪಾಡಿ , ಸಸಿಹಿತ್ಲು, ಸುರತ್ಕಲ್ ಮುಖ್ಯವಾಗಿ ಗುರುತಿಸಿಕೊಂಡಿರುವ ಬೀಚ್ ಗಳು . ಪಣಂಬೂರು , ತಣ್ಣೀರುಬಾವಿ, ಸೋಮೇಶ್ವರ ಬೀಚ್ ಅಭಿವೃದ್ಧಿ ಕಂಡು ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತಿವೆ. ಸಸಿಹಿತ್ಲು ಬೀಚ್ ರಾಷ್ಟ್ರಮಟ್ಟದಲ್ಲಿ ಒಂದು ಪ್ರಮುಖ ಸರ್ಫಿಂಗ್ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಮಟ್ಟದ ಸರ್ಫಿಂಗ್ ಸ್ಪರ್ಧೆ ಮಂಗಳೂರಿನಲ್ಲಿ ಸಾಗರ ಪ್ರವಾಸೋದ್ಯಮದಲ್ಲಿರುವ ಹೊಸ ಸಾಧ್ಯತೆಗಳನ್ನು ಅನಾವರಣಗೊಳಿಸಿತ್ತು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸುವಂತೆ ಮಾಡಿತು. ವಿಶ್ವ ಸರ್ಫ್ ಲೀಗ್‌ನ ಸ್ಟೀಪನ್ ರಾಬರ್ಟ್‌ಸ್ ಅವರು ಸಸಿಹಿತ್ಲು ಬೀಚ್ ಬಗ್ಗೆ ಶ್ಲಾಘನೆ ವ್ಯಕ್ತ ಪಡಿಸಿದ್ದರು. ಕೇಂದ್ರದ ಪ್ರವಾಸೋದ್ಯಮ ಸಚಿವಾಲಯ ಸ್ವದೇಶಿ ದರ್ಶನ್ ಯೋಜನೆಯಲ್ಲಿ ಮಂಗಳೂರಿನ ಕೆಲವು ಬೀಚ್ ಗಳಲ್ಲಿ ತೇಲುವ ರೆಸ್ಟೋರೆಂಟ್ ಸಹಿತ ಕೆಲವು ಪ್ರವಾಸಿ ಆಕರ್ಷಣೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸುತ್ತಿದೆ.
ಮಂಗಳೂರು ಭಾಗದ ಸಾಗರತೀರದಲ್ಲಿ ಇರುವ ಬೀಚ್‌ಗಳ ಜತೆಗೆ ಇತರ ತಾಣಗಳನ್ನು ಬೀಚ್ ಆಗಿ
ಅಭಿವೃದ್ಧಿ ಪಡಿಸಲು ಸಾಧ್ಯವಿದೆ ಎಂಬ ನಿಟ್ಟಿನಲ್ಲಿ ಸಮಗ್ರ ಸರ್ವೆ ಕಾರ್ಯ ನಡೆದು ಪ್ರದೇಶಗಳನ್ನು ಗುರುತಿಸುವ ಕಾರ್ಯ ನಡೆಯಬೇಕಾಗಿದೆ. ಮಂಗಳೂರು ನಗರದ ಇಕ್ಕೆಲಗಳಲ್ಲಿ ನೇತ್ರಾವತಿ ಮತ್ತು ಫಲ್ಗುಣಿ ನದಿಗಳು ಹರಿಯುತ್ತಿವೆ. ನದಿಗಳ ಸುತ್ತಮುತ್ತ ಸುಂದರ ಕುದ್ರುಗಳು
ನಿರ್ಮಿಸಿದ್ದು ದಟ್ಟ ಹಸುರಿನಿಂದ ಕಂಗೊಳಿಸುತ್ತಿವೆ. ಎರಡೂ ನದಿಗಳ ಇಕ್ಕೆಲಗಳಲ್ಲಿ ಹಿನ್ನೀರಿನ ರಮಣನೀಯ ತಾಣಗಳಿವೆ.
ಪಿಲಿಕುಳ ನಿಸರ್ಗಧಾಮವೂ ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದ್ದು, ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಪೂರಕ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.
ಹೆಲ್ತ್ ಟೂರಿಸಂ
ದಕ್ಷಿಣ ಕನ್ನಡ ಜಿಲ್ಲೆ, ಅದರಲ್ಲಿಯೂ ಮುಖ್ಯವಾಗಿ ಮಂಗಳೂರು ನಗರವನ್ನು ಹೆಲ್ತ್ ಟೂರಿಸಂ ಹಬ್ (ವೈದ್ಯಕೀಯ ಪ್ರವಾಸೋದ್ಯಮ ಕೇಂದ್ರ )ಆಗಿ ಅಭಿವೃದ್ಧಿ ಪಡಿಸಲು ವಿಪುಲ ಅವಕಾಶಗಳಿವೆ. ದೇಶದಲ್ಲಿ ಹೆಲ್ತ್ ಟೂರಿಸಂಗೆ ಮಂಗಳೂರು ಅತ್ಯಂತ ಸೂಕ್ತ ತಾಣವಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಮಂಗಳೂರು ನಗರ ಗುರುತಿಸಿಕೊಂಡಿದೆ. ವೈದ್ಯಕೀಯ ಶಿಕ್ಷಣದಲ್ಲಿ 7 ವೈದ್ಯಕೀಯ ಕಾಲೇಜುಗಳು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಹಾಗೂ ಐದು ದಂತ ವೈದ್ಯಕೀಯ ಕಾಲೇಜು, 100ಕ್ಕೂ ಅಧಿಕ ಅರೆ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಮಂಗಳೂರಿನಲ್ಲಿವೆ. ದೇಶದ ವಿವಿಧೆಡೆಗಳಿಂದ ಹಾಗೂ ಏಷ್ಯಾ ಹಾಗೂ ಆಫ್ರಿಕಾ ದೇಶಗಳಿಂದ ರೋಗಿಗಳು ಮಂಗಳೂರಿಗೆ ಈಗಾಗಲೇ ಚಿಕಿತ್ಸೆಗಾಗಿ ಆಗಮಿಸುತ್ತಿದ್ದಾರೆ. ಚಿಕಿತ್ಸೆಗೆ ಆಗಮಿಸುವುದಕ್ಕೆ ವಿಮಾನ, ರೈಲು ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಸಹಿ ತ ಅತ್ಯುತ್ತಮ ಸಂಪರ್ಕ ಸೌಕರ್ಯಗಳಿವೆ. ಇನ್ನೊಂದೆಡೆ ಮಂಗಳೂರು ಸ್ಮಾರ್ಟ್ ಸಿಟಿಯಾಗಿ ಆಯ್ಕೆಯಾಗಿದ್ದು ದೇಶದ 13ನೇ ವಾಣಿಜ್ಯ ಕೇಂದ್ರವಾಗಿ ಪರಿಗಣಿಸಲ್ಪಟ್ಟಿದೆ. ಬಹುತೇಕ ಎಲ್ಲ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಸೌಲಭ್ಯ ಮತ್ತು ತಜ್ಞರು ನಮ್ಮಲ್ಲಿದ್ದಾರೆ.
ಮಂಗಳೂರು ನಗರವನ್ನು ಹೆಲ್ತ್ ಟೂರಿಸಂ ಸಿಟಿಯಾಗಿ ರೂಪಿಸಲು ವೈದ್ಯಕೀಯ ಸೇವಾ ಕ್ಷೇತ್ರದಲ್ಲಿ ವ್ಯೂಹಾತ್ಮಕ ಯೋಜನೆಗಳನ್ನು ಸಿದ್ಧಪಡಿಸಿ ಅನುಭವ ಹೊಂದಿರುವ ಹಾಗೂ ಹೆಲ್ತ್ ಟೂರಿಸಂ ಬಗ್ಗೆ ಪರಿಣತಿ ಹೊಂದಿರುವ ಮಂಗಳೂರು ಮೂಲದ ಮೈಂಡ್‌ಫುಲ್ ಕನ್ಸಲ್ಟಿಂಗ್ ಸಂಸ್ಥೆಯು ಈಗಾಗಲೇ ಮಾದರಿಯೊಂದನ್ನು ಸಿದ್ಧಪಡಿಸಿದ್ದು ಕೇಂದ್ರ ಸರಕಾರದ ನೀತಿ ಆಯೋಗಕ್ಕೆ ಸಲ್ಲಿಸಿದೆ. ಹೆಲ್ತ್ ಟೂರಿಸಂ ದಕ್ಷಿಣ ಕನ್ನಡ ಜಿಲ್ಲೆಗೆ ವಾರ್ಷಿಕ 3,000 ಕೋಟಿ ರೂ. ಅಧಿಕ ಆದಾಯ ಹರಿದುಬರಲಿದೆ ಎಂದು ಅಂದಾಜಿಸಲಾಗಿದೆ.
ಕೇಶವ ಕುಂದರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.