ಮಂಗಳೂರಿನಿಂದ ಗೋವಾಕ್ಕೆ ಟೂರಿಸ್ಟ್ ಸರ್ಕ್ಯೂಟ್
Team Udayavani, Feb 23, 2020, 5:46 AM IST
ಕರಾವಳಿಯಲ್ಲಿ ಪ್ರವಾಸೋದ್ಯಮದಲ್ಲಿ ಇರುವ ವಿಪುಲ ಅವಕಾಶಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಮಂಗಳೂರಿನಿಂದ ಗೋವಾದವರೆಗೆ ಟೂರಿಸಂ ಸರ್ಕ್ಯೂಟ್ ಮಾಡಬೇಕು ಎಂದು ಸಲಹೆ ನೀಡಿದೆ.
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಹೊಸ ಆಯಾಮವನ್ನು ನೀಡುವ ದಿಸೆಯಲ್ಲಿ ಟೂರಿಸಂ ಸರ್ಕ್ನೂಟ್ ಸ್ಥಾಪಿಸಬೇಕು ಎಂಬ ಪ್ರಸ್ತಾವನೆ ಕಳೆದ ಹಲವಾರು ವರ್ಷಗಳಿಂದ ಇದೆ. ಇದೀಗ ರಾಜ್ಯ ಸರಕಾರ ನಿಯುಕ್ತಿಗೊಳಿಸಿರುವ ಡಿಲೊçಟ್ ಏಜೆನ್ಸಿ ನಡೆಸಿರುವ “ಎಕಾಮಿಕ್ ಡೆವಲಪ್‌ಮೆಂಟ್ ಅಸ್ಸೆಸ್‌ಮೆಂಟ್ ಫಾರ್ ಕೋಸ್ಟಲ್ ಡಿಸ್ಟ್ರಿಕ್ಟ್ ‘ ಸರ್ವೇ ಕರಾವಳಿಯಲ್ಲಿ ಪ್ರವಾಸೋದ್ಯಮದಲ್ಲಿ ಇರುವ ವಿಪುಲ ಅವಕಾಶಗಳನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳನ್ನು ಒಳಗೊಂಡಂತೆ ಮಂಗಳೂರಿನಿಂದ ಗೋವಾದವರೆಗೆ ಟೂರಿಸಂ ಸರ್ಕ್ನೂಟ್ ಮಾಡಬೇಕು ಎಂದು ಸಲಹೆ ನೀಡಿದೆ.
ಮಂಗಳೂರಿನಿಂದ ಗೋವಾದ ಮೂಲಕ ಕೊಂಕಣ ರೈಲುಮಾರ್ಗ ಹಾದುಹೋಗುತ್ತಿರುವುದರಿಂದ ಉತ್ತಮ ರೈಲು ಸೌಲಭ್ಯವಿದೆ. ರಾಷ್ಟ್ರೀಯ ಹೆದ್ದಾರಿ ಹಾದುಹೋಗುತ್ತಿದ್ದು ಉತ್ತಮ ರಸ್ತೆ ಸಂಪರ್ಕವಿದೆ. ದ. ಕ., ಉಡುಪಿ, ಉತ್ತರ ಕನ್ನಡದಲ್ಲಿ ಅನೇಕ ಪ್ರಖ್ಯಾತ ಧಾರ್ಮಿಕ ಕೇಂದ್ರಗಳು, ಪ್ರವಾಸಿ ತಾಣಗಳು,ಬೀಚ್‌ಗಳು, ಟ್ರೆಕ್ಕಿಂಗ್ ತಾಣಗಳು ಇವೆ. ಟೂರಿಸ್ಟ್ ಸರ್ಕ್ನೂಟ್ ಪ್ರಸ್ತಾವ ಕರಾವಳಿಗೆ ಹೊಸದೇನೂ ಅಲ್ಲ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಈ ಎರಡೂ ಜಿಲ್ಲೆಗಳನ್ನು ಒಳಗೊಂಡ ಮೆಗಾ ಸರ್ಕ್ನೂಟ್ ಪ್ರಸ್ತಾವನೆಯನ್ನು 2011 ರಲ್ಲಿ ಮಾಡಲಾಗಿತ್ತು. ಆಗ ಕೇಂದ್ರ ಪ್ರವಾಸೋದ್ಯಮ ಸಚಿವರಾಗಿದ್ದ ಸುಬೋದ್‌ಕಾಂತ್ ಸಹಾಯ್ ಅವರು 2011ರ ಡಿಸೆಂಬರ್‌ನಲ್ಲಿ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಕರಾವಳಿಯ ದ.ಕ.,ಉಡುಪಿ ಜಿಲ್ಲೆಗಳನ್ನು ಒಳಗೊಂಡಂತೆ ಮೆಗಾಸರ್ಕ್ನೂಟ್ ಕೊಡುಗೆಯನ್ನು ಪ್ರಕಟಿಸಿದ್ದರು. ಟೂರಿಸ್ಟ್ ಸರ್ಕ್ನೂಟ್ ಪ್ರಸ್ತಾವನೆ ರಾಜ್ಯ ಸರಕಾರದ ಕಡೆಯಿಂದ ಬರಬೇಕಾಗುತ್ತದೆ. ರಾಜ್ಯದಿಂದ ಪ್ರಸ್ತಾವನೆ ಬಂದ ಕೂಡಲೇ ಸಚಿವಾಲಯ ದಕ್ಷಿಣ ಭಾರತದಲ್ಲಿ ಯೋಜಿಸಿರುವ ಮೆಗಾಸರ್ಕ್ನೂಟ್ ಯೋಜನೆಗಳ ಪಟ್ಟಿಯಲ್ಲಿ ಇದನ್ನು ಸೇರಿಸುವುದಾಗಿ ಪ್ರಕಟಿಸಿದ್ದರು. ರಾಜ್ಯ ಸರಕಾರದ ಪ್ರವಾಸೋದ್ಯಮ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಉನ್ನತ ಮಟ್ಟ ಅಧಿಕಾರಿಗಳ ಸಮ್ಮುಖದಲ್ಲೇ ಸಚಿವರು ಇದನ್ನು ಪ್ರಸ್ತಾವಿಸಿದ್ದರೂ ಕೇಂದ್ರ ಪ್ರವಾಸೋದ್ಯಮ ಇಲಾಖೆಗೆ ರಾಜ್ಯದಿಂದ ಪ್ರಸ್ತಾವನೆ ಸಲ್ಲಿಕೆಯಾಗಲಿಲ್ಲ. ಫಲವಾಗಿ ದ.ಭಾರತದಲ್ಲಿ ಮಂಜೂರು ಮಾಡಿರುವ ಮೆಗಾಸರ್ಕ್ನೂಟ್‌ಗಳಲ್ಲಿ ದ.ಕನ್ನಡ ಹಾಗೂ ಉಡುಪಿ ಜಿಲ್ಲೆ ಅವಕಾಶದಿಂದ ವಂಚಿತವಾಯಿತು.
ಟೂರಿಸಂ ಸರ್ಕ್ಯೂಟ್
ಎಲ್ಲ ಅರ್ಹತೆಗಳಿದ್ದರೂ ಆಸಕ್ತಿ ಮತ್ತು ಉತ್ತೇಜನದ ಕೊರತೆಯಿಂದ ದ. ಕನ್ನಡ ಹಾಗೂ ಉಡುಪಿ ಜಿಲ್ಲೆ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿ ತಾಣಗಳ ನಕಾಶೆಯಲ್ಲಿ ಗುರುತಿಸಿಕೊಳ್ಳಲು ವಿಫಲವಾಗಿದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆ 2011-12ನೇ ಸಾಲಿನಲ್ಲಿ ದೇಶದಲ್ಲಿ 53 ಮೆಗಾ ಸರ್ಕ್ನೂಟ್/ಡೆಸ್ಟಿನೇಶನ್‌ಗಳನ್ನು ಗುರುತಿಸಿತ್ತು. ಇದರಲ್ಲಿ 35 ಯೋಜನೆಗಳಿಗೆ ಮಂಜೂರಾತಿ ಲಭಿಸಿದ್ದು ಕರ್ನಾಟಕದ ಹಂಪೆ, ಪಟ್ಟದಕಲ್ ಹಾಗೂ ಬಾದಾಮಿ, ಐಹೊಳೆ, ಕೇರಳದ ಮುಜಿರಿಸ್ ಹೆರಿಟೇಜ್ ಸರ್ಕ್ನೂಟ್, ಅಲಪುಳ ಹಿನ್ನೀರು ಸರ್ಕ್ಯೂಟ್ ಸೇರಿತ್ತು.
ಟೂರಿಸಂ ಸರ್ಕ್ನೂಟ್ ದ. ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡಬಲ್ಲುದು. ಪ್ರವಾಸಿ ತಾಣಗಳನ್ನು ಪ್ರವಾಸಿ ನಕ್ಷೆಯಲ್ಲಿ ವ್ಯಾಪಕವಾಗಿ ಜೋಡಿಸುವುದು, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯವಾಗಿ ಪ್ರವಾಸೋದ್ಯಮ ನಕಾಶೆಯಲ್ಲಿ ಸ್ಥಾನ ಕಲ್ಪಿಸುವುದು, ಪ್ರವಾಸಿ ತಾಣಗಳಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು, ಮೂಲಸೌಕರ್ಯಗಳ ಅಭಿವೃದ್ಧಿ, ಡಿಜಿಟಲ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಇವುಗಳಿಗೆ ವ್ಯಾಪಕ ಪ್ರಚಾರ ನೀಡಿ ಪ್ರವಾಸಿಗರನ್ನು ಆಕರ್ಷಿಸುವುದು ಮುಂತಾದುವುಗಳು ಟೂರಿಸಂ ಸರ್ಕ್ಯೂಟ್‌ನಲ್ಲಿ ಜೋಡಿಸಿಕೊಂಡಿರುತ್ತದೆ. ಕೇಂದ್ರ ಪ್ರವಾಸೋದ್ಯಮ ಇಲಾಖೆಯಲ್ಲಿರುವ ಹತ್ತಾರು ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.
ಪ್ರಮುಖ ಸಂದರ್ಶನ ತಾಣಗಳು
ಮಂಗಳೂರಿನಿಂದ ಗೋವಾದವರೆಗೆ ಟೂರಿಸ್ಟ್ ಸರ್ಕ್ಯೂಟ್ ರೂಪುಗೊಂಡರೆ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲೆಯಲ್ಲಿ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಲು ಸಾಧ್ಯವಾಗಬಹುದು. ಗೋವಾ, ಉತ್ತರ ಕನ್ನಡದ ಗೋಕರ್ಣ ಸೇರಿದಂತೆ ಪ್ರಖ್ಯಾತ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇವರನ್ನು ಮಂಗಳೂರಿಗೂ ಆಕರ್ಷಿಸಲು ಸಾಧ್ಯವಿದೆ. ದ.ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ತಾಣಗಳು ಸೇರಿದಂತೆ 18 ಪ್ರಮುಖ ತಾಣಗಳಿವೆ. ಇದರಲ್ಲಿ 11 ತಾಣಗಳು ಮಂಗಳೂರು ನಗರದಲ್ಲಿವೆ. ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಪೊಳಲಿ, ಶ್ರೀ ಕ್ಷೇತ್ರ ಕಟೀಲು, ಶ್ರೀ ಮಂಗಳಾದೇವಿ ಕ್ಷೇತ್ರ, ಕದ್ರಿ ಶ್ರೀ ಮಂಜುನಾಥ ಕ್ಷೇತ್ರ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ, ಮೂಲ್ಕಿ ಶ್ರೀ ಕ್ಷೇತ್ರ ಬಪ್ಪನಾಡು, ಸೋಮೇಶ್ವರ ಶ್ರೀ ಸೋಮನಾಥ ಕ್ಷೇತ್ರ, ಬಾವುಟಗುಡ್ಡೆ ಸೈಂಟ್ ಅಲೋಶಿಯಸ್ ಚಾಪೆಲ್, ಉಳ್ಳಾಲ ಸಯ್ಯದ್ ಮದನಿ ದರ್ಗಾ, ಮೂಡುಬಿದಿರೆ ಸಾವಿರಕಂಬ ಬಸದಿ, ಸುಂದರ ಬೀಚ್‌ಗಳಾದ ಸಸಿಹಿತ್ಲು ಬೀಚ್, ಪಣಂಬೂರು ಬೀಚ್, ತಣ್ಣೀರುಬಾವಿ ಬೀಚ್, ಸುಲ್ತಾನ್ ಬತ್ತೇರಿ ಸೋಮೇಶ್ವರ ಬೀಚ್, ಪಿಲಿಕುಳ ನಿಸರ್ಗಧಾಮ ಮುಂತಾದ ಅನೇಕ ಪ್ರವಾಸಿ ತಾಣಗಳಿವೆ.
– ಕೇಶವ ಕುಂದರ್