ಕಾಮಗಾರಿಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿ
Team Udayavani, Oct 28, 2018, 2:44 PM IST
ಸ್ಮಾರ್ಟ್ ಸಿಟಿಯಾಗಲು ಹೊರಟಿರುವ ಮಂಗಳೂರು ನಗರದಲ್ಲಿ ಸಮಸ್ಯೆಗಳದ್ದೇ ಸಾಲು. ಸಾರ್ವಜನಿಕ ರಸ್ತೆ, ಒಳಚರಂಡಿ ವ್ಯವಸ್ಥೆ, ಫುಟ್‌ಪಾತ್, ಬಸ್ ಬೇ ನಿರ್ಮಾಣ ಎಲ್ಲವೂ ಅರೆಬರೆ ಕಾಮಗಾರಿಯೊಂದಿಗೆ ನಿಲುಗಡೆಗೊಂಡಿದೆ. ಕಳೆದ ಮೇ ತಿಂಗಳಿನಲ್ಲಿ ಆರಂಭವಾದ ವಿವಿಧ ಸಣ್ಣ ಪುಟ್ಟ ಕಾಮಗಾರಿಗಳು ಕೊನೆಗೊಳ್ಳುವ ಲಕ್ಷಣಗಳೇ ಕಾಣುತ್ತಿಲ್ಲ. ಚರಂಡಿ ನೀರು ಬ್ಲಾಕ್ ಆದರೆ ಅಥವಾ ಏನಾದರೂ ಸಮಸ್ಯೆ ಕಾಣಿಸಿಕೊಂಡರೆ ರಸ್ತೆ ಮಧ್ಯದಲ್ಲಿ ಮ್ಯಾನ್‌ಹೋಲ್ ಅಗೆದು ತಿಂಗಳುಗಟ್ಟಲೆ ಹಾಗೇ ಬಿಡಲಾಗುತ್ತಿದೆ.
ಬಂಟ್ಸ್‌ಹಾಸ್ಟೆಲ್ ವೃತ್ತದ ಬಳಿ ಮುಖ್ಯರಸ್ತೆಯಲ್ಲಿ ಹಲವು ಸಮಯಗಳ ಬಳಿಕ ಮ್ಯಾನ್‌ಹೋಲ್ ತೆರೆದ ಸ್ಥಿತಿಯಲ್ಲಿತ್ತು. ಬಳಿಕ ಅದನ್ನು ಮುಚ್ಚಲಾಗಿತ್ತು. ಆನಂತರ ಬಿಜೈ ರಸ್ತೆಯಲ್ಲಿಯೂ ಇದೇ ಕತೆಯಾಯಿತು. ಈಗ ಜೈಲ್ ರಸ್ತೆಯಿಂದ ಬಿಜೈ ಸಂಪರ್ಕಿಸುವ ರಸ್ತೆಯಲ್ಲಿ ಮ್ಯಾನ್‌ಹೋಲ್ ಅಗೆದು ಸುತ್ತ ಬ್ಯಾರಿಕೇಡ್ ಹಾಕಿ ಬಿಡಲಾಗಿದೆ. ಮ್ಯಾನ್‌ಹೋಲ್ ತೆರೆದ ಸ್ಥಿತಿಯಲ್ಲಿದ್ದು ತಿಂಗಳಾಗುತ್ತಾ ಬಂದಿದ್ದರೂ, ಇನ್ನೂ ಸ್ಥಳೀಯಾಡಳಿತದ ಸಂಬಂಧಪಟ್ಟವರು ಅದನ್ನು ಶೀಘ್ರ ಕೆಲಸ ನಡೆಸಿ ಮುಚ್ಚುವ ಹಂತಕ್ಕೆ ಬಂದಿಲ್ಲ. ಇದು ವಾಹನ ನಿಬಿಡ ರಸ್ತೆಯಾದ್ದರಿಂದ ಮತ್ತು ಅತಿ ವೇಗದಲ್ಲಿ ವಾಹನಗಳು ಸಂಚರಿಸುತ್ತಿರುವುದರಿಂದ ಬ್ಯಾರಿಕೇಡ್ ಹಾಕಿರುವುದು ಏಕಾಏಕಿ ತಿಳಿಯದೆ ಅಪಘಾತ ಸಂಭವಿಸುವ ಸಾಧ್ಯತೆಗಳೂ ಇವೆ. ಅಲ್ಲದೇ ಇಲ್ಲಿ ಡಿವೈಡರ್ ಇಲ್ಲದಿರುವುದರಿಂದ ಎರಡೂ ಕಡೆಯಿಂದ ಬರುವ ವಾಹನಗಳು ಬ್ಯಾರಿಕೇಡ್ ತಿಳಿಯದೆ ಢಿಕ್ಕಿಯಾಗುವ ಸಂಭವವೂ ಇದೆ.
ಇನ್ನು ಎಂ.ಜಿ. ರೋಡ್, ಬಂಟ್ಸ್ ಹಾಸ್ಟೆಲ್ ಮುಂತಾದೆಡೆಗಳಲ್ಲಿ ಬಸ್ ಬೇ ನಿರ್ಮಾಣ ಕಾಮಗಾರಿಯೂ ಮಂದಗತಿಯಲ್ಲಿ ಸಾಗುತ್ತಿದೆ. ಬಸ್ ಬೇ ನಿರ್ಮಾಣವಾಗದಿರುವ ಹಿನ್ನೆಲೆಯಲ್ಲಿ ಎಲ್ಲೆಂದರಲ್ಲಿ ಬಸ್ ನಿಲುಗಡೆಗೊಳಿಸಲಾಗುತ್ತಿದ್ದು, ಪಾದಚಾರಿಗಳಿಗೂ ಅನಗತ್ಯ ತೊಂದರೆ ಉಂಟಾಗುತ್ತಿದೆ. ಸ್ಥಳೀಯಾಡಳಿತ ಶೀಘ್ರ ಇತ್ತ ಕಡೆ ಗಮನ ಹರಿಸಬೇಕಾದ ಅವಶ್ಯವಿದೆ. ನಗರದ ಅಲ್ಲಲ್ಲಿ ಫುಟ್‌ಪಾತ್ ಕೂಡ ತೆರೆದುಕೊಂಡಿದ್ದು, ಪಾದಚಾರಿಗಳಿಗೆ ನಡೆದಾಡಲು ಸೂಕ್ತ ವ್ಯವಸ್ಥೆಯೇ ಇಲ್ಲದಂತಾಗಿದೆ.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.