5 ಪರ್ಯಾಯ ನಡೆಸಿದ ವಾಮನ ಮೂರ್ತಿ
ಸರಳ ನಡೆ ನುಡಿಯ ಸಂತ ಶಿರೋಮಣಿ
Team Udayavani, Dec 30, 2019, 6:16 AM IST
ಶಿರೋಮಣಿ: ಉಡುಪಿಯ ಅಷ್ಟಮಠಗಳು ಮಾತ್ರವಲ್ಲ; ದೇಶದ ಯತಿ ಪರಂಪರೆಯಲ್ಲಿಯೇ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಅಗ್ರಮಾನ್ಯ- ವಿಶಿಷ್ಟ ಸ್ಥಾನವಿದೆ. ಸನ್ಯಾಸಾಶ್ರಮದ ಸಾಧನೆಯ ಜತೆಗೆ ಪ್ರಗತಿಶೀಲ ನಿಲುವಿನ ಗುರು ಸ್ಥಾನಕ್ಕೆ ಕಿರೀಟವಿಟ್ಟಂತಹ ಅಪ್ರತಿಮ ವ್ಯಕ್ತಿ-ಶಕ್ತಿ. ಶಾಸ್ತ್ರ ಪಾಂಡಿತ್ಯ, ಆಧ್ಯಾತ್ಮಿಕ, ಸಾಮಾಜಿಕ, ರಾಜಕೀಯ – ಹೀಗೆ ಹಲವು ಆಯಾಮಗಳಲ್ಲಿ ಮಾರ್ಗದರ್ಶನ ಮಾಡುವುದಕ್ಕೆ ಅವರಿಗಿದ್ದ ಸಾಮರ್ಥ್ಯವೇ ಇದಕ್ಕೆ ಕಾರಣ.
ಪ್ರಥಮ
ತತ್ತ್ವಜ್ಞಾನ ಸಮ್ಮೇಳನಕ್ಕೆ ಶ್ರೀಕಾರ: ಪ್ರಥಮ ಪರ್ಯಾಯದ ವೇಳೆ ಶ್ರೀಗಳಿಗೆ 21 ವರ್ಷ. ಪರ್ಯಾಯಕ್ಕೆ ಮುನ್ನ ನಂಜನಗೂಡಿನಲ್ಲಿ (10-12-1951) ಆಗಮತ್ರಯ, ಮತತ್ರಯ ಸಮ್ಮೇಳನದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಈ ಪುಟ್ಟ ಯತಿಯ ಭಾಷಣ ಕೇಳಿ ತಲೆದೂಗಿದವರಲ್ಲಿ ಮೈಸೂರಿನ ಜಯ ಚಾಮರಾಜೇಂದ್ರ ಒಡೆಯರೂ ಒಬ್ಬರು. ಆಗ ರಾಜರು ಅರಮನೆಗೆ ಕರೆಸಿ ಗೌರವಿಸಿದ್ದರು. ಪರ್ಯಾಯದ ಅವಧಿಯಲ್ಲಿ (1953ರ ಜನವರಿ 4ರಂದು ಉದ್ಘಾಟನೆ) ನಡೆದ ಅಖೀಲ ಭಾರತ ಮಾಧ್ವ ತಣ್ತೀಜ್ಞಾನ ಸಮ್ಮೇಳನ ಆ ಕಾಲದಲ್ಲಿ ಐತಿಹಾಸಿಕವಾದುದು.
ವಿವಿಧ ಮಠಗಳ ನಡುವೆ ಇದ್ದ ಕಂದಕ ಹೋಗಲಾಡಿಸಲು ಇರಿಸಿದ ಹೆಜ್ಜೆ ಇದಾಗಿತ್ತು. ಇದನ್ನು ಉದ್ಘಾಟಿಸಿದವರು ಜಯಚಾಮರಾಜೇಂದ್ರ ಒಡೆಯರ್. ಇದೇ ಸಮ್ಮೇಳನ ಮುಂದೆ ಅಖೀಲ ಭಾರತ ಮಾಧ್ವ ಮಹಾಮಂಡಲದ ಸ್ಥಾಪನೆಗೆ ಕಾರಣವಾಯಿತು. ಇದೇ ಸಂಸ್ಥೆ ಮುಂದೆ ವಿವಿಧ ಕಡೆ ವಿದ್ಯಾರ್ಥಿನಿಲಯ, ವಿದ್ಯಾರ್ಥಿವೇತನ ನೀಡಿ ಶೈಕ್ಷಣಿಕ ಸಾಧನೆಗೆ ಶ್ರೀಕಾರ ಹಾಡಿತು. ಶ್ರೀಕೃಷ್ಣ ಮಠದಲ್ಲಿ ಊಟದ ವ್ಯವಸ್ಥೆಯನ್ನು ಪುನಾರೂಪಿಸಿದ್ದು ಇದೇ ಪರ್ಯಾಯದಲ್ಲಿ.
ಅದುವರೆಗೆ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ ಇದ್ದ ಭೋಜನದ ವ್ಯವಸ್ಥೆಯನ್ನು ಇತರ ಕಾಲೇಜು ವಿದ್ಯಾರ್ಥಿಗಳಿಗೂ ವಿಸ್ತರಿಸಿದ್ದು, ಇಂದಿಗೂ ಮುಂದುವರಿಯುತ್ತಿದೆ. ಆಗಲೇ ಶ್ರೀಮನ್ನಾéಯಸುಧಾ ಗ್ರಂಥದ ಪಾಠವನ್ನು ನಾಲ್ವರು ವಿದ್ಯಾರ್ಥಿಗಳಿಗೆ ನಡೆಸುತ್ತಿದ್ದರು. ಸುಧಾಮಂಗಲೋತ್ಸವಕ್ಕೆ ದಿನ ನಿಗದಿಯಾದರೂ ಆರ್ಥಿಕ ಅಡಚಣೆ ಕಾಡಿತು. ಆ ಸಮಯಕ್ಕೆ ದಾನಿ ಕುತ್ತೆತ್ತೂರು ಸೀತಾರಾಮರಾಯರು ಮಾಹಿತಿ ಪಡೆದು ಮಂಗಲೋತ್ಸವದ ಖರ್ಚನ್ನು ಭರಿಸಿದರು. ಪರ್ಯಾಯದ ಬಳಿಕ ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠವನ್ನು ಸ್ಥಾಪಿಸಿದರು. ಸುಧಾಮಂಗಲೋತ್ಸವ ಪರಂಪರೆ ಈಗ 38 ಸಂವತ್ಸರಗಳನ್ನು ಪೂರೈಸಿದೆ.
ದ್ವಿತೀಯ
ಐತಿಹಾಸಿಕ ವಿಹಿಂಪ ಸಂತ ಸಮ್ಮೇಳನ: ಶ್ರೀಪಾದರ ಎರಡನೆಯ ಪರ್ಯಾಯ ದಲ್ಲಿ (1968-69) ಉಡುಪಿಯಲ್ಲಿ ಪ್ರಥಮ ರಾಜ್ಯ ಮಟ್ಟದ ವಿಹಿಂಪ ಸಮಾವೇಶ (1969ರ ಡಿ. 21-22) ನಡೆಯಿತು. ಇದರಲ್ಲಿ ವೀರಶೈವ, ದಲಿತ ವರ್ಗದ ಸ್ವಾಮೀಜಿಗಳು ಸೇರಿದಂತೆ ಸುಮಾರು 60 ಸಂಪ್ರದಾಯಗಳ ಮಠಾಧೀಶರು ಪಾಲ್ಗೊಂಡಿದ್ದರು. ಆರೆಸ್ಸೆಸ್‌ನ ಎರಡನೆಯ ಸರಸಂಘ ಚಾಲಕ ಗುರೂಜಿ ಗೋಳ್ವಲ್ಕರ್ ಸೇರಿ ದಂತೆ ವಿಹಿಂಪ ಪ್ರಮುಖರು ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ದಲಿತ ವರ್ಗಕ್ಕೆ ಸೇರಿದ ನಿವೃತ್ತ ಐಎಎಸ್ ಅಧಿಕಾರಿ ಭರಣಯ್ಯ ವಹಿಸಿದ್ದರು.
ಆಗ ಪೇಜಾವರ ಶ್ರೀಗಳು ನೀಡಿದ ಮಂತ್ರ ಸಂದೇಶ “ಹಿಂದವಾಃ ಸೋದರಾಃ ಸರ್ವೇ’ (ಹಿಂದುಗಳೆಲ್ಲರೂ ಸೋದರರು) ಮತ್ತು “ನಃ ಹಿಂದು ಪತಿತೋಭವೇತ್’ (ಹಿಂದುಗಳಾರೂ ಪತಿತರಲ್ಲ). ಪೇಜಾವರ ಶ್ರೀಗಳವರೇ ಹೇಳುತ್ತಿದ್ದಂತೆ ಅದುವರೆಗೆ ಹಿಂದೂ ಧರ್ಮದಿಂದ ಹೊರಹೋಗಲು ಮಾತ್ರ ಅವಕಾಶವಿತ್ತು, ಹಿಂದೆ ಬರಲು ಇರಲಿಲ್ಲ. ಈ ಸಮ್ಮೇಳನ ಮರಳಿ ಮಾತೃಧರ್ಮಕ್ಕೆ ಕರೆ ತರುವ ನಿರ್ಣಯವನ್ನೂ ಅಂಗೀಕರಿಸಿತು. ಈ ಮೂರೂ ನಿರ್ಣಯಗಳೂ ರಾಷ್ಟ್ರ ಮಟ್ಟದ ಬೆಳವಣಿಗೆಗೆ ಮೂಲ ಕಾರಣಗಳಾಗಿವೆ. ಸಮ್ಮೇಳನಕ್ಕೆ ನಿರೀಕ್ಷೆಗಿಂತ ಹೆಚ್ಚು ಜನರು ಬಂದಾಗ ಮನೆಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲು ವಿನಂತಿಸಲಾಯಿತು. ಆಗ ಉಡುಪಿ ಜನತೆ ಕೊಟ್ಟ ಸಹಕಾರವೂ ಒಂದು ದಾಖಲೆ.
ತೃತೀಯ
ಮಧ್ವ ವಿಗ್ರಹ ಪ್ರತಿಷ್ಠೆ, ದ್ವಿತೀಯ ಧರ್ಮ ಸಂಸದ್: ಶ್ರೀಗಳ ಮೂರನೆಯ ಪರ್ಯಾಯ ಸಮಯದಲ್ಲಿ (1984-86) ಮಧ್ವಾಚಾರ್ಯರ ಸಪ್ತಮ ಶತಮಾನೋತ್ಸವವನ್ನು (1985ರ ಜನವರಿ 13ರಿಂದ 16ರವರೆಗೆ) ಆಚರಿಸಲಾಯಿತು. ಶ್ರೀ ಕೃಷ್ಣಮಠದ ರಾಜಾಂಗಣಕ್ಕೆ ಹಾಸುಗಲ್ಲು, ತಗಡು ಹೊದಿಸಿ ವರ್ಷವಿಡೀ ಕಾರ್ಯಕ್ರಮ ನಡೆಯುವಂತೆ ಮಾಡಿದರು. 1985ರ ಅ.31, ನ.1ರಂದು ಎರಡನೆಯ ಧರ್ಮಸಂಸದ್ ಸಭೆ ನಡೆದು ನೂರಾರು ಸಂತರು, ಸ್ವಾಮೀಜಿಗಳು ಪಾಲ್ಗೊಂಡದ್ದು ಒಂದು ದಾಖಲೆ. ಮಧ್ವರ ವಿಗ್ರಹವನ್ನು ಉತ್ತರ ಭಾರತದ ತುತ್ತತುದಿ ಬದರಿ ಕ್ಷೇತ್ರದಲ್ಲಿ ಅನಂತ ಮಠದಲ್ಲಿ ಪ್ರತಿಷ್ಠಾಪಿಸಿದರು.
ಪಂಚಮ
ಅಯೋಧ್ಯೆಗೆ ಮುನ್ನುಡಿ: 2016-18ರಲ್ಲಿ ಐತಿಹಾಸಿಕ ಐದನೆಯ ಪರ್ಯಾಯ ನಡೆಯಿತು. ಪರ್ಯಾಯ ದರ್ಬಾರ್‌ನಲ್ಲೇ ಪರಿಸರ ಕಾಳಜಿಯನ್ನು ಸ್ವಾಮೀಜಿ ವ್ಯಕ್ತಪಡಿಸಿ ಭಕ್ತರಿಗೆ ಸಸ್ಯಗಳನ್ನು ವಿತರಿಸಿದರು. 2017ರ ನವೆಂಬರ್ 24ರಿಂದ 26ರವರೆಗೆ ಐತಿಹಾಸಿಕವಾದ 11ನೆಯ ಧರ್ಮಸಂಸದ್ ಅಧಿವೇಶನ ನಡೆ ಯಿತು. ದೇಶಾದ್ಯಂತದಿಂದ ಬೌದ್ಧ ಬಿಕ್ಕುಗಳೂ ಸೇರಿದಂತೆ 2 ಸಾವಿರಕ್ಕೂ ಹೆಚ್ಚು ಸಾಧುಸಂತರು, ಮಹಾಮಂಡಲೇಶ್ವರರು ಪಾಲ್ಗೊಂಡರು. ಉದ್ಘಾಟನ ಸಮಾರಂಭದಲ್ಲಿ ಪೇಜಾವರ ಶ್ರೀಗಳು 2019ರೊಳಗೆ ರಾಮಮಂದಿರ ನಿರ್ಮಾಣಕ್ಕೆ ಹಾದಿ ಸುಗಮವಾಗು ವುದೆಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ರಾಜಾಂಗಣದ ಮೇಲ್ಭಾಗದಲ್ಲಿ ವ್ಯವಸ್ಥಿತವಾದ ಇನ್ನೊಂದು ಸಭಾಂಗಣವನ್ನು, ಗುರುಗಳ ಹೆಸರಿನಲ್ಲಿ ಶ್ರೀ ವಿಶ್ವಮಾನ್ಯ ಅತಿಥಿಗೃಹವನ್ನು, ಜನಸಾಮಾನ್ಯ ಯಾತ್ರಾರ್ಥಿಗಳಿಗೆ ಉಳಿದುಕೊಳ್ಳಬಹುದಾದ ಇನ್ನೊಂದು ಡಾರ್ಮೆಟರಿ ಅತಿಥಿಗೃಹವನ್ನು ನಿರ್ಮಿಸಿಕೊಟ್ಟರು. ಶ್ರೀಕೃಷ್ಣ ಮಠ ಮತ್ತು ಪಾಜಕ ಕ್ಷೇತ್ರದಲ್ಲಿ ಒಟ್ಟು ಸುಮಾರು 16 ಕೋ.ರೂ. ಮೌಲ್ಯದ ವಿವಿಧ ಕಾಮಗಾರಿಗಳು ನಡೆದವು. ಶ್ರೀಕೃಷ್ಣ ಮಠದ ಒಳಪೌಳಿಯನ್ನು ಕಿರಿಯ ಶ್ರೀಗಳ ಪರಿಕಲ್ಪನೆಯಂತೆ 3.5 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಯಿತು. ಉತ್ತಮ ಬೆಲೆ ಬಾಳುವ ಮರಗಳನ್ನು ಬಳಸಿ ದಾರುಶಿಲ್ಪಗಳನ್ನು ನಿರ್ಮಿಸಲಾಯಿತು. ಪಾರ್ಕಿಂಗ್ ಪ್ರದೇಶದಲ್ಲಿರುವ ಈಗಾಗಲೇ ಪ್ರವಾಸೋದ್ಯಮ ಇಲಾಖೆ ಸಹಕಾರದಿಂದ ನಿರ್ಮಿಸಿದ್ದ ಯಾತ್ರೀ ನಿವಾಸದ ಒಂದು ಭಾಗವನ್ನು 50 ಲ.ರೂ. ವೆಚ್ಚದಲ್ಲಿ ಸ್ವಾಮೀಜಿ ನಿರ್ಮಿಸಿದರು.
ಚತುರ್ಥ
ಸುಸಜ್ಜಿತ ರಾಜಾಂಗಣ: ನಾಲ್ಕನೆಯ ಪರ್ಯಾಯ ಅವಧಿಯಲ್ಲಿ (2000-02) ರಾಜಾಂಗಣ ಸಭಾಭವನವನ್ನು ಇನ್ನಷ್ಟು ಸುಸಜ್ಜಿತಗೊಳಿಸಿದರು. ಇದನ್ನು ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಉದ್ಘಾಟಿಸಿದರು. ಪ್ರಥಮ ಪರ್ಯಾಯ ಅವಧಿಯಿಂದ ತೊಡಗಿ ನಾಲ್ಕನೆಯ ಪರ್ಯಾಯ ಅವಧಿಯವರೆಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಖ್ಯೆ, ಶಾಸ್ತ್ರೀಯ- ಲೌಕಿಕ ಸಮ್ಮೇಳನಗಳು, ಸ್ವಾಮೀಜಿಯವರು, ಸಾಹಿತಿಗಳು, ಸಂಶೋಧಕರು, ಪಂಡಿತರ ಭೇಟಿ- ಸಮ್ಮಾನಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿತ್ತು.
ಸಂಸ್ಕೃತ ನುಡಿದ ಗುರುವ: ಸಂಸ್ಕೃತವನ್ನು ಜನಸಾಮಾನ್ಯರ ಬಳಿ ತಲುಪಿಸಲು ಶ್ರಮಿಸುತ್ತಿರುವ ಸಂಸ್ಕೃತ ಭಾರತೀ ಸಂಘಟನೆ 2017ರ ಜನವರಿ 5ರಿಂದ 8ರವರೆಗೆ ಮೂರು ವರ್ಷಗಳಿಗೊಮ್ಮೆ ನಡೆಯುವ ಅಖೀಲ ಭಾರತ ಸಮ್ಮೇಳನವನ್ನು ಆಯೋಜಿಸಿತ್ತು. ಸಾವಿರಾರು ಜನರು ಒಂದೆಡೆ ಕಲೆತು ಸಂಸ್ಕೃತದಲ್ಲಿ ವ್ಯವಹರಿಸುವ ಸನ್ನಿವೇಶ ಕಂಡುಬಂದುದು ಸಮ್ಮೇಳನದ ವೈಶಿಷ್ಟವಾಗಿತ್ತು.
ಸಂಸ್ಕೃತ ಸಂಭಾಷಣಾ ಶಿಬಿರದಲ್ಲಿ ಪಾಲ್ಗೊಂಡ ಉಡುಪಿ ಜಿಲ್ಲೆಯ ಹಿರಿಯಡಕ ಗುಡ್ಡೆಯಂಗಡಿ ಕೊರಗ ಸಮುದಾಯಕ್ಕೆ ಸೇರಿದ ಗುರುವ ಅವರು ಉಡುಪಿ ವಿದ್ಯೋದಯ ಪ.ಪೂ. ಕಾಲೇಜಿನಲ್ಲಿ ಆಯೋಜನೆಗೊಂಡ ಸಭೆಯಲ್ಲಿ ಪೇಜಾವರ ಶ್ರೀಗಳು “ಭವತಃ ನಾಮ ಕಿಮ್?’ ಎಂದು ಪ್ರಶ್ನಿಸಿದಾಗ “ಮಮ ನಾಮ ಗುರುವಃ’ ಎಂದು ಅಚ್ಚರಿ ಮೂಡಿಸಿದರು. ಗುರುವರ ಬಾಯಲ್ಲಿ ಸಂಸ್ಕೃತದ ವಾಕ್ಯ ಕೇಳಿಬಂದುದು, ಬಳಿಕ ಪೇಜಾವರ ಶ್ರೀಗಳು ಇವರನ್ನು ಸಮ್ಮಾನಿಸಿದ್ದು ಸಾಮಾಜಿಕ ಪರಿವರ್ತನೆಯ ಒಂದು ಪ್ರಮುಖ ಹೆಜ್ಜೆ ಎನ್ನಬಹುದು.
ದಾಖಲೆ: ಪಂಚಮ ಪರ್ಯಾಯ ಪೂಜೆ ನಡೆಸಿದ ಪ್ರಥಮ ಯತಿ
1952 54 1968 70 1984 86 2000 02 2016 18
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka Sammelana; ಅಡಿಕೆ ಬೆಳೆಗಾರರ ಹಿತ ಕಾಯಲು ಕೇಂದ್ರ ಬದ್ಧ: ಶೋಭಾ ಕರಂದ್ಲಾಜೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.