ರಂಗ ಲಾವಣ್ಯ 2017 ದಶ ದಿನಗಳ ಕಲಾಮಹೋತ್ಸವ
Team Udayavani, Mar 17, 2017, 3:50 AM IST
…ಕಳೆದ ವಾರದಿಂದ
ಆರನೇ ರಂಗಪ್ರದರ್ಶನ ದೃಶ್ಯ ಕಾವ್ಯ ಬೆಂಗಳೂರು ಇವರ ಪ್ರಸ್ತುತಿಯ ಸೂಯಾಸ್ತದಿಂದ ಸೂರ್ಯೋದಯದವರೆಗೆ. ಸುರೇಂದ್ರ ವರ್ಮರ ಹಿಂದಿ ಮೂಲದ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದವರು ಸಿದ್ದಲಿಂಗ ಪಟ್ಟಣ ಶೆಟ್ಟಿ, ನಿರ್ದೇಶನ: ನಂಜುಂಡಿ ಗೌಡ ಸಿ. ಸ್ತ್ರೀ ಬಂಡಾಯದ ತಣ್ಣಗಿನ ಬೆಂಕಿಯನ್ನು ಶೀಲವತಿ ಒಡಲೊಳಗಡಗಿಸಿಕೊಂಡು ಸಾವಧಾನವನ್ನು, ವಿನಮ್ರತೆಯನ್ನು ಮೊದಲು ಗೌರವಿಸುವಲ್ಲಿಯೂ ಅನಂತರ ಬಂಡಾಯದ ಬೆಂಕಿಯಾಗುವಲ್ಲಿಯೂ ಅತ್ಯುತ್ತಮ ಅದ್ಭುತ ಎನ್ನಬಹುದಾದ ನಟನೆ ನೀಡಿ ಪ್ರೇಕ್ಷಕರನ್ನು ದಂಗುಬಡಿಸಿದ್ದಾಳೆ. ನಪುಂಸಕತ್ವದಿಂದ ಆಚ್ಛಾದಿತ ರಾಜ ಒಕ್ಕಾಕ ಲೈಂಗಿಕ ಅಸಾಮರ್ಥ್ಯದ ನಡುವೆಯೂ ದಾಂಪತ್ಯದ ಶುಷ್ಕತೆಯಲ್ಲಿ ಬೇಯುವುದು ಅವ್ಯಕ್ತ ಪಾಪಪ್ರಜ್ಞೆ ಯಲ್ಲಿ ತೊಯ್ಯುವುದು, ಅಸಹಾಯ ಕತೆಯನ್ನು ಶಬ್ದಮಂಟಪದಲ್ಲಿ ಹಂತ ಹಂತವಾಗಿ ಕಡೆದು ನಿಲ್ಲಿಸುವಲ್ಲಿ ಯಶಸ್ಸು ಕಂಡಿದ್ದಾನೆ. ದೇಹ ಭಾಷೆ ಮಾತಿನೊಂದಿಗೆ ಮಿಳಿತವಾಗಿ ಉತ್ತಮ ಸಂವಹನವಾಗಿ ಏರ್ಪಟ್ಟಿದೆ. ಉತ್ತಮ ಪಾತ್ರ ನಿರ್ವಹಣೆ. ಪೂರಕ ಪಾತ್ರವಾದ ಪ್ರದೋಷನ ಸಂಗಮದ ದೃಶ್ಯ ಸಂಯೋಜನೆ ಸಂಭಾಷಣೆಗಳಲ್ಲಿ ನಿರ್ದೇಶಕರು ಜಾಣ್ಮೆ ಮೆರೆದಿದ್ದಾರೆ. ಪ್ರದೋಷನ ಪಾತ್ರ ಪೋಷಣೆ ಗರಿಷ್ಠ ಮಟ್ಟದಲ್ಲಿತ್ತು.
ಸಹವರ್ತಿ ಪಾತ್ರಗಳಾದ ಅಮಾತ್ಯ ಪುರೋಹಿತ, ಸೇನಾಧಿಪತಿಗಳು, ಮಹತ್ತರಿಕಾ ಪರಿಚಾರಿಕೆ, ಡಂಗುರದವರು ನಾಟಕದ ಯಶಸ್ಸಿಗೆ ಹೆಗಲೆಣೆಯಾಗಿದ್ದಾರೆ. ಆದರೆ ಕೆಲವೊಮ್ಮೆ ಎರಡು ಪ್ರಧಾನ ಪಾತ್ರಗಳ ನಡುವೆ ಅವರು ಅಸ್ತಿತ್ವಕ್ಕಾಗಿ ಹೆಣಗಾಡಿದಂತೆ ಕಂಡುಬರುತ್ತದೆ. ಇನ್ನಷ್ಟು ಧ್ವನಿಪೂರ್ಣ, ಅಧಿಕಾರಯುತವಾದ ಶೈಲಿಯಲ್ಲಿ ಸಂಭಾಷಿಸುವ ಅಗತ್ಯವಿದೆ.
ಉತ್ತಮ ರಂಗತಂತ್ರ, ರಂಗಸಜ್ಜಿಕೆ, ಬೆಳಕಿನ ಗರಿಷ್ಠ ಔಚಿತ್ಯಪೂರ್ಣ ಬಳಕೆ, ಸಂಗೀತ ನಾಟಕದ ಔನ್ನತ್ಯಕ್ಕೆ ದುಡಿದಿವೆ. ದೃಶ್ಯಾಭಿವ್ಯಕ್ತಿಯ ಮಿತಿಯನ್ನು ಭಾವಪೂರ್ಣ ಸ್ವಗತ, ಶಬ್ದ ಚಿತ್ರಣಗಳಿಂದ ಮೀರಿದೆ. ಅದೇ ರೀತಿ ಶಬ್ದಕ್ಕೆ ನಿಲುಕದ್ದನ್ನು ಮೌನ, ನಗು, ಕಲರವ, ರಂಗದಲ್ಲಿ ನಿರ್ಮಾಣವಾಗುವ ಬೆಳಕಿನ ಓಕುಳಿ ತುಂಬಿಕೊಟ್ಟಿವೆ. ಉತ್ತಮ ರಂಗಪ್ರಯೋಗ.
ಏಳನೇ ರಂಗ ಪ್ರದರ್ಶನ ನೀಡಿದವರು ಮೈಸೂರಿನ ರಂಗಾಯಣ ತಂಡದವರು. ರಂಗಕೃತಿ ಚಿತ್ರಲೇಖೆ, ರಚನೆ, ನಿರ್ದೇಶನ ಮತ್ತು ಸಂಗೀತ: ಸುರೇಶ ಆನಗಳ್ಳಿ. ತುರ್ ಆನ್ ದೋ (ರಾಜನ ಮಗಳು) ಎಂಬ ಹೆಸರಿನ ಮಧ್ಯಪ್ರಾಚ್ಯದ ಜಾನಪದ ರೂಪಕದ ಮೂಲಸ್ಥಾನ ಚೀನ. ಈ ಕೃತಿಯನ್ನೇ ಹಂದರವಾಗಿಸಿಕೊಂಡು ಹೆಣೆದ ಸಂಗೀತ ನಾಟಕವೇ ಚಿತ್ರಲೇಖೆ.
ಚಿತ್ರಲೇಖೆ ಪಾತ್ರ ಗಂಭೀರತೆಗೆ ತಕ್ಕ ಸಂಭಾಷಣೆಯೂ ಇಲ್ಲದೆ ಸೊರಗುತ್ತದೆ. ಧ್ವನಿ ಏರಿಳಿತ ಶ್ರಾವ್ಯವೆನಿಸದೆ ಅಸಹಜವಾಗಿ ಸಂವಹನದ ಕೊರತೆಯಾಗಿ ಕಾಣುತ್ತದೆ. ಚಂದ್ರಸೇನ ಪಾತ್ರ ಪೋಷಣೆಗಾಗಿ ದಣಿದಿದ್ದಾನೆ. ಬಹುಮಟ್ಟಿನ ಯಶಸ್ಸು ದೊರೆತಿದೆ. ಗೌರಿಯ ನಟನೆ ಭಾವಾಭಿವ್ಯಕ್ತಿ ಮೆಚ್ಚುವಂತೆ ಮೂಡಿಬಂದಿದೆ.
ಶ್ಮಶಾನದ ದೃಶ್ಯ ನಿರ್ಮಾಣದ ಸಮೃದ್ಧತೆ ಹೆಚ್ಚು ತಾಂತ್ರಿಕತೆ ಅಳವಡಿಕೆಯಿಂದ ಗಮನ ಸೆಳೆಯುತ್ತದೆ. ಈ ಸಂದರ್ಭದಲ್ಲಿ ಗೊಂದಲದ ನಡುವೆಯೂ ಕೇಳಿಬರುವ ನಾಟಕದ ಅಂತಃಸತ್ವ ಜೀವನದ ರೌದ್ರತೆ ಅಭೀಪ್ಸೆಗಳನ್ನು ಅನಾವರಣಗೊಳಿಸುತ್ತವೆ. ರಂಗದೀಪಗಳನ್ನು ಹಾಡಿನ ಲಯಕ್ಕೆ ಹೊಂದಿಸಿಕೊಂಡಿದ್ದು ಸಂತತಿ-ಜನನ-ಮರಣಗಳನ್ನು ರಂಗದಲ್ಲಿ ರೂಪಕವಾಗಿಸಿ ಕೊಂಡಿದ್ದು ವಿಶೇಷವೇ ಆದರೂ ನಾಟಕದ ಸಂವಹನವನ್ನು ಸಮೃದ್ಧಗೊಳಿಸುವುದಿಲ್ಲ.
ರಂಗಕೃತಿಯನ್ನು ಅಮೂರ್ತಗೊಳಿಸಿ ಪ್ರಸ್ತುತಪಡಿಸುವ ಔಚಿತ್ಯವೇನು? ರೂಪಕಗಳು ಸಹಜವಾಗಿ ಮೂಡಬೇಕೇ ವಿನಾ ತುರುಕಿಸಿದಾಗ ಆಭಾಸವೆನಿಸುತ್ತವೆ. ಪಾತ್ರಗಳ ಹೆಸರುಗಳನ್ನು ಭಾರತೀಯ ಶೈಲಿಗೆ ಒಗ್ಗಿಸಿಕೊಂಡು ವೇಷ ಭೂಷಣದಲ್ಲಿ ಅನ್ಯದೇಶೀಯವಾಗಿಸುವುದು, ಚೀನ ಮೂಲದ ಕತೆ ಎನ್ನುವುದಕ್ಕಾಗಿ ಕಕರ-ಮಕರ- ಪಕರದಂತಹ ಪ್ರತಿಮೆ ಸೃಷ್ಟಿಸುವುದು ಸಂವಹನದ ದೋಷವಾಗಿ ಪರಿಣಮಿಸಿದೆ.
ಕಥನಕಾರರು ನಾಟಕದ ವೇಗೋತ್ಕರ್ಷಕವಾಗಿ ಪರಿಣಮಿಸ ಬೇಕಾದಲ್ಲಿ ವಿಳಂಬಿತಗೊಳಿಸಿ ಬರಿದೇ ಕಾಲಯಾಪನೆ ಮಾಡಿದ್ದು ನೋಡುಗರ ತಾಳ್ಮೆ ಪರೀಕ್ಷಿಸಿದಂತಿತ್ತು. ರಂಗಾಯಣದ ತಂಡದಿಂದ ಬಹುಮುಖ ಶೈಲಿಯ ಶ್ರೇಷ್ಠ ನಾಟಕದ ನಿರೀಕ್ಷೆ ಹುಸಿಯಾಯ್ತು. ಏಕಲವ್ಯ, ಚೋರಚರಣದಾಸ, ಮಾರನಾಯ್ಕದಂತಹ ನಾಟಕಗಳನ್ನು ನೀಡಿದ ಆನಗಳ್ಳಿಯವರಿಂದ ಗುಣಾತ್ಮಕ ಕಲಾಕಾಣಿಕೆಯ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರ ಹಸಿವು ತಣಿದಿಲ್ಲ.
ಕೊನೆಯ ದಿನದ ನಾಟಕ – ಬೆಂಗಳೂರಿನ ರಂಗಮಂಟಪ ತಂಡದವರು ಪ್ರಸ್ತುತಪಡಿಸಿದ ಅಕ್ಕು. ವೈದೇಹಿಯವರ ಮೂರು ಕತೆಗಳನ್ನು ಆಧರಿಸಿ ಹೆಣೆದ ನಾಟಕ. ವಿನ್ಯಾಸ ಮತ್ತು ನಿರ್ದೇಶನದ ಜತೆಗೆ ಅಕ್ಕುವಿನ ಪಾತ್ರದಲ್ಲಿ ಕಾಣಿಸಿಕೊಂಡವರು ಚಂಪಾ ಶೆಟ್ಟಿ.
ತುಸು ಮಾನಸಿಕ ಅಸ್ವಸ್ಥತೆಯಿಂದ ತೊಳಲುತ್ತಿರುವವಳು ಅಕ್ಕು. ವಿವಾಹವಾದ ಕೆಲವೇ ದಿನಗಳಲ್ಲಿ ಪತಿ-ಜವಾಬ್ದಾರಿಯುತ ಸಂಸಾರ ನಿರ್ವಹಣೆಯ ಹೊಣೆಯ ನೊಗವನ್ನು ಕೊಡಹಿ – ಸಂಚಾರಿಯಾಗಿ ಹೊರಟು ಬಿಡುತ್ತಾನೆ. ಸ್ವಾಮೀಜಿಯೊಬ್ಬರ ತಿರುಗಾಟದ ಪಂಗಡದಲ್ಲಿ ಸದಸ್ಯನಾಗಿ ಸಂಸಾರವನ್ನು ಕಡೆಗಣಿಸಿ ಬಿಡುತ್ತಾನೆ. ಮಾತೃತ್ವದ ಹಂಬದಲ್ಲಿ ಅಕ್ಕು ಮಾನಸಿಕ ಅಸ್ವಸ್ಥಳಾಗಿ ಬಿಡುತ್ತಾಳೆ. ಈ ಅಸ್ವಸ್ಥತೆ ಖಾಲಿ ತೊಟ್ಟಿಲಲ್ಲಿ ಗೊಂಬೆಯನ್ನಿಟ್ಟು ಮಗುವೆಂದೇ ಭ್ರಮಿಸಿ ತೂಗಿ ಜೋಗುಳ ಹಾಡುವಷ್ಟು ಉಲ್ಬಣವಾದರೂ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಚಿಕಿತ್ಸೆಗೆ ಮುಂದಾಗದೆ ಅಲಕ್ಷ್ಯ ವಹಿಸುತ್ತಾರೆ. ಕೆಲವೊಮ್ಮೆ ಮನೋರಂಜನೆಯನ್ನೂ ಪಡೆಯುತ್ತಾರೆ. ಅಕ್ಕು ಕರವಸ್ತ್ರವಾಗಿ ಮಕ್ಕಳಂತೆ ಉಯಿಲಿಡುವಲ್ಲಿ, ನಾಮಕರಣದ ಸಂದರ್ಭದಲ್ಲಿ ತಾಯ್ತನದ ಮಮತೆ ಉಕ್ಕಿಸುವಲ್ಲಿ, ವಾಸುವಿನ ಅಕ್ರಮ ಸಂಬಂಧವನ್ನು ಬಯಲಿಗೆಳೆವಲ್ಲಿ ಅಕ್ಕುವಿನ ಅಭಿವ್ಯಕ್ತಿ ಸ್ಮರಣೀಯ. ಹತಾಶೆಯಲ್ಲೂ ಹೊಳೆವ ಸಂಭಾಷಣೆಯ ಪ್ರಖರತೆ ಬಹು ಆಪ್ಯಾಯಮಾನವಾಗಿ ಹೊಮ್ಮಿದೆ. ಉತ್ತಮ ಪಾತ್ರಪೋಷಣೆ ನಾಟಕದ ಕೇಂದ್ರವಾಗಿ ನಾಟಕ ಎಲ್ಲೂ ಶಿಥಿಲವಾಗದಂತೆ ಕರುಣ, ಹಾಸ್ಯ, ರೌದ್ರ ರಸಗಳನ್ನು ಸೃಜಿಸಿ ನಾಟಕ ಪ್ರದರ್ಶನದ ಗುಣಮಟ್ಟವನ್ನು ಎತ್ತರಿಸಿದ್ದಾರೆ.
ತಬ್ಬಲಿಯಾದ ಮೊಮ್ಮಗಳು ಅಮ್ಮಚ್ಚಿಗಾಗಿ ಜೀವ ಹಿಡಿದು ಕೊಂಡು ವೃದ್ಧಾಪ್ಯದಲ್ಲೂ ದುಡಿಯುವವಳು ಪುಟ್ಟಮ್ಮತ್ತೆ. ಅಕ್ಕುವಿನ ನೆರೆಮನೆಯ ಹಿರಿ ಜೀವ. ಅಕ್ಕುವಿನ ಮನೆಯವರೊಂದಿಗೆ ಆಪ್ತ ಸಂಪರ್ಕದಲ್ಲಿರುವವಳು. ಸುತ್ತುಮುತ್ತಲಿನ ಕುಟುಂಬಗಳ ತುರ್ತು ಪರಿಸ್ಥಿತಿಗೆಲ್ಲ ಸಹಾಯಕ್ಕೆ ಒದಗಿ ಬರುವಳು. ಸಮಯಸಾಧಕತನಕ್ಕೆ ಬಲಿಯಾಗುವವಳು. ಇನ್ನೊಬ್ಬರ ಮೂಲಕ ಬದುಕಿನ ಬವಣೆ ಯನ್ನು ಸಮತಳಭಾವದಲ್ಲಿ ತೆರೆದಿಡುವಲ್ಲಿ – ಪುಟ್ಟಮ್ಮತ್ತೆ ಹೆಚ್ಚು ಪ್ರಬುದ್ಧತೆ ತೋರುತ್ತಾಳೆ. ಈ ಸಂದರ್ಭದ- ಸುಂದರವಾದ ಭಾವಾಭಿವ್ಯಕ್ತಿ ಪಾತ್ರಕ್ಕೆ ಜೀವಕಳೆ ತಂದಿದೆ. ಪುಟ್ಟಮ್ಮತ್ತೆಯನ್ನು ಎಲ್ಲರೂ ಬಳಸಿಕೊಳ್ಳುವವರೇ, ಯಾರೂ ಉಳಿಸಿಕೊಳ್ಳುವವರಲ್ಲ, ಸಹಾಯ ಬೇಕು, – ಆದರೆ ಉಪಕೃತರಾರೂ ಪುಟ್ಟಮ್ಮತ್ತೆಗೆ ಜೀವನದ ದಾರಿಗೆ ಉದಾರತೆಯಿಂದ ಸಹಕರಿಸಲೊಲ್ಲರು – ಹಿರಿಯ ತಲೆಮಾರಿನ ಶೋಷಿತ, ದಮನಿತ ಸ್ತ್ರೀಯರ ಪ್ರಾತಿನಿಧಿಕ ಪಾತ್ರವಾಗಿ ನಾಟಕದಲ್ಲಿ ಶಬ್ದ ಸೋಲುವಲ್ಲಿ ಭಾವತುಂಬಿ, ವೃದ್ಧ ನಡಿಗೆಯ ಅಸಹಾಯಕತೆಯನ್ನು ಬಿಚ್ಚಿಟ್ಟು ನೋವು ನುಂಗುವಲ್ಲಿ ಅಭಿವ್ಯಕ್ತಿಯು ಸಶಕ್ತಗೊಳ್ಳುತ್ತದೆ.
ನಾಟಕದ ಪೂರ್ವಾರ್ಧದಲ್ಲಿ ಮಿಂಚುವ – ಸೌದಾಮಿನಿ – ಅಮ್ಮಚ್ಚಿ ಮೂರನೇ ತಲೆಮಾರಿನ ಸ್ತ್ರೀ ಚಿತ್ರಣವನ್ನು ನೀಡುತ್ತಾರೆ. ಅತ್ಯಂತ ಚುರುಕು, ಕೊಂಕು ನುಡಿ-ನಡೆಯಿಂದ ನೋಡುಗರಿಗೆ ಕಚುಗುಳಿ ಇಡುತ್ತಾರೆ. ಸೌದಾಮಿನಿ – ಮದುವೆಯ ಅನಂತರದ ಗಂಭೀರದ ನಡೆಯಲ್ಲೂ ಜನ-ಮನ ಗೆಲ್ಲುತ್ತಾಳೆ. ಅಮ್ಮಚ್ಚಿಯ ನಟನೆ ಹೃದ್ಯವಾಗಿ ಮೂಡಿಬಂದಿದೆ. ಉಳಿದಂತೆ ಪೂರಕ ಪಾತ್ರ ಗಳಾದ ವಾಸು, ಭಾಮಿನಿ, ಅಜ್ಜ, ಅಣ್ಣ, ಸೀತಾ, ಪುಟ್ಟಿ, ಅಕ್ಕುವಿನ ಪತಿ, ಪುರೋಹಿತರು, ಕ್ಯಾಮರಾಮ್ಯಾನ್ ಕಥೆಯ ಸಂವಹನಕ್ಕೆ ಪೋಷಕವಾಗಿದ್ದು ಸಾಂದರ್ಭಿಕವಾಗಿ ನಗೆಯ ಪುಟ್ಟಧಾರೆಯನ್ನು ಹರಿಸುತ್ತಾರೆ. ಪುಟ್ಟನ ನಟನೆ ಜನಮನ ರಂಜಿಸಿದೆ.
ಒಮ್ಮೊಮ್ಮೆ ಸ್ತ್ರೀಯರಿಂದಲೂ ಅಸಹಾಯಕ ಸ್ತ್ರೀಯರ ಮೇಲೆ ದೌರ್ಜನ್ಯ, ಶೋಷಣೆ, ಪ್ರತ್ಯಕ್ಷ ಮತ್ತು ಅಪ್ರತ್ಯಕ್ಷ ವಾಗಿ ನಡೆಯುತ್ತದೆ ಎಂಬುದನ್ನು ಪ್ರದರ್ಶಿಸುವಲ್ಲಿ ಮೃದು ಧೋರಣೆ ತಾಳದೆ ನಾಟಕ ಸಮತೋಲನವನ್ನು ಕಾಯ್ದು ಕೊಂಡು ಬರಿ ಪ್ರತಿಭಟನೆಯಾಗದೆ ನೈಜತೆಗೆ ಸಮೀಪವರ್ತಿ ಪ್ರದರ್ಶನವೆನಿಸುತ್ತದೆ. ಉತ್ತಮ ರಂಗಪರಿಕರಗಳು, ವೇದಿಕೆ ನಿರ್ಮಾಣ, ಬೆಳಕಿನ ನಿರ್ವಹಣೆ, ಪ್ರಸಾದನಗಳು ಪ್ರದರ್ಶನಕ್ಕೆ ಗುರುತರದ ದೇಣಿಗೆ ನೀಡಿವೆ. ಹಾಡುಗಳಿಂದ ಇನ್ನಷ್ಟು ಸಮೃದ್ಧಗೊಳಿಸುವ ಸಾಧ್ಯತೆ ಇಲ್ಲದಿಲ್ಲ. ಕುಂದಗನ್ನಡದಂಥ ಪ್ರಾದೇಶಿಕ ಭಾಷೆಯೊಂದು ಗಂಭೀರ ಕಥಾನಕದ ಮಾಧ್ಯಮವಾಗಿ ಸೀಮೋಲ್ಲಂಘನವಾಗಿ ಎಲ್ಲೆಡೆ ಪ್ರದರ್ಶನಗೊಳ್ಳುತ್ತಿರುವುದು ಹೆಮ್ಮೆಯ ವಿಚಾರ. ಕೆಲವೊಂದು ಪಾತ್ರಗಳು ಕುಂದಗನ್ನಡವನ್ನು ಇನ್ನಷ್ಟು ಪಳಗಿಸಿಕೊಳ್ಳಬೇಕಾದ ಅಗತ್ಯ ಇದೆ.
“ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’ ನಾಟಕದ ಶೀಲವತಿಯ ಜೀವನ ನೋಟಕ್ಕೂ ಅಕ್ಕುವಿನ ಜೀವನ ನೋಟಕ್ಕೂ ಇರುವ ಅಂತರವೇ ಪಾಶ್ಚಾತ್ಯ-ಭಾರತೀಯ ಜೀವನ ನೋಟಗಳ ನಡುವಣ ಅಂತರವಾಗಿದೆ. ಈರ್ವರಿಗೂ ಸಂತಾನದ ಅಗತ್ಯ ಇದೆ – ಶೀಲವತಿಗೆ ಕಾಮದ ಘಮ ಮೂಗಿಗೆ ಬಲವಾಗಿ ಬಡಿದರೆ ಅಕ್ಕುವಿಗೆ ಹಾಲಿನ ಕಂಪು ಬೆರೆತ ಹಾಲುಮೈಯ ಮಗುವಿನ ಗಂಧ ಮೂಗಿಗೆ ಆಪ್ಯಾಯಮಾನವಾಗಿದೆ.
ಉಳಿದಂತೆ ರಮೇಶ್ಚಂದ್ರ ಬೆಂಗಳೂರು ಮತ್ತು ಸಂಗೀತಾ ಬಾಲಚಂದ್ರ ತಂಡದವರ ಸಂಗೀತ ರಸಧಾರೆ ಕರ್ಣಾನಂದ ಉಂಟುಮಾಡಿತು. ಗಂಗಾವತಿ ಪ್ರಾಣೇಶರ ತಂಡ ನಗೆಗಡಲಲ್ಲಿ ಬಹು ಹೊತ್ತು ತೇಲಿಸಿದರು. ಹತ್ತು ದಿನಗಳ ಕಾಲದ ರಂಗ ಲಾವಣ್ಯ 2017 – ಬಹುದಿನಗಳ ಕಾಲ ಮನೆಮಾತಾಗಿ ಉಳಿಯುವಂತೆ ಕೊನೆಗೊಂಡಿತು.
ಮಂಜುನಾಥ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.