ದಾಸ ಸಂಗೀತದೊಂದಿಗೆ ಷಷ್ಟ್ಯಬ್ದ
Team Udayavani, Jan 19, 2018, 3:06 PM IST
ಹುಟ್ಟುಹಬ್ಬ, ವೈವಾಹಿಕ ಜೀವನದ ವರ್ಷಾಚರಣೆ, ಷಷ್ಟ್ಯಬ್ದಿ ಪೂರ್ತಿಯಂತಹ ಆಚರಣೆಗಳು ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆಯ ಮೋಜಿನ ಪಾರ್ಟಿಗಳಾಗುತ್ತಿರುವ ಸಂದರ್ಭದಲ್ಲಿ ಮಾಜಿ ಸೈನಿಕರನ್ನು ಗೌರವಿಸಿ, ದಾಸವರೇಣ್ಯರ ಭಾವ ವಿಭೋರವಾಗಿಸುವ ಸಂಗೀತ ಸುಧೆಯನ್ನು ಉಣ ಬಡಿಸಿ ಸಂತಸಪಟ್ಟು, ಮುಂದಿನ ಬದುಕಿಗೆ ಅದನ್ನು ಸ್ಮರಣೀಯ ನೆನಪಿನ ಸಂಜೆಯಾಗಿಸಿಕೊಂಡ ವೈಶಿಷ್ಟ್ಯಮಯ ಷಷ್ಟ್ಯಬ್ದಿಪೂರ್ತಿ ಸಮಾರಂಭ ಇತ್ತೀಚೆಗೆ ಬೈಂದೂರಿನಲ್ಲಿ ನಡೆಯಿತು.
ಡಿ.25ರಂದು ಉಪ್ಪುಂದ ಮೂಲದ ರಾಯಚೂರಿನ ರಾಮಚಂದ್ರ ಪ್ರಭು ತಮ್ಮ ಷಷ್ಟ್ಯಬ್ದಿಪೂರ್ತಿ ಸಮಾರಂಭದಲ್ಲಿ 10 ಜನ ಮಾಜಿ ಸೈನಿಕರನ್ನು ಸಾಂಪ್ರದಾಯಿಕವಾಗಿ ಸಮ್ಮಾನಿಸಿದರು. ಬಳಿಕ ರಾಯಚೂರಿನ ಶೇಷಗಿರಿ ದಾಸರ ಸಂಯೋಜಕತ್ವದಲ್ಲಿ ನಡೆದ ದಾಸವಾಣಿ ಅಂತ್ಯಾಕ್ಷರಿಯಲ್ಲಿ ಬೆಂಗಳೂರಿನ ದಿವ್ಯಾ ಗಿರಿಧರ್, ಪ್ರಸನ್ನ ಕೊರ್ತಿ, ಅನನ್ಯಾ ಭಾರ್ಗವ್ ಮತ್ತು ಉಡುಪಿಯ ಸಂಗೀತಾ ಬಾಲಚಂದ್ರ ದಾಸ ವಾಣಿಯ ಅಮೃತ ಧಾರೆ ಹರಿಸಿದರು. ಪ್ರಥಮ ಸುತ್ತಿನಲ್ಲಿ ದಿವ್ಯಾ ಗಿರಿಧರ್ ಅವರಿಂದ ಮೊದಲ್ಗೊಂಡು ಅಂತ್ಯಾಕ್ಷರವನ್ನು ಹಿಡಿದು ಒಬ್ಬೊಬ್ಬರಾಗಿ ಹಾಡಿದ ಗಾಯಕರು ಎರಡನೇ ಹಂತದಲ್ಲಿ ಶ್ರೋತೃಗಳು ಲಾಟರಿ ಮೂಲಕ ಆರಿಸಿದ ವಿಷಯ ಆಧಾರಿತ ದಾಸರ ಹಾಡು ಹಾಡಿದರೆ ಮೂರನೇ ಸುತ್ತಿನಲ್ಲಿ ಜಾನಪದ ಶೈಲಿಯ ದಾಸರ ಪದಗಳನ್ನು ಹಾಡಿದರು.
ಅನನ್ಯಾ ಭಾರ್ಗವ ಒಂದು ಕಾಲದಲ್ಲಿ ಆನೆ ಕುದುರೆ ಮೇಲ್ಮೆರೆಸುವೆ….ಒಂದು ಕಾಲದಲ್ಲಿ ಬರಿಗಾಲಲ್ಲಿ ನಡೆಸುವೆ, ಪ್ರಸನ್ನ ಕೊರ್ತಿ ಯಾರ್ಯಾರು ಏನೇನೆಂದರೊ ರಂಗಯ್ಯ…, ಸಂಗೀತಾ ಬಾಲಚಂದ್ರ ಹಾಡಿದ ಹಾಡಿದರೆ ಎನ್ನ ಒಡೆಯನ ಹಾಡುವೆ.. ಹಾಡುಗಳು ಭಾವಪರವಶಗೊಳಿಸಿದವು. ಜಾನಪದ ಶೈಲಿಯ ಸುವಿ..ಸುವಿ.. ಎನ್ನುವ ದಿವ್ಯಾ ಗಿರಿಧರ್ ಅವರ ಮತ್ತು ಎಲ್ಲಾರೂ ಮಾಡುವುದು ಹೊಟ್ಟೆಗಾಗಿ…. ಎನ್ನುವ ಅನನ್ಯಾ ಭಾರ್ಗವ್ ಅವರ ಹಾಡು ದಾಸ ಸಾಹಿತ್ಯದ ಶ್ರೀಮಂತಿಕೆಗೆ ದರ್ಪಣ ಹಿಡಿಯಿತು. ಮೂರು ಶತಮಾನಗಳಷ್ಟು ಹಳೆಯದಾದ ದಾಸರ ಹಾಡುಗಳು ಹೇಗೆ ಇಂದಿನ ದಿನದಲ್ಲೂ ಪ್ರಸ್ತುತವಾಗಿದೆ ಎನ್ನುವುದನ್ನು ಶೇಷಗಿರಿ ದಾಸರು
ಹೆತ್ತ ತಾಯಿ ತಂದೆಯ ಚಿತ್ತವ ನೋಯಿಸಿ ಹತ್ತು ದಾನವ ಮಾಡಿ ಫಲವೇನು.. ಎನ್ನುವ ಹಾಡಿನ ಮೂಲಕ ತಿಳಿಸಿದರು.
ಚಂದ್ರಶೇಖರ ನಾವಡ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.