ಅತಿಥಿ ಕಲಾವಿದರ ಕೂಟವೂ ಚಿಣ್ಣರ ದೊಂದಿ ಬೆಳಕಿನ ಆಟವೂ
Team Udayavani, Feb 28, 2020, 6:11 PM IST
ಕೋಟ ಶಿವರಾಮ ಕಾರಂತ ಥೀಮ್ ಪಾರ್ಕ್‌ನಲ್ಲಿ ಇತ್ತೀಚೆಗೆ ಯಕ್ಷಾಂತರಂಗದ ಮೂರನೇ ವಾರ್ಷಿಕೋತ್ಸವ ಯಕ್ಷಾಂಬುಧಿ-2020ರ ಪ್ರಯುಕ್ತ ಹಮ್ಮಿಕೊಂಡ ತಾಳಮದ್ದಲೆ ಮತ್ತು ಮಕ್ಕಳ ದೊಂದಿ ಬೆಳಕಿನ ಯಕ್ಷಗಾನ ಪ್ರದರ್ಶನ ಅತ್ಯಪೂರ್ವ ಪ್ರಸ್ತುತಿಯೊಂದಿಗೆ ರಂಜಿಸಿತು.
ಜ್ಞಾನಪೀಠ ಶೀರ್ಷಿಕೆಯಡಿಯಲ್ಲಿ ಯಕ್ಷ ಛಾಂದಸ ಗಣೇಶ ಕೊಲೆಕಾಡಿ ವಿರಚಿತ “ಸಮರ ಸೌಗಂಧಿಕಾ’ ಆಖ್ಯಾನವನ್ನು ಕೂಟಕ್ಕೆ ಆಯ್ದುಕೊಂಡು ಸಮರ್ಥ ಅರ್ಥಧಾರಿಗಳ ಸಂಯೋಜನೆಯಲ್ಲಿ ನಿರೂಪಣೆಗೊಂಡು ಮನಸೆಳೆಯಿತು. ಸುಣ್ಣಂಬಳ ವಿಶ್ವೇಶರ ಭಟ್ ಭೀಮನಾಗಿ ಉತ್ತಮ ಪೀಠಿಕೆಯೊಂದಿಗೆ ಪಾಂಡವರ ಜೀವನ ವೃತ್ತಾಂತವನ್ನು, ವನವಾಸದ ಕಾರಣವನ್ನು, ಪಟ್ಟ ಬವಣೆಗಳನ್ನು ಮಾರ್ಮಿಕವಾಗಿ ನುಡಿದು, ಪವನಸುತನಾಗಿ ಆವೇಗ-ಆವೇಶದಿಂದಲೇ ವರ್ತಿಸುತ್ತಿದ್ದ ನಾನು ಬಂಡೆಗೆ ಒರಗಿ ಬಂಡೆಯೆ ಆಗಿ ರೂಪುಗೊಳ್ಳಲು ಪ್ರಯತ್ನಿಸುತ್ತಿದ್ದೇನೆ ಎಂಬ ಮಾತಿನ ಲ್ಲಿ ಪಾಂಡವರು ಪರಿಸ್ಥಿತಿಯ ಕೈಗೊಂಬೆಯಾಗಿರುವುದನ್ನು ಪರಿಣಮಕಾರಿಯಾಗಿ ಚಿತ್ರಿಸಿದರು. ಪ್ರಸಂಗಕರ್ತ ಪವನ್ ಕಿರಣ್‌ಕೆರೆ ದ್ರೌಪದಿಯಾಗಿ ಕಾವ್ಯಾತ್ಮಕ ಭಾಷೆ ಮತ್ತು ಶ್ಲೋಕಗಳನ್ನು ಉದಾಹರಿಸುತ್ತಾ ಸೌಗಂಧಿಕಾ ಪುಷ್ಪ ತರುವಂತೆ ತರ್ಕದೊಂದಿಗೆ ಭೀಮನನ್ನು ಒಪ್ಪಿಸುವುದು ಚೆನ್ನಾಗಿ ಮೂಡಿಬಂದಿತು. ಆಟ-ಕೂಟಗಳ ಸಮರ್ಥ ಕಲಾವಿದ ಸುಜಯೀಂದ್ರ ಹಂದೆ ಹನೂಮಂತನಾಗಿ ಪಾತ್ರಪೋಷಣೆ ಮಾಡಿ ವಾಚಿಕದಲ್ಲಿಯೆ ದೃಶ್ಯಕಾವ್ಯವನ್ನು ಕಟ್ಟಿಕೊಟ್ಟರು. ಭೀಮ ಹನೂಮಂತ ಪಾತ್ರಗಳ ಸಂಭಾಷಣೆಯ ಸನ್ನಿವೇಶ ಪ್ರಸಂಗಕರ್ತರ ಆಶಯವನ್ನು ಪೂರೈಸುವುದರೊಂದಿಗೆ ಪ್ರೇಕ್ಷಕರಿಗೆ ಜ್ಞಾನ ಗ್ರಾಸವನ್ನು ಒದಗಿಸಿತು. ಮೂಡುಬಗೆ ಸತೀಶ ಕುಮಾರ್ ಶೆಟ್ಟಿ ಅರ್ಥಗರ್ಭಿತ ಮಾತುಗಳಿಂದ ಕುಬೇರನ ಪಾತ್ರವನ್ನು ನಿರ್ವಹಿಸಿದರು. ಪ್ರಸಾದ್ ಕುಮಾರ್ ಮೊಗೆಬೆಟ್ಟು ಭಾಗವತಿಕೆ, ಕೂಡ್ಲಿ ದೇವದಾಸ ರಾವ್ ಮದ್ದಲೆ ವಾದನ ಮುಂಡಾಡಿ ಬಸವರ ಚಂಡೆ ವಾದನದ ಸಮರ್ಥ ಸಾಥ್ ತಾಳಮದ್ದಲೆ ಕೂಟಕ್ಕೆ ವೃತ್ತಿಪರತೆಯ ಮೆರುಗನ್ನು ನೀಡಿತು.
ಅನಂತರ ಥೀಮ್ ಪಾರ್ಕ್‌ನ ಪ್ರಾಂಗಣದಲ್ಲಿ ಮರೆಯಾದ ರಂಗತಂತ್ರಗಳೊಂದಿಗೆ ಸುಮಾರು ಮುವತ್ತು ಬಾಲಕಲಾವಿದರಿಂದ ಪ್ರಸ್ತುತಿಗೊಂಡ ಪಾಂಡೇಶ್ವರ ವೆಂಕಟ ವಿರಚಿತ “ದುಶ್ಯಾಸನ ವಧೆ ವೃಷಸೇನ ಕಾಳಗ’ ದೊಂದಿ ಆಟ ಚಿತ್ತಭಿತ್ತಿಯಲ್ಲಿ ಸ್ಥಾಯಿಯಾಗುಂತೆ ಮಾಡಿತು. ದೇವದಾಸ ರಾವ್ ಕೂಡ್ಲಿಯವರ ಭಾಗವತಿಕೆ ಸಾರಥ್ಯದ ಪೂರ್ವರಂಗದಲ್ಲಿ ಬಾಲಗೋಪಾಲರಾಗಿ ಪವನ್ ಕುಮಾರ್ ಪ್ರಥಮ್, ತನ್ಮಯಿ ನಿಶಾಂತ್ ಪೀಠಿಕೆ ಸ್ತ್ರೀ ವೇಷದಲ್ಲಿ ಸಾತ್ವಿಕ್ ನಕ್ಷತ್ರಿ ಭಾಗವಹಿಸಿ ಆಟಕ್ಕೆ ಉತ್ತಮ ಆರಂಭವನ್ನು ನೀಡಿದರು. ದುಶ್ಯಾಸನ ವಧೆ ಪ್ರಸಂಗದಲ್ಲಿ ಕೌರವನಾಗಿ ಚೈತನ್ಯ ಮಯ್ಯ ದುಶ್ಯಾಸನನಾಗಿ ರಾಜೇಶ ಆಚಾರ್ ಭೀಮನಾಗಿ ಕಾರ್ತಿಕ ಆಚಾರ್ ರುದ್ರಭೀಮನಾಗಿ ಸರ್ವೋತ್ತಮ ಆಚಾರ್ ಪ್ರೌಢ ಅಭಿನಯದೊಂದಿಗೆ ಪಾತ್ರಪೋಷಣೆ ಮಾಡಿದರು.
ನಾಲ್ಕು ದಶಕಗಳ ಹಿಂದೆ ಅನುಸರಿಸುತ್ತಿದ್ದ ಆಹಾರ್ಯ ಕ್ರಮದಂತೆ ರಚಿಸಿದ ರುದ್ರಭೀಮನ ವೇಷ, ದುಶ್ಯಾಸನನ ಕರುಳು ಬಗೆಯುವ ಸನ್ನಿವೇಶ, ದುಶ್ಯಾಸನ ಭೀಮರ ಸಾಂಪ್ರದಾಯಿಕ ಮಲ್ಲಯುದ್ಧ ನೋಡುಗರನ್ನು ಬಹಳ ಆಕರ್ಷಿಸಿತು. ವೃಷಸೇನ ಕಾಳಗದಲ್ಲಿ ಕೌರವನಾಗಿ ಸಹನಾ ವೃಷಸೇನನಾಗಿ ಸಪ್ತಮಿ ಸೋಮಪ್ರಭೆಯಾಗಿ ಸಮೀಕ್ಷಾ ಭೀಮನಾಗಿ ಮಂಜುಶ್ರೀ ಕೃಷ್ಣನಾಗಿ ದರ್ಶಿತಾ ಅರ್ಜುನನಾಗಿ ರಾಹುಲ್ ಎರಡನೇ ವೃಷಸೇನನಾಗಿ ಚಿನ್ಮಯಿ ಮಯ್ಯ ತಮ್ಮ ಪಾತ್ರಗಳನ್ನು ಕ್ರಿಯಾಶೀಲವಾಗಿ ನಿರ್ವಹಿಸಿದರು. ಯುವ ಭಾಗವತ ಪ್ರಸಂಗಕರ್ತ ಪ್ರಸಾದ್ ಮೊಗೆಬೆಟ್ಟು ಪ್ರರಂಪರೆಯ ಮಟ್ಟುಗಳೊಂದಿಗೆ ಹಾಡಿದ ಪದ್ಯಗಳು ರಂಜಿಸಿತು. ಬಾರೋ ತಮ್ಮ ದುಶ್ಯಾಸನ… ಲಲನೆ ಕೇಳೆಲೆ ಬಳಲಿಸಿದಧಮನು … ಹರಿಯೆ ಪರಿಕಿಸೆನ್ನ…. ಮುಂತಾದ ಪದ್ಯಗಳು ಮನದಲ್ಲುಳಿಯುವಂತಿದ್ದವು.
ಡಿ.ಡಿ. ರಾವ್ ಅವರ ಮದ್ದಲೆ ವಾದನ ಬಸವ ಮರಕಾಲ ಮುಂಡಾಡಿಯವರ ಚಂಡೆವಾದನದ ಪೂರಕ ಹಿಮ್ಮೇಳ ಕಳೆಯೇರಿಸಿತ್ತು. ವೇಷಗಾರಿಕೆಯಲ್ಲಿ ಹಿಂದೆ ಬಳಸುತ್ತಿದ್ದ ಬೆನ್ನುವಸ್ತ್ರ ಭೀಮ ವೃಷಸೇನರ ಕಡ್ತಕದಿನ್ನಾ ತಾದೇಂ… ಎಂದು ಆರಂಭವಾಗುವ ಸಂಪ್ರದಾಯದ ಯುದ್ಧ ಕುಣಿತ ಮತ್ತು ಅರ್ಜುನ ವೃಷಸೇನರ ಸಂಪ್ರದಾಯದ ರಥಯುದ್ಧ ಚೌಕಿಯಿಂದ ದಿವಟಿಗೆ ಹಿಡಿದು ಕೊಡಂಗಿಗಳೊಂದಿಗೆ ಸಭಾಮಧ್ಯಭಾಗದಿಂದ ಹಿಮ್ಮೇಳ ಕಲಾವಿದರು ಪರಾಕು ಹೇಳುತ್ತಾ ರಂಗಸ್ಥಳ ಪ್ರವೇಶಿಸುವುದು ಬಾಲಗೋಪಾಲರು ಕುಣಿಯುವಾಗ ಹಿಂದಿನ ಕ್ರಮದಂತೆ ಪರದೆಯ ಹಿಂದೆ ಗಣಪತಿ ಮತ್ತು ಸಂಪೂರ್ಣ ರಂಗದಿಂದಲೇ ಮರೆಯಾದ ಗಣಪತಿ ಕೌತುಕ ನೃತ್ಯದಿಂದ ಕೂಡಿದ್ದು ಯಕ್ಷಗಾನದ ಗತವೈಭವವನ್ನು ನೆನಪಿಸಿತು. ಪಾರಂಪರಿಕ ರಂಗಸ್ಥಳ ರಚನೆ, ಕೃತಕ ಬೆಳಕಿನಿಂದ ರಸಾಭಾಸಕ್ಕೆ ಎಡೆಯಾಗದಂತೆ ಪರಿಸರವನ್ನೆಲ್ಲ ಹಣತೆಗಳಿಂದ ಸಿಂಗರಿಸಿದ್ದು ಯಶಸ್ವಿ ಪ್ರದರ್ಶನಕ್ಕೆ ಪೂರಕವಾಗಿದ್ದವು. ಚಿಕ್ಕ ಮಕ್ಕಳಿಂದ ಉತ್ತಮ ಗುಣಮಟ್ಟದ ಪ್ರಸ್ತುತಿಗೆ ಕಾರಣರಾದ ಪಂಪರೆಯ ವೇಷಗಳಿಗೆ ಹೆಸರಾದ ದಕ್ಷನಿರ್ದೇಶಕ ಚಿತ್ರಪಾಡಿ ಕೃಷ್ಣಮೂರ್ತಿ ಉರಾಳ್ ಪ್ರಶಂಸೆಗೆ ಪಾತ್ರರಾದರು.
ರಾಘವೇಂದ್ರ ತುಂಗ ಕೋಟ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.