ಹೊಸ ಸಾಧ್ಯತೆ ತೆರೆದಿಟ್ಟ ಯಕ್ಷಾಭಿನಯ
Team Udayavani, Feb 14, 2020, 5:11 AM IST
ವಿವಿಧ ವೃತ್ತಿಯಲ್ಲಿರುವ ಹವ್ಯಾಸಿ ಯಕ್ಷಗಾನ ಆಸಕ್ತರು ಕಟ್ಟಿಕೊಂಡ, ಬಡಗುತಿಟ್ಟು ಯಕ್ಷಗಾನ ಕಲಿಕೆಯ ಸಂಸ್ಥೆ ಯಕ್ಷಾಭಿನಯ, ಜ.18ರಂದು ಗುರು ಮಂಜುನಾಥ ಕುಲಾಲ್ ನಿರ್ದೇಶನದಲ್ಲಿ ಮೊದಲ ಪ್ರದರ್ಶನ ನೀಡಿದ್ದು, ಇದು ಹೊಸ ಸಾಧ್ಯತೆಯೊಂದನ್ನು ಪರಿಚಯಿಸಿತು.ಅಲ್ಲಿ ಆರು ವರ್ಷದ ಪುಟ್ಟ ಮಗುವಿನಿಂದ ಅರುವತ್ತರ ತನಕದ ಉತ್ಸಾಹಿಗಳಿದ್ದರು.
ಐರೋಡಿ ಮಂಜುನಾಥ ಕುಲಾಲರ ನಿರ್ದೇಶನದಲ್ಲಿ ಸುಮಾರು 30ರಷ್ಟು ಆಸಕ್ತರು ಗೆಜ್ಜೆ ಕಟ್ಟಿದರು. ತಾಳ ಬದ್ದವಾದ ಹೆಜ್ಜೆ, ವ್ಯಾಕರಣ ಬದ್ಧ ಮಾತುಗಾರಿಕೆ, ಪಾತ್ರಕ್ಕೊಪ್ಪುವ ಸಾಂಪ್ರದಾಯಿಕ ವೇಷ ಭೂಷಣ ಹೀಗೆ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದ ಗುರುವಿನ ಗಟ್ಟಿತನ ಕಲಾವಿದರ ಮೂಲಕ ಹೊರಹೊಮ್ಮಿತ್ತು. ಪ್ರದರ್ಶನಗೊಂಡ ಆಖ್ಯಾನಗಳು ಇದಕ್ಕೊಪ್ಪುವಂತಿದ್ದುವು. ವೃಷಸೇನ, ಪ್ರಮೀಳಾ ರ್ಜುನ, ಘೋರ ಭೀಷಣ ಹಾಗೂ ಬಬ್ರುವಾಹನ ಪ್ರಸಂಗಗಳು ಪ್ರದರ್ಶನ ಗೊಂಡಿದ್ದುವು. ಪ್ರಸಂಗ ಗಳ ಆಯ್ಕೆಯಲ್ಲೂ ಸಾಂಪ್ರ ದಾಯಿಕ ವೇಷಗಳನ್ನು ಕಲಿಕೆಯ ಹಂತದಲ್ಲಿದ್ದ ಹವ್ಯಾಸಿ ವಿದ್ಯಾರ್ಥಿಗಳಿಗೆ, ಆ ಮೂಲಕ ಆಸಕ್ತ ಕಲಾಭಿಮಾನಿಗಳಿಗೆ ಪರಿ ಚಯಿಸುವ ಉದ್ದೇಶ ಸ್ಪಷ್ಟವಾಗಿದ್ದು ಸಫಲತೆ ಯನ್ನೂ ನೀಡಿತು.
ಪ್ರದರ್ಶನದುದ್ದಕ್ಕೂ ಗಮನಿಸಿದ ಕೆಲ ಅಂಶಗಳೆಂದರೆ ಗುರುವಿನ ಮಾರ್ಗದರ್ಶನದಲ್ಲೇ ಪ್ರದರ್ಶನ ನೀಡಿದ ಕಲಾವಿದರಿಗೂ, ವೃತ್ತಿಪರ ಭಾಗವತರಿಗೂ ಸಂವಹನದ ಕೊರತೆ ಎದ್ದು ಕಾಣುತ್ತಿತ್ತು. ನಿರ್ದೇಶಕರೇ ಆರಂಭದಲ್ಲಿ ಹೇಳಿದಂತೆ, ವೃತ್ತಿಪರ ಪ್ರದರ್ಶನಗಳಲ್ಲಿ ಭಾಗವತರೇ ಪ್ರಸಂಗವನ್ನು ಮುನ್ನಡೆಸುವವರಾದರೂ, ಈ ರೀತಿಯ ಅಭ್ಯಾಸ ಪ್ರದರ್ಶನಗಳಲ್ಲಿ ಈ ಕೊರತೆ ಸಾಮಾನ್ಯ. ಎಷ್ಟೋ ಸಂದರ್ಭಗಳಲ್ಲಿ ಕಲಾವಿದರು ಕಲಿತ ಪ್ರಸಂಗದ ನಡೆ, ಭಾಗವತರ ಅವಾಗಾಹನೆಗೆ ಹೊರತಾಗಿ ಪ್ರಸಂಗ ಮುಂದೆ ಓಡಿದ್ದು ಗಮನಕ್ಕೂ ಬಂದಿದ್ದುವು. ಈ ಕೊರತೆಯನ್ನು ನೀಗಿಸುವಲ್ಲಿ ಹಿಮ್ಮೇಳದೊಂದಿಗೆ ಮುಮ್ಮೇಳದ ಪೂರ್ವ ತಯಾರಿಯ ಅಗತ್ಯ ಮತ್ತು ಪ್ರಾಮುಖ್ಯತೆ ಬಹುಶ ಅಭ್ಯಾಸ ನಿರತ ಹವ್ಯಾಸಿಗಳಿಗೆ ಅತ್ಯಗತ್ಯ ಮತ್ತು ಇದು ಮುಂದಿನ ಕಲಿಕೆಗೆ ಅನಿವಾರ್ಯ ಸೇರ್ಪಡೆ ಆಗಬಹುದೇನೋ
ಹೆಚ್ಚಿನೆಲ್ಲ ಕಲಾವಿದರು ತಮ್ಮ ಪ್ರೌಢಿಮೆಯನ್ನು ಎಲ್ಲೂ ಸೋಲಲು ಬಿಡಲಿಲ್ಲ. ಕೇವಲ ಆಸಕ್ತಿ ಮತ್ತು ಗುರುವಿನ ನಿರ್ದೇಶನದಡಿ ಇಂತಾದ್ದೊಂದು ಪ್ರದರ್ಶನ ನೀಡಿರುವುದು ನಿಜಕ್ಕೂ ಶ್ಲಾಘನೀಯ. ಪುರುಷರು, ಮಹಿಳೆಯರು ಹಾಗೂ ಮಕ್ಕಳು ಉತ್ಸಾಹದಿಂದ ನಿರ್ವಹಿಸಿದ ಪಾತ್ರಗಳಿಗೆ ಜೀವ ತುಂಬುವಲ್ಲಿ ತಮ್ಮ ಎಲ್ಲಾ ಪ್ರತಿಭೆಯನ್ನೂ ಧಾರೆ ಎರೆದಿದ್ದರು.
ಭಾಗವತರಾಗಿ ಗಣೇಶ್ ಆಚಾರ್ಯ ಅನುಭವದ ಕೊರತೆಯಿಂದ ಒತ್ತಡದಲ್ಲಿದ್ದ ಹಾಗೆ ಕಷ್ಟ ಅನುಭವಿಸಿದ್ದು ಎದ್ದು ಕಂಡರೆ, ಪ್ರಸಾದ್ ಕುಮಾರ್ ಮೊಗೆಬೆಟ್ಟು ಇಡೀ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಎಂ. ಜಿ. ಹೆಗಡೆ ಐದು ಮದ್ದಳೆ ನುಡಿಸುವ ಮೂಲಕ ಜನ ಮನ ಗೆದ್ದರೆ ಶ್ರೀಕಾಂತ ಶೆಟ್ಟಿಯವರ ಚೆಂಡೆಯ ಸಾಥ್ ಇತ್ತು.
ಪ್ರದರ್ಶನದುದ್ದಕ್ಕೂ ಗಮನ ಸೆಳೆದದ್ದು ಪಾತ್ರಕ್ಕೊಪ್ಪುವ ಸಾಂಪ್ರದಾಯಿಕ ವೇಷ ಭೂಷಣಗಳು. ಬಣ್ಣದ ವೇಷದ ಹಿಂದಿನ ಗತ್ತು ಗೈರತ್ತನ್ನು ಕಲಾಸಕ್ತರು ಆಸ್ವಾದಿಸಿದರು. ಪ್ರತಿ ಕಲಾವಿದನ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಇದು ಮೊದಲ ಪ್ರಯತ್ನ ಆದ ಕಾರಣದಿಂದ ಅಕಾಲವೇ ಆದರೂ, ಈ ಹವ್ಯಾಸಿ ತಂಡ ಮುಂದಿನ ದಿನಗಳಲ್ಲಿ ಬಡಗು ಯಕ್ಷ ಪರಂಪರೆಯಲ್ಲಿ ವಿನೂತನ ಅಧ್ಯಾಯವೊಂದರ ಸೇರ್ಪಡೆಯತ್ತ ಯಶಸ್ವಿ ಪಯಣ ಆರಂಭಿಸಿದೆ.
-ಅರೆಹೊಳೆ ಸದಾಶಿವ ರಾವ್
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.