ಅಪರೂಪದ ಒಂದು ಕಥಕ್
Team Udayavani, Aug 18, 2017, 8:40 AM IST
ಶಾಸ್ತ್ರೀಯ ನೃತ್ಯದಲ್ಲಿ ಹಲವು ಪ್ರಕಾರಗಳನ್ನು ಕಂಡರೂ ಅಂತಿಮವಾಗಿ ಅವೆಲ್ಲವೂ ಭಗವಂತನ ಸಾಕ್ಷಾತ್ಕಾರಕ್ಕಿರುವ ಮಾರ್ಗ. ಈ ನೃತ್ಯಗಳಿಂದ ನರ್ತಕ ಹಾಗೂ ಸತ್ಪ್ರೇಕ್ಷಕರೀರ್ವರೂ ಆನಂದಾನುಭೂತಿ ಗಳಾಗುತ್ತಾರೆ. ಇಂತಹ ಭಾಗ್ಯವನ್ನು ಪುತ್ತೂರು ಹಾಗೂ ಸಮೀಪದ ಕಲಾಸಕ್ತರಿಗೆ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಕೆಲವು ವರ್ಷಗಳಿಂದ ನೀಡುತ್ತಿದೆ.
ಅಕಾಡೆಮಿಯ ನೃತ್ಯಾಂತರಂಗ ಸರಣಿಯಲ್ಲಿ ಈಚೆಗೆ ಈ ಪ್ರಾಂತ್ಯದ ಜನರಿಗೆ ಅಪರೂಪವಾಗಿ ಲಭಿಸುವ ಕಥಕ್ ನೃತ್ಯದ ಪ್ರದರ್ಶನ ನಡೆಯಿತು. ಕಥಕ್ ಎನ್ನುವ ಪದ ಸಂಸ್ಕೃತ ಮೂಲದ್ದಾಗಿದ್ದು ಕಥಾ ಎಂಬ ಪದದಿಂದ ವುತ್ಪತ್ತಿ ಗೊಂಡಿದೆ. ಯಾವಾತನು ಕಥೆಯನ್ನು ಹೇಳುತ್ತಾನೋ ಆತ ಕಥಾಗಾರ. ಈತ ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಕ್ಕೆ ಸಂಚರಿಸುತ್ತಾ ಪುರಾಣ, ಮಹಾಕಾವ್ಯಗಳ ಕಥೆಗಳನ್ನು ಹಾಡು ಮತ್ತು ನೃತ್ಯದ ಮೂಲಕ ತಿಳಿಸುತ್ತಿದ್ದ. ಹೀಗೆ ಸಂಗೀತ ಮತ್ತು ನೃತ್ಯದ ಸಂಯೋಜನೆಯೊಂದಿಗೆ ಕಥೆ ಹೇಳು ವುದನ್ನು “ಕಥಕ್’ ಎಂದು ಕರೆಯಲಾಯಿತು. ಮುಂದೆ ಭಕ್ತಿ ಚಳುವಳಿಯ ಸಮಯದಲ್ಲಿ ಈ ನೃತ್ಯ ಪ್ರಕಾರದ ವಿಕಾಸವಾಯಿತು ಎನ್ನಲಾಗಿದೆ.
ಈ ನೃತ್ಯ ಪ್ರದರ್ಶನವನ್ನು ಬೆಂಗಳೂರಿನ ಉದಯೋನ್ಮುಖ ಕಲಾವಿದೆ ರಕ್ಷಾ ಕಶ್ಯಪ್ ಪ್ರಸ್ತುತಪಡಿಸಿದರು. ಕಾರ್ಯಕ್ರಮವು ಗಣಪತಿ ಮತ್ತು ಸರಸ್ವತಿಯ ಸ್ತುತಿಯೊಂದಿಗೆ ಪ್ರಾರಂಭಗೊಂಡಿತು. ಇದು ಮಿಯಾನ್ ಕೀ ಮಲ್ಹಾರ್ ರಾಗ ಹಾಗೂ ಚೌತಾಲ್ ನಿಬದ್ಧವಾಗಿದ್ದು, ಸೊಗಸಾಗಿ ಮೂಡಿಬಂತು. ಮುಂದಿನ ನೃತ್ಯ ನಾಟ್ಯಾಧಿದೇವತೆ ಶಿವನ ಕುರಿತಾಗಿದ್ದು, ಏಕ್ ತಾಲ್ ಹಾಗೂ ಮಾಲ್‌ಕೌಂಸ್ ರಾಗದಲ್ಲಿ ಮೂಡಿಬಂದಿತು. ಈ ನೃತ್ಯದಲ್ಲಿ ಪರಶಿವನ ವರ್ಣನೆಯನ್ನು ಅದ್ಭುತವಾಗಿ ಬಿಂಬಿಸಿದರು. ಕಾಮದಹನನಾದ ಶಿವನು ಗಂಗಾಧರ, ಭಸ್ಮಭೂಷಿತ, ಪಿನಾಕಪಾಣಿ, ಚಂದ್ರಶೇಖರ ಎಂಬುದಾಗಿ ವರ್ಣಿಸುತ್ತಾ ನೀಡಿದ ಈ ನೃತ್ಯದ ಗಮನಾರ್ಹ ಅಂಶ ನೃತ್ಯಗಾರ್ತಿಯ ಪಾದತಾಲ್. ಈ ಪಾದತಾಲ್ ಕಥಕ್‌ನ ವಿಶೇಷ ಎನ್ನಬಹುದು. ಅತ್ಯಂತ ವೇಗವಾಗಿ ತಾಳಯುಕ್ತವಾಗಿ ಇರಿಸುತ್ತಿದ್ದ ಪಾದತಾಲ್ ಸೇರಿದ ಸಭಿಕರನ್ನು ಅಚ್ಚರಿಗೊಳಿಸಿತು.
ಮುಂದಿನ ನೃತ್ಯ ವೈಷ್ಣವ ಪಂಥದ ಸಂತರಲ್ಲೊಬ್ಬರಾದ ಸೂರದಾಸ ವಿರಚಿತ ಭಜನೆ. ಇದು ಮಿಶ್ರಕಾಪಿ ರಾಗ ಹಾಗೂ ರೂಪಕ ತಾಳದಲ್ಲಿತ್ತು. ಈ ನೃತ್ಯದಲ್ಲಿ ಭಕ್ತ ಹಾಗೂ ಗೋಪಿಕೆಯ ಕಣ್ಣೆದುರಿನ ಕೃಷ್ಣನ ಅತ್ಯದ್ಭುತವಾದ ಸೌಂದರ್ಯವನ್ನು ವರ್ಣಿಸಲಾಯಿತು. ಬೃಂದಾವನದ ಕಾಡುಗಳಲ್ಲಿ ಅಲೆದಾಡುವ, ಯಮುನಾ ನದಿಯ ತೀರದಲ್ಲಿ ಗೋಪಿಕಾಸ್ತ್ರೀಯರೊಡನೆ ನರ್ತಿಸುವ ಕೃಷ್ಣನನ್ನು ಅತಿ ಸುಂದರವಾಗಿ ಸಭೆಯ ಮುಂದೆ ಪ್ರದರ್ಶಿಸಲಾಯಿತು. ಈ ನೃತ್ಯದಲ್ಲಿ ಟುಕಾಗಳನ್ನು ಅಳವಡಿಸಿದ್ದು, ಅವು ಸುಂದರವಾಗಿ ಮೂಡಿಬಂದು ನರ್ತಕಿಯ ಕಲಾ ಸಾಮರ್ಥ್ಯವನ್ನು ವಿಶದಪಡಿಸಿದವು.
ತದನಂತರ ಶ್ರೀಕೃಷ್ಣನ ತುಂಟಾಟಗಳನ್ನು ಠುಮ್ರಿಯಲ್ಲಿ ಚಿತ್ರಿಸಲಾಯಿತು. ಠುಮ್ರಿ ಎಂದರೆ ಸಾಹಿತ್ಯಕ್ಕೆ ಕಾಲಗೆಜ್ಜೆಯ ನಾದವನ್ನು ಹೊಮ್ಮಿಸುತ್ತಾ ನರ್ತಿಸುವುದು ಎಂದರ್ಥ. ಇಲ್ಲಿ ನರ್ತಿಸಿದ ಠುಮ್ರಿಯು ಮಹಾರಾಜ ಬಿಂದಾದಿನ್ ವಿರಚಿತವಾಗಿದ್ದು, ಸೋಹಾನಿ ರಾಗ ಹಾಗೂ ತೀನ್‌ತಾಲ್‌ನಲ್ಲಿ ಪ್ರದರ್ಶಿತವಾಯಿತು. ಅತೀ ತುಂಟನಾದ ಕೃಷ್ಣ ಮೊಸರು, ಹಾಲು ತುಂಬಿದ ಮಡಕೆಯನ್ನು ಹೊತ್ತೂಯ್ಯುತ್ತಿರುವ ಗೋಪಿಕೆಯರಿಗೆ ದಾರಿ ಬಿಡದೆ ಕಾಡುತ್ತಾನೆ, ತುಂಬಿದ ಮಡಕೆಯನ್ನು ಒಡೆದು ಹಾಕುತ್ತಾನೆ, ಗೋಪಿಕೆಯರ ಮಣಿಕಟ್ಟನ್ನು ಬಲವಾಗಿ ಹಿಡಿದು ಅವರ ಬಳೆಗಳನ್ನು ಭಗ್ನಗೊಳಿಸುತ್ತಾನೆ. ಕೃಷ್ಣನ ಕಾಟವನ್ನು ತಡೆಯಲಾರದ ಗೋಪಿಕೆಯರು ಆತನನ್ನು ಗದರಿಸಿ ಕೊಳಲನ್ನು ಅವಿತಿರಿಸಿ ಕಾಡಿಸುವ ಒಂದು ಪೂರ್ತಿ ಸನ್ನಿವೇಶವನ್ನು ಈ ನೃತ್ಯದಲ್ಲಿ ಮನೋಜ್ಞವಾಗಿ ಅಭಿನಯಿಸಲಾಯಿತು. ಇಲ್ಲಿ ನರ್ತಕಿಯು ಕೃಷ್ಣನನ್ನು ಬಿಂಬಿಸುವಾಗ ಮುಗ್ಧತೆ, ತುಂಟತನ, ಗೋಪಿಕೆಯರ ಸಂದರ್ಭದಲ್ಲಿ ಕೋಪ, ಗಾಂಭೀರ್ಯದ ಅಭಿನಯಗಳನ್ನು ಸುಂದರವಾಗಿ ಅಭಿವ್ಯಕ್ತಿಪಡಿಸುವ ಮೂಲಕ ತನ್ನ ಅಭಿನಯ ಸಾಮರ್ಥ್ಯವನ್ನು ಶ್ರುತಪಡಿಸಿದರು.
ಕೊನೆಯ ನೃತ್ಯ ತರಾನಾ. ಭರತನಾಟ್ಯದಲ್ಲಿ ಕಾಣುವ ತಿಲ್ಲಾನದಂತಹ ನೃತ್ಯ ಇದು. ಈ ನೃತ್ಯ ವಿಧವು ಭಾರತೀಯ ನೃತ್ಯದ ಮೇಲಿನ ಪರ್ಷಿಯನ್ನರ ಪ್ರಭಾವವನ್ನು ಪ್ರತಿಪಾದಿಸುತ್ತದೆ. ಘತ್‌ನಿಕಾಗಳು ಹಾಗೂ ಪಾದತಾಳಗಳು ಈ ನೃತ್ಯದ ಗಮನಾರ್ಹ ಸಂಗತಿಯಾಗಿದ್ದು, ಈ ನೃತ್ಯದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿದವು. ತರಾನಾದ ಆರಂಭದಲ್ಲಿ ಹಾಗೂ ಕೊನೆಯಲ್ಲಿ “ಸಲಾಂ’ ಅಭಿವ್ಯಕ್ತಿ ಈ ನೃತ್ಯವನ್ನು ಮುಸಲ್ಮಾನ ದೊರೆಗಳ ಆಸ್ಥಾನದಲ್ಲಿ ನರ್ತಿಸಲಾಗುತ್ತಿತ್ತು ಎನ್ನುವುದನ್ನು ಪುಷ್ಟೀಕರಿಸುತ್ತದೆ. ಆ ಪರಂಪರೆ ಇಂದಿಗೂ ಮುಂದುವರಿದು ಬಂದು, ಈಗ ದೊರೆಗಳ ಬದಲಿಗೆ ಸಭಿಕರಿಗೆ ಸಲಾಂ ಹೇಳಲಾಗುತ್ತದೆ. ಈ ನೃತ್ಯ ದರ್ಬಾರಿ ರಾಗ ಹಾಗೂ ತೀನ್ ತಾಳದಲ್ಲಿ ಮೂಡಿಬಂದಿತು.
ಒಟ್ಟಾಗಿ ಕಾರ್ಯಕ್ರಮ ಸರಳ ಸುಂದರವಾಗಿ ಮೂಡಿಬಂತು. ರಕ್ಷಾ ಅವರು ಗುರು ಮೈಸೂರು ಬಿ. ನಾಗರಾಜ್ ಅವರ ಶಿಷ್ಯೆಯಾಗಿದ್ದು ಪ್ರವರ್ಧಮಾನಕ್ಕೆ ಬರುತ್ತಿರುವ ಯುವ ಕಲಾವಿದೆ. ಈ ಕ್ಷೇತ್ರದಲ್ಲಿ ಇನ್ನಷ್ಟು ಪರಿಶ್ರಮ ಪಡುತ್ತಾ ತನ್ನ ಅಭಿನಯ ಸಾಮರ್ಥ್ಯ ಹಾಗೂ ಅಂಗಶುದ್ಧಿಯನ್ನು ಹರಿತಗೊಳಿಸಿದರೆ ನಾಡಿನ ಓರ್ವ ಹೆಮ್ಮೆಯ ಕಲಾವಿದೆಯಾಗುವ ಸಕಲ ಲಕ್ಷಣಗಳನ್ನು ಹೊಂದಿದ್ದಾರೆ.
ಪದ್ಮಶ್ರೀ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.