ರಂಗಸಾಧ್ಯತೆಗಳ ವೈವಿಧ್ಯಕ್ಕೆ ಸಾಕ್ಷಿಯಾದ ರಂಗಭೂಮಿ ನಾಟಕ ಸ್ಪರ್ಧೆ
Team Udayavani, Mar 20, 2020, 10:05 AM IST
ಉಡುಪಿಯ ರಂಗಭೂಮಿಯ 40ನೇ ರಾಜ್ಯಮಟ್ಟದ ನಾಟಕ ಸ್ಪರ್ಧೆ ಇತ್ತೀಚೆಗೆ ಎಂಜಿಎಂ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಿತು. 12 ದಿನ ನಡೆದ ಈ ಸ್ಪರ್ಧೆಯಲ್ಲಿ 12 ನಾಟಕ ತಂಡಗಳು ಪ್ರದರ್ಶನ ನೀಡಿದವು. ಆಧುನಿಕ ರಂಗಭೂಮಿಯ ವೈವಿಧ್ಯಮಯ ಪ್ರಯೋಗಗಳಿಗೆ ಈ ಸ್ಪರ್ಧೆ ಸಾಕ್ಷಿಯಾಯಿತು. ನಿರ್ಣಾಯಕರಾಗಿ ಎಂ. ಎಲ್. ಸಾಮಗ,ಬಾಸುಮ ಕೊಡಗು, ಜಯರಾಮ ನೀಲಾವರ, ಜಿ. ಪಿ. ಪ್ರಭಾಕರ ತುಮರಿ, ಪಿ. ಬಿ. ಪ್ರಸನ್ನ ಭಾಗಿಯಾಗಿದ್ದರು. ಪ್ರಯೋಗಗೊಂಡ ಎಲ್ಲಾ ನಾಟಕಗಳ ಕಿರು ಒಳನೋಟ ಇಲ್ಲಿದೆ.
ತದ್ರೂಪಿ
ಕಲಾಟ್ರಸ್ಟ್ ಕಾರಿಗನೂರು ತಂಡ ಅಭಿನಯಿಸಿದ ಈ ನಾಟಕವನ್ನು ನಿರ್ದೇಶಿಸಿದ್ದವರು ಪವನ ದೇಶಪಾಂಡೆ. ಕನ್ನಡ ರಂಗಭೂಮಿಯಲ್ಲಿ ಹೊಸ ಪ್ರಯೋಗಶೀಲತೆಯನ್ನು ತಂದ ನಾಟಕ ಇದು. ರಾಜಕೀಯ ಸರ್ವಾಧಿಕಾರಿಯ ಸುತ್ತ ಹೆಣೆದ ಕಥಾವಸ್ತು ಇದು. ರಂಗಕರ್ಮಿ ಪ್ರಸನ್ನರ ಈ ನಾಟಕ ಸರ್ವಾಧಿಕಾರಿಯ ಅಂತರಂಗವನ್ನು ಬಿಚ್ಚಿಡುತ್ತಾ ವಿಸ್ಮಯ ಮೂಡಿಸುವ ನಾಟಕ. ಎಲ್ಲಾ ಅಧಿಕಾರವಿದ್ದರೂ ಅಂತರಂಗದಲ್ಲಿ ಅಡಗಿದ ಅವ್ಯಕ್ತ ಭಯವೇ ಈ ನಾಟಕದ ಅಭಿವ್ಯಕ್ತಿ. ಸಿನೆಮಾದ ಡಬಲ್ ಆ್ಯಕ್ಟಿಂಗ್‌ನ ಮಾದರಿ. ಜನರಲ್ ಅಭಿನಯ. ಸಂಗೀತದ ಬಳಕೆ ಇಲ್ಲದೆ ವಸ್ತು ನಿರ್ವಹಿಸಿದ್ದು ನಾಟಕ ಪರಿಣಾಮಕಾರಿ ಎನಿಸಲಿಲ್ಲ. ಬೆಳಕು ಕೂಡಾ ಇನ್ನಷ್ಟು ಪರಿಣಾಮಕಾರಿಯಾಗಿರಬೇಕಿತ್ತು. ರಂಗಪರಿಕರಗಳ ಬಳಕೆಯೂ ಸೀಮಿತವಾಗಿತ್ತು. ನಾಟಕದ ಸರ್ವಾಂಗ ಸುಂದರತೆ ಇಲ್ಲದ್ದು ಈ ನಾಟಕವನ್ನು ಒಂದು ಸಹ್ಯ ಪ್ರಯೋಗವಾಗಿಸಿತು. ಸಮೂಹ ರಂಗಕ್ರಿಯೆ ಇನ್ನಷ್ಟು ಜೋಡಿಸಿದ್ದರೆ ಅಭಿನಯಕ್ಕೆ ಚಲನಶೀಲತೆ ಹೆಚ್ಚುತ್ತಿತ್ತು. ಇಡೀ ನಾಟಕದ ವಾಚಿಕ ಭಾಗವೇ ನಾಟಕವನ್ನು ಮುನ್ನಡೆಸುವುದರಿಂದ ಇದರಲ್ಲಿ ತುಂಬ ದೌರ್ಬಲ್ಯ ಎದ್ದುಕಾಣುತ್ತಿತ್ತು. ನಿರ್ದೇಶನ ಇನ್ನಷ್ಟು ಶಕ್ತವಾಗಬೇಕಿತ್ತು.
ಮದುವೆಯ ಹೆಣ್ಣು
ರೋಹಿತ್ ಎಸ್. ಬೈಕಾಡಿ ನಿರ್ದೇಶನದ ಮದುವೆ ಹೆಣ್ಣು ಪ್ರದರ್ಶಿಸಿದ ತಂಡ ಕೈಲಾಸಕಲಾ ಕ್ಷೇತ್ರ ತೆಕ್ಕಟ್ಟೆ. ಹೆಚ್. ಎಸ್. ಶಿವಪ್ರಕಾಶರು ಬೌದ್ಧಧರ್ಮದ ತಾತ್ವಿಕತೆ ಹಿನ್ನೆಲೆ ಇಟ್ಟುಕೊಂಡು ಈ ನಾಟಕದಲ್ಲಿ ಬದುಕಿನ ಕೆಲ ಸತ್ಯಶೋಧ ನಡೆಸಿದ್ದಾರೆ. ಮನುಷ್ಯನ ಜೀವನದಲ್ಲಿ ವಿಧಿಯಾಟ ಇದರಲ್ಲಿ ಮುಖ್ಯವಾಗಿ ಕಾಣಿಸುತ್ತದೆ. ಜೀವನದ ಕ್ರೌರ್ಯ, ವ್ಯಂಗ್ಯ, ಮಾನವನ ಅಸಹಾಯಕತೆ, ನಾಟಕದಲ್ಲಿ ಮುಖ್ಯ ವಿಷಯವಾಗಿದೆ. ವೇಷಭೂಷಣ, ರಂಗವಿನ್ಯಾಸ, ಬೆಳಕು ಆಕರ್ಷಣೀಯವಾಗಿತ್ತು. ಬುಡಕಟ್ಟು ವೇಷಭೂಷಣವೂ ಔಚಿತ್ಯಪೂರ್ಣವಾಗಿತ್ತು. ನಾಟಕದ ತುಂಬಾ ವ್ಯರ್ಥ ಮೌನದ ಉಪಯೋಗ ಜಾಸ್ತಿ ಅನಿಸಿತು. ನಟರಲ್ಲಿ ಜೋಶ್ ಇತ್ತು. ಉತ್ಸಾಹದಿಂದ ಅಭಿನಯಿಸಿದರು. ಗಂಪು ಕ್ರಿಯೆಗಳು ಉತ್ತಮವಾಗಿ ಮೂಡಿಬಂತು. ಸಂಗೀತದ ಕೊರತೆ ನಾಟಕದ ಒಂದು ಲೋಪ. ಬೆಳಕು ಕೂಡಾ ಇನ್ನಷ್ಟು ಪರಿಣಾಮಕಾರಿಯಾಗಿಸಬಹುದಿತ್ತು. ಅಭಿನಯದ ಶ್ರಮ ಇನ್ನಷ್ಟು ದುಡಿಸಿಕೊಳ್ಳಬಹುದಿತ್ತು.
ಘಾಸೀರಾಮ್ ಕೊತ್ವಾಲ್
ಮೈಸೂರಿನ ಸಂಚಲನ ತಂಡ ಅಭಿನಯಿಸಿದ ಇದು ಕನ್ನಡ ಮತ್ತು ಮರಾಠಿ ರಂಗಭೂಮಿಯಲ್ಲಿ ಮಹತ್ವದ ನಾಟಕ. ಪೇಶ್ವೆಯ ದೊರೆ ನಾನಾ ಫಡ್ನವೀಸ್ ಮತ್ತು ಕನೂಜದ ಸಾಮಾನ್ಯ ಬ್ರಾಹ್ಮಣ ಘಾಸೀರಾಮ ನಡುವಿನ ಸಂಘರ್ಷವಾದರೂ ನಾಟಕ ಪಡೆದುಕೊಳ್ಳುವ ವಿವಿಧ ಆಯಾಮಗಳು ಅದನ್ನು ಸಾಮಾಜಿಕ-ಆರ್ಥಿಕ ಸಂಘರ್ಷದ ಸಂಗತಿಗಳನ್ನು ಮುನ್ನೆಲೆಗೆ ತರುತ್ತದೆ. ಇಡೀ ನಾಟಕದಲ್ಲಿ ವೇಗದ ಆವೇಗ ಇರಲಿಲ್ಲ. ಇದರಿಂದ ಹಲವು ಬಾರಿ ಬರೀ ಬೊಬ್ಬೆ, ಕಿರುಚಾಟಗಳೇ ಕೇಳಿಬಂದವು. ಇನ್ನಷ್ಟು ರಂಗಶಿಸ್ತು ಅಪೇಕ್ಷಿತ ಅನ್ನಿಸಿತು. ಸಂಗೀತ ಬೆಳಕು ಸಾಕಷ್ಟು ಪರಿಣಾಮ ಮಾಡಿದರೂ ವಾಚಿಕ ಭಾಗದ ನಿರ್ವಹಣೆ ತುಂಬಾ ದುರ್ಬಲ ಎನಿಸಿತು. ಅಭಿವ್ಯಕ್ತಿಯಲ್ಲಿ ಸೋತಿತು.
ಮಾಯಾಬೇಟೆ
ಬೆಂಗಳೂರಿನ ದೃಶ್ಯಕಾವ್ಯ ತಂಡ ಪ್ರದರ್ಶಿಸಿದ ನಾಟಕವನ್ನು ರಚಿಸಿದವರು ಕೆ. ವೈ. ನಾರಾಯಣ ಸ್ವಾಮಿ, ನಿರ್ದೇಶಿಸಿದವರು ನಂಜುಂಡೇ ಗೌಡ ಸಿ.ಹೆಣ್ಣಿನ ಅಂತರಂಗ ಶೋಧಮಾಡುವ ಹೊಸ ತಂತ್ರಗಳ ಈ ನಾಟಕ ಮನನೀಯವಾಗಿದೆ. ಪಾತ್ರಗಳ ಅಂತರಂಗವನ್ನು ಪ್ರಯೋಗಾತ್ಮಕವಾಗಿ ರಂಗದಲ್ಲಿ ಪಡಿಮೂಡಿಸಿದೆ. ಸ್ತ್ರೀ ಶೋಷಣೆಯ ಚರಿತ್ರೆಯನ್ನೇ ಮುಖ್ಯವಾಗಿಟ್ಟುಕೊಂಡು ಸ್ತ್ರೀ ಅಸ್ತಿತ್ವ, ಅನನ್ಯತೆ, ಅಸ್ಮಿತೆಗಳ ಹುಡುಕಾಟವನ್ನು ಸಮಸ್ಯಾತ್ಮಕವಾಗಿಸಿಕೊಂಡು ಸತ್ಯಶೋಧಿಸುವ ಜಿಜ್ಞಾಸೆ ನಡೆಸುವ ತಂತ್ರ ತುಂಬಾ ಚೆನ್ನಾಗಿದೆ. ಗಂಡಿನ ದೃಷ್ಟಿಯಿಂದ ಮಾತ್ರ ಹೆಣ್ಣಿನ ಸ್ವಾತಂತ್ರ್ಯ, ಅಸ್ಮಿತೆಯನ್ನು ನೋಡಲಾಗಿದೆ ಎಂಬ ಗೃಹೀತವೂ ನಾಟಕದ ಪ್ರಜ್ಞೆಯಲ್ಲಿದೆ. ಕೊನೆಯಲ್ಲಿ ಪಾರು ಆಡುವ ಒಂದೊಂದು ಮಾತುಗಳು ಪುರುಷ ಪ್ರಧಾನ ಸಮಾಜಕ್ಕೆ ಆಘಾತ ಮಾಡುತ್ತದೆ. ಪ್ರಾರಂಭದಲ್ಲಿ ಎರಡು ಮೂರು ದೃಶ್ಯಗಳು ಸಂಬಂಧಗಳ ಸರಳೀಕರಣ ಮತ್ತು ಪಾತ್ರಗಳ ನಡುವೆ ಪಾರಸ್ಪರಿಕ ಸಂಘರ್ಷವಿಲ್ಲದೆ ವಿಭಾವಾದಿಗಳು ಇಲ್ಲದೆ ದಿಢೀರ್ ಬೆಳೆಯುವುದು ಅಸಹಜ, ಅಸ್ಪಷ್ಟ ಎನಿಸುತ್ತದೆ.
ಯಾವುದೇ ಹೇಳಿಕೊಳ್ಳುವ ರಂಗಪರಿಕರ ಬಳಸದೆ ಲಯವನ್ನೇ ಗಟ್ಟಿಯಾಗಿಟ್ಟುಕೊಂಡು ಸಂಗೀತವನ್ನು ಪರಿಣಾಮಕಾರಿಯಾಗಿ ಬಳಸಿ ಸಂವೇದ್ಯಗೊಳಿಸಿದ್ದು ಉಲ್ಲೇಖನೀಯ. ಮುದುಕಿಯ ಪ್ರವೇಶದಿಂದ ನಾಟಕ ಅನೂಹ್ಯವಾದ ತಿರುವು ತೆಗೆದುಕೊಂಡು ಗಂಭೀರ ಪ್ರಯೋಗಕ್ಕೆ ಸಿದ್ಧವಾಗುತ್ತದೆ. ನಾರಾಯಣ ಸ್ವಾಮಿಯವರ ಇತರ ನಾಟಕಗಳಂತೆ ಇಲ್ಲಿಯೂ ಮಿಥ್ ಬಳಕೆ ಸತ್ಯದರ್ಶನಕ್ಕೆ ಬೇಕಾಗುವ ನಾಟಕೀಯ ತಂತ್ರವಾಗಿ ಗಮನ ಸೆಳೆಯುತ್ತದೆ. ಇಡೀ ನಾಟಕದ ಶಕ್ತಿಕೇಂದ್ರವೆನಿಸುವ ಈ ದೃಶ್ಯಗಳು ನಾಟಕವನ್ನು ಕಟ್ಟಿದ್ದು ಹೌದು. ತುಂಬಾ ಚಿಂತನೆಗೆ ಹಚ್ಚಿದ ಉತ್ತಮ ಪ್ರಯೋಗ.
(ಮುಂದಿನ ವಾರಕ್ಕೆ)
ಜಿ. ಪಿ. ಪ್ರಭಾಕರ ತುಮರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.