ರಾಜಾಂಗಣದಲ್ಲಿ ವಿಜೃಂಭಿಸಿದ ಆಚಾರ್ಯ ಶುಕ್ರ
Team Udayavani, Jul 20, 2018, 6:00 AM IST
ಕಳೆದ ವಾರದಿಂದ
ಹರಿ ಚಾರ್ವಾಕ
ಪ್ರಹ್ಲಾದನ ಧಾರ್ಮಿಕ, ಪಾರಮಾರ್ಥಿಕ ಚಿಂತನೆಯಿಂದ ಪ್ರಭಾವಿತರಾದ ರಾಕ್ಷಸರ ಮನಪರಿವರ್ತನೆಗೆ ಮಹಾವಿಷ್ಣುವೇ ಮಯಾ ಮೋಹನ ರೂಪದಿಂದ ಬಂದು ನಾಸ್ತಿಕ ದರ್ಶನವನ್ನು ಬೋಧಿಸುವ ಭಾಗ. ಮಾಯಾ ಮೋಹನ (ಸರ್ಪಂಗಳ ಈಶ್ವರ ಭಟ್), ವೃಷಪರ್ವ (ವಿಟ್ಲ ಶಂಭು ಶರ್ಮ), ಶುಕ್ರಾಚಾರ್ಯ (ಗಣರಾಜ ಕುಂಬಳೆ) ಜಯಂತಿ (ರವಿ ಅಲೆವೂರಾಯ) ಮತ್ತು ಪ್ರಹ್ಲಾದ (ಅಂಬಾತನಯ ಮುದ್ರಾಡಿ).
ಈ ಪ್ರಸಂಗ ನಾಟಕ ಗುಣದಿಂದ ಕೂಡಿದ ಭಾಗ. ಚಾರ್ವಾಕನ ಮಾತಿನ ಜಾಲಕ್ಕೆ ಸಿಲುಕಿ ವೃಷಪರ್ವ ವ್ಯಸನಕ್ಕೆ ಒಳಗಾಗಿ ಮತ್ತೆ ಅಸುರತ್ವವನ್ನು ತೋರುವುದು. ಶುಕ್ರನ ಸುರಾಪಾನ ಪ್ರಸಂಗ, ಜಯಂತಿ ಶುಕ್ರಾಚಾರ್ಯ ಸಂವಾದ, ಪ್ರಹ್ಲಾದನ ಹಿತೋಕ್ತಿ ಎಲ್ಲವೂ ನಾಟಕ ಶೈಲಿಯಲ್ಲೇ ಮೂಡಿದ್ದು ಗಮನಿಸಬೇಕಾದ ಅಂಶ. ಸರ್ಪಂಗಳ ಈಶ್ವರ ಭಟ್ಟರು ಚಾರ್ವಾಕನ ಪಾತ್ರವನ್ನು ಚೆನ್ನಾಗಿ ಚಿತ್ರಿಸಿದರು. ಲೋಕಾಯತ ಮತದ ಚಿಂತನೆಗಳನ್ನು ಅತ್ಯಂತ ರಂಜಕ ಶೈಲಿಯಲ್ಲಿ ಮಂಡಿಸಿದರು. ಆದರೆ ಈ ಭಾಗದಲ್ಲಿ ಅವಕಾಶವಿದ್ದೂ ಚಾರ್ವಾಕ- ವೃಷಪರ್ವರ ಸಂವಾದ ಏಕಮುಖೀಯಾಗಿಯೇ ಉಳಿಯಿತು. ಮದಿರಾ ಪಾನ ಪ್ರಸಂಗ ನಾಟಕೀಯವಾಗಿ ಸಾಗಿ ರಂಜನೆ ನೀಡಿತು. ಗಣರಾಜ ಕುಂಬಳೆಯವರ ಅರ್ಥ ಪ್ರೌಢ ಶೈಲಿ ಅಭಿವ್ಯಕ್ತಿಯಿಂದ ಗಮನ ಸೆಳೆಯಿತು. ಜಯಂತಿ-ಶುಕ್ರಾಚಾರ್ಯರ ಸಂವಾದದ ಸನ್ನಿವೇಶ ಅದೇಕೋ ಅಷ್ಟು ಪರಿಣಾಮಕಾರಿ ಅನಿಸಲಿಲ್ಲ.
ಹಾಡುಗಾರಿಕೆ ತೆಂಕುತಿಟ್ಟಿನ ಸಾಂಪ್ರದಾಯಿಕ ಶೈಲಿಯಲ್ಲಿ ಸಾಗಿದ್ದು ಗಮನಾರ್ಹ. ಲೀಲಾವತಿ ಬೈಪಡಿತ್ತಾಯ (ಭಾಗವತಿಕೆ), ಹರಿನಾರಾಯಣ ಬೈಪಡಿತ್ತಾಯ, ದೇವಿಪ್ರಸಾದ ಕಟೀಲು (ಮದ್ದಳೆ-ಚಂಡೆ) ಅವರ ಹಿಮ್ಮೇಳ ನಾದಗಾಂಭೀರ್ಯದಿಂದ, ಲಯಬದ್ಧತೆಯಿಂದ ವಿಶಿಷ್ಟವಾಗಿ ಅಪರೂಪದ್ದಾಗಿ ಅನುಭವಕ್ಕೆ ಬಂದಿತು.
ಮೃತಸಂಜೀವಿನಿ
ಮೃತಸಂಜೀವಿನಿ ಮಂತ್ರ ರಹಸ್ಯವನ್ನು ಅರಿಯಲು ದೇವಗುರು ಬ್ರಹಸ್ಪತಿಯ ಪುತ್ರ ಕಚ, ಶುಕ್ರಾಚಾರ್ಯರ ಬಳಿಗೆ ಬಂದು ಶಿಷ್ಯನಾಗುವುದು, ರಾಕ್ಷಸರಿಂದ ಕಚನನ್ನು ಕೊಲ್ಲುವ ತಂತ್ರಗಾರಿಕೆ; ಕಚನಿಗೆ ಸಂಜೀವಿನಿ ಮಂತ್ರೋಪದೇಶ, ಕಚ ದೇವಯಾನಿಯನ್ನು ನಿರಾಕರಿಸಿ ಸ್ವರ್ಗಕ್ಕೆ ತೆರಳುವುದು ಮಂತ್ರಫಲಿಸದಂತೆ ಕಚನನ್ನು ಆಕೆ ಶಪಿಸುವುದು ಇಲ್ಲಿನ ಕಥಾಭಾಗ.
ವಿದ್ವಾನ್ ಗಣಪತಿ ಭಟ್( ಭಾಗವತಿಕೆ), ಎ.ಪಿ ಪಾಠಕ್ (ಮದ್ದಳೆ) ಸುರೇಶ ಆಚಾರ್ಯ (ಚಂಡೆ) ಕಚ (ಶ್ರೀಧರ ಡಿ.ಎಸ್), ಶುಕ್ರಾಚಾರ್ಯ (ಉಜಿರೆ ಅಶೋಕ ಭಟ್), ಬೃಷುಂಡಿ (ಕೆ.ಸುರೇಶ್) ವೃಷಪರ್ವ (ಸದಾಶಿವ ಆಳ್ವ), ದೇವಯಾನಿ (ಹರೀಶ್ ಬಳಂತಿ ಮೊಗರು).
ಕಚನು ದೈತ್ಯಗುರುವನ್ನು ಸಂಧಿಸುವ, ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಬೇಕೆಂದು ಬಿನ್ನವಿಸುವ ಭಾಗದಲ್ಲಿ ಪ್ರಸಂಗದ- ಪಾತ್ರದ ಪೂರ್ವೋತ್ತರಗಳನ್ನು ವಿವೇಚಿಸಲು ಪರಾಮರ್ಶಿಸಲು ಇದ್ದ ಅವಕಾಶವನ್ನು ಉಜಿರೆ ಅಶೋಕ ಭಟ್ಟರು ಸಮರ್ಥವಾಗಿ ಬಳಸಿಕೊಂಡರು. ದೇವಗುರು ಬೃಹಸ್ಪತಿಯ ಶ್ರೇಷ್ಠತೆಯನ್ನು ಒಪ್ಪಿಕೊಳ್ಳುತ್ತಲೇ ತನ್ನ ಪಾತ್ರದ ಹಿರಿಮೆಯನ್ನು ಸ್ಥಾಪಿಸುವ ರೀತಿಯೂ ಪ್ರೌಢ ದರ್ಜೆಯದಾಗಿತ್ತು. ಕಚನ ಪಾತ್ರವನ್ನು ಡಿ.ಎಸ್ ಶ್ರೀಧರ ಪ್ರಸಂಗದ ಚೌಕಟ್ಟಿನಲ್ಲಿ ಅರ್ಥವತ್ತಾಗಿ ನಿರೂಪಿಸಿದರು. ಬೃಶುಂಡಿ ಪಾತ್ರದ ಮೂಲಕ ಕೆ.ಸುರೇಶ್ ರಂಜಿಸುವ ಪ್ರಯತ್ನ ಮಾಡಿದರು. ಅತ್ಯಂತ ಸಂಕೀರ್ಣವಾಗಿರುವ ದೇವಯಾನಿಯ ಪಾತ್ರವನ್ನು ಒಂದೆರಡು ಪದ್ಯಗಳಲ್ಲಿ ಒಪ್ಪಿಸುವುದು ಸುಲಭಸಾಧ್ಯವಲ್ಲ.
ವಿದ್ವಾನ್ ಗಣಪತಿ ಭಟ್ಟರ ಗಾಯನ, ಪಾಠಕ್‌ರ ವಾದನ ಉಡುಪಿಯ ಶ್ರೋತೃ ಸಮುದಾಯಕ್ಕೆ ಹೊಸದಲ್ಲ. ಆದರೆ ಕೆಲ ಸಂದರ್ಭಗಳಲ್ಲಿ ಅವರ ವೈಖರಿ ಇಷ್ಟೇ ಅಲ್ಲವಲ್ಲ ಎಂದು ಅನಿಸಿದ್ದೂ ವಾಸ್ತವ. ಬಯಲಾಟದ ಹಾಡುಗಾರಿಕೆಗೂ ತಾಳಮದ್ದಳೆಯ ಹಾಡುಗಾರಿಕೆಗೂ ಇರುವ ವ್ಯತ್ಯಾಸ ಏನೆಂಬುದನ್ನು ಈ ಹಿಮ್ಮೇಳ ತೋರಿಸಿಕೊಟ್ಟಿತು.
ವಿಶ್ವಜಿತ್ ಯಾಗ
ಇದು ಬಲಿ ಚಕ್ರವರ್ತಿ ಇಂದ್ರ ಪಟ್ಟಕ್ಕಾಗಿ ಕೈಗೊಂಡ ವಿಶ್ವಜಿತ್ ಯಾಗದ ಸಂದರ್ಭ. ದೇವತೆಗಳ ಹಿತಕ್ಕಾಗಿ ಬಲಿಯ ಬಳಿ ಧರ್ಮವನ್ನೇ ದಾನವಾಗಿ ಬೇಡಿ ಬಲಿಯ ನೈತಿಕ ಸ್ಥೈರ್ಯ ಕುಂದಿಸುವ ಸನ್ನಿವೇಶ.ಚಂದ್ರಕಾಂತ ರಾವ್ (ಭಾಗವತಿಕೆ), ನಾಗರಾಜ ಎಡಮೊಗೆ, ದೇವಿದಾಸ ಜಲವಳ್ಳಿ (ಮದ್ದಳೆ- ಚಂಡೆ ವಾದನ).ದೇವೇಂದ್ರ – (ಎಂ.ಆರ್ ವಾಸುದೇವ ಸಾಮಗ), ಬ್ರಹಸ್ಪತಿ- (ಡಾ. ಪ್ರದೀಪ ವಿ. ಸಾಮಗ), ಬಲಿ- (ವಾಸುದೇವ ರಂಗ ಭಟ್) ವಿಂದ್ಯಾವಳಿ- (ಎಂ.ಕೆ. ರಮೇಶ್ ಆಚಾರ್ಯ) ಮತ್ತು ಶುಕ್ರಾಚಾರ್ಯ- (ಡಾ. ಶಾಂತರಾಮ ಪ್ರಭು ನಿಟ್ಟೂರು).
ದೇವೇಂದ್ರ-ಬಲಿ ನಡುವಣ ಸಂವಾದವೇ ಇಲ್ಲಿ ಪ್ರಧಾನ. ದೇವೇಂದ್ರನ ಅರ್ಥ ಸಾಮಗರ ಪೌರಾಣಿಕ ಮಾಹಿತಿಗೆ, ಲೋಕಾನುಭವಕ್ಕೆ ಸಾಕ್ಷಿ. ಬಲಿಯ ಪಾತ್ರದಲ್ಲಿ ವಾಸುದೇವ ರಂಗ ಭಟ್ಟರು ತಮ್ಮ ಅಚಲಿತ ವಿಚಾರ ಸರಣಿಯಿಂದ ಗಮನ ಸೆಳೆದರು. ಧರ್ಮದ ಸ್ವರೂಪ ಅನ್ನ ಶಬ್ದದ ವ್ಯಾಪ್ತಿ ಮುಂತಾದ ಅಂಶಗಳು ಇಲ್ಲಿ ಚರ್ಚೆಗೆ ಬಂದವು. ಈ ಸಂವಾದ ಲಂಭಿಸಿದ್ದು ಶುಕ್ರಾಚಾರ್ಯ ಪಾತ್ರಕ್ಕೆ ಅವಕಾಶವೇ ಇಲ್ಲದಾಗಿ ಪ್ರಸಂಗದ ಕೊನೆಯ ಭಾಗವನ್ನು ಮೊಟುಕುಗೊಳಿಸಬೇಕಾಯಿತು. ಡಾ| ಶಾಂತರಾಮ ಪ್ರಭು ಸೂಚ್ಯವಾಗಿ ಅರ್ಥ ಹೇಳಿ ಸಹಕರಿಸಿದರು. ಕಾಲ ಮಿತಿಯ ಕೂಟಗಳಲ್ಲಿ ಹೀಗಾಗಬಾರದು.ಹಿಮ್ಮೇಳ-ಮುಮ್ಮೇಳಗಳಲ್ಲಿ ಸಾಂಗತ್ಯವನ್ನು ಕಾಯುವ ಹೊಣೆ ಎರಡೂ ಕಡೆಗಿದೆ ಎಂಬುದನ್ನು ಮರೆಯಕೂಡದು. ಈ ಸಾಂಗತ್ಯ ತಪ್ಪಿದರೆ ಪ್ರಸಂಗ ಅಂದಗೆಡುತ್ತದೆ. ಇಂತಹ ಸಂದರ್ಭಗಳಲ್ಲಿ ಭಾಗವತ ಹೆಚ್ಚು ಎಚ್ಚರದಿಂದಿರಬೇಕು.
ಸಾಹಿತ್ಯ ಶುದ್ಧಿ, ಭಾವ-ರಸ ಪ್ರಧಾನವಾದ ಗಾಯನ ಶೈಲಿ ಸುತ್ತು ವಾದನ ಕೌಶಲ್ಯದಿಂದ ಪ್ರಸಂಗಕ್ಕೆ ಒಂದು ಆವರಣವನ್ನು ನಿರ್ಮಿಸಿ ಕೊಡುವುದು ಹಿಮ್ಮೇಳದ ಹೊಣೆ ಈ ದೃಷ್ಟಿಯಿಂದ ಈ ಕಥಾಭಾಗದ ಪ್ರಸ್ತುತಿ ಯಶಸ್ವಿಯೆನಿಸಿತು.
ಬಲಿದಾನ
ವಾಮನ, ಬಲಿ ಚಕ್ರವರ್ತಿಯಲ್ಲಿ ಮೂರು ಹೆಜ್ಜೆ ಭೂಮಿಯನ್ನು ಬೇಡಿ ಪ್ರಹ್ಲಾದ ಆತನನ್ನು ಅನುಗ್ರಹಿಸುವ ಭಾಗ ಮಹಾವಿಷ್ಣು ಕಶ್ಯಪನಿಗೆ ಮಗನಾಗಿ ಜನಿಸಿದ ಅಂದರೆ ವಾಮನನಾಗಿ ಅವತರಿಸಿ ವಟುವಿನ ರೂಪದಲ್ಲಿ ಬಲಿಯ ಬಳಿಗೆ ಬಂದು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಬೇಡುವುದು ಧರ್ಮಶೀಲನಾದ ಬಲಿ ದಾನ ನೀಡಲು ಮುಂದಾಗುವುದು ಶುಕ್ರಾಚಾರ್ಯ ಅದನ್ನು ವಿರೋಧಿಸುವುದು ಇಲ್ಲಿನ ಕಥಾವಸ್ತು.
ವಾಮನ- ಬಲಿ ಚಕ್ರವರ್ತಿ ಸಂವಾದ ನಾಟಕೀಯ ಸ್ವರೂಪದ್ದು. ಪ್ರೊ| ಎಂ.ಎ. ಹೆಗಡೆ ವಾಮನನ ಪಾತ್ರವನ್ನು ಅತ್ಯಂತ ಕಡಿಮೆ ಮಾತುಗಳಿಂದ ಗಂಭೀರವಾಗಿ ಚಿತ್ರಿಸಿದರು. ಬಲಿ ಮತ್ತು ಶುಕ್ರಾಚಾರ್ಯರ ನಡುವೆ ಸಾಗುವ ಸಂಭಾಷಣೆ ಬರೀ ನಾಟಕೀಯ ಸಂಭಾಷಣೆಯಲ್ಲ ಲೋಕದಿ ಸಾಮನ್ಯ ಧರ್ಮ, ರಾಜಧರ್ಮ, ರಾಜ ನೀತಿ, ಯಜ್ಞಧರ್ಮದ ಕಟ್ಟುಪಾಡು ಸಮರ್ಪಣ ಬುದ್ಧಿಯ ಭಾಗವತ ದರ್ಶನ, ಆಧ್ಯಾತ್ಮ-ಪಾರಮಾರ್ಥ ಚಿಂತನೆ ಈ ಎಲ್ಲ ನೆಲೆಗಳಿಂದಲೂ ಪರಾಮರ್ಶಿಸುವ ಸಂವಾದ ಅದು. ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಪ್ರಸಂಗದ ಚೌಕಟ್ಟಿನಲ್ಲಿ ತನ್ನ ಪಾತ್ರ ನಿರ್ವಹಿಸಿದರು. ಸಾತ್ವಿಕ ಸಂಘರ್ಷಕ್ಕೆ ಅವಕಾಶವಿರುವ ಭಾಗವಾದರೂ ಸ್ವಾರಸ್ಯಕರ ವಾದ-ಪ್ರತಿವಾದ ಚರ್ಚೆ ನಡೆಯಲಿಲ್ಲ.
ಡಾ| ಎಂ. ಪ್ರಭಾಕರ ಜೋಶಿಯವರ ಹರಿತವಾದ ಹಕ್ಕು ಪ್ರತಿಸಾಧನೆಯ ಕ್ರಮ ಹಾಸ್ಯಭರಿತ ವಿಡಂಬನ ಶೈಲಿಯನ್ನು ಯಾರೂ ಪ್ರಶ್ನಿಸುವಂತಿಲ್ಲ. ಆದರೆ ಕೆಲ ಸಂದರ್ಭಗಳಲ್ಲಿ ರಂಜನೆಗಾಗಿ ಹಾರಿಸಿದ ಹಾಸ್ಯಚಟಾಕಿ ಬಿಡು ಮಾತುಗಳು ಪಾತ್ರದ ಗಾಂಭೀರ್ಯಕ್ಕೆ ತುಸು ಕುಂದು ತಂದಿತು ಎಂಬುದು ನಿಜ.
ಈ ಭಾಗದ ಭಾಗವತಿಕೆ ತೆಂಕುತಿಟ್ಟಿನ ಸಾಂಪ್ರದಾಯಿಕ ಶೈಲಿಯತ್ತ ಇದ್ದದ್ದು ನಿಸ್ಸಂಶಯವಾಗಿ ಪ್ರಸಂಗದ ಗಾಂಭೀರ್ಯವನ್ನು ಹೆಚ್ಚಿಸಿತು. ಭಾಗವತಿಕೆ ಹಾಡುಗಾರಿಕೆಯಾಗಿ ಮಾರ್ಪಡದೆ ಸಿದ್ಧ ಚೌಕಟ್ಟಿನಲ್ಲೇ ಇತ್ತು. ಪುಂಡಿಕಾಯಿ ಗೋಪಾಲಕೃಷ್ಣರ ( ಭಾಗವತಿಕೆ) ಸೀತಾರಾಮ ತೋಳ್ಪಡಿತ್ತಾಯ ಜನಾರ್ದನ ತೋಳ್ಪಡಿತ್ತಾಯ (ಚಂಡೆ-ಮದ್ದಳೆ) ಅವರ ನಾದದ ಶೈಲಿ ಹಿತವಾಗಿತ್ತು.
ಕೆ. ಶ್ರೀಕರ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.