ಹಿಮ್ಮೇಳದ ಸವ್ಯಸಾಚಿ ಗಣೇಶ್ ರಾವ್
Team Udayavani, Dec 21, 2018, 6:00 AM IST
ಗಡಿ ಜಿಲ್ಲೆ ಕಾಸರಗೋಡಿನ ಅಡೂರು ಎಂಬ ಊರಿನ ಹೆಸರನ್ನು ಕೇಳದ ಯಕ್ಷಗಾನ ಪ್ರಿಯರು ಬಹಳ ವಿರಳ. ಯಾಕೆಂದರೆ ಅಡೂರಿನ ಹಲವು ಕಲಾವಿದರು ಈ ಹಿಂದೆ ತೆಂಕು ತಿಟ್ಟಿನ ಯಕ್ಷಗಾನ ಕ್ಷೇತ್ರದಲ್ಲಿ ಮಿಂಚಿದ್ದಾರೆ. ಈಗಲೂ ಮಿಂಚುತ್ತಿದ್ದಾರೆ. ಇವರಲ್ಲಿ ಇತ್ತೀಚೆಗೆ ಇಹಲೋಕ ತ್ಯಜಿಸಿದ ತೆಂಕು ತಿಟ್ಟಿನ ಅಗ್ರಮಾನ್ಯ ಚೆಂಡೆ-ಮದ್ದಳೆ ವಾದಕರಾದ ಅಡೂರು ಗಣೇಶ್ ರಾವ್ ಒಬ್ಬರು.
ಇವರ ತಂದೆ ಹಾಗೂ ತಾತ ಚೆಂಡೆ-ಮದ್ದಳೆ ವಾದಕರಾಗಿದ್ದ ಕಾರಣ, ವಂಶ ಪಾರಂಪರಿಕವಾಗಿ ಇವರಿಗೂ ಯಕ್ಷಗಾನ ಹಿಮ್ಮೇಳದಲ್ಲಿ ಆಸಕ್ತಿ ಮೂಡಿತ್ತು. 1968 ಮಾರ್ಚ್ 23 ರಂದು ಜನಿಸಿದ ಇವರು 13ನೇ ವಯಸ್ಸಿನಲ್ಲಿ ತಂದೆಯಿಂದಲೇ ಚೆಂಡೆ-ಮದ್ದಳೆಯ ಪ್ರಾಥಮಿಕ ಶಿಕ್ಷಣವನ್ನು ಪಡೆದರು. ಬಳಿಕ ಯಕ್ಷಗಾನದ ಮೇರು ಶಿಖರ ಪ್ರಾಯರಲ್ಲಿ ಒಬ್ಬರಾದ ದಿ.ನೆಡ್ಲೆ ನರಸಿಂಹ ಭಟ್ಟರಲ್ಲಿ ಶಿಷ್ಯತ್ವವನ್ನು ಪಡೆದರು. 15 ನೇ ವಯಸ್ಸಿನಲ್ಲಿ ಸುರತ್ಕಲ್ ಮೇಳದ ಮೂಲಕ ತಿರುಗಾಟ ಆರಂಭಿಸಿ, ನಂತರ ಕಟೀಲು, ಪುತ್ತೂರು, ಕದ್ರಿ ಹಾಗೂಧರ್ಮಸ್ಥಳ ಮೇಳಗಳಲ್ಲಿ ಸುಮಾರು 30 ಕ್ಕೂ ಹೆಚ್ಚು ವರ್ಷಗಳ ಕಾಲ ತಿರುಗಾಟ ನಡೆಸಿದ ಅನುಭವ ಗಣೇಶ್ ರಾವ್‌ರವರದ್ದು.
22 ವರ್ಷಗಳಿಂದ ಧರ್ಮಸ್ಥಳ ಮೇಳದ ಪ್ರಧಾನ ಮದ್ದಳೆಗಾರರಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಧರ್ಮಸ್ಥಳ ಮೇಳದಲ್ಲಿ ಚಿಪ್ಪಾರು ಕೃಷ್ಣಯ್ಯ ಬಲ್ಲಾರರ ಸ್ಥಾನವನ್ನು ಸಮರ್ಥವಾಗಿ ತುಂಬಿದ್ದರು. ಒಂದು ಯಕ್ಷಗಾನವು ಪರಿಣಾಮಕಾರಿಯಾಗಿ ಮೂಡಿ ಬರಬೇಕಾದರೆ ಪಾತ್ರಧಾರಿಗಳ ಅಭಿನಯ, ನೃತ್ಯ, ಭಾಗವತಿಕೆ ಎಷ್ಟು ಮುಖ್ಯವೋ, ಸಮರ್ಥ ಚೆಂಡೆ-ಮದ್ದಳೆಗಳ ಹಿಮ್ಮೇಳವೂ ಸಹಾ ಅಷ್ಟೇ ಪ್ರಮುಖವಾದುದು. ಗಣೇಶ್ ರಾವ್‌ರವರ ಚೆಂಡೆ ಹಾಗೂ ಮದ್ದಳೆ ವಾದನದ ಸೊಬಗು ಕಲಾವಿದರಿಗಷ್ಟೇ ಅಲ್ಲದೆ, ಪ್ರೇಕ್ಷಕರಿಗೂ ಮುದ ನೀಡುತ್ತಿತ್ತು. ರಾಗ, ತಾಳಗಳ ಸ್ವಷ್ಟವಾದ ಜ್ಞಾನ, ತಾಳ-ಲಯಗಳಲ್ಲಿ ಅಪ್ರತಿಮ ಹಿಡಿತ, ರಾಗಕ್ಕೆ ತಕ್ಕದಾಗಿ ಚೆಂಡೆ-ಮದ್ದಳೆಯನ್ನು ನುಡಿಸುವ ಕಲೆ ಇವೆಲ್ಲ ಗಣೇಶ್ ರಾವ್‌ರವರಿಗೆ ಖ್ಯಾತಿಯನ್ನು ತಂದುಕೊಟ್ಟವು.
ಯಕ್ಷಗಾನ, ತಾಳಮದ್ದಳೆ, ಗಾನವೈಭವ, ನಾಟ್ಯವೈಭವ ಈ ಎಲ್ಲಾ ಪ್ರಕಾರಗಳಲ್ಲೂಇವರ ಚೆಂಡೆ-ಮದ್ದಳೆಯ ಸೊಬಗು ರೋಮಾಂಚನವನ್ನುಂಟುಮಾಡುತ್ತಿತ್ತು.ಗಣೇಶ್ ರಾವ್‌ರವರು ಬಹುಮುಖ ಪ್ರತಿಭೆಯ ಕಲಾವಿದ.ಸುಮಧುರ ಕಂಠದಿಂದ ಭಾಗವತಿಕೆಯನ್ನೂ ಮಾಡುತ್ತಿದ್ದರು. ವೃತ್ತಿ ಜೀವನದ ಆರಂಭದಲ್ಲಿ ಪುಂಡು ವೇಷ, ಕಿರೀಟ ವೇಷಗಳನ್ನೂ ಮಾಡಿದ್ದರು. ಹೀಗೆ ಸವ್ಯಸಾಚಿಯಾಗಿ ರೂಪುಗೊಂಡು ರಂಗದಲ್ಲಿ ವೇಷಧಾರಿಗಳನ್ನು ವಿಜೃಂಭಿಸುವಂತೆ ಮಾಡುವಲ್ಲಿ ನಿಪುಣರಾಗಿದ್ದರು. ಇಂತಹ ಅಪೂರ್ವ ಪ್ರತಿಭೆಯ ಕಲಾವಿದ ತನ್ನ 50 ರ ನಡುಹರೆಯದಲ್ಲೇ ರಂಗದಿಂದ ನಿರ್ಗಮಿಸಿದ್ದು ಯಕ್ಷಗಾನಕ್ಕೆ ತುಂಬಲಾರದ ನಷ್ಟವೇ ಸರಿ. ಒಟ್ಟಿನಲ್ಲಿ ಸುದೀರ್ಘ ಕಾಲ ತೆಂಕು ತಿಟ್ಟಿನ ರಂಗಸ್ಥಳವನ್ನು ಚೆಂಡೆ-ಮದ್ದಳೆಯ ಕೈಚಳಕದಿಂದ ಶ್ರೀಮಂತಗೊಳಿಸಿದ ಇವರ ಅಗಲುವಿಕೆಯಿಂದ ತೆಂಕುತಿಟ್ಟು ಬಡವಾಗಿದೆ.
– ನರಹರಿ ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.