ದ್ವಿತೀಯ ಅರ್ಥಾಂತರಂಗ ಒಂದು ಅವಲೋಕನ
Team Udayavani, Sep 1, 2017, 1:51 PM IST
ತನ್ನ ಸುತ್ತಲಿರುವ ಉಳಿದ ಕಲೆಗಳಿಗಿಂತ ತಾಳಮದ್ದಳೆಯು ಅನನ್ಯತೆಯನ್ನೂ ವಿಶಿಷ್ಟತೆಯನ್ನೂ ಉಳಿಸಿಕೊಂಡಿರಲು ಕಾರಣ ಅದರ ಸರಳ ಸ್ವರೂಪ ಮತ್ತು ಸೃಜನಶೀಲತೆಯಿಂದೊಡಗೂಡಿದ ಹಲವು ಸಾಧ್ಯತೆಗಳು. ಅರ್ಥಧಾರಿ ಧರಿಸುವ “ಅರ್ಥ’ವನ್ನು ಮತ್ತು ನಿರ್ವಹಿಸುವ “ಪಾತ್ರ’ವನ್ನು ಆಸ್ವಾದಿಸುವಂಥ ಶ್ರೋತೃ ಅಥವಾ ಪ್ರೇಕ್ಷಕನಿಗೂ ಆಸಕ್ತಿ, ಅಭಿರುಚಿ ಮತ್ತು ತನ್ಮಯತೆ ಇರಬೇಕು. ಹಾಗೆಯೇ ಗ್ರಹಿಸುವ ಜಾಣ್ಮೆ ಮತ್ತು ಚಿಂತನೆಯ ಸಾಮರ್ಥ್ಯವೆರಡೂ ಆತನಲ್ಲಿ ಇರಲೇ ಬೇಕು. ಅರ್ಥಧಾರಿ ಮತ್ತು ಪ್ರೇಕ್ಷಕರಿಬ್ಬರೂ ಮುಖಾಮುಖೀ ಆದಾಗ, ಪರಸ್ಪರರಲ್ಲಿ ಆಗಬೇಕಾದ ಬದಲಾವಣೆಗಳು ಮನವರಿಕೆಯಾಗುವ ಮೂಲಕ ತಾಳಮದ್ದಳೆಯ ಪ್ರಸ್ತುತಿಯು ಇನ್ನಷ್ಟು ಮೆರುಗನ್ನು ಪಡೆಯಬಲ್ಲುದು, ಆಪ್ತವಾಗಬಲ್ಲುದು.
ಇಂತಹ ಸಾಧ್ಯತೆಯೊಂದನ್ನು ಎರಡನೆಯ ಬಾರಿಗೆ ಪ್ರಯೋಗಾತ್ಮಕವಾಗಿ ಆಯೋಜಿಸಿದವರು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಸಂಸ್ಥೆಯ ಸಂಚಾಲಕರಾದ ಭಾಗವತ ರಾಮಕೃಷ್ಣ ಮಯ್ಯ ಮತ್ತು ಈ ಕಾರ್ಯಕ್ರಮದ ನಿರ್ದೇಶನವನ್ನು ಮಾಡಿದ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್. ಆಗಸ್ಟ್ 12ರಂದು ಪೆರ್ಲದ ಸತ್ಯನಾರಾಯಣ ಮಂದಿರವು ಇಂತಹ ಉಲ್ಲೇಖಾರ್ಹ ಕಾರ್ಯಕ್ರಮಕ್ಕೆ ವೇದಿಕೆಯಾಯಿತು. ಇಲ್ಲಿ ಯಕ್ಷಗಾನ ಅರ್ಥಗಾರಿಕಾ ಶಿಬಿರ-ರಂಗಪ್ರಸಂಗದ ಇನ್ನೊಂದು ಪ್ರಯೋಗವಾಗಿ ಅರ್ಥಾಂತರಂಗ -2 ಕಾರ್ಯಕ್ರಮವು ಪ್ರದರ್ಶಿತಗೊಂಡು ಜನ ಮೆಚ್ಚುಗೆ ಪಡೆಯಿತು.
ಹಿಮ್ಮೇಳ ಕಲಾವಿದರಾದ ಸುಬ್ರಾಯ ಸಂಪಾಜೆ, ಕೃಷ್ಣಪ್ರಕಾಶ ಉಳಿತ್ತಾಯ, ಗೋಪಾಲಕೃಷ್ಣ ನಾವಡ ಮಧೂರು ಇವರ ಕೂಡುವಿಕೆಯೊಂದಿಗೆ ಗಣಪತಿ ಸ್ತುತಿಗೈಯುವ ಮೂಲಕ ಕಾರ್ಯಕ್ರಮವು ಆರಂಭವಾಯಿತು. ಪ್ರತಿಷ್ಠಾನದ ಸಂಚಾಲಕ ಸಿರಿಬಾಗಿಲು ರಾಮಕೃಷ್ಣ ಮಯ್ಯರು ಮತ್ತು ಅರ್ಥಾಂತರಂಗದ ನಿರ್ದೇಶಕ ರಾಧಾಕೃಷ್ಣ ಕಲ್ಚಾರ್ ಈ ಸಂಯೋಜನೆಯ ಧ್ಯೇಯೋದ್ದೇಶಗಳನ್ನು ಮತ್ತು ಸ್ವರೂಪವನ್ನು ಸಾದ್ಯಂತವಾಗಿ ವಿವರಿಸಿದರು. ಪೆರ್ಲ ಸತ್ಯನಾರಾಯಣ ಶಾಲೆಯ ಪ್ರಬಂಧಕರಾದ ಶ್ರೀಕೃಷ್ಣ ವಿಶ್ವಾಮಿತ್ರರು ದೀಪೋಜ್ವಲನದ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಸಂಘಟಿತವಾಗಿ ಪ್ರದರ್ಶನಗೊಳ್ಳಬೇಕಾದ ತಾಳಮದ್ದಳೆಯು ಇಂದಿನ ದಿನಮಾನದಲ್ಲಿ ವ್ಯಕ್ತಿ ಕೇಂದ್ರಿತವಾಗಿಯೋ ಸ್ವಕೇಂದ್ರಿತವಾಗಿಯೋ ಅಥವಾ ವಿದ್ವತ್ತಿನ ಪ್ರದರ್ಶನವಾಗಿಯೋ ಮಾರ್ಪಾಡು ಹೊಂದಿದೆ ಎನ್ನುವ ಅಪವಾದಕ್ಕೆ ಗುರಿಯಾಗಿದೆ. ಅಷ್ಟೇ ಅಲ್ಲ, ಯುವ ಜನತೆಯನ್ನು ಇದು ಆಕರ್ಷಿಸುತ್ತಿಲ್ಲ ಎನ್ನುವುದರ ಜತೆಜತೆಗೆ ಇರುವ ಅಭಿಮಾನಿಗಳನ್ನು ಕಳೆದುಕೊಳ್ಳುವ ಭೀತಿ ಯಲ್ಲಿದೆ ಎಂಬ ಆತಂಕವೂ ಕಾಣಬರುತ್ತಿದೆ. ಹಾಗಾಗಿ ಹೊಸತನದ ಭ್ರಮೆಗೆ ಸಿಲುಕಿ ತಾಳಮದ್ದಳೆಯ ಸ್ವರೂಪವು ವಿರೂಪಗೊಳ್ಳಬಾರದು ಎಂಬ ಕಾಳಜಿ ಯಿಂದ ಈ ಅರ್ಥಾಂತರಂಗ-2 ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಅರ್ಥಗಾರಿಕೆಯ ಪ್ರಧಾನ ಪರಿಕರಗಳಾದ ಸನ್ನಿವೇಶ ಚಿತ್ರಣ, ಪಾತ್ರದ ಅಭಿವ್ಯಕ್ತಿ, ಪೀಠಿಕೆ, ಪೂರಕ ಸಂವಾದ, ಪಾತ್ರ ಪೋಷಣೆ, ಪಾತ್ರದ ಸ್ವಭಾವ ಚಿತ್ರಣ, ವಾಚಿಕಾಭಿನಯ ಇವೇ ಮುಂತಾದ ವಿಚಾರಗಳನ್ನು ಕಲಾವಿದರ ಮೂಲಕ ಪರಿಚಯಿಸುತ್ತಾ ಸಾಗಿತು ಅರ್ಥಾಂತರಂಗ-2.
ಮೂರು ಮಜಲು – ನಾಲ್ಕು ಸಂವಾದ
ಅರ್ಥಾಂತರಂಗ-2ರಲ್ಲಿ ಪೀಠಿಕೆ-ವಿಸ್ತಾರ, ವಿನ್ಯಾಸ-ಪೀಠಿಕೆಯಲ್ಲಿ ಸಂವಾದ ಮತ್ತು ವೈವಿಧ್ಯ ಹೀಗೆ ಒಟ್ಟು ಮೂರು ಮಜಲುಗಳನ್ನು ಗುರುತಿಸಿ ದ್ದರು. ಇದರಲ್ಲಿ ನಾಲ್ಕು ಸಂವಾದಗಳನ್ನು ಸಂಯೋಜಿಸಿದ್ದರು. ಇವೆಲ್ಲದಕ್ಕೂ ಸಮಯದ ಮಿತಿಯನ್ನು ನೀಡಲಾಗಿತ್ತು. ಅದರೊಳಗೆ ಅರ್ಥಧಾರಿ ಔಚಿತ್ಯಪೂರ್ಣವಾದ ಮಾತಿನ ಮಾಲಿಕೆಯನ್ನು ನೇಯಬೇಕಿತ್ತು.
ಆರಂಭದ ಪೀಠಿಕೆಯ ಭಾಗದಲ್ಲಿ ದನುಕುಮಾರಕ ಶುಂಭದಾನವ ಪದ್ಯಕ್ಕೆ ಶುಂಭನಾಗಿ ರವಿರಾಜ ಪನೆಯಾಲರು ಸೂಚ್ಯಾರ್ಥಗಳಿಂದ ಕೂಡಿದ ಅರ್ಥಗಾರಿಕೆಯ ಮೂಲಕ ಮೂರು ನಿಮಿಷಗಳಲ್ಲಿ ಶುಂಭನ ಜನನ -ಜೀವನ ಉದ್ದೇಶಗಳನ್ನು ವಿವರಿಸಿದ್ದು ಅರ್ಥಧಾರಿಯ ನೈಪುಣ್ಯವನ್ನು ಬಿಂಬಿಸಿತು.
ಮುಂದಿನ ಪೀಠಿಕೆಯ ಭಾಗವಾಗಿ ಪರಮಷಡುರಸ ಭೋಜನ ಹಾಡಿಗೆ ಕೃಷ್ಣನಾಗಿ ಅರ್ಥ ಹೇಳಿದವರು ಹರೀಶ ಬೊಳಂತಿಮೊಗರು. 5 ನಿಮಿಷಗಳ ಅವಧಿಯಲ್ಲಿ ಪೀಠಿಕೆಯನ್ನು ಪ್ರಸ್ತುತಪಡಿಸಿದ ರೀತಿ ಸೊಗಸಾಗಿತ್ತು. ಷಡ್ರಸದ ಭೋಜನವನ್ನು ಶ್ರಮದಿಂದ ಪಡೆದ ಅನ್ನಕ್ಕೆ ಸಮೀಕರಿಸುತ್ತಾ, ಅದು ಇಹಕ್ಕಲ್ಲದೇ ಇದ್ದರೂ ಪರಕ್ಕಾದರೂ ಷಡ್ರಸವನ್ನು ನೀಡಬಲ್ಲುದು ಎನ್ನುತ್ತಾ ಕೃಷ್ಣನ ಧರ್ಮಸಂಸ್ಥಾಪನೆಯ ನಿಲುವನ್ನು ಪ್ರಕಟಿಸಿದ ರೀತಿ ಮನನೀಯವಾದದ್ದು. ಹಾಗೆಯೇ ಅರೆತೆರೆದ ನಯನದ ನಿದ್ರೆಯನ್ನು ಅರ್ಧ ಮುಚ್ಚಿದ ಬಾಗಿಲಿನ ಹೋಲಿಕೆಯೊಂದಿಗೆ ಸರಳವಾಗಿ ಮತ್ತು ಧ್ವನಿಪೂರ್ಣವಾಗಿ ಅವಧಿಯೊಳಗೆ ಕೃಷ್ಣನ ಸ್ವಭಾವವನ್ನು ಚಿತ್ರಿಸಿದ ರೀತಿ ನಿಜಕ್ಕೂ ಅದ್ಭುತವಾಗಿತ್ತು.
ಪೀಠಿಕೆಯ ಮೂರನೆಯ ಹಂತದಲ್ಲಿ ಪೊರಟು ಕಾಳಿಂದಿಯ ತೀರದಿ ಹಾಡಿಗೆ ಶಂತನುವಿನ ಪೀಠಿಕೆ. ರಾಧಾಕೃಷ್ಣ ಕಲ್ಚಾರ್ ಅವರು ಈ ಪಾತ್ರವನ್ನು ನಿರ್ವಹಿಸಿದರು. ಇವರಿಗೆ ನೀಡಿದ್ದ ಅವಧಿ 12 ನಿಮಿಷಗಳು. ಆರಂಭದಲ್ಲಿ ಋಷಿಯಂತೆ, ಧರ್ಮದ ನೆಲೆಗಟ್ಟಿನÇÉೇ ಮಾತನಾಡುವ ಶಂತನು ಪ್ರಕೃತಿಯ ಸೌಂದರ್ಯವನ್ನು, ಅದರೊಳಗೆ ಕ್ಷಣÒಣಕ್ಕೆ ಆಗುವ ಬದಲಾವಣೆಯನ್ನು ವಿವರಿಸುತ್ತಾ ತನ್ನ ಅಂತರಂಗದಲ್ಲಿ ಬದಲಾವಣೆಯಾಗಿದೆಯೇ ಎಂದು ಪ್ರಶ್ನಿಸಿಕೊಳ್ಳುತ್ತಾ ಕಳೆದ ದಾಂಪತ್ಯವನ್ನು ನೆನಪಿಸಿಕೊಂಡದ್ದು, ನಿಟ್ಟುಸಿರಿನಿಂದ ಕೂಡಿದ ಭಾವಾಭಿವ್ಯಕ್ತಿ ಕೆಲವೇ ಕೆಲವು ವಾಕ್ಯಗಳಲ್ಲಿ ಶಂತನುವಿನ ವ್ಯಕ್ತಿ ಚಿತ್ರಣವನ್ನು ಪ್ರೇಕ್ಷಕರ ಮನದಲ್ಲಿ ಪಡಿಮೂಡಿಸಿತು. ಅಷ್ಟೇ ಅಲ್ಲ, “ಸುಳಿದು ಬಂದ ಸುಗಂಧ ತನ್ನ ಪ್ರಾಕೃತದ ವಾಸನೆಯನ್ನು ಅನುಸರಿಸಿ ಬಂತೋ’ ಎಂಬ ಮಾತಿನೊಂದಿಗೆ ಇದು ತನಗೇ ಸಂಭವಿಸಬೇಕಾದದ್ದು ಎಂಬ ನಿರ್ಧರಿತ ಸೂಚನೆಯನ್ನು ದಾಟಿಸಿದ ರೀತಿ ಅಪೂರ್ವವಾಗಿತ್ತು. ಕಡಿಮೆ ಅವಧಿಯಲ್ಲಿ ಕೆಲವೇ ಕೆಲವು ಸರಳ ನುಡಿಗಳಲ್ಲಿ, ಸ್ವರದ ಏರಿಳಿತಗಳೊಂದಿಗೆ ಶಂತನುವಿನ ಪಾತ್ರ ಚಿತ್ರಣ ಬಲು ಸೊಗಸಾಗಿ ಮೂಡಿ ಬಂತು.
ಈ ಮೂರು ವಿಧದ ಪೀಠಿಕೆಗಳ ಅನಂತರ ವಿನ್ಯಾಸ ಭಾಗದಲ್ಲಿ ಸಂವಾದ ರೂಪದ ಪೀಠಿಕೆಯೊಂದನ್ನೂ ಪ್ರಸ್ತುತಪಡಿಸಲಾಯಿತು.
ಧರ್ಮರಾಯನಾಗಿ ರಾಧಾಕೃಷ್ಣ ಕಲ್ಚಾರ್ ಮತ್ತು ಕೃಷ್ಣನಾಗಿ ವಾಟೆಪಡು³ ವಿಷ್ಣು ಶರ್ಮರು ಈ ಭಾಗವನ್ನು ನಿರ್ವಹಿಸಿದರು. ಇದಕ್ಕಾಗಿ ಆರಿಸಿದ ಪದ್ಯ ಕೃಷ್ಣ ಸಂಧಾನದ ದಾಯಭಾಗದೊಳೈದು ಗ್ರಾಮಂ…. ಇದಕ್ಕೆ ನೀಡಲಾದ ಅವಧಿ 12 ನಿಮಿಷ. ಪಾತ್ರ ಪೋಷಣೆಯ ರೀತಿ ಮತ್ತು ಸಂವಾದದ ರೂಪದಲ್ಲೇ ಒಂದು ಪಾತ್ರ ತನ್ನನ್ನು ಪ್ರಕಟಿಸಿಕೊಳ್ಳುವ ಕ್ರಮ ಸಾದೃಶ್ಯವಾಗಿ ನಿರೂಪಿತವಾಯಿತು. ಧರ್ಮರಾಯನ ಪೀಠಿಕೆಗೆ ಕೃಷ್ಣನು ಪೂರಕವಾಗಿ ಸ್ಪಂದಿಸುತ್ತಾ ಎದುರಿನ ಪಾತ್ರ ಚಿತ್ರಣಕ್ಕೆ ಒತ್ತಾಸೆಯಾಗಿ ನಿಂತ ಕೌಶಲ ಬೆರಗು ಹುಟ್ಟಿಸಿದ್ದು ಹೌದು.
ಮೂರನೇ ಭಾಗ-ವೈವಿಧ್ಯ. ಇದರಲ್ಲಿ ನಾಲ್ಕು ವಿಧದ ಸಂವಾದಗಳನ್ನು ಸಂಯೋಜಿಸಲಾಗಿತ್ತು. ಮೊದಲನೆಯದು ಸೌಗಂಧಿಕಾಪಹರಣದ ಭೀಮ-ದ್ರೌಪದಿ ಸಂವಾದದ ಭಾಗ. ಇಂದುಮುಖೀಯುಡದುಣದೆಯಿಂದಗಧೆ ಗೊಂಡೆದ್ದನಾ ಭೀಮದ ವರೆಗಿನ ಪದ್ಯಭಾಗ. ಭೀಮನಾಗಿ ಪನೆಯಾಲ ರವಿರಾಜರು, ದ್ರೌಪದಿಯಾಗಿ ವಾಟೆಪಡು³ ವಿಷ್ಣು ಶರ್ಮರು ಭಾಗವಹಿಸಿದ್ದರು. ಇವರಿಗೆ 30 ನಿಮಿಷಗಳನ್ನಷ್ಟೇ ನೀಡ ಲಾಗಿತ್ತು. ದಾಂಪತ್ಯದೊಳಗಿನ ಸರಸ, ಮುನಿಸು, ಪ್ರೀತಿ, ಸಲಿಗೆ, ಛೇಡಿಸುವಿಕೆ, ಬುದ್ಧಿ ಮಾತು, ಬೇಸರ ಮುಂತಾದ ಭಾವಗಳನ್ನು ಸಹಜವಾಗಿ ಮತ್ತು ವಾಸ್ತವಕ್ಕೆ ಹತ್ತಿರವಾಗಿ ಈರ್ವರೂ ಚಿತ್ರಿಸಿದ್ದು ಸೊಗಸಾಗಿತ್ತು. ತಾಳಮದ್ದಳೆಯನ್ನು ಶ್ರೋತೃವಾಗಿಯಷ್ಟೇ ಅಲ್ಲ, ಪ್ರೇಕ್ಷಕನಾಗಿಯೂ ಆಸ್ವಾದಿಸಿ ದಾಗ ಅದು ಪೂರ್ತಿ ರಸಗ್ರಹಣಕ್ಕೆ ಕಾರಣವಾಗುತ್ತದೆ ಎನ್ನುವುದಕ್ಕೆ ಈ ಭಾಗ ನಿದರ್ಶನವಾದದ್ದು ಹೌದು. ದ್ರೌಪದಿಯು ಸ್ವರಾಭಿನಯದೊಂದಿಗೆ, ಆಂಗಿಕವಾದ ಅಭಿನಯವನ್ನು ಒಡಮೂಡಿಸಿಕೊಂಡು ಪಾತ್ರವೇ ಆಗುವ ಮೂಲಕ ದ್ರೌಪದಿಯ ಸ್ವಭಾವವನ್ನು ಆಪ್ತವಾಗಿಸಿದ ಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಸರಸ ದಾಂಪತ್ಯದ ಚಿತ್ರಣವನ್ನು ಸಮರ್ಥವಾಗಿ ಅನಾವರಣಗೊಳಿಸಿದ ಸಂವಾದವಾಗಿ ಮೂಡಿಬಂತು.
ಮುಂದಿನ ಸಂವಾದ ಕರ್ಣಭೇದನದ ಬಾರಯ್ಯ ಭಾನು ಸುಕುಮಾರ ಎನ್ನುವ ಪದ್ಯದಿಂದ ತೊಡಗಿ ಎಲೆ ದಿವಾಕರ ತನಯದವರೆಗಿನ ಪದ್ಯ ಭಾಗ. ಕೃಷ್ಣನಾಗಿ ವಾಟೆಪಡು³ ವಿಷ್ಣುಶರ್ಮರು, ಕರ್ಣನಾಗಿ ರಾಧಾಕೃಷ್ಣ ಕಲ್ಚಾರ್ ಕಾಣಿಸಿಕೊಂಡರು. ಈ ಸಂವಾದ ಭಾಗಕ್ಕೂ 30 ನಿಮಿಷಗಳ ಅವಧಿಯನ್ನು ನೀಡಲಾಗಿತ್ತು. ಒಂದಿಷ್ಟು ಗಂಭೀರವಾಗಿಯೇ ತೊಡಗಿಕೊಂಡ ಪ್ರಸಂಗವಿದು. ಇಬ್ಬರೂ ಸೇರಿ ಪರಸ್ಪರರಿಗೆ ಪೂರಕವಾಗಿ ಸ್ಪಂದಿಸುತ್ತಾ, ಭಾವಪ್ರಚೋದಕವಾಗಿ ಸನ್ನಿವೇಶ ಚಿತ್ರಣವನ್ನು ಮಾಡಿದ ರೀತಿ ಚೆನ್ನಾಗಿತ್ತು. ಕರ್ಣನು ತನ್ನ ಬದುಕನ್ನು ಸುಟ್ಟ ಕಲ್ಲಿಗೆ ಹೋಲಿಸಿದ್ದು, ಪದ್ಯವನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ಕೃಷ್ಣನನ್ನು ಹೊಗಳುವ ಶೈಲಿಯ ಮೂಲಕ ಕರ್ಣನ ಪಾತ್ರವನ್ನು ಉನ್ನತಗೊಳಿಸಿದ್ದು ಮನೋಜ್ಞವಾಗಿತ್ತು.
ಮುಂದಿನ ಸಂವಾದದ ಭಾಗ ಕೃಷ್ಣ ಪರಂಧಾಮದ ದೂರ್ವಾಸ ಮತ್ತು ಕೃಷ್ಣನ ಸಂವಾದ. ರಾಧಾಕೃಷ್ಣ ಕಲ್ಚಾರರು ದೂರ್ವಾಸನಾಗಿಯೂ ಹರೀಶ್ ಬಳಂತಿಮೊಗರು ಕೃಷ್ಣ ನಾಗಿಯೂ ಪಾತ್ರ ನಿರ್ವಹಿಸಿದರು. ಮುನಿಪಾದ ತವಪಾದ ದಿಂದ ತೊಡಗಿ ಜಡಜನಾಭನೆವರೆಗಿನ ಪದ್ಯ ಭಾಗ. ಈ ಸಂವಾದಕ್ಕೂ 30 ನಿಮಿಷಗಳ ಕಾಲಾವಧಿಯಷ್ಟೇ ಇತ್ತು. ತುಂಬಾ ಸುಲಲಿತವಾಗಿ ಸೌಹಾರ್ದತೆಯಿಂದ, ವಿನೋದ ಮಯವಾಗಿ ಸಾಗಿದ ಸ್ಮರಣೀಯ ಸಂವಾದವಿದು. ಪರಸ್ಪರ ಪಾತ್ರಪೋಷಣೆ ಮಾಡುತ್ತಾ, ಪದ್ಯದ ಚೌಕಟ್ಟಿನಲ್ಲಿಯೇ ಇರುತ್ತಾ, ಸಮಯದ ಮಿತಿಗೆ ಒಳಪಟ್ಟು ಮೂಡಿಬಂದ ಈ ಸಂವಾದ ಕಲಾವಿದರ ಸೊÌàಪಜ್ಞತೆಯನ್ನು ಪರಿಚಯಿಸಿತು.
ಅರ್ಥಾಂತರಂಗದ ಕೊನೆಯ ಪ್ರಸಂಗ ಗಿರಿಜಾ ಕಲ್ಯಾಣದ ಗಿರಿಜೆ ಮತ್ತು ಬೈರಾಗಿಯ ಸಂವಾದ ಭಾಗ. ಇದಕ್ಕೂ 30 ನಿಮಿಷಗಳ ಕಾಲಾವಧಿ. ಗಿರಿಜೆಯನ್ನು ಕೆಣಕುವ ಬೈರಾಗಿಯಾಗಿ ರವಿರಾಜ ಪನೆಯಾಲರು ಮತ್ತು ಸಂಯಮದ ಪ್ರತಿಮೂರ್ತಿ ಗಿರಿಜೆಯಾಗಿ ಹರೀಶ ಬಳಂತಿಮೊಗರು ಅವರು ನಿಗದಿತ ಕಾಲಾವಧಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿದರು. ಈ ಪ್ರಸಂಗದಲ್ಲೂ ಆಂಗಿಕ ಅಭಿನಯ, ಸ್ವರದ ಏರಿಳಿತಗಳು ಅನಾಯಾಸವಾಗಿ ಅರ್ಥದೊಂದಿಗೆ ಸೇರಿಕೊಂಡು ಇನ್ನಷ್ಟು ಕಳೆಗೊಟ್ಟಿತು.
ಕೇವಲ ಅರ್ಧ ದಿನದಲ್ಲಿ 8 ಪ್ರಸಂಗಗಳ ಕೆಲವು ತುಣುಕುಗಳ ಮೂಲಕ, ನಾಲ್ವರು ಅರ್ಥಧಾರಿಗಳು ತಾಳ ಮದ್ದಳೆಯ ಅರ್ಥಗಾರಿಕೆಯ ವ್ಯಾಪ್ತಿಯನ್ನು, ಔಚಿತ್ಯವನ್ನು ತೋರಿಸಿಕೊಟ್ಟ ರೀತಿ ನಿಜಕ್ಕೂ ಪ್ರಶಂಸನೀಯ. ಸಮಯದ ಪರಿಮಿತಿಯಿದ್ದುದರಿಂದ ಸುಮಾರು ಒಂದು ಗಂಟೆಯಷ್ಟು ಕಾಲ ಸಾಗಬಹುದಾಗಿದ್ದ ಸಂವಾದ ಚಿಕ್ಕದಾಗಿ, ಚೊಕ್ಕವಾಗಿ ಮೂಡಿಬಂದ ರೀತಿ ನಿಜಕ್ಕೂ ಶ್ಲಾಘನಾರ್ಹವೇ ಆಗಿದೆ. ಹಿಮ್ಮೇಳದಲ್ಲಿ ರಾಮಕೃಷ್ಣ ಮಯ್ಯ ಸಿರಿಬಾಗಿಲು, ಸುಬ್ರಾಯ ಸಂಪಾಜೆ, ಕೃಷ್ಣಪ್ರಕಾಶ ಉಳಿತ್ತಾಯ, ಗೋಪಾಲಕೃಷ್ಣ ನಾವಡ ಮಧೂರು, ಉದಯ ಕಂಬಾರು, ಮುರಳೀ ಮಾಧವ ಮಧೂರು ಸಹಕರಿಸಿದರು.
ಸಂವಾದ – ವಿಚಾರಗೋಷ್ಠಿ
ಈ ಮುಖ್ಯಭಾಗದ ಅನಂತರ ಸಂವಾದ, ವಿಚಾರ ಗೋಷ್ಠಿಯನ್ನು ಸಂಯೋಜಿಸಲಾಗಿತ್ತು. ಇದು ಕಲಾವಿದ ಮತ್ತು ಪ್ರೇಕ್ಷಕರ ನಡುವೆ ಮುಕ್ತವಾದ ವಾತಾವರಣವನ್ನು ನಿರ್ಮಿಸಿ, ಪರಸ್ಪರರಿಗೆ ಅರ್ಥವಾಗುವುದಕ್ಕೆ ಸಹಾಯಕ ವಾದದ್ದು ಹೌದು. ವಾಚಿಕಾಭಿನಯವು ಪ್ರೇಕ್ಷಕನನ್ನು ತಲುಪದೇ ಹೋದರೆ ಎಷ್ಟು ಮೌಲ್ಯಯುತವಾದ¨ªಾದರೂ ಶುಷ್ಕವಾಗುತ್ತದೆ. ಹಾಗೆಯೇ ಆಲಿಸಿದ್ದನ್ನು ಗ್ರಹಿಸದೇ ಹೋದರೂ ಪ್ರೇಕ್ಷಕ ರಸಾನುಭೂತಿಯನ್ನು ಪಡೆಯಲಾರ. ಈ ನಿಟ್ಟಿನಲ್ಲಿ ತೊಡಕುಗಳನ್ನು ಗುರುತಿಸಿಕೊಂಡು ಹೊಸ ದೃಷ್ಟಿಕೋನದಲ್ಲಿ ಚಿಂತಿಸುವಂತೆ ಮಾಡುವ ಪ್ರಯತ್ನ ಈ ಗೋಷ್ಠಿಯ ಉದ್ದೇಶವಾಗಿತ್ತು. ಚಂದ್ರಶೇಖರ ದಾಮ್ಲೆಯವರ ಅಧ್ಯಕ್ಷತೆಯಲ್ಲಿ ಜರುಗಿದ ಈ ವಿಚಾರಗೋಷ್ಠಿಯಲ್ಲಿ ವಿಶೇಷ ಆಹ್ವಾನಿತರಾಗಿದ್ದ ಹಿರಿಯ ಅರ್ಥಧಾರಿಗಳಾದ ಕೋಟೆ ರಾಮ ಭಟ್, ಬೆಳ್ಳಿಗೆ ನಾರಾಯಣ ಮಣಿಯಾಣಿ, ಭಾಗವತರಾದ ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಅರ್ಥಧಾರಿ ಮಹಿಳೆ ಎಂಬ ನೆಲೆಯಲ್ಲಿ ಕವಿತಾ ಅಡೂರು, ತಾಳಮದ್ದಳೆಯ ಪ್ರೇಕ್ಷಕರು ಎಂಬ ನೆಲೆಯಲ್ಲಿ ಪ್ರಭಾಕರ ಕುಂಜಾರು ಅವರು ತಮ್ಮ ವಿಚಾರಗಳನ್ನು ಮಂಡಿಸಿದರು. ಹಲವಾರು ಸೂಕ್ಷ್ಮಗಳನ್ನು ಗುರುತಿಸಿದ ಗೋಷ್ಠಿಯು ವಿಮಶಾìತ್ಮಕವಾಗಿತ್ತು. ಉತ್ತಮ ಅನುಸರಣೀಯ ಪ್ರಯೋಗವಿದು.
ಈ ಕಾರ್ಯಕ್ರಮದ ಬಳಿಕ ಚಂದ್ರಶೇಖರ ದಾಮ್ಲೆ ಯವರ ಅಧ್ಯಕ್ಷತೆಯಲ್ಲಿ ಡಾ| ಡಿ ಸದಾಶಿವ ಭಟ್ ಅವರಿಗೆ ಸಿರಿಬಾಗಿಲು ವೆಂಕಪ್ಪಯ್ಯ ಪ್ರಶಸ್ತಿಯನ್ನು ನೀಡಿ ಸಮ್ಮಾನಿಸಲಾಯಿತು. ತಾಳಮದ್ದಳೆಯು ತನ್ನ ಹಿಂದಿನ ಛಾಪನ್ನು ಕಳೆದು ಕೊಳ್ಳುತ್ತಿದೆ ಎಂಬ ಆತಂಕದ ದಿನಗಳಲ್ಲಿ ಇಂತಹ ಒಂದು ಕ್ರಿಯಾಶೀಲ ಆಯೋಜನೆ ಭರವಸೆಯನ್ನು ಮೂಡಿಸಿದ್ದು ಸುಳ್ಳಲ್ಲ. ಪ್ರೇಕ್ಷಕರಾಗಿ ಆಗಮಿಸಿದವರಲ್ಲಿ ಎಲ್ಲ ವಯೋಮಿತಿಯವರೂ ಸಮಾರಂಭದ ಕೊನೆಯವರೆಗೂ ಇದ್ದದ್ದೂ ವಿಶೇಷವಾಗಿತ್ತು. ಅದರಲ್ಲೂ ಕಲಿಕೆಯ ಹಂತ ದಲ್ಲಿರುವ ವಿದ್ಯಾರ್ಥಿಗಳು, ಮಾತೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದದ್ದು ಉಲ್ಲೇಖನೀಯ. ರಸಸಂವಾಹಿ ಕಲೆ ಯಾದ ತಾಳಮದ್ದಳೆಯು ತನ್ನ ಹಿಂದಿನ ಪರಿಶುದ್ಧತೆಯನ್ನು ಉಳಿಸಿಕೊಳ್ಳುವಲ್ಲಿ ವಹಿಸಬೇಕಾದ ಎಚ್ಚರವನ್ನು ವಿವರಿಸುವು ದರಲ್ಲಿ ಈ ಶಿಬಿರವು ಯಶಸ್ವಿಯಾಯಿತು. ಕಾಲಮಿತಿಯಲ್ಲಿ ಪಾತ್ರಚಿತ್ರಣವನ್ನು ಸಂಕ್ಷಿಪ್ತವಾಗಿ ಮಾಡುವುದು, ಕಿರಿದರಲ್ಲಿ ಹಿರಿದನ್ನು ಹೇಳುವ ಸಾಧ್ಯತೆ, ಕಲಾವಿದನ ಮಾತು ಗಾರಿಕೆಯ ಮೇಲೆ ಅದು ಅವಲಂಬಿತವಾಗಿದೆ ಎನ್ನುವುದು ಶ್ರುತವಾಯಿತು. ಹಾಗೆಯೇ ಕೆಲವೊಂದು ಸಂವಾದ ಭಾಗಕ್ಕೆ ಕಾಲಮಿತಿಯನ್ನು ಕಲ್ಪಿಸದೆ ಇದ್ದಾಗ ಮುಕ್ತವಾದ ಚಿಂತನೆಯೊಳಗೆ ಹಲವು ವಿಚಾರಗಳ ಮಂಥನವೂ ಸಾಧ್ಯ ವಿದೆ ಎನ್ನುವುದನ್ನೂ ಮನವರಿಕೆ ಮಾಡಿದಂತಹ ಉತ್ತಮ ಕಾರ್ಯಕ್ರಮ. ವೀರರಸದ ಸಂವಾದವೂ ಇರಬೇಕಿತ್ತು ಎಂಬ ಅಭಿಮತ ಕೇಳಿಬಂದದ್ದು ಪ್ರೇಕ್ಷಕರಲ್ಲಿದ್ದ ಉತ್ಸಾಹ ಮತ್ತು ಮೆಚ್ಚುಗೆಯನ್ನು ತೋರ್ಪಡಿಸಿತು. ಸಮಯಾವಕಾಶದ ಕೊರತೆಯಿದ್ದರೂ ಅಚ್ಚುಕಟ್ಟಾಗಿ ನಿರ್ದೇಶಿಸಲ್ಪಟ್ಟದ್ದು ಸಂಯೋಜಕರ ಮತ್ತು ನಿರ್ದೇಶಕರ ಹಿರಿಮೆ.
ಕವಿತಾ ಅಡೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.