ಜಲವಳ್ಳಿ ವೆಂಕಟೇಶ ರಾವ್‌ಗೆ ಅರಾಟೆ ಮಂಜುನಾಥ ಪ್ರಶಸ್ತಿ
Team Udayavani, Jan 19, 2018, 2:45 PM IST
ಬಡಗುತಿಟ್ಟಿನ ಅಗ್ರಮಾನ್ಯ ಸ್ತ್ರೀವೇಷದಾರಿ, ರಾಜ್ಯ ಪ್ರಶಸ್ತಿ ಪುರಸ್ಕೃತ ದಿ| ಅರಾಟೆ ಮಂಜುನಾಥ ಅವರ ತೃತೀಯ ವರ್ಷದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅರಾಟೆಯವರೊಂದಿಗೆ ಸಾಲಿಗ್ರಾಮ ಮೇಳದಲ್ಲಿ ದೀರ್ಘಕಾಲ ಸಹ ಕಲಾವಿದರಾಗಿ ದುಡಿದ ಹಿರಿಯ ಕಲಾವಿದ ಜಲವಳ್ಳಿ ವೆಂಕಟೇಶ ರಾವ್ ಅವರಿಗೆ ಈ ಸಾಲಿನ ಅರಾಟೆ ಸಂಸ್ಮರಣಾ ಪ್ರಶಸ್ತಿ ಪ್ರದಾನಿಸಲಾಗುವುದು. ಅರಾಟೆಯವರ ಗಾವಳಿಯಲ್ಲಿರುವ ಮನೆಯಲ್ಲೇ ಕಾರ್ಯಕ್ರಮ ನಡೆಯಲಿದೆ.
ಬಳಿಕ ಸಾಲಿಗ್ರಾಮ ಮೇಳದವರು ಅರಾಟೆ ಹಾಗೂ ಜಲವಳ್ಳಿಯವರಿಗೆ ಬಹು ಪ್ರಸಿದ್ಧಿ ತಂದುಕೊಟ್ಟ ನಾಗಶ್ರೀ ಪ್ರಸಂಗ ಮತ್ತು ದಕ್ಷಯಜ್ಞ ಪ್ರಸಂಗಗಳನ್ನು ಪ್ರದರ್ಶಿಸಲಿದ್ದಾರೆ. ಶಾಲೆಯ ಮೆಟ್ಟಲನ್ನೇ ಏರದೆ ಅನುಭವಗಳನ್ನೇ ಬಂಡವಾಳವಾಗಿರಿಸಿ ಯಕ್ಷಗಾನ ರಂಗದಲ್ಲಿ ಅಗ್ರಮಾನ್ಯರಾಗಿ ಮೆರೆದ ಅಪರೂಪ ಕಲಾವಿದ ಜಳವಳ್ಳಿ. ರಾಜ್ಯ ಪ್ರಶಸ್ತಿ ಪುರಸ್ಕೃತರಾಗಿರುವ ಜಳವಳ್ಳಿ ಯಕ್ಷಗಾನದ ಶನೀಶ್ವರನೆಂದೇ ಪ್ರಸಿದ್ಧರಾಗಿದ್ದಾರೆ.ಮಾತುಗಾರಿಕೆಯಲ್ಲಿ ಅವರು ಸಾಧಿಸಿದ ಸಿದ್ಧಿಯನ್ನು ನೋಡುವಾಗ ಎಂತಹ ಪದವೀಧರರೂ ನಾಚಬೇಕು.ನಾಲ್ಕು ಸುತ್ತು ಒಂದು ಗತ್ತಿನ ಮೂಲಕ ಅವರ ಮಾತಿನ ವೈಖರಿಯನ್ನು ಕೇಳಿದವರು ಅವರು ನಿರಕ್ಷರಿ ಎಂದರೆ ನಂಬಲಾರರು.ಬಡತನದಲ್ಲೇ ಬೆಳೆದ ಅವರಿಗೆ ಅಕ್ಷರ ವಿದ್ಯೆಯೂ ವೈಭೋಗವಾಗಿತ್ತು.ಆದರೆ ಬಡಗುತಿಟ್ಟು ಯಕ್ಷಗಾನ ರಂಗಭೂಮಿಯ ಓರ್ವ ಶ್ರೇಷ್ಠ ಕಲಾವಿದರಲ್ಲೊಬ್ಬರೆಂದು ಇವರನ್ನು ಯಾವುದೇ ಮಾನದಂಡದಿಂದ ಗುರುತಿಸಬಹುದು.
ಯಕ್ಷಗಾನ ಜಲವಳ್ಳಿಯವರನ್ನು ಬಾಲ್ಯದಿಂದಲೇ ಸೆಳೆದಿತ್ತು.ಹೊನ್ನಾವರ ತಾಲೂಕಿನ ಜಲವಳ್ಳಿ ಎಂಬಲ್ಲಿ ಜನಿಸಿದ ಇವರು ತಮ್ಮ 18ನೇ ವಯಸ್ಸಿನಲ್ಲಿ ಯಕ್ಷಗಾನವನ್ನು ಕಂಡು ಕೇಳಿ ಗುಂಡಬಾಳ ಮೇಳದಲ್ಲಿ ಗೆಜ್ಜೆ ಕಟ್ಟಿದರು.ಅಲ್ಲಿ ಒಂದೆರಡು ತಿರುಗಾಟದಲ್ಲೇ ಸತ್ವಶಾಲಿ ಕಲಾವಿದನಾಗಿ ಗುರುತಿಸಿಕೊಂಡು ಬಳಿಕ ಇಡಗುಂಜಿ ಮೇಳ ಸೇರಿದರು.ಕೆರೆಮನೆಯ ಘಟಾನುಘಟಿ ಕಲಾವಿದರ ಒಡನಾಟದಿಂದ ಪ್ರಬುದ್ಧ ಕಲಾವಿದನಾಗಿ ಮೂಡಿಬಂದ ಇವರು ಸಮಕಾಲೀನರಾದ ಚಿಟ್ಟಾಣಿಯವರಿಗೆ ನಾಯಕ ಮತ್ತು ಪ್ರತಿನಾಯಕರಾಗಿ ಮಿಂಚ ತೊಡಗಿದರು.ಕೀಚಕ ವಧೆಯಲ್ಲಿ ಚಿಟ್ಟಾಣಿಯವರ ಕೀಚಕನಿಗೆ ವಲಲ,ಗದಾಯುದ್ಧದ ಕೌರವನಿಗೆ ಭೀಮ, ರುದ್ರಕೋಪನಿಗೆ ರಕ್ತಜಂಘ, ಭಸ್ಮಾಸುರನಿಗೆ ಈಶ್ವರ,ಕಾರ್ತವೀರ್ಯನಿಗೆ ರಾವಣ,ಕೃಷ್ಣನಿಗೆ ಬಲರಾಮ ಮುಂತಾದ ಇವರೀರ್ವರ ಜೋಡಿ ವೇಷಗಳು ಇನ್ನಿಲ್ಲವೆಂಬಷ್ಟು ಪ್ರಸಿದ್ಧಿ ಪಡೆಯಿತು.
ಇದೇ ಹೊತ್ತಿನಲ್ಲಿ ತೆಂಕುತಿಟ್ಟಿನ ಸುರತ್ಕಲ್ ಮೇಳ ಸೇರುವ ಮೂಲಕ ಇವರ ಯಕ್ಷ ಬದುಕು ಇನ್ನೊಂದು ತಿರುವು ಪಡೆಯಿತು.ಅಲ್ಲಿ ಶೇಣಿ ಗೋಪಾಲಕೃಷ್ಣ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಮಲ್ಪೆ ರಾಮದಾಸ ಸಾಮಗ, ಎಂ.ಕೆ. ರಮೇಶ ಅಚಾರ್ಯ ಮುಂತಾದವರ ಒಡನಾಟದಿಂದ ಶ್ರೇಷ್ಠ ಮಾತುಗಾರರಾಗಿ ರೂಪುಗೊಂಡರು.ಅಲ್ಲಿ ಅಗರಿ ಭಾಗವತರ ಹಿಮ್ಮೇಳದಲ್ಲಿ ಇವರ ಶನೀಶ್ವರ ಮಹಾತೆ¾ಯ ಶನಿ, ಶೇಣಿಯವರ ವಿಕ್ರಮಾದಿತ್ಯ ಆನಂದ ಮಾಸ್ತರರ ನಂದಿ ಶೆಟ್ಟಿ ಪಾತ್ರದೊಂದಿಗೆ ಪ್ರಸಂಗ ಅಪೂರ್ವ ಯಶಸ್ಸನ್ನು ಪಡೆದು ಇವರಿಗೆ ಯಕ್ಷಗಾನದ ಶನೀಶ್ವರ ಎಂಬ ಹೆಸರು ಅನ್ವರ್ಥವಾಯಿತು.
ಬಡಗುತಿಟ್ಟಿನ ಸಾಲಿಗ್ರಾಮ ಮೇಳದ ಸೇರ್ಪಡೆ ಜಲವಳ್ಳಿಯವರ ಯಕ್ಷಗಾನದ ಸುವರ್ಣ ಯುಗ.ದೀರ್ಘಕಾಲ ಎರಡನೇ ವೇಷಧಾರಿಯಾಗಿ ಕಾಳಿಂಗ ನಾವಡರ ಹಿಮ್ಮೇಳಕ್ಕೆ ಹೆಜ್ಜೆ ಹಾಕಿದ ಅವರು ಮರವಂತ ನರಸಿಂಹ ದಾಸ, ನೆಲ್ಲೂರು ಮರಿಯಪ್ಪಾಚಾರ್, ಕಾಳಿಂಗ ನಾವಡ ,ನಾರಾಯಣ ಶಬರಾಯ ಸಹಿತ ಇಂದಿನ ಯುವ ಭಾಗವತರವರೆಗೆ ಮೂರೂ ತಲೆಮಾರಿನ ಭಾಗವತರ ಪದ್ಯಕ್ಕೆ ಹೆಜ್ಜೆ ಹಾಕಿದ ಕೀರ್ತಿಗೆ ಭಾಜನರಾಗಿದ್ದಾರೆ.ಕಾಳಿಂಗ ನಾವಡರ ಭಾಗವತಿಕೆಯ ಉತ್ತುಂಗದಲ್ಲಿ ನಾಗಶ್ರೀ ಪ್ರಸಂಗದ ಇವರ ಸುದರ್ಶನ, ಅರಾಟೆಯವರ ಪ್ರಭಾಂಗಿ, ಚೆಲುವೆ ಚಿತ್ರಾವತಿಯ ಕೀರ್ತಿವರ್ಮ-ಮದನಾಂಗಿ ಜೋಡಿ ಪಾತ್ರಗಳು ಅಪಾರ ಜನ ಮೆಚ್ಚುಗೆ ಪಡೆದಿದ್ದವು.ರತಿರೇಖಾ, ಚೈತ್ರಪಲ್ಲವಿ, ಬಾನುತೇಜಸ್ವಿ, ಕಾಂಚನಶ್ರೀ, ಪದ್ಮಪಾಲಿ, ವಸುವರಾಂಗಿ ಮುಂತಾದ ಪ್ರಸಂಗಗಳ ಅವರ ವೇಷಗಳನ್ನು ಇನ್ನೊಬ್ಬ ಮಾಡಿ ಸೈ ಎನಿಸಿಕೊಳ್ಳಲಾರ. ಬಡಗು ಮತ್ತು ಬಡಾಬಡಗಿನ ಅನೇಕ ಖ್ಯಾತನಾಮರಾದ ಶಿರಿಯಾರ ಮಂಜು ನಾಯಕ್,ಐರೋಡಿ ಗೋವಿಂದಪ್ಪ, ಅರಾಟೆ ಮಂಜುನಾಥ,ಕೋಟ ವೈಕುಂಠ,ರಾಮ ನಾಯರಿ,ಕಿನ್ನಿಗೋಳಿ ಮುಖ್ಯಪ್ರಾಣ,ಹಳ್ಳಾಡಿ ಜಯರಾಮಶೆಟ್ಟಿ, ಚಿಟ್ಟಾಣಿಯವರು,ಬಳ್ಕೂರು ಕೃಷ್ಣಯಾಜಿ,ಕೊಂಡದಕುಳಿ ರಾಮಚಂದ್ರ ಹೆಗಡೆ, ವಾಸುದೇವ ಸಾಮಗ , ಕುಮಟಾ ಗೋವಿಂದ ನಾಯಕ್ ಇನ್ನೂ ಅನೇಕರು ಸಾಲಿಗ್ರಾಮ ಮೇಳದಲ್ಲಿ ಅವರೊಂದಿಗೆ ರಂಗಸ್ಥಳ ಹಂಚಿಕೊಂಡ ಪ್ರಮುಖರು.ತಿರುಗಾಟದ ಕೊನೆಯ ಕೆಲವು ವರ್ಷ ಪೆರ್ಡೂರು ಮೇಳದ ಪ್ರಧಾನ ಕಲಾವಿದರಾಗಿ ತನ್ನ 70ನೇ ವಯಸ್ಸಿನಲ್ಲಿ ನಿವೃತ್ತರಾದರು.
ಸದ್ಯ ಎಂಬತ್ತರ ಇಳಿ ವಯಸ್ಸಿನಲ್ಲಿರುವ ಜಲವಳ್ಳಿಯವರು ತಿರುಗಾಟದುದ್ದಕ್ಕೂ ಪ್ರಭಾವಳಿ ಸಹಿತ ಕಿರೀಟ ವೇಷದಲ್ಲಿ
ರಂಜಿಸಿದವರು.ಅವರ ಕೇದಗೆ ಮುಂದಲೆ ವೇಷಗಳನ್ನು ನೋಡಿರದವರೇ ವಿರಳ ಎನ್ನಬಹುದು. ವಿಶಾಲವಾದ ಹಣೆ ಹುಬ್ಬುಗಳು, ಹೊಳೆಯುವ ಕಣ್ಣುಗಳೇ ಅವರ ಆಸ್ತಿ. ಮಾತುಗಾರಿಕೆಯಲ್ಲಿ ತನಗೆ ಗೊತ್ತಿಲ್ಲದ ವಿಷಯವನ್ನು ವಿಸ್ತರಿಸಿ ಗೊಂದಲಕ್ಕೆ ಹೋಗುವುದಿಲ್ಲ. ತನಗೆ ಒಗ್ಗದ ಕೀಚಕ, ಕೃಷ್ಣ ಮುಂತಾದ ವೇಷಗಳ ಗೋಜಿಗೆ ಹೋಗುತ್ತಿರಲಿಲ್ಲ. ವ್ಯಾಕರಣ ಶುದ್ಧ ಭಾಷೆ, ಶಬ್ದದ ಮೂಲ ಸ್ವರೂಪ ಕೆಡಿಸದೆ ಕಿವಿಗೆ ಹಿತವಾಗಿ ಕೇಳುವಂತೆ ಮಾತನಾಡುವುದು ಇವರ ಹೆಚ್ಚುಗಾರಿಕೆ. ಜಲವಳ್ಳಿಯವರು ಉತ್ತಮ ನೃತ್ಯಪಟು ಎಂದು ಎಲ್ಲಿಯೂ ಗುರುತಿಸಿಕೊಂಡಿಲ್ಲ.ರಂಗದಲ್ಲಿ ವೈವಿದ್ಯಮಯ ಹೆಜ್ಜೆ ಬಳಸುವುದು ಕಡಿಮೆ.ಅದೊಂದು ಕೊರತೆಯಾಗಿ ಅವರನ್ನು ಕಾಡಲೇ ಇಲ್ಲ.ಹಾಗೆಂದು ಅವರ ನೃತ್ಯ ಕೋಶ ಬರಿದಾದುದಲ್ಲ.ರಂಗದಲ್ಲಿ ಗತ್ತಿನ ನಾಲ್ಕು ಸುತ್ತು ಬರುವುದರಲ್ಲೇ ಎಲ್ಲ ಕೊರತೆಯನ್ನು ತುಂಬಿಕೊಳ್ಳುತ್ತಿದ್ದರು. ಕರ್ನಾಟಕ ಜಾನಪದ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಉಡುಪಿ ಯಕ್ಷಗಾನ ಕಲಾರಂಗ ಪ್ರಶಸ್ತಿ, ಪಳ್ಳಿ ಸೋಮನಾಥ ಹೆಗ್ಡೆ ಪ್ರಶಸ್ತಿ ಸೇರಿ ಹಲವು ಪ್ರಮುಖ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದಿವೆ. ಪ್ರಸ್ತುತ ಈ ತಲೆಮಾರಿನ ಕಲಾವಿದ ಇವರ ಪುತ್ರ ಜಲವಳ್ಳಿ ವಿದ್ಯಾಧರ ರಾವ್ ಭರವಸೆಯ ಕಲಾವಿದರಾಗಿದ್ದು, ಕಲಾಧರ ಯಕ್ಷ ಬಳಗ ಎಂಬ ಸ್ವಂತ ಮೇಳದ ಯಜಮಾನ ಹಾಗೂ ಕಲಾವಿದರಾಗಿ ತಂದೆಯ ಮಾರ್ಗದರ್ಶನದಲ್ಲಿ ಮುಂದುವರಿಯುತಿದ್ದಾರೆ. ಸಾಲಿಗ್ರಾಮ ಮೇಳದ ಸುವರ್ಣ ವರ್ಷ ಸಂಭ್ರಮದಲ್ಲಿ ಮೇಳದ ವೇದಿಕೆಯಲ್ಲಿಯೇ ಅರಾಟೆ ಸಂಸ್ಮರಣಾ ಪ್ರಶಸ್ತಿ ಸಲ್ಲುತ್ತಿರುವುದು ಸಮಯೋಚಿತವಾಗಿದೆ.
ಪ್ರೊ| ಎಸ್.ವಿ.ಉದಯ ಕುಮಾರ ಶೆಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.