ಬಡಗುತಿಟ್ಟಿನ ಸವ್ಯಸಾಚಿ ಜಮದಗ್ನಿ ಶೀನ
Team Udayavani, Aug 3, 2018, 6:00 AM IST
ಅಮೋಘವಾದ ಅಭಿನಯದಿಂದ ನಿರ್ದಿಷ್ಟ ಪಾತ್ರವನ್ನು ಜನಪ್ರಿಯಗೊಳಿಸಿದ ಅನೇಕ ಕಲಾವಿದರಿದ್ದಾರೆ. ಇಂಥ ಪ್ರಸಂಗದ ಇಂಥ ಪಾತ್ರಕ್ಕೆ ಆ ಕಲಾವಿದರೇ ಆಗಬೇಕೆಂಬಷ್ಟು ಛಾಪು ಒತ್ತಿದವರು ಅವರು. ಆದರೆ ಪಾತ್ರವನ್ನೇ ತನ್ನ ಹೆಸರಿನ ಮುಂದೆ ಬಿರುದಿನಂತೆ ಪಡೆದುಕೊಂಡ ಕಲಾವಿದರೊಬ್ಬರಿದ್ದರೆ ಅದು ಜಮದಗ್ನಿ ಶೀನ ನಾಯ್ಕ. ಮಟ್ಪಾಡಿ ಶೈಲಿಯನ್ನು ಕರಗತ ಮಾಡಿಕೊಂಡು 60 ವರ್ಷಗಳಷ್ಟು ಸುದೀರ್ಘ ಕಾಲ ಕಲಾ ಸೇವೆಗೈದು ಇದೀಗ ಜೀವನದ ಸಂಧ್ಯಾ ಕಾಲದಲ್ಲಿ ಅನಾರೋಗ್ಯಪೀಡಿತರಾಗಿ ಕಲಾಪೋಷಕರ ನೆರವಿನ ನಿರೀಕ್ಷೆಯಲ್ಲಿದ್ದಾರೆ 84ರ ಇಳಿ ಹರೆಯದ ಜಮದಗ್ನಿ ಶೀನ ನಾಯ್ಕ.
ಬಡತನದ ಕಾರಣದಿಂದ ಕಲಿತದ್ದು ಎರಡನೇ ತರಗತಿಯಾದರೂ ಯಕ್ಷಸಾಗರದಲ್ಲಿ ಇವರು ಸಂಪಾದಿಸಿರುವ ಜ್ಞಾನ ಅಪಾರ. 14ನೇ ವಯಸ್ಸಿನಲ್ಲೇ ಬಣ್ಣದ ಸಂಜೀವಯ್ಯನವರಲ್ಲಿ ಹೆಜ್ಜೆಗಾರಿಕೆಯನ್ನು ಕಲಿತು ಮಂದಾರ್ತಿ ಮೇಳದಲ್ಲಿ ಗೆಜ್ಜೆ ಕಟ್ಟಿದರು. ಗುರು ವೀರಭದ್ರ ನಾಯ್ಕ…, ವಂಡಾರು ಬಸವ, ಶ್ರೀನಿವಾಸ ನಾಯ್ಕ…, ಭಾಗವತರಾದ ಕುಂಜಾಲು ಶೇಷಗಿರಿ ಕಿಣಿ, ಹಿರಿಯಡ್ಕ ಗೋಪಾಲರಾಯರು, ಚೆಂಡೆ ಕಿಟ್ಟ ಮೊದಲಾದ ಯಕ್ಷದಿಗ್ಗಜರ ಮಾರ್ಗದರ್ಶನದಲ್ಲಿ ಪಳಗಿದ ಶೀನ ನಾಯ್ಕರು ಸವ್ಯಸಾಚಿಯಾಗಿ ರೂಪುಗೊಂಡರು. ಮಂದಾರ್ತಿ, ಕೊಡವೂರು,ಹಾಲಾಡಿ, ಪೆರ್ಡೂರು, ಮಾರಣಕಟ್ಟೆ, ಕಮಲ ಶಿಲೆ, ಗೋಳಿಗರಡಿ, ಅಮೃತೇಶ್ವರಿ, ಸಾಲಿಗ್ರಾಮಗಳಂತಹ ಬಡಗಿನ ಮೇಳಗಳಲ್ಲಿ ಮಾತ್ರವಲ್ಲದೆ ಪೊಳಲಿ ಮತ್ತು ಕರ್ನಾಟಕದಂತಹ ತೆಂಕಿನ ಮೇಳಗಳಲ್ಲಿಯು ತಿರುಗಾಟ ನಡೆಸಿದ ಖ್ಯಾತಿ ಶೀನ ನಾಯ್ಕರದ್ದು. ಸ್ತ್ರೀ ವೇಷಧಾರಿಯಾಗಿ ಭ್ರಮರ ಕುಂತಳೆ, ಪದ್ಮಗಂಧಿನಿ, ದ್ರೌಪದಿ ಪ್ರತಾಪದ ಸುಭದ್ರೆ, ಬಭುವಾಹನದ ಚಿತ್ರಾಂಗದೆ, ಸುಧನ್ವದ ಪ್ರಭಾವತಿ, ಸೈರಂಧ್ರಿ ಮುಂತಾದ ಪಾತ್ರಗಳು ಇವರಿಗೆ ಅಪಾರವಾದ ಜನಮನ್ನಣೆಯನ್ನು ದೊರಕಿಸಿಕೊಟ್ಟಿದ್ದವು.
ಜಮದಗ್ನಿಯಾದ ಕಥೆ
ಪೌರಾಣಿಕ ಪ್ರಸಂಗಗಳ ಮುಖ್ಯ ಸ್ತ್ರೀ ಪಾತ್ರಗಳಲ್ಲೇ ಮಿಂಚುತ್ತಿದ್ದ ಶೀನ ನಾಯ್ಕರ ಹೆಸರಿನ ಮೊದಲು ಜಮದಗ್ನಿ ಬಿರುದು ಸೇರಿಕೊಂಡಿದ್ದು ಒಂದು ಸ್ವಾರಸ್ಯಕರ ಕಥೆ. ಮಾರಣಕಟ್ಟೆ ಮೇಳದಲ್ಲಿ ಪ್ರಧಾನ ಸ್ತ್ರೀವೇಷ ಪಾತ್ರಧಾರಿಯಾಗಿದ್ದ ಸಂದರ್ಭದಲ್ಲಿ ಅದೊಂದು ದಿನ ಮೇಳದ ಎರಡನೇ ವೇಷಧಾರಿ ಅಸೌಖ್ಯಗೊಂಡಿದ್ದರಿಂದ ನಿಗದಿಯಾಗಿದ್ದ ಪ್ರಸಂಗದ ಜಮದಗ್ನಿ ಮಹರ್ಷಿ ಪಾತ್ರವನ್ನು ನಿರ್ವಹಿಸುವ ಅನಿವಾರ್ಯತೆ ಶೀನ ನಾಯ್ಕರ ಹೆಗಲೇರುತ್ತದೆ. ಆ ದಿನ ಇವರ ಜಮದಗ್ನಿ ಪಾತ್ರ ಪ್ರೇಕ್ಷಕರನ್ನು ಹುಚ್ಚೆಬ್ಬಿಸುತ್ತದೆ. ಅಂದಿನಿಂದ ಶೀನ ನಾಯ್ಕರು ಯಕ್ಷಪ್ರೇಮಿಗಳ ಮನದಲ್ಲಿ ಜಮದಗ್ನಿ ಶೀನ ನಾಯ್ಕರಾಗಿ ಅಚ್ಚಳಿಯದ ಸ್ಥಾನವನ್ನು ಪಡೆದುಕೊಳ್ಳುತ್ತಾರೆ.
ಜಮದಗ್ನಿ ಶೀನ ನಾಯ್ಕರನ್ನು ಕೇವಲ ಒಬ್ಬ ಕಲಾವಿದ ಮಾತ್ರವಲ್ಲದೆ ಮೇಳದ ಯಜಮಾನನೂ ಆಗಿದ್ದರು. ಆ ಕಾಲದಲ್ಲಿ ಬಯಲಾಟ ಮೇಳವಾಗಿದ್ದ ಪೆರ್ಡೂರು ಮೇಳವನ್ನು ಶೀನ ನಾಯ್ಕರು ನಡೆಸುತ್ತಿದ್ದರು. ಆರ್ಥಿಕ ಸಂಕಷ್ಟದ ಕಾರಣದಿಂದಾಗಿ ಮೇಳದ ಯಜಮಾನಿಕೆಯನ್ನು ಆಗಿನ್ನೂ ಯುವಕರಾಗಿದ್ದ ವೈ. ಕರುಣಾಕರ ಶೆಟ್ಟಿಯವರ ಹೆಗಲಿಗೇರಿಸಿದ ಶೀನ ನಾಯ್ಕರು ಆ ಬಳಿಕ ಅಜ್ಞಾತವಾಗಿಬಿಡುತ್ತಾರೆ. ಕರುಣಾಕರ ಶೆಟ್ಟಿಯವರು ಬಯಲಾಟ ಮೇಳವಾಗಿದ್ದ ಪೆರ್ಡೂರು ಮೇಳವನ್ನು ಬಳಿಕ ಡೇರೆ ಮೇಳವಾಗಿಸಿ ಬಡಗು ತಿಟ್ಟಿನ ಪ್ರತಿಷ್ಠಿತ ಮೇಳವನ್ನಾಗಿಸಿದ್ದು ಇತಿಹಾಸ. ಇದಕ್ಕೆಲ್ಲಾ ಕಾರಣಕರ್ತರಾಗಿದ್ದ ಜಮದಗ್ನಿ ಶೀನ ನಾಯ್ಕರನ್ನು ಕರುಣಾಕರ ಶೆಟ್ಟರು ಈಗಲೂ ನೆನಪಿಸಿಕೊಳ್ಳುತ್ತಾರೆ. ಸುದೀರ್ಘ ಕಾಲ ಯಕ್ಷಕಲಾ ಮಾತೆಯ ಸೇವೆಯನ್ನು ಮಾಡಿದ ಶೀನ ನಾಯ್ಕರು ಎಲೆ ಮರೆಯ ಕಾಯಿಯಂತೆ ಯಡಾಡಿಯಲ್ಲಿ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದಾರೆ.
ಮೋಹನ್ ಪೆರ್ಡೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Chennamman-Kittur: ಯೋಧ ನರೇಶ ಯಲ್ಲಪ್ಪ ಅಗಸರ ಕೆರೆಗೆ ಹಾರಿ ಆತ್ಮಹತ್ಯೆ
Subhramanya: ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಸೇವೆಗಳಲ್ಲಿ ವ್ಯತ್ಯಯ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Daily Horoscope: ಸಹಾಯ ಯಾಚಿಸಿದವರಿಗೆ ನೆರವಾಗುವ ಅವಕಾಶ, ಕೆಲಸದ ಒತ್ತಡ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.