ನಳದಮಯಂತಿ ಯಕ್ಷ ಬ್ಯಾಲೆ ಮರುನಿರ್ಮಾಣದ ದಾರಿ
Team Udayavani, Apr 7, 2017, 3:59 PM IST
ಸಮಾಜದಲ್ಲಿ ತಾವು ಕಂಡ ಇತರರ ತಪ್ಪನ್ನು ಎತ್ತಿ ಹೇಳುವ ವರ್ಗ ಒಂದಾದರೆ, ಅದು ತಮಗೆ ಸಂಬಂಧಿಸಿದ್ದಲ್ಲ ಎಂದು ಸುಮ್ಮನಾಗಿ ಬಿಡುವ ವರ್ಗ ಮತ್ತೂಂದು. ಆದರೆ ಡಾ| ಶಿವರಾಮ ಕಾರಂತರದು ಮೂರನೆಯದಾದ ಬೇರೆಯೇ ದಾರಿ. ತಪ್ಪನ್ನು ತಪ್ಪು ಎಂದು ಖಂಡಿಸಿ ತಮಗೆ ಅನ್ನಿಸಿದ್ದನ್ನು ಸ್ಥಾಪಿಸಿ ತೋರಿಸುವ ಹಠದ ಮನಸ್ಸು. ಹಾಗಾಗಿಯೇ ದಿಕ್ಕುತಪ್ಪಿದ ನಾವೆಯಂತೆ ಮನಬಂದಂತೆ ಪ್ರದರ್ಶಿತವಾಗುತ್ತಿದ್ದ, ಪರಂಪರೆ, ಸಂಪ್ರದಾಯ ಎಂಬ ನೆರಳಿನಡಿ ಹಳಿ ತಪ್ಪಿದ ಅಂದಿನ ಯಕ್ಷಗಾನ ಪ್ರದರ್ಶನಗಳನ್ನು ನೃತ್ಯನಾಟಕವಾಗಿಸಿ, ಯಕ್ಷಗಾನ ಬ್ಯಾಲೆಯಾಗಿ ಪರಿವರ್ತಿಸಿ, ವಿಶ್ವದ ಮೂಲೆ ಮೂಲೆಗೂ ಪರಿಚಯಿಸಲು ಸಾಧ್ಯವಾದುದು.
1930-40ರ ಕಾಲಘಟ್ಟದಲ್ಲಿ ನೃತ್ಯನಾಟಕ, ಕಿನ್ನರ ನೃತ್ಯಗಳ ಮೂಲಕ ತಮ್ಮ ಕನಸುಗಳನ್ನು ಸಾಕಾರಗೊಳಿಸುತ್ತಿದ್ದ ಕಾರಂತರು ಯಾವಾಗ ಯಕ್ಷಗಾನವನ್ನು ತನ್ನ ಪ್ರಯೋಗ ರಂಗವಾಗಿ ಸ್ವೀಕರಿಸಿದರೋ, ಅಲ್ಲಿಂದ ಮುಂದೆ ಸಂಪ್ರದಾಯವಾದಿಗಳಿಂದ ಎಷ್ಟೇ ವಿರೋಧ, ಅಡೆತಡೆಗಳು ಬಂದರೂ ತಮ್ಮ ಸಿದ್ಧಾಂತದಿಂದ ವಿಮುಖರಾಗಲಿಲ್ಲ. ಅಂದು ಅವರು ಯುರೋಪ್, ಫ್ರಾನ್ಸ್, ಅಮೆರಿಕ, ಸ್ಪೇನ್, ಯುಗೊಸ್ಲಾವಿಯಗಳಲ್ಲಿ ಕಂಡುಂಡ ಅಲ್ಲಿನ ನೃತ್ಯಬ್ಯಾಲೆ ಬಡಗುತಿಟ್ಟಿನ ಯಕ್ಷಗಾನದ ನೃತ್ಯನಾಟಕ ಪ್ರಯೋಗಕ್ಕೆ ಪ್ರೇರಣೆಯಾಯಿತು. ಆ ಹಿನ್ನೆಲೆ ಯಲ್ಲಿ 1962ರ ಹೊತ್ತಿಗೆ ಭೀಷ್ಮವಿಜಯ, ಪಂಚವಟಿ, ಕನಕಾಂಗಿ ಕಲ್ಯಾಣ, ನಳ ದಮಯಂತಿ, ಅಭಿಮನ್ಯು, ಚಿತ್ರಾಂಗದ, ಗಯಚರಿತ್ರೆ ಮೊದಲಾದ ಪ್ರಸಂಗಗಳು ಕಾರಂತ ರಿಂದ ಹೊಸ ಆಯಾಮ ಪಡೆದು ಪ್ರಯೋಗಗೊಂಡವು.
ಉಡುಪಿ ಎಂಜಿಎಂ ಯಕ್ಷಗಾನ ಕೇಂದ್ರದಲ್ಲಿ ಯಕ್ಷರಂಗ ವನ್ನು ಕಟ್ಟಿ ಅಂದಿನ ಬಯಲಾಟದ ಎಷ್ಟೋ ಹಿರಿಯ ಕಲಾವಿದರಿಂದ ಹಿಡಿದು, ಯಕ್ಷರಂಗದ ಯುವ ಕಲಾವಿದರ ಸಹಿತ ತಮ್ಮ ಆಲೋಚನೆಗಳಿಗೆ ಹಿಗ್ಗಿಸಿ, ಬಗ್ಗಿಸಿ, ಹಿಮ್ಮೇಳ, ಮುಮ್ಮೇಳ, ಆಹಾರ್ಯ, ರಂಗಚಲನೆಗಳಲ್ಲಿ ಹೊಸ ಸಾಧ್ಯತೆ ಗಳನ್ನು ಆವಿಷ್ಕರಿಸಿ ಹೊಸ ಪ್ರೇಕ್ಷಕ ಸಮುದಾಯವನ್ನು ತಲುಪುವ ಮುನ್ನುಡಿ ಬರೆದರು. ಆ ಸಂದರ್ಭದ ತಮ್ಮ ನೋವು ನಲಿವುಗಳನ್ನು ಸಾಂದರ್ಭಿಕವಾಗಿ ಕೃತಿಗಳಲ್ಲಿ ದಾಖಲಿಸಿದ್ದಾರೆ.
ಯಾವುದೇ ರಂಗ ಪ್ರಯೋಗಗಳು ಚರಿತ್ರೆಯ ರೂಪದಲ್ಲಿ ಪುಸ್ತಕದಲ್ಲಿ ದಾಖಲಾಗಿದ್ದರೆ ಪರಿಣಾಮಕಾರಿ ಯಾಗವು. ಅವು ಆಗಾಗ ಮರುನಿರ್ಮಾಣಗೊಂಡು ಚಲಾವಣೆಯಲ್ಲಿದ್ದಾಗ ಮಾತ್ರ ಚಿತ್ತಭಿತ್ತಿಯಲ್ಲಿ ಬೇರೂರಲು ಸಾಧ್ಯ. ಆ ನಿಟ್ಟಿನಲ್ಲಿ ಶ್ರೀನಿವಾಸ ಸಾಸ್ತಾನ ನೇತೃತ್ವದ ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿ (ರಿ.) ಯಕ್ಷಗಾನ ತಂಡವು ಕಾರಂತರ ನಿರ್ದೇಶನದ ಯಕ್ಷಗಾನ ಬ್ಯಾಲೆಯನ್ನು ಮರುನಿರ್ದೇಶಿಸಿ, ಪ್ರದರ್ಶಿಸುವ ಕಾಯಕದಲ್ಲಿ ತೊಡಗಿದೆ. ಈಗಾಗಲೇ ಡಾ| ಕೆ. ಶಿವರಾಮ ಕಾರಂತ ಸಂಶೋಧನೆ ಮತ್ತು ಅಧ್ಯಯನ ಕೇಂದ್ರದ ನಿರ್ದೇಶಕಿ ಮಾಲಿನಿ ಮಲ್ಯರ ಮಾರ್ಗದರ್ಶನದಲ್ಲಿ,
ವಿ| ಸುಧೀರ್ ರಾವ್ ಕೊಡವೂರು ಅವರ ಮರು ನಿರ್ದೇಶನದಲ್ಲಿ ಪಂಚವಟಿ, ಅಭಿಮನ್ಯು ಕಾಳಗ ಅಲ್ಲಲ್ಲಿ ಪ್ರದರ್ಶನ ಕಂಡಿವೆ. ಇತ್ತೀಚೆಗೆ ಇದೇ ತಂಡವು ತೆಕ್ಕಟ್ಟೆಯ ಯಶಸ್ವೀ ಕಲಾವೃಂದದ ಆಶ್ರಯದಲ್ಲಿ ನಳದಮಯಂತಿ ಎಂಬ ಕಾರಂತರ ಬ್ಯಾಲೆಯನ್ನು ಮರುನಿರ್ದೇಶನಕ್ಕೊಳಪಡಿಸಿ ಪ್ರದರ್ಶಿಸಿತು.
ಧ್ವಜಪುರ ನಾಗಪ್ಪಯ್ಯನಿಂದ ರಚಿತವಾದ ನಳಚರಿತ್ರೆ ಪೂರ್ಣ ರಾತ್ರಿ ಪ್ರದರ್ಶಿಸಬಲ್ಲ ವಿಸ್ತಾರ ಕತೆಯುಳ್ಳ ಪ್ರಸಂಗ. ಕಾರಂತರು ಅದನ್ನು ಮೊಟಕುಗೊಳಿಸಿ ನಳ ದಮಯಂತಿಯರ ವಿವಾಹ ಪ್ರಕರಣದ ಅನಂತರದ ಭಾಗವನ್ನು ಮಾತ್ರ ಉಳಿಸಿಕೊಳ್ಳುತ್ತಾರೆ. ನಿಷಧ ನೃಪಾಲ ನಳನು ಪ್ರಜಾರಂಜಕನಾಗಿಯೂ ಸುಖಸಂಸಾರಿಯಾಗಿಯೂ ಕಾಲ ಕಳೆಯುವಲ್ಲಿಂದ ಪ್ರಸಂಗಾರಂಭ. ಆರಂಭದಲ್ಲಿಯೇ ನಳ, ದಮಯಂತಿ, ಚಂದ್ರಸೇನ ಈ ಮೂವರೂ ಚೆಂಡಾಟದಲ್ಲಿ ತಲ್ಲೀನರಾದ ನೃತ್ಯ ಸಂಯೋಜನೆಯ ಮೂಲಕ ರಂಗದಲ್ಲಿ ಲವಲವಿಕೆಯನ್ನು ಮೂಡಿಸುತ್ತಾರೆ. ಸಂದರ್ಭವನ್ನು ಹೊಂಚುಹಾಕುತ್ತಿರುವ ಶನಿಯ ಪ್ರವೇಶ ಕುಣಿತವೂ ಆ ಪಾತ್ರದ ಆಹಾರ್ಯವೂ ಅನನ್ಯವಾಗಿವೆ. ಮುಂದೆ ದೂತ ಸನ್ನಿವೇಶದ ಕಪಟ ತನ, ಸರ್ವಸ್ವವನ್ನೂ ಕಳಕೊಂಡ ನಳನ ವಿಷಾದ, ದಮಯಂತಿಯ ದುಃಖ, ವನಪ್ರವೇಶ, ಪತಿವಿಯೋಗ ಮೊದಲಾದ ಸಂದರ್ಭಗಳಲ್ಲಿ ಕಾರಂತರ ಹೊಸ ಸಾಧ್ಯತೆಯ ಮನಸ್ಸು ಎದ್ದುಕಾಣುತ್ತದೆ.
ಕಾಡಿನಲ್ಲಿ ಅಜಗರವೊಂದಕ್ಕೆ ತುತ್ತಾದ ದಮಯಂತಿ ಯನ್ನು ಬಿಡಿಸಿ, ದಮಯಂತಿಯ ಮೋಹಕ್ಕೆ ಒಳಗಾದ ವ್ಯಾಧ (ಕಿರಾತ)ನನ್ನು ದಮಯಂತಿ ತನ್ನ ಕಣ್ಣುಗಳ ತೀಕ್ಷ್ಣ ಉರಿಯಿಂದ ಸುಟ್ಟುರುಹುತ್ತಾಳೆ. ಬಳಿಕ ವ್ಯಾಪಾರಿಗಳ ಸಹಾಯದಿಂದ ಚೈದ್ಯ ದೇಶವನ್ನು ಸೇರುತ್ತಾಳೆ. ಆದರೆ ಇಲ್ಲಿ ಕಾರಂತರು ಕಿರಾತನ ಮೂಲಕವೇ ದಮಯಂತಿಯನ್ನು ಚೈದ್ಯದೇಶಕ್ಕೆ ತಲುಪಿಸುವ ಬದಲಾವಣೆ ಮಾಡಿರುವ ಉದ್ದೇಶ ಸ್ಪಷ್ಟವಾಗುವುದಿಲ್ಲ.
ವರಕಾರ್ಕೋಟಕ ಕಚ್ಚಿದ ದೆಸೆಯಿಂದ ವಿಕಾರ ರೂಪಿಯಾದ ಬಾಹುಕನ ವೇಷವನ್ನು ಯಕ್ಷಗಾನೀಯ ನೆಲೆಯಲ್ಲಿ ಕಾರಂತರು ರೂಪಿಸಿದ್ದು ಸ್ವಾಗತಾರ್ಹವಾದುದು. ಕಪ್ಪು ದಗಲೆ, ಕೈಕಟ್ಟು, ಎದೆಮುಚ್ಚುವ ಹೆಗಲವಲ್ಲಿ, ಸಣ್ಣ ಕೆಂಪು ಕೇದಗೆಮುಂದಲೆ ಬಾಹುಕನನ್ನು ಬಿಂಬಿಸುತ್ತದೆ. ಬಯಲಾಟಗಳಲ್ಲಿ ಆ ಮೊದಲೇ ಹಾಸ್ಯಪಾತ್ರವಾದ ಚಿಕ್ಕ, ವಿಜಯ ಮೊದಲಾದವುಗಳಿಗೆ ಸಣ್ಣ ಕೇದಗೆಮುಂದಲೆ ಕಟ್ಟುವ ಕ್ರಮವಿತ್ತು. ಅದನ್ನೇ ಕಾರಂತರು ಬಾಹುಕನಿಗೂ ಅನ್ವಯಿಸಿರಬೇಕು. ಇತ್ತೀಚೆಗೆ ಕೆಲವು ಕಲಾವಿದರು ಕಾರಂತರ ಬಾಹುಕನ ವೇಷ ಕಲ್ಪನೆಯನ್ನು ತಾವೂ ಕೆಲವೊಂದು ಮಾರ್ಪಾಡುಗಳೊಂದಿಗೆ ರಂಗಕ್ಕೆ ತಂದದ್ದಿದೆ.
ಸುದೇವನ ಮೂಲಕ ದಮಯಂತಿಯನ್ನು ಭೀಮಕನಲ್ಲಿ ಮುಟ್ಟಿಸಿದ ಮೇಲೆ, ಋತುಪರ್ಣನಲ್ಲಿ ಊಟದ ಪ್ರಕರಣ. ನಳನೆಂಬ ಅನುಮಾನ, ದಮಯಂತಿಯ ಪುನರ್ ಸ್ವಯಂವರ, ಋತುಪರ್ಣನಲ್ಲಿ ನಳನ ರಹಸ್ಯ ಬೇಧ, ನಳ ದಮಯಂತಿಯರ ಸಮಾಗಮ ಹೀಗೆ ಕತೆ ಸಾಗುತ್ತದೆ. ಈಗಾಗಲೇ ಬಯಲಾಟಗಳಲ್ಲಿ ತೆಂಕು ಬಡಗಿನ ಹಿರಿಯ ಪಾತ್ರಧಾರಿಗಳು, ಕುಣಿತ ಮತ್ತು ಮಾತುಗಳಿಂದ ಕಟ್ಟಿಕೊಟ್ಟ ಋತುಪರ್ಣ-ಬಾಹುಕರ, ಬಾಹುಕ-ದಮಯಂತಿಯರ ಪಾತ್ರಚಿತ್ರಣದ ಗುಂಗಿನಲ್ಲಿದ್ದವರಿಗೆ ಕಾರಂತರ ನಳನರಿತ್ರೆಯ ಬ್ಯಾಲೆ ಅಷ್ಟೊಂದು ಪರಿಣಾಮವನ್ನುಂಟುಮಾಡದು.
ಗಾನಪ್ರಧಾನವಾದ ಯಕ್ಷಗಾನದ ಸಾಹಿತ್ಯವು ಚೆಂಡೆ ಮದ್ದಳೆಗಳ ಆರ್ಭಟದಲ್ಲಿ ಮುಳುಗಿಹೋಗುವುದನ್ನರಿತ ಕಾರಂತರ ಹೊಸ ಚಿಂತನೆಯಲ್ಲಿ ಧನಾತ್ಮಕವಾದ ಮತ್ತು ಋಣಾತ್ಮಕವಾದ ಎರಡೂ ಅಂಶಗಳಿವೆ. ಯಕ್ಷಗಾನದ ಅನನ್ಯತೆ ಇರುವುದೇ ಭಾಮಿನಿ, ವಾರ್ಧಕಗಳನ್ನುಳಿದು ಪ್ರತಿ ಪದ್ಯದ ಆರಂಭ ಮತ್ತು ಕೊನೆಗಳಲ್ಲಿ ಮುಕ್ತಾಯ ಎಂಬ ತಾಳಬಂಧವಿರುವುದು. ಕಾರಂತರ ಬ್ಯಾಲೆಯಲ್ಲಿ ಮುಕ್ತಾಯವನ್ನು, ಅದರ ಕುಣಿತವನ್ನು ಮೊಟಕುಗೊಳಿಸಿದ ಪರಿ ಅಚ್ಚರಿ ಹುಟ್ಟಿಸುತ್ತದೆ. ರಂಗಪ್ರಯೋಗವನ್ನು ಮರು ನಿರ್ದೇಶಿಸಿದ ವಿ| ಸುಧೀರ್ ರಾವ್ ಕೊಡವೂರು ಅವರೇ ಭಾಗವತರಾಗಿರುವುದು ಪರಿಣಾಮಕಾರಿ ಪ್ರದರ್ಶನಕ್ಕೆ ಪೂರಕವಾಗಿದೆ. ಮದ್ದಳೆಯಲ್ಲಿ ದೇವದಾಸ್ ರಾವ್ ಕೂಡ್ಲಿ, ಚೆಂಡೆಯಲ್ಲಿ ರಾಮ ಬಾಯಿರಿ ಕೂರಾಡಿ, ವಯಲಿನ್ ಮತ್ತು ಸ್ಯಾಕ್ಸ್‌ಫೋನ್‌ಗಳಲ್ಲಿ ರವಿಕುಮಾರ್ ಮೈಸೂರು, ಹರಿದಾಸ್ ಗೋಗ್ರ ಒಳ್ಳೆಯ ಸಾಥ್ ನೀಡಿದ್ದಾರೆ.
ಕಾರಂತರೊಂದಿಗೆ ಹತ್ತಿರದಲ್ಲಿ ಪಳಗಿದ ಹೆಚ್ಚಿನ ಕಲಾವಿದರಿರುವುದು ಅಂದು ನಳಚರಿತ್ರೆಯಂಥ ಪ್ರಸಂಗ ಯಶಸ್ವಿಯಾಗಲು ಸಾಧ್ಯವಾಯಿತು ಎನ್ನಬಹುದು. ನಳನಾಗಿ ಕೃಷ್ಣಮೂರ್ತಿ ಉರಾಳ, ದಮಯಂತಿಯಾಗಿ ರಾಧಾಕೃಷ್ಣ ಉರಾಳ, ಪುಷ್ಕರ ಮತ್ತು ಋತುಪರ್ಣನಾಗಿ ಶ್ರೀಧರ ಕಾಂಚನ್, ಬಾಹುಕನಾಗಿ ಶ್ರೀನಿವಾಸ ಸಾಸ್ತಾನ, ಬ್ರಾಹ್ಮಣ ಮತ್ತು ಸುದೇವನಾಗಿ ಪ್ರತೀಶ್ ಬ್ರಹ್ಮಾವರ, ಚಂದ್ರಸೇನ ಮತ್ತು ಚೈದ್ಯರಾಜನಾಗಿ ರಮೇಶ ಆಡುಕಟ್ಟ, ಶನಿಯಾಗಿ ಉಮೇಶ ಸುವರ್ಣ ಉಪ್ಪಿನಕೋಟೆ, ಕಿರಾತನಾಗಿ ಬಸವ, ಚೈದ್ಯ ರಾಣಿಯಾಗಿ ಮುಗ್ವಾ ಗಣೇಶ್, ಬ್ರಾಹ್ಮಣ ಮತ್ತು ಭೀಮಕನಾಗಿ ವಿಶ್ವನಾಥ ಶೆಟ್ಟಿ, ಹಿನ್ನೆಲೆಯಲ್ಲಿ ಅಜಿತ್ ಅಂಬಲಪಾಡಿ ಮತ್ತು ನಾರಾಯಣ ಪ್ರದರ್ಶನದ ಯಶಸ್ಸಿಗೆ ಕಾರಣರಾದರು.
ಕಾರಂತರ ಇಂತಹ ಪ್ರಯೋಗಗಳು ಮುಖ್ಯವಾಗಿ ಯಕ್ಷಗಾನದ ಹೊರವಲಯದ ಪ್ರೇಕ್ಷಕರನ್ನು ತಲುಪುವ ಉದ್ದೇಶದಿಂದ ಸಿದ್ಧವಾದವುಗಳು. ಹಿಮ್ಮೇಳ, ಆಹಾರ್ಯ, ರಂಗಕ್ರಿಯೆಗಳಲ್ಲಿ ಆದ ಕಾರಂತರ ಇಂತಹ ಪ್ರಯತ್ನ ಒಂದರ್ಥದಲ್ಲಿ ಗೆದ್ದು ಸೋತಿದೆ. ಪ್ರಯೋಗಶೀಲ ಮನಸ್ಸುಗಳಿಗೆ ಕಾರಂತರ ಚಿಂತನೆಗಳು ಹೊಸ ದಾರಿಯನ್ನು, ಸಾಧ್ಯತೆಗಳನ್ನು ತೋರಿಕೊಟ್ಟಿವೆ ಎಂಬುದು ಸತ್ಯ. ಇಷ್ಟೊಂದು ಚಿಂತನೆಗೆ ದಾರಿ ಮಾಡಿಕೊಟ್ಟ ಕಲಾದರ್ಶಿನಿ ತಂಡ ಇನ್ನಷ್ಟು ರಂಗಪ್ರಯೋಗಗಳಲ್ಲಿ ಸದಾ ತೊಡಗಿಕೊಂಡಿರಲಿ.
ಸುಜಯೀಂದ್ರ ಹಂದೆ ಎಚ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.