ರೈತ ಶೋಷಣೆ ತೆರೆದಿಟ್ಟ ಬಾವಿ ಕಳೆದಿದೆ
ಶೋಷಣೆಯ ಎರಡು ಮುಖದ ಅನಾವರಣ
Team Udayavani, May 10, 2019, 5:50 AM IST
ಸಾಲ ಮನ್ನಾವಾಗುವುದೆಂಬ ಭರವಸೆಯಲ್ಲಿ ನಿರ್ಮಾಣವಾಗದೆ ಇದ್ದ ಬಾವಿಯನ್ನು ದಾಖಲೆಯಲ್ಲಿ ನಿರ್ಮಿಸಲಾಗಿದೆಯೆಂದು ಪ್ರಮಾಣೀಕರಿಸಿ ಸಣ್ಣ ಮೊತ್ತವನ್ನು ರೈತನಿಗೆ ನೀಡಿ ಮಿಕ್ಕಿದ್ದನ್ನು ಕಬಳಿಸುವ ಗ್ರಾಮಸೇವಕ ಮತ್ತು ಇಂಜಿನಿಯರ್‌ನ ದುರಾಲೋಚನೆ
ಕಂಡು ರೈತನಿಗೆ ದಿಕ್ಕೇ ತೋಚದಂತಾಗುತ್ತದೆ.
ಡಾ| ಬಿ. ಆರ್. ಅಂಬೇಡ್ಕರ್ ಸಂಘ(ರಿ.) ಬೈಂದೂರು ಇದರ ಸದಸ್ಯರು ಸಂಘದ ಬೆಳ್ಳಿಹಬ್ಬದ ಆಚರಣೆಯ ಸಂದರ್ಭದಲ್ಲಿ ರೈತ ಹಿತಕ್ಕಾಗಿ ಇರುವ ಯೋಜನೆಗಳಲ್ಲಿ ನಡೆಯುವ ಶೋಷಣೆಗೆ ಬೆಳಕು ಹಿಡಿಯುವ “ಬಾವಿ ಕಳೆದಿದೆ’ ನಾಟಕವನ್ನು ಪ್ರದರ್ಶಿಸಿದರು. ಶ್ರೀನಿವಾಸ ಪ್ರಭು, ಬೆಂಗಳೂರು ಅವರ ರಚನೆಯ ನಾಟಕವನ್ನು ವಾಸುದೇವ ಶೆಟ್ಟಿಗಾರ್ ಕುಂದಾಪುರ ಕನ್ನಡಕ್ಕೆ ರೂಪಾಂತರಿಸಿ¨ªಾರೆ. ಸಾಲ ಮನ್ನಾದ ನೆಪದಲ್ಲಿ ಸರಕಾರಿ ನೌಕರರು ನಡೆಸುವ ರೈತರ ಶೋಷಣೆಯ ಕಥಾ ವಸ್ತುವುಳ್ಳ ರಂಗ ಪ್ರಯೋಗದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ವಕೀಲನೋರ್ವ ರೈತನ ಮಾರ್ಗದರ್ಶಕನಾಗಿ ಆದರ್ಶ ಮೆರೆಯುತ್ತಾನೆ.
ಸಾಲ ಮನ್ನಾವಾಗುವುದೆಂಬ ಭರವಸೆಯಲ್ಲಿ ನಿರ್ಮಾಣವಾಗದೆ ಇದ್ದ ಬಾವಿಯನ್ನು ಸರಕಾರಿ ದಾಖಲೆಯಲ್ಲಿ ನಿರ್ಮಿಸಲಾಗಿದೆ ಯೆಂದು ಪ್ರಮಾಣೀಕರಿಸಿ, ಸಾಲದ ಹಣದಲ್ಲಿ ಸಣ್ಣ ಮೊತ್ತವನ್ನು ಮಾತ್ರ ರೈತನಿಗೆ ನೀಡಿ ಮಿಕ್ಕಿದ್ದನ್ನು ಕಬಳಿಸುವ ಗ್ರಾಮಸೇವಕ ಮತ್ತು ಇಂಜಿನಿಯರ್‌ನ ದುರಾಲೋಚನೆ ಬ್ಯಾಂಕ್ ನೋಟೀಸ್ ಬಂದಾಗ ಗೊತ್ತಾದಾಗ ಬಡ ರೈತನಿಗೆ ದಿಕ್ಕೇ ತೋಚದಂತಾಗುತ್ತದೆ. ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುವ ವೆಂಕನ ಕುಂದಗನ್ನಡದ ನಿರರ್ಗಳ ವಾಗ್ಬಾಣಗಳು ಹಾಸ್ಯದ ಹೊನಲನ್ನೇ ಹರಿಸುತ್ತದೆ.
ಬಾವಿ ಕಳೆದು ಹೋಗಿದೆಯೆಂದು ದೂರು ದಾಖಲಿಸಲು ಪಟ್ಟು ಹಿಡಿದ ಮುಗ್ಧ ವೆಂಕನ ತರ್ಕ ಸಂಗತ ಮಾತುಗಳಿಂದ ಬೆಚ್ಚಿ ಬೀಳುವ ಇನ್ಸ್‌ಪೆಕ್ಟರ್, ಹೆದರಿಸಿ ಬೆದರಿಸಿ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಡಲು ಹವಣಿಸುವ ಗ್ರಾಮಸೇವಕ-ಇಂಜಿನಿಯರ್‌ನನ್ನು ತನ್ನ ದೇಸೀ ಅಂದಾಜಿನಲ್ಲಿ ಕಂಗಾಲಾಗಿಸುವ ವೆಂಕನ ವಾದದ ವೈಖರಿ ರಂಜಿಸುತ್ತದೆ. ವೆಂಕ (ಗೋಪಾಲ) ಮತ್ತು ಆತನ ಪತ್ನಿ ಕುಪ್ಪುವಿನ (ದಯಾನಂದ್) ಗ್ರಾಮೀಣ ಶೈಲಿಯ ಸಂಭಾಷಣೆಗಳು , ದೈವ ನರ್ತನ ಗ್ರಾಮೀಣರ ಬದುಕಿನ ಒಳಹೊರಗನ್ನು ತೆರೆದಿಡುತ್ತದೆ. ಭ್ರಷ್ಟಾಚಾರದ ವಿರುದ್ಧ ಕಾನೂನು ಸಮರ ಸಾರುವಂತೆ ಪ್ರೇರೇಪಿಸುವ ವಕೀಲರ (ರೋಶನ್) ಗಾಂಭೀರ್ಯ, ಪ್ರಬುದ್ಧ ನಡೆನುಡಿ, ಪರಿಪಕ್ವ ವ್ಯಕ್ತಿತ್ವ ಪ್ರಸ್ತುತಪಡಿಸಿತು.
ಕೋರ್ಟ್ ಮಾರ್ಷಲ್
ಎರಡನೇ ದಿನ ಸುವರ್ಣ ಪ್ರತಿಷ್ಠಾನ ಮಂಗಳೂರು ಅಭಿನಯದ ಸೇನೆಯ ಆಂತರಿಕ ನ್ಯಾಯ ವ್ಯವಸ್ಥೆಯ ವಾಸ್ತವತೆ-ವಿಡಂಬನೆ ಆಧಾರಿತ “ಕೋರ್ಟ್ ಮಾರ್ಷಲ್’ ಪ್ರದರ್ಶನಗೊಂಡಿತು. ತ್ವರಿತ ವಿಚಾರಣೆಗಾಗಿ ಪ್ರಸಿದ್ಧವಾಗಿರುವ ಸೇನಾ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯ ಪ್ರಾತ್ಯಕ್ಷಿಕೆ ಹಾಗೂ ಸೈನ್ಯ ಶಿಸ್ತಿನ ಪರಿಚಯ ಮಾಡಿಸುವ ರೋಚಕ ನಾಟಕ ಇದಾಗಿದೆ. ಚೈನ್ ಆಫ್ ಕಮಾಂಡ್ ಮತ್ತು ರ್‍ಯಾಂಕ್ ಆಧಾರಿತ ಶ್ರೇಣೀಕೃತ ವ್ಯವಸ್ಥೆಯ ಸೇನೆಯ ನ್ಯಾಯಾಲಯದಲ್ಲಿ ನಡೆಯುವ ವಾಗ್ವಾದ,ಹೆಜ್ಜೆಹೆಜ್ಜೆಗೂ ಕಾಣುವ ಸೈನ್ಯ ಶಿಸ್ತು ಆಸಕ್ತಿ ಹೆಚ್ಚಿಸುತ್ತದೆ.
ಮೇಲಧಿಕಾರಿಗಳ ಮೇಲೆ ಗುಂಡು ಹಾರಿಸಿ ಓರ್ವ ಅಧಿಕಾರಿಯ ಸಾವಿಗೆ ಹಾಗೂ ಇನ್ನೋರ್ವ ಅಧಿಕಾರಿ ಕ್ಯಾಪ್ಟನ್ ಕಪೂರ್ ಗಂಭೀರ ರೂಪದಲ್ಲಿ ಗಾಯಗೊಳ್ಳುವಂತೆ ಮಾಡಿದ, ತನ್ನ ಅಪರಾಧವನ್ನು ಅದಾಗಲೇ ಒಪ್ಪಿ ಕೊಂಡಿರುವ ಜವಾನ ರಾಮಚಂದ್ರನಿಗೆ ಮರಣದಂಡನೆಗಿಂತ ಕಡಿಮೆ ಶಿಕ್ಷೆ ಸರಿಯಲ್ಲ ಎನ್ನುವ ಪೂರ್ವಾಗ್ರಹದೊಂದಿಗೆ ಕೋರ್ಟ್ ಮಾರ್ಷಲ್ ಕಲಾಪ ಪ್ರಾರಂಭಿಸುವ ನ್ಯಾಯಾಲಯದ ಅಧ್ಯಕ್ಷಾಧಿಕಾರಿ ಹಾಗೂ ಸದಸ್ಯರಿಗೆ ತನ್ನ ನಿಷ್ಠುರ ಹಾಗೂ ಮೊನಚಾದ ಮಾತುಗಳಿಂದ ಕೊಲೆಗೆ ಕಾರಣವಾದ ಅಂಶಗಳನ್ನು ಎಳೆಎಳೆಯಾಗಿ ಬಿಡಿಸಿ ಸತ್ಯದರ್ಶನ ಮಾಡಿಸುವ ಕ್ಯಾಪ್ಟನ್ ವಿಕಾಸ್ ರಾಯ್ ವಾದ ವೈಖರಿ ನಿಬ್ಬೆರಗಾಗಿಸುವಂತಹದು. ತನ್ನ ಶೌರ್ಯ ಪರಾಕ್ರಮ ಹಾಗೂ ನ್ಯಾಯನಿಷ್ಟುರ ಸ್ವಭಾವದ ಕುರಿತು ಅತಿ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಸೇನಾ ನ್ಯಾಯಾಲಯದ ಅಧ್ಯಕ್ಷ ಕರ್ನಲ್ ಸೂರಜ್ ಸಿಂಗ್‌ರನ್ನು ಹರಿತ ಮಾತುಗಳಿಂದ ಹುರಿಗೊಳಿಸುವ, ಜವಾನ್ ರಾಮಚಂದ್ರನನ್ನು ಅತ್ಯಂತ ಕೀಳಾಗಿ ಕಂಡು ಆತನ ಮನಸ್ಸು ರೊಚ್ಚಿಗೇಳುವಂತೆ ಮಾಡಿದ ಕ್ಯಾಪ್ಟನ್ ಕಪೂರ್ ತನ್ನ ತಪ್ಪನ್ನು ತಾನೇ ಒಪ್ಪಿಕೊಳ್ಳುವಂತೆ ಮಾತಿನ ಖೆಡ್ಡಾ ತೋಡಿ ಬೀಳಿಸುವ ರಾಮಚಂದ್ರನ್ ಪರ ವಕೀಲ ಕ್ಯಾಪ್ಟನ್ ರಾಯ್ ಅವರ ಜಾಣ್ಮೆ ತಲೆದೂಗುವಂತೆ ಮಾಡುತ್ತದೆ.
ಬೈಂದೂರು ಚಂದ್ರಶೇಖರ ನಾವಡ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.