ಭಕ್ತಿ -ಪ್ರೀತಿ ಪರಾಕಾಷ್ಠೆಯ ಕಥಕ್ ಸಂಭ್ರಮ
Team Udayavani, Jun 8, 2018, 6:00 AM IST
ಬೆಂಗಳೂರಿನ ನೂಪುರ್ ಪರ್ಫಾಮಿಂಗ್ ಆರ್ಟ್ಸ್ ಸೆಂಟರ್‌ನ ಹರಿ ಮತ್ತು ಚೇತನಾ ದಂಪತಿಯಿಂದ ಮಂಗಳೂರಿನ ಪುರಭವನದಲ್ಲಿ “ಕಥಕ್ ಸಂಭ್ರಮ’ ಪ್ರದರ್ಶನಗೊಂಡಿತು. ಉತ್ತರ ಭಾರತದ ಶಾಸ್ತ್ರೀಯ ನೃತ್ಯ ಕಲೆಯನ್ನು ಈ ದಂಪತಿ ವಿಭಿನ್ನ ರೂಪದಲ್ಲಿ ಪ್ರಸ್ತುತಪಡಿಸಿದರು. ಪ್ರದರ್ಶನದುದ್ದಕ್ಕೂ ಲಕ್ನೋ ಮತ್ತು ಜೈಪುರದ ಕಥಕ್ ಕಲಾಭಿವ್ಯಕ್ತಿಯ ಸಂಯೋಗವನ್ನು ತೋರಿಸಲಾಯಿತು. ಕಲಾಭಕ್ತಿ ಸಾರುವ ಓಂಕಾರ ನರ್ತನದೊಂದಿಗೆ ಕಥಕ್ ಸಂಭ್ರಮವನ್ನು ಪ್ರಾರಂಭಿಸಲಾಯಿತು. ಉಪನಿಷತ್‌ಗಳಿಂದ ಆಯ್ದ ಓಂಕಾರ ಗೀತೆಗೆ ತಂಡದ ಎಲ್ಲ ಸದಸ್ಯರು ಮನೋಜ್ಞವಾಗಿ ನರ್ತಿಸಿದರು.
ಜುಗಲ್ ಬಂಧಿಯಲ್ಲಿ ತಾಳ್‌ವಾದ್ಯ ಪ್ರದರ್ಶನ ನೆರೆದವರ ಹುಬ್ಬೇರಿಸುವಂತೆ ಮಾಡಿತು. ಹರಿ-ಚೇತನಾ ದಂಪತಿಯೊಂದಿಗೆ ತಂಡದಲ್ಲಿದ್ದ ಅಮೃತಾ ಸೋಮಯ್ಯ, ಅಕ್ಷತಾ ಸೋಮಯ್ಯ, ಯಶಸ್ವಿನಿ, ಅಶ್ವತಿ ನಾಯರ್, ಸುಪ್ರಿಯಾ ರೆಡ್ಡಿ, ಸಂಯುಕ್ತಾ, ಪ್ರಿಯಾಂಕಾ, ವರುಣಿ, ಗಾಯತ್ರಿ ಲಾವಣ್ಯಾ, ಮನು, ಸಾವನ್ ಅವರು ತಾಳಕ್ಕೆ ತಕ್ಕಂತೆ ಸವಾಲ್-ಜವಾಬ್ ಪರಿಯಲ್ಲಿ ಹೆಜ್ಜೆ ಹಾಕಿದ್ದು, ನೋಡುಗರನ್ನು ಮಂತ್ರಮುಗ್ಧಗೊಳಿಸಿತು. ಈ ಸೃಷ್ಟಿಯಲ್ಲಿ ಪ್ರಕೃತಿ ಮತ್ತು ಭಗವಂತನೇ ಎಲ್ಲಕ್ಕೂ ಮೂಲ ಎಂದು ಸಾರುವ ಸರ್‌ಗಮ್ ಪ್ರದರ್ಶನವೂ ತಂಡದ ಸರ್ವ ಕಲಾವಿದರ ಅಭಿನಯ ಚಾರ್ತುರ್ಯದಿಂದ ಕಲಾ ಲೋಕದಲ್ಲಿ ಹೊಸ ಭರವಸೆಯನ್ನು ಸೃಷ್ಟಿಸಿತು ಎಂದರೆ ಅತಿಶಯೋಕ್ತಿ ಎನಿಸದು. ಏಕೆಂದರೆ ಇಲ್ಲಿ ಹರಿ-ಚೇತನಾ ದಂಪತಿ ಹೊರತುಪಡಿಸಿದರೆ ಉಳಿದೆಲ್ಲರೂ ಇನ್ನೂ ಕಲಿಕಾ ಹಂತದಲ್ಲಿರುವವರೇ. ಪುಟ್ಟ ಬಾಲಕ ಮನುವಿನ ಕಲಾ ಪ್ರತಿಭೆ ಹಲವು ಕಲಾಪ್ರೇಮಿಗಳ ಆಕರ್ಷಣೆಯ ಕೇಂದ್ರ ಬಿಂದುವಾಯಿತು.
ಸುಮಾರು ಐವತ್ತೆದು ನಿಮಿಷಗಳ ಕಥಕ್ ನೃತ್ಯ ಪ್ರದರ್ಶನದಲ್ಲಿ ವಿಶೇಷವಾಗಿ ಆಕರ್ಷಣೆಗೆ ಕಾರಣವಾದದ್ದು ಹರಿ-ಚೇತನಾ ದಂಪತಿಯ ಮಧುರ್ ಮಾಧವ ನೃತ್ಯ. ಕೃಷ್ಣ-ರಾಧೆಯರ ಡಿವೈನ್ ಲವ್‌ನ್ನು ಸಾರುವ ವಾತಿ ತಿರುನಾಳ್ ರಾಜರ ಕೃತಿಯನ್ನು ಕಥಕ್‌ನಲ್ಲಿ ಅಳವಡಿಸಿಕೊಂಡು ಹೆಜ್ಜೆ ಹಾಕಿದ ದಂಪತಿ ಸಾಕ್ಷಾತ್ ಕೃಷ್ಣ-ರಾಧೆಯೇ ಭುವಿಗಿಳಿದು ಬಂದಂತೆ ಭಕ್ತಿ ಮತ್ತು ಪ್ರೀತಿಯ ಕಡಲಿನಲ್ಲಿ ಕಲಾಪ್ರೇಮಿಗಳನ್ನು ತೇಲಾಡಿಸಿದರು. ನೃತ್ಯದುದ್ದಕ್ಕೂ ದಂಪತಿ ಡಿವೈನ್ ಲವ್‌ನ ಬಹುಮುಖೀ ಜಗತ್ತನ್ನು ಅನಾವರಣಗೊಳಿಸಿದರು. ಕೃಷ್ಣನ ಕುಚೇಷ್ಟೆ, ರಾಧೆ ಯಮುನಾ ನದಿಯಲ್ಲಿ ಆಟವಾಡುವುದು, ಚಿಕ್ಕ ಮಕ್ಕಳಂತೆ ಕೆನ್ನೆ ಹಿಂಡುವುದು, ಮುತ್ತಿಕ್ಕುವುದು, ಹುಸಿ ಮುನಿಸು, ಮತ್ತೆ ಪ್ರೇಮಲೋಕದಲ್ಲಿ ತೇಲಾಡುವುದು…ಒಟ್ಟಾರೆಯಾಗಿ ಭಕ್ತಿಯ ಪರಾಕಾಷ್ಠೆಯ ಜೊತೆಗೆ ಪ್ರೀತಿಯ ಮೊಗೆತವನ್ನು ಈ ಇಡೀ ಪ್ರದರ್ಶನ ಕಟ್ಟಿಕೊಟ್ಟಿತು. ಒಂದೇ ಆತ್ಮ, ಎರಡು ದೇಹ ಎಂಬಂತೆ ಕೃಷ್ಣ-ರಾಧೆಯ ಪ್ರೇಮದ ಲೀಲೆ ಈ ಪ್ರದರ್ಶನದಲ್ಲಿ ಕಟ್ಟಿಕೊಡುವ ಪ್ರಯತ್ನ ನಡೆಯಿತು.
ನಾನಾ ತಾಳಗಳನ್ನು ಸೇರಿಸಿಕೊಂಡು ಏಕತಾಳದೊಂದಿಗೆ ಹೆಜ್ಜೆ ಹಾಕುವ ತಾಳ್‌ಮಾಲ ಪ್ರದರ್ಶನವೂ ವಿಭಿನ್ನವಾಗಿ ಮೂಡಿಬಂತು. ಕೊನೆಯದಾಗಿ ಸುಮಾರು ಎಂಟು ಪದ್ಯಗಳನ್ನು ಸೇರಿಸಿ ಮಧುರಾಷ್ಟಕಂ ನೃತ್ಯವನ್ನು ಪ್ರದರ್ಶಿಸಲಾಯಿತು. ಮಧುರಾಷ್ಟಕಂ ನೃತ್ಯದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಕಾರ್ಯಕ್ರಮದುದ್ದಕ್ಕೂ ಕಲಾಪ್ರಿಯರಿಗೆ ಮನರಂಜನೆಯೊಂದಿಗೆ ಕಲಾಭಕ್ತಿಯ ಹೊಸ ಲೋಕದ ಪರಿಚಯವಾಯಿತೆಂದರೆ ತಪ್ಪಾಗದು. ಜೊತೆಗೆ ಇಡೀ ಪ್ರದರ್ಶನದಲ್ಲಿ ಶ್ರೀ ಕೃಷ್ಣ ಪರಮಾತ್ಮನ ಭಕ್ತಿ ಸಾನಿಧ್ಯ ತೆರೆದುಕೊಂಡಿತು. ಕಲಾವಿದರು ಧರಿಸಿದ ಬಟ್ಟೆಗಳಲ್ಲಿಯೂ ಒಂದೊಂದು ಅರ್ಥವಿತ್ತು. ಶ್ರೀಕೃಷ್ಣ ಕೊಳಲಿನ ನಾದಕ್ಕೆ ನವಿಲು ಗರಿಬಿಚ್ಚಿ ನರ್ತಿಸುವ ಉಲ್ಲೇಖಗಳು ಪುರಾಣಗಳಲ್ಲಿವೆ. ಅದಕ್ಕೆ ಸಮಾನಾಗಿ ಕಥಕ್ ನರ್ತನಕ್ಕೆ ಈ ತಂಡ ನವಿಲಿನ ಬಣ್ಣದ ಧಿರಿಸುಗಳನ್ನೇ ಧರಿಸಿ ಹೆಚ್ಚುಗಾರಿಕೆ ಮೆರೆಯಿತು.
ಕಾರ್ಯಕ್ರಮದಲ್ಲಿ ಕಥಕ್ ಪ್ರದರ್ಶನದಷ್ಟೇ ಮನ ಸೆಳೆದದ್ದು ಬೆಳಕಿನ ಬಣ್ಣದಾಟ. ಇಡೀ ವೇದಿಕೆಯಲ್ಲಿ ಬಣ್ಣಗಳೇ ನರ್ತನದಲ್ಲಿ ತೊಡಗಿರುವಂತೆ ಭಾಸವಾಯಿತು. ದ ಶಂಕರ್ ವಿಠಲ್ ಮೋಟಾರ್ ಸಂಸ್ಥೆಯ ಸಹಯೋಗದಲ್ಲಿ ಕರ್ಣಾಟಕ ಬ್ಯಾಂಕ್, ನಿಟ್ಟೆ ವಿವಿ, ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ ಮತ್ತು ಎಕ್ಸ್‌ಪರ್ಟ್ ಶಿಕ್ಷಣ ಸಂಸ್ಥೆಯ ಸಹಕಾರದೊಂದಿಗೆ ಕಾರ್ಯಕ್ರಮ ಜರಗಿತು.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.