ಮನರಂಜಿಸಿದ ಭೀಷ್ಮಾರ್ಜುನ
Team Udayavani, Feb 22, 2019, 12:30 AM IST
ಯಕ್ಷಮಿತ್ರರು (80) ಬಡಗಬೆಟ್ಟು ಆತ್ರಾಡಿ, ರೋಟರಿ ಕ್ಲಬ್ ಮಣಿಪಾಲ ಟೌನ್, ಓಂಕಾರ ಮಹಿಳಾ ಮಂಡಳಿ ಮತ್ತು ಕಬ್ಯಾಡಿ ಫ್ರೆಂಡ್ಸ್ ಇದರ ಜಂಟಿ ಆಶ್ರಯದಲ್ಲಿ ಭೀಷ್ಮಾರ್ಜುನ ತಾಳಮದ್ದಳೆ ಕಬ್ಯಾಡಿ ದುರ್ಗಾಂಬಾಭವಾನಿ ದೇವಸ್ಥಾನದಲ್ಲಿ ಇತ್ತೀಚೆಗೆ ನಡೆಯಿತು.
ಸಂಧಾನ ವಿಫಲವಾಗಿ ಕೃಷ್ಣನಿಗೆ ಧುರವೀಳ್ಯವನ್ನಿತ್ತ ದುರ್ಯೋಧನನು ಯುದ್ಧ ಆರಂಭದ ಹಿಂದಿನ ದಿನದಂದು ಸೈನ್ಯದ ಸೇನಾಧಿಪತ್ಯವನ್ನು ಯಾರಿಗೆ ಕೊಡುವುದು ಎಂದು ಯೋಚಿಸಲು ಅರಸ ಬಿಡು ಚಿಂತೆಯ ನಾನಿದ್ದೇನೆ ಎಂದು ಭರವಸೆ ಕೊಡುತ್ತಾನೆ ಕರ್ಣ. ದುರ್ಯೋಧನನಾಗಿ ಪೆರ್ಮುದೆ ಜಯಪ್ರಕಾಶ್ ಶೆಟ್ಟರು,ಕರ್ಣನಾಗಿ ಸಂಯೋಜಕ ಆತ್ರಾಡಿ ವಿಶ್ವನಾಥ ನಾಯಕರು ಪಾತ್ರ ನಿರ್ವಹಿಸಿದರು.ಇಲ್ಲಿಂದ ತಾಳಮದ್ದಳೆ ಪ್ರಾರಂಭವಾಗುತ್ತದೆ. ಆಚಾರ್ಯ ಭೀಷ್ಮರಲ್ಲಿ ಮೊದಲು ಕೇಳಿ ನಂತರ ನಿರ್ಧರಿಸೋಣ ಎಂದು ಕರ್ಣನಲ್ಲಿ ಹೇಳಿ ಪಿತಾಮಹರ ಅಂತಃಪುರಕ್ಕೆ ಬರುತ್ತಾನೆ. ಭೀಷ್ಮರಾಗಿ ಸುಣ್ಣಂಬಳ ವಿಶ್ವೇಶ್ವರ ಭಟ್ ಅವರದ್ದು ಪ್ರಬುದ್ಧ ಅರ್ಥದಾರಿಕೆ. ಕೌರವನಾಗಿ ಪೆರ್ಮುದೆ ಯವರೂ ದುರ್ಯೋಧನನ ಛಲವನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದರು. ಕೃಷ್ಣನಾಗಿ ವಿ|ಹಿರಣ್ಯ ವೆಂಕಟೇಶ್ ಭಟ್ಟರ ಪಾತ್ರ ಪ್ರಸ್ತುತಿ ವಿದ್ವತೂ³ರ್ಣವಾಗಿತ್ತು. ಭೀಷ್ಮರು ಕೆಲವೊಂದು ಪ್ರಶ್ನೆಗಳನ್ನು ಕೇಳಲು ಅದಕ್ಕೆ ತಕ್ಕ ಪರಿಹಾರದ ಉತ್ತರ ಕೃಷ್ಣನಿಂದ ದೊರಕುತ್ತದೆ.
ಅರ್ಜುನನಾಗಿ ಹವ್ಯಾಸಿ ಅರ್ಥಧಾರಿ ಸಚ್ಚಿದಾನಂದ ನಾಯಕ್ ಬೆಲ್ಪತ್ರೆಯವರ ಉತ್ತಮವಾದ ನಿರ್ವಹಣೆ. ಭೀಷ್ಮರನ್ನು ಈ ದಿನ ಗೆಲ್ಲುತ್ತೇನೆಂದು ಪ್ರತಿಜ್ಞೆಗೈದು ಪಿತಾಮಹ ಎನ್ನುವ ಭಾವನೆಗಿಂತಲೂ ಯುದ್ಧ ಬದ್ಧತೆಯೇ ಮುಖ್ಯವಾಗಿ ಅವರ ಧನುಸ್ಸು ಮುರಿಯುವಂತೆ ಮಾಡಿ ಯುದ್ಧದ ಪರಿಯನ್ನು ತೋರಿಸಿದ ರೀತಿ ಸೆಳೆಯಿತು. ಅಜೇರು ಕಾವ್ಯಶ್ರೀಯವರ ಭಾಗವತಿಕೆ, ಶ್ರೀಪತಿ ನಾಯಕ್ ಅಜೇರು ಇವರ ಮದ್ದಳೆ, ದಿವ್ಯಶ್ರೀ ಸುಬ್ರಹ್ಮಣ್ಯ ರಾವ್ ಇವರ ಚೆಂಡೆಯೊಂದಿಗಿನ ಹಿಮ್ಮೇಳವು ತಾಳಮದ್ದಳೆ ಮೇಳೈಸುವಿಕೆಗೆ ಕಾರಣವಾಯಿತು.
ಸಂಕರ್ಷಣ ಉಪಾಧ್ಯಾಯ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.