ಗೃಹ ಸಂಗೀತದಲ್ಲಿ ಭೂಮಿಕಾ ಝಲಕ್
Team Udayavani, Apr 5, 2019, 6:00 AM IST
ಇತ್ತೀಚೆಗೆ ರಾಗಧನದ ಆಶ್ರಯದಲ್ಲಿ ನಿತ್ಯಾನಂದ ಪಡ್ರೆ ಅವರ ಆತಿಥ್ಯದಲ್ಲಿ ಗೋವಿಂದ ಉಪಾಧ್ಯಾಯ ಅವರ ನಿವಾಸದಲ್ಲಿ ಕು| ಭೂಮಿಕಾ ಮಧುಸೂದನ್ ಬೆಂಗಳೂರು ಅವರ ಕರ್ನಾಟಕ ಸಂಗೀತ ಕಛೇರಿ ನಡೆಯಿತು. ರೀತಿಗೌಳ ವರ್ಣದೊಂದಿಗೆ ಹಾಡುಗಾರಿಕೆ ಆರಂಭವಾಯಿತು. ಹಂಸಧ್ವನಿಯ ವಾತಾಪಿಯಲ್ಲಿ ಸಣ್ಣ ಸ್ವರಪ್ರಸ್ತಾರ, ಧೇನುಕಾದ ತೆಲಿಯಲೇದು ರಾಮದ ಬಳಿಕ ಸಾವೇರಿ ರಾಗದಲ್ಲಿ ಶ್ರೀ ಕಾಮಕೋಟಿಯನ್ನು ಹಾಡಿದರು. ಈ ಕೃತಿಯ ಪ್ರಸ್ತುತಿಯಲ್ಲಿ ಆಲಾಪನೆಯಲ್ಲಿ, ನೆರವಲ್ ಮತ್ತು ಸ್ವರ ಕಲ್ಪನೆೆಗಳಲ್ಲಿÉ ಅವರ ಪರಿಶ್ರಮ ವ್ಯಕ್ತವಾಯಿತು. ರಾಗಂ ತಾನಂ ಪಲ್ಲವಿಗಾಗಿ ಷಣ್ಮಖ ಪ್ರಿಯ ರಾಗವನ್ನು ಆಯ್ದುಕೊಂಡು ಪಲ್ಲವಿಯನ್ನು “ಕಂಜದಳಾಯತಾಕ್ಷಿ’ ಎನ್ನುವ ಸಾಹಿತ್ಯದೊಂದಿಗೆ ತ್ರಿಶ್ರತ್ರಿಪುಟ ತಾಳದಲ್ಲಿ ಅತೀತ ಕಾಲ ಎಡಪ್ಪಿನಲ್ಲಿ ಪ್ರಸ್ತುತ ಪಡಿಸಲಾಯಿತು. ತಾನ ಹಾಡುವಿಕೆಯ ಕೊನೆಯಲ್ಲಿ ಮೂರನೇ ಕಾಲದ ವೇಗದಲ್ಲಿ ಚುರುಕಾಗಿ ತಾನ ಹಾಡಿದ್ದು ಹಾಗೂ ಕಷ್ಟಕರವಾದ ಅತೀತ ಎಡಪ್ಪಿನಲ್ಲಿ ಹಾಡಿದ್ದೂ ವಿಶೇಷವಾಗಿತ್ತು. ಕೇಳುಗರಿಗೆ ಇಲ್ಲಿ ಇವರ ವಿದ್ವತ್ತಿನ ಪರಿಚಯವಾಯಿತು. ರೇವತಿ ಹಾಗೂ ಮಧುಕಂಸ್ ರಾಗಗಳನ್ನು ರಾಗಮಾಲಿಕೆಯಾಗಿ ಕಲ್ಪನಾಸ್ವರಕ್ಕೆ ಬಳಸಿಕೊಳ್ಳಲಾಯಿತು. ಇವರು ಕಛೇರಿಯಲ್ಲಿ ಒಟ್ಟು ಮೂರು ದಾಸ ಕೀರ್ತನೆಗಳನ್ನು ಆಲಾಪನೆಯ ಪರಿಯಲ್ಲಿ ಉಗಾಭೋಗಗಳೊಂದಿಗೆ ಸೊಗಸಾಗಿ ನಿರೂಪಿಸಿದರು. ಆಹಿರ್‌ಭೈರವ್‌ನಲ್ಲಿ ಏಕೆ ಕಡೆಗಣ್ಣಿಂದ ನೋಡುವೆ, ಶುಭ ಪಂತುವರಾಳಿಯಲ್ಲಿ ಬಂಟನಾಗಿ ಬಾಗಿಲ ಕಾಯುವೆ ಹರಿಯೇ, ಸಿಂಧು ಭೈರವಿಯಲ್ಲಿ ಯಶೋದೆಯಮ್ಮಾ ಎನ್ನನು ಎತ್ತಿಕೊಳ್ಳಮ್ಮಾ ಇತ್ಯಾದಿಗಳು ಶೃಂಗಾರಯುತ ಪಲುಕು ಹಾಗೂ ಭಾವ ಪೂರ್ಣತೆಯ ಗಾಯನದೊಂದಿಗೆ ರಸಿಕರನ್ನು ಬಹುವಾಗಿ ರಂಜಿಸಿದುವು. ಗಾಯಕಿಗೆ ಕೇಳುಗರನ್ನು ತನ್ನ ಗಾಯನದತ್ತ ಸೆಳೆದುಕೊಳ್ಳಲು ಕೊಂಚ ಹೊತ್ತು ಹಿಡಿಯಿತಾದರೂ, ಮುಂದೆ ಹೋದಂತೆ ಕಛೇರಿ ಕಳೆಗಟ್ಟಿತು. ವಯೊಲಿನ್ ಪಕ್ಕವಾದ್ಯವನ್ನು ಜನಾರ್ದನ್ ಬೆಂಗಳೂರು ಅವರು ಚೆನ್ನಾಗಿ ನಿರ್ವಹಿಸಿದರು. ಪಲ್ಲವಿ ಹಾಡುವಿಕೆಯಲ್ಲಿ ಷಣ್ಮುಖಪ್ರಿಯ ರಾಗವನ್ನು ಬಹಳ ಚೆನ್ನಾಗಿ, ಕೊಂಚ ಭಿನ್ನವಾಗಿ ನುಡಿಸಿದರು. ನಿಕ್ಷಿತ್ ಟಿ. ಪುತ್ತೂರು ಅವರು ಸೊಗಸಾದ ಜತಿಗಳೊಂದಿಗೆ ಒಂದು ಉತ್ತಮ ತನಿ ಆವರ್ತನವನ್ನು ನೀಡಿದರು. ಒಟ್ಟಿನಲ್ಲಿ ಈ ಯುವ ಕಲಾವಿದರ ಕೂಡುವಿಕೆಯಲ್ಲಿ ಪೂರಕವಾದ ಒಂದು ಒಳ್ಳೆಯ ಕಛೇರಿಯನ್ನು ಕೆೇಳುವಂತಾಯಿತು.
ವಿದ್ಯಾಲಕ್ಷ್ಮೀ ಕಡಿಯಾಳಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.