ಕೃಷ್ಣನ ಸನ್ನಿಧಿಯಲ್ಲಿ ಚಿಣ್ಣರ ಕಲರವ
Team Udayavani, Dec 27, 2019, 12:42 AM IST
ಶ್ರೀಕೃಷ್ಣಮಠದಲ್ಲಿ ಶ್ರೀಕೃಷ್ಣಾಷ್ಟಮಿ ಸಮಯದಲ್ಲಿ ಒಂದೇ ದಿನ ಕೃಷ್ಣ ವೇಷಧಾರಿಗಳು ಸೇರಿದಾಗ ಚಿಣ್ಣರ ಕಲರವ ಕಂಡುಬಂದರೆ ಅದೇ ಕೃಷ್ಣ ನ ನಾಡಿನಲ್ಲಿ ಚಿಣ್ಣರ ಮಾಸಾಚರಣೆ ಸಂದರ್ಭ ನಿತ್ಯ ಚಿಣ್ಣರ ಕಲರವ ಕಂಡುಬಂತು.
2002ರಲ್ಲಿ ಪರ್ಯಾಯದ ಅವಧಿ ಶ್ರೀಕೃಷ್ಣಮಠದಿಂದ ಶಾಲಾ ಮಕ್ಕಳಿಗೆ ಮಧ್ಯಾಹ್ನದೂಟ ಯೋಜನೆಯನ್ನು ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಆರಂಭಿಸಿದಾಗ ಅದೇ ವರ್ಷ ಗ್ರಾಮೀಣ ಭಾಗದ ಮಕ್ಕಳಿಗೆ ಸಾಂಸ್ಕೃತಿಕ ಪ್ರತಿಭೆ ತೋರಿಸಲು ಅವಕಾಶ ಸಿಗಬೇಕೆಂದು ಚಿಣ್ಣರ ಸಂತರ್ಪಣೆ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ “ಚಿಣ್ಣರ ಮಾಸ’ವನ್ನು ಆರಂಭಿಸಿದರು. ಅಂದಿನಿಂದ ಪ್ರತಿವರ್ಷ ಚಿಣ್ಣರ ಮಾಸಾಚರಣೆ ನಡೆಯುತ್ತಿದೆ. ಈಗ ಪಲಿಮಾರು ಶ್ರೀಪಾದರ ಎರಡನೆಯ ಪರ್ಯಾಯದ ಕೊನೆಯ ಹಂತದಲ್ಲಿ ಮತ್ತೆ ಚಿಣ್ಣರ ಮಾಸಾಚರಣೆ ಸಂಪನ್ನಗೊಂಡಿತು. ಹೀಗೆ ಚಿಣ್ಣರ ಮಾಸಾಚರಣೆಗೂ ಒಂದು ಪರ್ಯಾಯ ಚಕ್ರ ಮುಗಿದಿದೆ.
ಒಟ್ಟು 130 ಶಾಲೆಗಳು ಯೋಜನೆಯಲ್ಲಿದ್ದರೂ ಅದರಲ್ಲಿರುವ ಹಾಸ್ಟೆಲ್‌ಗಳು, ವಿಶೇಷ ಶಾಲೆ, ಕಡಿಮೆ ಸಂಖ್ಯೆಯ ಶಾಲೆಗಳನ್ನು ಹೊರತುಪಡಿಸಿ 53 ಶಾಲೆಗಳ ಮಕ್ಕಳು ಚಿಣ್ಣರ ಮಾಸಾಚರಣೆಯಲ್ಲಿ ಪಾಲ್ಗೊಂಡರು.
ಕಂಗೀಲು ನೃತ್ಯ, ಕೋಲಾಟ, ಜನಪದ ನೃತ್ಯ, ಯಕ್ಷಗಾನ, ನಾಟಕ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಚಿಕ್ಕ ಚಿಕ್ಕ ಮಕ್ಕಳು ಆಡಿ ತೋರಿಸಿದರು. ನ. 14ರಂದು ಆರಂಭಗೊಂಡ ಮಾಸಾಚರಣೆ ಡಿ. 6ರ ವರೆಗೆನಡೆಯಿತು. ಪ್ರತಿನಿತ್ಯ ಸಂಜೆ 4 ಗಂಟೆಗೆ ಕಾರ್ಯಕ್ರಮ ಆರಂಭವಾಗುತ್ತಿತ್ತು. ಸುಮಾರು 40 ನಿಮಿಷಗಳವರೆಗೆ ಒಂದೊಂದು ಶಾಲೆಗಳಂತೆ ನಿತ್ಯ ಮೂರು ಶಾಲೆಗಳ ಮಕ್ಕಳು ನಲಿದು ತಮ್ಮ ಪ್ರತಿಭೆಗಳನ್ನು ತೋರಿಸಿದರು. ದೂರದೂರದ ಸುಮಾರು 2,500 ಮಕ್ಕಳು ಈ ಕಾರ್ಯಕ್ರಮದ ಮೂಲಕ ತಮ್ಮ ಸಾಮರ್ಥ್ಯವನ್ನು ಕೃಷ್ಣಾರ್ಪಣಗೊಳಿಸಿದರು. ಪ್ರತಿಯೊಂದು ಶಾಲೆಗಳ ವಿದ್ಯಾರ್ಥಿಗಳಿಗೆ ಬಂದು ಹೋಗುವ ಖರ್ಚು, ಪ್ರಸಾದ, ಪ್ರಮಾಣಪತ್ರವಲ್ಲದೆ ಪೆನ್ನು, ಪೆನ್ಸಿಲ್, ನೋಟ್ ಪುಸ್ತಕ, ಕಟ್ಟರ್ ಒಳಗೊಂಡ ಕಿಟ್ ನೀಡಲಾಯಿತು. ಉತ್ತಮ ಪ್ರದರ್ಶನ ನೀಡಿದ ಶಾಲೆಗಳಿಗೆ ವಿಶೇಷ ಬಹುಮಾನವನ್ನೂ ನೀಡಲಾಗುತ್ತಿದೆ. ಕಲಾವಿದರಾದ ರಮೇಶ್ ಮತ್ತು ಅಜಿತ್ ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.
ಮಟಪಾಡಿ ಕುಮಾರಸ್ವಾಮಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.