ಕೃಷ್ಣನ ಸನ್ನಿಧಿಯಲ್ಲಿ ಸರಯೂ ಚಿಣ್ಣರ ಕೃಷ್ಣನಾಟ
Team Udayavani, Jul 19, 2019, 5:00 AM IST
ಮಂಗಳೂರು ಕೋಡಿಕಲ್‌ನ ಸರಯೂ ಬಾಲ ಯಕ್ಷ ವೃಂದದ ಚಿಣ್ಣರು ಉಡುಪಿಯ ರಾಜಾಂಗಣದಲ್ಲಿ ದೇವತೆಗಳಾಗಿಯೂ, ದೊಡ್ಡ ಕಿರೀಟವನ್ನು ಹೊತ್ತುಕೊಂಡು ರಾಕ್ಷಸರಾಗಿಯೂ ಮೆರೆದರು. “ಶ್ರೀಕೃಷ್ಣ ಪಾರಮ್ಯ’ (ನರಕಾಸುರ-ಮೈಂದ-ದ್ವಿವಿದ) ಎಂಬ ಪ್ರಸಂಗವನ್ನು ಚೆನ್ನಾಗಿಯೇ ಆಡಿತೋರಿಸಿದರು. ಯಕ್ಷಗಾನಕ್ಕಿನ್ನೂ ಭವಿಷ್ಯವಿದೆ ಎಂಬುದನ್ನು ಈ ಮಕ್ಕಳ ಮೇಳದ ಸದಸ್ಯರು ಸಾಧಿಸಿ ತೋರಿಸಿದಂತಾಗಿದೆ. ಅದರಲ್ಲೂ ಮೈಂದ-ದ್ವಿವಿದ ಹಾಗೂ ಗರುಡ ಪಾತ್ರಗಳು ಪೈಪೋಟಿಯೋ ಎಂಬಂತೆ ರಂಗಸ್ಥಳ ಕಸುಬನ್ನು ತೋರಿ ನೆನಪಿನಲ್ಲಿ ಉಳಿದರು. ಗರುಡನ ಪಾತ್ರದ ಬಾಲಕನಂತೂ ಉತ್ತಮ ಪ್ರದರ್ಶನವನ್ನು ನೀಡಿ ಭರವಸೆಯ ಕಲಾವಿದನಾಗಿ ಮೂಡಿ ಬರುತ್ತಾನೆನ್ನುವುದರಲ್ಲಿ ಸಂಶಯವಿಲ್ಲ.
ಸಾಮಾನ್ಯವಾಗಿ ಪರಂಪರೆಯ ಒಡ್ಡೋಲಗ ಪದ್ಧತಿಗಳು ಮರೆಯಾದುವೋ ಎಂಬಂತಿದೆ. ಕಟೀಲಿನ ದುರ್ಗಾ ಮಕ್ಕಳ ಮೇಳದ ಕಲಾಪರ್ವದಲ್ಲಿ/ಕಮ್ಮಟಗಳಲ್ಲಿ ಮಾತ್ರ ಇದನ್ನು ಕಾಣಬಹುದಾಗಿದೆ. ಇಲ್ಲಿ ಮಕ್ಕಳು ಶ್ರೀಕೃಷ್ಣನ ಒಡ್ಡೋಲಗವನ್ನು ಶ್ರೀಕೃಷ್ಣನ ಸನ್ನಿಧಿಯಲ್ಲಿ ನಿಧಾನಗತಿಯಲ್ಲಿ (ಪ್ರಸಂಗದ ನಡೆಯಂತೆ) ಯಾವುದೇ ಗೊಂದಲಗಳಿಲ್ಲದೆ ನಡೆಸಿದರು. ಇಲ್ಲಿ ತೆರೆ ಹಿಡಿದವರನ್ನೂ ಅಭಿನಂದಿಸಬೇಕು. ತುಂಬಾ ನಾಜೂಕಿನಿಂದ ಆ ಕಾರ್ಯಕ್ರಮವನ್ನು ನಡೆಸಿದವರು ಜೀವನ್ ಅಮೀನ್ ಹಾಗೂ ನಚಿತ್ ಕೆ.ಯವರು.
ವಿಜಯಲಕ್ಷ್ಮೀಯವರು ಕೃಷ್ಣನಾದರೆ, ತೃಶಾ, ಸಂಜನಾ ಜೆ., ಪೂರ್ವಿ, ಪ್ರಥಮ್ ಅಂಚನ್‌ರವರು ಕೃಷ್ಣನ ಮಡದಿಯರಾದರು. ಅಕ್ಷಯ್ ಬಣ್ಣದ ದೊಡ್ಡ ಕೇಶಾವರಿಯೊಂದಿಗೆ ನರಕಾಸುರನಾದ. ಪವನ್ ರಾವ್, ಅದ್ವಿತ್, ಮಲ್ಲಿಕಾ ಜೆ, ಚಿರಾಗ್ ಆರ್.ಕೆ ಯವರು ನರಕಾಸುರನ ಸಹಾಯಕರಾದರು. ಗೌತಮ್ ದೇವದೂತನಾದರೆ, ಸಾನ್ವಿ ಜೆ., ಸಾಕ್ಷಾ ಆರ್. ಶೆಟ್ಟಿ ದೇವತೆಗಳಾದರು. ಮುರಾಸುರನಾಗಿ ಸುರೇಖಾ ಶೆಟ್ಟಿಯವರು ಆರ್ಭಟೆಯೊಂದಿಗೆ ಪ್ರವೇಶಿಸಿ ಪಾತ್ರ ಗೌರವ ಕಾಪಾಡಿಕೊಂಡರು. ಕೆಲವೊಂದು ಅಲಕ್ಷಿಸಬಹುದಾದ ತಪ್ಪುಗಳನ್ನು ಬಿಟ್ಟರೆ ಅತ್ಯುತ್ತಮ ತಂಡ ಪ್ರದರ್ಶನ ಇದಾಗಿತ್ತು.
ದೇವಿ ಪ್ರಕಾಶ್ ರಾವ್, ರಾಜೇಶ್ ಕಟೀಲು, ಮಧುಸೂದನ ಅಲೆವೂರಾಯರು ಹಿಮ್ಮೇಳದ ಅಂದವನ್ನು ಹೆಚ್ಚಿಸಿದರು. ದ್ವಿತೀಯಾರ್ಧದಲ್ಲಿ ಹರಿಚರಣ್ ಮತ್ತು ಸಾರ್ಥಕ್ ಶೆಣೈ ಪಗಡಿಯಲ್ಲಿ ಮೈಂದ-ದ್ವಿವಿದರಾದರು. ಪ್ರಥಮ್ ರೈ ಬಲರಾಮನ ಗತ್ತು ಗಾಂಭೀರ್ಯ ತೋರಿದರು. ತಮ್ಮನಿಂದ ತಪ್ಪಿಸಿಕೊಳ್ಳಲಾಗದೇ ಹಲಾಯುಧವನ್ನು ಕಳೆದುಕೊಂಡ ದುಃಖವನ್ನು ತಮ್ಮನಲ್ಲಿ ವಿವರಿಸುತ್ತಾ ನಿರ್ಗಮಿಸಿದರು. ಬೆಂಕಿ ಚೆಂಡಾಗಿ ಬಂದ ಚಿಂತನ್ ಆರ್.ಕೆ. ಗರುಡನಾಗಿ ಕೀಶರಿಂದ ಹೊಡೆಸಿಕೊಂಡನು. ಗರಿ ಕಳೆದುಕೊಂಡು ಉರಿ ತಾಳದೆ ಕೃಷ್ಣನಿಗೆ ಶರಣಾದ, ಗರ್ವಾಪಹಾರವಾಯಿತು. ಕೊನೆಗೆ ದಾಶರಥಿ ದರ್ಶನ ದೊಂದಿಗೆ ಕಥೆ ಮುಕ್ತಾಯವಾಯಿತು. ಗಮನಿಸಬೇಕಾದ ಅಂಶವೆಂದರೆ ಸಾಮಾನ್ಯವಾಗಿ ತೆಂಕಿನಲ್ಲಿ ಅನೇಕ ಪಾತ್ರಗಳನ್ನು ಅಲಕ್ಷಿಸಲಾಗುತ್ತದೆ. ಆದರೆ ಕೊನೆಗೆ ಶ್ರೀರಾಮದರ್ಶನದ ದೃಶ್ಯದಲ್ಲಿ ರುಕ್ಮಿಣಿ ಸೀತೆಯಾಗಿ ಕಾಣಿಸಿದಾಗ ಮೈಂದ-ದ್ವಿವಿದರಿಗೆ ದರ್ಶನ ಭಾಗ್ಯ ಲಭಿಸಿದ್ದು ಮೆಚ್ಚತಕ್ಕ ಅಂಶ.
ಪರಸತಿ-ಪರಧನಗಳಿಗೆ ಬಲಿಬಿದ್ದರೆ, ಆತ ಎಷ್ಟು ಪ್ರಭಾವಶಾಲಿ ಆದರೂ ಅಧಃಪತನವನ್ನು ಹೊಂದುತ್ತಾನೆ. ಷೋಡಶ ಸಹಸ್ರ ಸ್ತ್ರೀಯರನ್ನು ತಂದರೂ ಅವರ ಕಣ್ಣೀರೇ ಮುಳುವಾಯಿತು. ಆ ಹೆಣ್ಣು ಮಕ್ಕಳಿಗೆ ಶ್ರಿ ಕೃಷ್ಣ ಸನಾಥನಾದ. ಎಳವೆಯಲ್ಲೇ ಮಕ್ಕಳಿಗೆ ಸಂಸ್ಕಾರ-ಸನಾತನೀಯತೆಯ ಪಾಠವಾಗದಿದ್ದರೆ ಅವರ ಬದುಕು ನರಕವಾಗುತ್ತದೆ ಎಂಬುದಕ್ಕೆ ನರಕಾಸುರನ ಬಾಳು ಒಂದು ಉದಾಹರಣೆ. ಅದಕ್ಕೆ ಅಲ್ಪಾಯಸ್ಸು ಎಂಬ ಸಂದೇಶಗಳನ್ನು ಸಾರುವ ಈ ಪ್ರಸಂಗ ಇದು. ರವಿ ಅಲೆವೂರಾಯರ ನಿರ್ದೇಶನದಲ್ಲಿ ಚಿಣ್ಣರು ಯಕ್ಷರೇ ಆಗುತ್ತಾರೆಂಬುದು ಸತ್ಯದ ಮಾತು.
ಪ್ರದೀಪ್ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ
ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ
Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್ ಜೈಕಾರ !
Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ
Idu Entha Lokavayya: “ಕೋಸ್ಟಲ್” ನಿಂದ ಕರುನಾಡು!
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.