ಸಾಂಸ್ಕೃತಿಕ ಹಬ್ಬವಾದ ವಿಜ್ಞಾನ ನಾಟಕಗಳು
Team Udayavani, Aug 24, 2018, 6:16 PM IST
ನಾಟಕಕ್ಕಾಗಿ ವಿಜ್ಞಾನ ಮತ್ತು ಸಮಾಜ ಎನ್ನುವ ಮುಖ್ಯ ವಿಷಯದಡಿ ಡಿಜಿಟಲ್ ಭಾರತ, ಸ್ವಚ್ಚತೆ, ಆರೋಗ್ಯ ಮತ್ತು ನೈರ್ಮಲ್ಯ, ಹಸಿರು ಮತ್ತು ಶುದ್ಧ ಶಕ್ತಿ ಹಾಗೂ ಪರಿಸರ ಸಂರಕ್ಷಣೆ ಎನ್ನುವ ಉಪ ವಿಷಯಗಳನ್ನು ನೀಡಿದ್ದರು.
ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ, ಬೆಂಗಳೂರು ಸಹಯೋಗದೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬ್ರಹ್ಮಾವರ ವಲಯ ಇವರು ಜಿಲ್ಲಾ ಡಯಟ್ ಮಾರ್ಗದರ್ಶನದಲ್ಲಿ ವಲಯ ಮಟ್ಟದ ಸ್ಪರ್ಧೆಗಳನ್ನು ನಡೆಸಿದ್ದರು. ನಾಟಕಕ್ಕಾಗಿ ವಿಜ್ಞಾನ ಮತ್ತು ಸಮಾಜ ಎನ್ನುವ ಮುಖ್ಯ ವಿಷಯದಡಿ ಡಿಜಿಟಲ್ ಭಾರತ, ಸ್ವಚ್ಚತೆ, ಆರೋಗ್ಯ ಮತ್ತು ನೈರ್ಮಲ್ಯ, ಹಸಿರು ಮತ್ತು ಶುದ್ಧ ಶಕ್ತಿ ಹಾಗೂ ಪರಿಸರ ಸಂರಕ್ಷಣೆ ಎನ್ನುವ ಉಪ ವಿಷಯಗಳನ್ನು ನೀಡಿದ್ದರು. ಪ್ರಥಮ ನಾಟಕವಾಗಿ ಸಾಸ್ತಾನದ ಸೈಂಟ್ ಆ್ಯಂಟನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಗಳಿಂದ “ಶುದ್ಧ ಹಸಿರು ಪರಿಸರ ಮತ್ತು ಕಾಡಿನ ಮಹತ್ವ’ (ನಿರ್ದೇಶನ: ಅನಿತ) ಪ್ರದರ್ಶಿಸಲ್ಪಟ್ಟಿತು.
ನಿರಂತರ ಶೋಷಣೆಗೊಳಗಾದ ಪ್ರಕೃತಿ ಮಾತೆ ಮರುಕಪಡುವುದು, ಮುಂದೆ ಪ್ರಕೃತಿ ವಿಕೋಪಗಳಿಂದ ತತ್ತರಿಸಿದ ಮಾನವ ಇದರಿಂದ ಬುದ್ಧಿ ಕಲಿತು ಮಾತೆಗೆ ವಾಗ್ಧಾನ ನೀಡುವುದು ವಿಷಯವಾಗಿತ್ತು. ಎರಡನೆಯ ನಾಟಕವಾಗಿ ಮಣೂರು ಸರಕಾರಿ ಸಂ. ಪ್ರೌಢ ಶಾಲೆ ವಿದ್ಯಾರ್ಥಿಗಳ “ಅರಣ್ಯ ಭರಣಿ’ (ನಿ: ಅನುಪಮ) ಪ್ರದರ್ಶಿಸಲ್ಪಟ್ಟಿತು. ಸೊಂಪಾಗಿ ಬೆಳೆದ ಅರಣ್ಯ ಪ್ರದೇಶವನ್ನು ಸಿರಿವಂತನೋರ್ವ ಕಡಿದು ಪ್ಲಾಸ್ಟಿಕ್ ಕಾರ್ಖಾನೆ ಸ್ಥಾಪಿಸಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಾನೆ. ಪ್ರಕೃತಿ ಮಾತೆ ಬೇಡಿಕೊಂಡರೂ ಉದ್ಧಟತನ ತೋರಿದ ಸಿರಿವಂತನಿಗೆ ಕೊನೆಗೊಮ್ಮೆ ಶುದ್ಧ ನೀರು ಮತ್ತು ಆಹಾರ ದೊರೆಯದೆ ಇದ್ದಾಗ ತಪ್ಪಿನ ಅರಿವಾಗುವ ವಿಚಾರ ಈ ನಾಟಕದಲ್ಲಿತ್ತು.
ಮೂರನೆಯದಾಗಿ ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯ ಬಾಲಕಿಯರು “ವೃಕ್ಷ ಮತ್ತು ಪಕ್ಷಿ ಸಂತತಿ’ (ನಿ: ನರೇಂದ್ರ ಕುಮಾರ್ ಕೋಟ)ಪ್ರದರ್ಶಿಸಿದರು. ಪರಿಸರ ಸ್ವಚ್ಚತೆ, ವೈಭೋಗದ ವಸ್ತುಗಳನ್ನು ಬಿಟ್ಟು ಸರಳತೆಯ ಜೀವನ ನಡೆಸುವುದು ಮತ್ತು ಬೀಜದುಂಡೆಯ ಮೂಲಕ ವೃಕ್ಷ ಸಂಪತ್ತನ್ನು ಬೆಳೆಸುವ ಸಂದೇಶವಿತ್ತು. ನಾಲ್ಕನೆಯ ನಾಟಕವಾಗಿ ಸರಕಾರಿ ಬ್ರಹ್ಮಾವರದ ಪ. ಪೂ. ಕಾಲೇಜು ವಿದ್ಯಾರ್ಥಿಗಳಿಂದ “ಹಸಿರು ಹಳ್ಳಿ ಕೆಸರಾದ ಕಥೆ’ (ನಿ: ವರದರಾಜ್) ಪ್ರದರ್ಶಿಸಲ್ಪಟ್ಟಿತು. ಪರಿಸರ ಮಾಲಿನ್ಯದಿಂದಾಗಿ ಜನರು ಮರಣಾಂತಿಕ ಕಾಯಿಲೆಗೆ ತುತ್ತಾಗುವುದು, ರೋಸಿ ಹೋದ ಜನ ಕಾರ್ಖಾನೆಗಳನ್ನು ಮುಚ್ಚುವಂತೆ ಆಗ್ರಹಿಸುವುದು, ಮುಂದೆ ತಮ್ಮೂರನ್ನು ಹಸಿರಿನಿಂದ ಕಂಗೊಳಿಸುವಂತೆ ಮಾಡುವ ವಿಷಯವಿತ್ತು. ಕೊನೆಯಲ್ಲಿ ವಿವೇಕ ಪ. ಪೂ. ಕಾಲೇಜಿನ ಪ್ರೌಢ ಶಾಲಾ ಬಾಲಕರಿಂದ “ಕಡಲು ಮತ್ತು ಜಲಚರಗಳು’ ಎನ್ನುವ ನಾಟಕ (ನಿ:ವೆಂಕಟೇಶ್ ಉಡುಪ) ಪ್ರದರ್ಶಿಸಲ್ಪಟ್ಟಿತು. ನಗರ ಪ್ರದೇಶದ ಮಂದಿ ತ್ಯಾಜ್ಯಗಳನ್ನು ತಂದು ಕಡಲಿಗೆ ಸುರಿಯುವುದು, ಇದನ್ನು ತಿಂದ ಜಲಚರಗಳ ಸಂತತಿ ನಾಶವಾಗುವುದರಿಂದ ಮೀನುಗಾರರ ಬದುಕು ಬರಡಾಗುವುದು, ಕಡಲನ್ನು ಹೀಗೆ ನಿರಂತರ ಮಲಿನಗೊಳಿಸುವುದರಿಂದ ಮುಂದೆ ಬರುವ ಇನ್ನಿತರ ಅಪಾಯಗಳ ಮುನ್ಸೂಚನೆಯೊಂದಿಗೆ ತ್ಯಾಜ್ಯಗಳನ್ನು ಮರು ಬಳಕೆ ಮಾಡುವ ಬಗ್ಗೆ ಸಾಕ್ಷ್ಯಚಿತ್ರ ಪ್ರದರ್ಶಿಸಿದರು. ವಿಭಿನ್ನ ಚಿಂತನೆಯೊಂದಿಗೆ ಮೂಡಿಬಂದ ನಾಟಕಗಳಲ್ಲಿ ಹಿನ್ನೆಲೆ ಹಾಡು ಮತ್ತಿತರ ತಾಂತ್ರಿಕ ವಿಷಯಗಳನ್ನು ವಿದ್ಯಾರ್ಥಿಗಳೇ ನಿರ್ವಹಿಸಿದ್ದು ಮೆಚ್ಚುಗೆಯ ವಿಷಯವಾಗಿತ್ತು.
ಕೆ. ದಿನಮಣಿ ಶಾಸ್ತ್ರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.